ದೇವತೆಗಳು ನಕ್ಕಾಗ

ದೇವತೆಗಳು ನಕ್ಕಾಗ

ಬೆಂಗಳೂರಿನ ಪಶ್ಚಿಮಕ್ಕೆ – ಒಂದೆಡೆ ಬಯಲು, ಅಲ್ಲಲ್ಲಿ ಒಂದೊಂದು ಮರ. ಉಬ್ಬಿದ ಬಯಲುಗಳು ಅಲ್ಲಿ ಇಲ್ಲಿ ಇಳಿದು ಓರೆಯಾಗಿ ಕೂಡುವೆಡೆಗಳಲ್ಲಿ ಹಸುರು ಮೆರೆದಿದೆ. ತೆಂಗಿನ ಮರಗಳು, ಇತರಮರಗಳು, ಅವುಗಳ ನಡುವೆ ಸಣ್ಣ ಪುಟ್ಟ ಹಳ್ಳಿಗಳು, ಕೆಂಪು ಹೆಂಚಿನ ಮನೆಗಳ ಗೊಂಚಲು ಇವೆಲ್ಲ ಹಲವು ಮೈಲಿಗಳ ತನಕ ಪಸರಿಸುವ ಬಯಲಲ್ಲಿ-ಹಸರ ಮಧ್ಯೆ ಕುಂದಣವಿತ್ತಂತೆರಂಜಿಸುತ್ತವೆ. ಆ ಬಯಲುಗಳ ಉಬ್ಬಿದ ಇಳಿದ ಮೆಯ್ ಕೂಡ ಹಸುರಿನಿಂದ, ಹಳದಿಹೂಗಳ ಹಾಸಿಗೆಯಿಂದ ಚಿತ್ರಿತವಾಗಿರುತ್ತದೆ. ವರ್ಷದ ಕೆಲವು ತಿಂಗಳಲ್ಲಿ ಇವುಗಳ ಮಧ್ಯೆ ಸುತ್ತಿ, ಬಳಸಿ, ಇಳಿದು, ಏರಿ-ಹಾವು ಹರಿದು ಧೂಳಿನಲ್ಲಿ ಗುರುತು ಆದಂತೆ ಮನುಷ್ಯ ದನಕರುಗಳು ಅನೇಕ ವರ್ಷಗಳಿಂದ ಹಾದು, ನಡೆದು, ಚಲಿಸಿ ಗುರುತು ಬಿದ್ದಿರುವ ದಾರಿಗಳು; ಅವುಗಳದೂ ಒಂದು ಚೆಲುವು!

ಊರ ಮಧ್ಯದ ಒಂದು ಕೆರೆಯಿಂದ ಆಧಾರಗೊಂಡು ಲಲ್ಲೆಯಿಂದ ಕಂದಕ ಕೋಡಿಗಳಲ್ಲಿ ಹರಿದು, ಮೊರೆದು, ಕುಣಿದು ಮಕ್ಕಳ ಆಟದಂತೆ ಸರಿದುಹೋಗುವ ಹಳ್ಳವೊಂದು ಇದೆ. ಹಿಂದೆ ನಗರ, ನಗರ ಜೀವನ ಬೆಳೆಯದಿದ್ದಾಗ ಅದು ಒಂದು ಚೆಲುವಿನ ತೊರೆಯಾಗಿರಬೇಕು. ಹಳ್ಳಿಯ ಮನೆ ತೊರೆದು ಪಟ್ಟಣಕ್ಕೆ ಬಂದು ಬೆಲೆ ಹೆಣ್ಣಿನ ಜೀವನ ಕಲ್ಪಿಸಿಕೊಂಡಿರುವವಳಂತೆ ಆ ಹಳವು ಈಗ ಮಲಿನವಾಗಿದೆ, ಕೊಚ್ಚೆಕೊಳಕು- ಫ್ಯಾಕರಿಯು ಹೊಲಸು-ಎಲ್ಲ ಬಂದು ಸೇರಿ, ಹಿಂದೆ ಅದಕ್ಕೆ ಚೆಲುವು ಇತ್ತು; ವಿಲಾಸವಿತ್ತು; ಶುದ್ಧತೆಯೂ ಇತ್ತು. ಆಗ ಭಾವುಕ ಜನ ಅದರ ತೀರಸ್ತವಾದ ದಿಬ್ಬದ ಮೇಲ್ಗಡೆ ಒಂದು ತೋರುಗಲ್ಲಿನ ತುದಿಯಲ್ಲಿ ಮಂಟಪ ಕಟ್ಟಿ, ಗೋಡೆ ಹಾಕಿ, ಒಳಗೊಂದು ವೃಷಭ ಮೂರ್ತಿಯನ್ನು – ಮುದ್ದಿನ ಬಸವನನ್ನು ತಂದು ಸ್ಥಾಪಿಸಿದರು. ಕೆಳಗೆ ತೋರುಗಲ್ಲಿನಲ್ಲಿಯೇ ಆಗಿನ ಶಿಲ್ಪಿ, ಏಕಾಂಗಿಯಾದ ದ್ವಿತೀಯ ಶಂಭುವಿನ ಕೂಡ ಸಹವಾಸಿಯಾಗಿರಲೆಂದು ಶುಭಗಾತ್ರನಾದ ಪಾರ್ವತೀನಂದನನನ್ನು ಕೆತ್ತಿ ನೆಲೆಸುವಂತೆ ಮಾಡಿದನು. ಸ್ಟೇಚ್ಛೆಯಿಂದ ಹೂಗಿಡಗಳು, ಬಿಲ್ವ ಪತ್ರ ಮುಂತಾದ ಮರಗಳು ಬೆಳೆದವು.

ಸೌಮ್ಯವಾದ ವಾತಾವರಣದಲ್ಲಿ ನಿಂತು ಆ ಆಲಯ ಶಾಂತಿಗೆ, ಮನಃ ಶುದ್ದಿಗೆ ಬೀಡಾಯಿತು.

ಹತ್ತಿರದಲ್ಲಿ ಒಬ್ಬ ಸಂಸಾರತ್ಯಾಗಿ ಬಂದು ನೆಲಸಿ, ತನ್ನದೊಂದು ನೆಲೆಯನ್ನು ಕಟ್ಟಿಸಿ, ತನ್ನ ಧ್ಯಾನಕ್ಕೆ ಗುಹೆಯೊಂದನ್ನು ಕೊರೆದುಕೊಂಡು ಜನ ಸಂಗದಿಂದ ವಿಮುಖನಾಗಿ, ಏಕಾಂತವಾಸಿಯಾಗಿದ್ದ. ಅಲ್ಲೊಂದೆರಡು ಮನೆಗಳು ಬೆಳೆದವು. ತೋಟವಾಯಿತು. ಜನದ ತಂಡ ಬಂದು ನೆರೆಯಿತು. ಅದೂ ಆಯಿತು. ಅವನು ಹೋದ. ಅವನ ನಂತರ ಇನ್ನೊಬ್ಬ ಶಿಷ್ಯನಾದ. ಅದೂ ಎಷ್ಟೋ ವರ್ಷಗಳ ಮಾತು. ಮೊದಲಿನವನಿದ್ದಾಗ ಇದ್ದ ಪ್ರಶಸ್ತಿ ಈಗ ಇಲ್ಲ. ‘ಓ! ಅದು ಎಂದೂ ಹಿಂದಿನ ಮಾತು’ ಎನ್ನುತ್ತಾರೆ.

ತೋರುಗಲ್ಲಿನ ಮೇಲೆ ಮಂಟಪವಿದೆ. ನಿರ್ಲಿಪ್ತನಾಗಿ ತನ್ನೆದುರು ಹಬ್ಬಿರುವ ನಗರವನ್ನು ನಿರೀಕ್ಷಿಸುತ್ತ ವೃಷಭನಾಥ ಕುಳಿತಿದ್ದಾನೆ. ಕೆಳಗೆ ಗಣನಾಥ-ಅವನೂ ಸಾಕ್ಷಿಯಾಗಿದ್ದಾನೆ. ಈ ನಗರ-ಪ್ರಪಂಚದ ನಡವಳಿಕೆಗಳಿಗೆ.

ವೃಷಭನಾಥನಿಗೆ ಕೊಂಚ ಹರಟೆಯ ಆಶೆಯಾಗಿದೆ. ದೇವರುಗಳಾದರೂ ಎಷ್ಟು ಹೊತ್ತು ಸುಮ್ಮನೆ-ಬಿಮ್ಮನೆ ಕುಳಿತಾವು ಹೇಳಿ?

“ಓ, ಗಣಪತಿ! ಪುಟ್ಟಸ್ವಾಮಿ! – ಲೋ ಪುಟ್ಟ!”

“ಓ! -ಕರೆದಿರಾ?” ಎನ್ನುತ್ತಾನೆ ಗಿರಿಜಾಸುತ.

“ಇಲ್ಲಿ ಕಡಲೆಕಾಯಿತ್ತು. ಯಾರೊ ಇರಿಸಿ ಹೋಗಿದಾರೆ, ಬರೋಕಾದೀತೇ ಮೆಟ್ಟಿಲು ಹತ್ತಿ?”
“ಹಸೀದೊ? ಹುರಿದದ್ದೋ?”
“ಅದು ಗೊತ್ತಾಗೋಲ್ಲ.”
“ಬೆಲ್ಲ ಏನಾದ್ರೂ ಮಡಗವ್ನೊ ಆತ?”
“ಇದ್ದಾಗೆ ಕಾಣೆ”
“ಏನು ಸುಖ! ಇಲ್ಲಿ ಕಬ್ಬು ಒಂದು ಕಂತೇನೆ ಇದೆ. ಬಾಯಿಕಚ್ಚಿ ತಿನ್ನಲಾರೆ. ಆದರೆ ನೀವೂ ತಿನ್ನಲಾರಿರಿ. ಅದು ಸೀಮೆ ಕಬ್ಬು-ಮೋರಿಷ್”
“ಎಲ್ಲಿ ತರಬಾರದೇನಯ್ಯ! ನೀನು ಜಾಣಮರಿ-ಎಲ್ಲಿ ಹೀಗೆ ಕಳಿಸಿ ಕೊಡು ಒಂದು ನಾಲ್ಕು ತುಂಡು.”
“ಯಾರ ಕೈಲಿ ಕಳಿಸಲಿ? ತಗೊಂಡು ಬಾ ಅಂತ ಹೇಳೋದಕ್ಕೆ ಕಳಿಸಿ ಕೊಡು ಅಂತ ಈ ದೊಡಸ್ತಿಕೆ ಮಾತು.”
“ಏಕಯ್ಯ ನಗ್ತೀಯ?”
“ಈಗ ಸುಳ್ಳು ಹೇಳಿದವ್ರು ಯಾರು? ನನಗೆ ಸಮಸ್ಯೆ; ಸುಳ್ಳು ಹೇಳಿದವನು ನಾನೋ ನೀವೊ?”
“ನೀನು ಸುಳ್ಳು ಹೇಳಿದ್ದು ನಿನಗೇ ಗೊತ್ತಿಲ್ಲವೆ?”
“ನೀವು ಸುಳ್ಳು ಹೇಳಿದ್ರೆ ನನಗ್ಹೇಗೆ ಗೊತ್ತು?”
“ಹಾಗಾದರೆ ಇದು ಕುಚೋದ್ಯ ಅನ್ನು!”
“ಎಂದರೆ ನೀವು ಹೇಳಿದುದೂ ಸುಳ್ಳೆ?”
“ಇಲ್ಲ, ಇವೆ ಇಲ್ಲಿ ಕಡಲೆಕಾಯಿ”
“ಹಾಗಾದರೆ ಇಲ್ಲಿ ಕಬ್ಬು ಇರೋದು ನಿಜ…………….ತಾವೇ ಕೆಳಗೆ ಬರೋಣವಾಗಲಿ. ಆದರೆ ಮೆಟ್ಟಿಲಿಳಿದು ಬರುವಾಗ ಮೆಲ್ಲನೆ ಎಚ್ಚರದಿಂದ ಕೆಳಗಿಳಿಯುವುದಾಗಬೇಕು. ಮೈ ಶಾನೆ ದೊಡ್ಡದು. ಆದರೆ ಕಾಲುಗಳು ನಾಲ್ಕು ಇವೆ, ಅದೊಂದು ಸಹಾಯ”

“ನಿನ್ನ ಮೈ ಚಿಕ್ಕದು-ಅದಕ್ಕೆ ಎರಡು ಕಾಲು-ನಿನಗೆ ಬಿದ್ದರೂ ಬಾಧೆ ಇಲ್ಲ; ಮುದ್ದೆ ಮೈ ಬಿಲ್ಲೆ ಉರುಡಿಕೊಳ್ಳುತ್ತೆ. ಆದರೆ ನಮ್ಮಂಥವರಿಗೆ ಹಾಗಾದೀತೆ ? ಬರುತ್ತಿದ್ದೇನೆ.”

“ಹೋ ! ಹೋ! ತಾಳಿ, ತಾಳಿ, ವೃಷಭದೇವ ! ಅವ ನಿಮ್ಮ ಭಕ್ತ ಬರುತ್ತಿದ್ದಾನೆ.”

“ಯಾರು ?”

“ಅವನು, ಆ ಷೋಕುಗಾರ-ಎರಡು ಗಾಲಿಗಳಿಂದ ಉರುಳುವ ನವೀನ ಗಾಡಿಯ ಮೇಲೆ ಬರುವವನು. ನೋಡಿ ಅಲ್ಲಿಂದಲೆ ತಾಡಿಕೊಂಡು ತಲೆ ಯಾಡಿಸಿಕೊಂಡು ಕಾಲು ಮೀಟಿಕೊಂಡು ಬರುತ್ತಿದ್ದಾನೆ.”

“ಏನು ಪಜೀತಿಗಿಟ್ಟೆಯೊ ? ಇಳೀತಿದ್ದೇನೆ. ಈಗ ಹ್ಯಾಗೆ ಹಿಮ್ಮುಖ ವಾಗಿ ಹೋಗಿ ಪೀಠದ ಮೇಲೆ ಕುಳಿತುಕೊಳ್ಳೋದು ? ಇಲ್ಲಿ ಈ ಮಂಟಪದಲ್ಲಿ ತಿರುಗೋಕೆ ಕೂಡ ಇಲ್ಲ ಜಾಗ ! ನಿನ್ನ ಹುಡುಗಾಟ-ನಿನ್ನ ಚೇಷ್ಟೆ ಸಾಕು !”

“ನಿಧಾನವಾಗಿ ಹೋಗಿ ! ಅವಸರ ಮಾಡಿ ಬಿದ್ದಿರಿ. ನಿಮ್ಮನ್ನು ನಾನಾಗ ಎತ್ತಲಾರೆ. ಬೇರೆ ಇನ್ನಾರೂ ಸಹಾಯಕ್ಕಿಲ್ಲ ! ಇಲ್ಲಿ ಇರುವವರು ನಾವಿಬ್ಬರೆ ! ಏನು ಕಾಡಿಸುತ್ತಾರೊ ನಮ್ಮನ್ನು ಈ ಭೂಲೋಕದ ಜನಗಳು”

“ಅಯ್ಯ ಕೊಂಚ ಹೊತ್ತಾಗುತ್ತೆ ತಿರುಗೋದು – ಸರಿಯಾಗಿ ಕೂಡೋದು. ಅವನ್ನ ನಿನ್ನ ಪ್ರಭೆಯಿಂದ ನಿನ್ನ ಹತ್ತಿರವೆ ತಡೆದು ನಿಲ್ಲಿಸಿಕೊಬಾರದೆ-ಎಲೆಕ್ಟ್ರಿಕ್ ಟಾರ್ಚ್ ಹಿಡಿದು ನಿಲ್ಲಿಸಿದಹಾಗೆ ?”

“ಅದೇನು ಬೇಡ ಅಂದ್ರೆ, ಅವನು ಹೋಗಿ, ಹೂವು ಪತ್ರೆ ಅದೆಲ್ಲ ಎತ್ತಿಕೊಂಡು ಬರುವುದರಲ್ಲಿ ನೀವು ಸರಿಯಾಗಿ ನಿಮ್ಮ ಮೊದಲಿನ ನಿರ್ಲಿಪ್ತ ಭಾವದಿಂದ ಮಂಡಿಸಿರಬಹದು ?”

“ಹೇಳಿದಷ್ಟು ಮಾಡಯ್ಯ : ಮುದುಕನಿಗೆ ಎಷ್ಟು ಗೋಳುಹೊಯ್ದು ಕೊಳ್ಳುತ್ತೀಯ ?”

“ದೇವರ ಅಪ್ಪಣೆಯಾದಂತೆ.”

ಮತ್ತೆ ಗಣನಾಧನ ವಾಕ್- “ಏನು ? ಈತ ಮಹಾ ಬೆರಕೆ ಸಂಪ್ರದಾಯದವನಿರಬೇಕು? ನಿಮ್ಮನ್ನೂ ನನ್ನನ್ನೂ ಪೂಜಿಸುವಾಗ ‘ನಾರಾಯಣ, ನಾರಾಯಣ,’ ಎನ್ನುತ್ತಾನೆ ! ನನ್ನನ್ನೇನೊ ಶುಕ್ಲಾಂಬರಧರ-ವಿಷ್ಣು ಎನ್ನುತ್ತಾರೆ ಈ ಲೋಕದ ಜನ. ಹೋಗಲಿ-ಆದರೆ ನಿಮ್ಮನ್ನು ನಾರಾಯಣ ಎನ್ನುವುದೆ?”

“ಅವನಿಗೆ ಅಭ್ಯಾಸವಾಗಿರುವುದು ಅದೇ ಕಾಣಯ್ಯ, ಅಲ್ಲದೆ ಅದರಲ್ಲೇನೂ ತಪ್ಪಿಲ್ಲ. ವಿಷ್ಣು ರೂಪಾಯ ಶಿವ ಶಿವರೂಪಾಯ ವಿಷ್ಣುನೆ!! ಎಂತ ಇದೆ. ಅದಿರಲಿ ನೋಡು ಅವ ಏನು ಜೋರಿನಿಂದ ಪೂಜೆ ನಡೆಸಿದ್ದಾನೆ! ಬಹಳ ಅವಸರ ”

“ಅವನೀಗ ಸಿನಿಮಾಕ್ಕೆ ಹೋಗಬೇಕು; ಭಾನುವಾರ”

“ಏನು ಹಾಗಂದರೆ?”

“ಅದೊಂದು ಬಗೆ ಕಳ್ಳಕ್ಯಾತರ ಆಟ. ಅಲ್ಲಿ ತಾರೆಯರು ಬರುತ್ತಾರೆ”

“ತಾರೆಯರು ಯಾರು ?”

“ಅವರು ಚೆನ್ನಾಗಿರುವ ಹೆಂಗಸರು ; ಅಲ್ಲಿ ಕುಣಿಯುತ್ತಾರೆ. ಬಣ್ಣ ಬಳಿದಿರುತ್ತಾರೆ. ಬಳುಕುತ್ತಾರೆ. ಅದೊಂದು ಆಟ.”

“ನೀನೂ ಹೋಗು ನೋಡಲಿಕ್ಕೆ.”

“ಅಮ್ಮನ್ನ ಕೇಳಿಲ್ಲ ; ಕೇಳದೆ ಹೋದರೆ ಬಯ್ತಾಳೆ.”

“ಹೋಗಲಿ, ಇವನು ಹೋದ. ಕಬ್ಬು ಎರಡು ತೆಗೆದುಕೊಂಡುಬಾ ; ಇಲ್ಲೆ ಕಡಲೇಕಾಯಿದೆ ; ಇಬ್ಬರೂ ತಿನ್ನೋಣ.”

“ಬರಲೇಬೇಕೊ?”

“ಇಷ್ಟರಮೇಲೆ ನಿನ್ನಿಷ್ಟ, ಕಷ್ಟವಾಗೋ ಹಾಗಿದ್ದರೆ ಬೇಡ.”

“ಬಂದೆ ತಾಳಿ,” ಎಂದ ಗಣೇಶ.

“ಓಹೋ ! ಓಹೋ ! ಬಂದ್ನಯ್ಯ ಈ ಭೂಲೋಕದ ಪ್ರಮಥ ಒಬ್ಬಬೆದರಿಬಿಟ್ಟೆ! ನೀನು ಬಿದ್ದೀಯ ಗಣೇಶಾ, ಅಂದು ಬಿದ್ದು ಹಲ್ಲು ಮುರಿದು ಕೊಂಡು ಚಂದ್ರನೊಂದಿಗೆ ಜಗಳಕ್ಕೆ ಹೋಗಿ ಅವನನ್ನು ಬೈದೆ. ಇವತ್ತು ಬಿದ್ರೂ ಪರವಾಯಿಲ್ಲ ಅನ್ನು. ನೋಡಿ ನಗೋಕೆ ಹೆಚ್ಚು ಜನ ಇಲ್ಲ. ಆದ್ರೂ ಯಾಕೆ ಸುಮ್ಮನೆ ಬೀಳಬೇಕು? ಮೆಲ್ಲಗಿಳಿ! ಮೆಟ್ಟಲು ಕಡಿದು.”

“ಅಂತೂ ನಾ ಬೀಳಬೇಕು, ನೀವು ನೋಡಿ ನಗೋದಲ್ಲದೆ, ಬೇರೆ ಜನಾನು ಇರಬೇಕು ನಗೋದಕ್ಕೆ! ಮುದುಕರಾಗಿಯೂ ಸಮಾಧಾನ ಇಲ್ಲಲ್ರಿ, ಅವ-ಶರಣ, ನನ್ನ ಪೂಜಕನಲ್ಲ. ಸೀದಾ ಬಂದವನು ನಿಮ್ಮನ್ನೆ ಪೂಜಿಸಿ ಹೋಗುತ್ತಾನೆ. ಏನೋ ಕೊಸರಿಗೆಂದು ನನ್ನ ಕಡೆ ನೋಡಿ ‘ಗುಡ್ ಮಾರ್ನಿಂಗ್’ ಮಾಡುತ್ತಾನೆ. ಈ ಲಿಂಗಧಾರಿಗಳೆಲ್ಲ ಹಾಗೆ. ನನ್ನ ಕಂಡರೆ ಲಕ್ಷ್ಯವಿಲ್ಲ.”

“ಹೇಗಿದ್ದೀತು? ನಿಮ್ಮ ತಂದೆಯೇ ಅವರವನಾಗಿರುವಾಗ. ಅವರಿಗೆ ನೀನು ಲಕ್ಷ್ಯವೆ?”

“ನೋಡಿ, ವೈಷ್ಣವರೂ ನನ್ನನ್ನು ಪೂಜಿಸುತ್ತಾರೆ. ಮೊದಲು ಎಲ್ಲದಕ್ಕೂ ನಾನಿರಬೇಕು. ಮೂರು ನಾಮದವರೂ ಸಹಿತ.”

“ನಿನ್ನ ಮೇಲಿನ ಭಕ್ತಿಗಲ್ಲ ! ನೀನೇನಾದರೂ ಕೆಡುಕು ಮಾಡಿದರೆ ? ಅದಕ್ಕಾಗಿ.”

“ಆ ಹೆದರಿಕೆ ಇವಕ್ಕೆ ಬೇಡವೊ?”

“ನಿಮ್ಮ ತಂದೆಯ ಸಲುಗೆ ಈ ರೀತಿ ಮಾಡಿರಬೇಕು.”

“ನೋಡಿ ಇದನ್ಯಾಯವಲ್ಲವೆ? ಇವರಿಗೆ ಗೋತ್ರಾಧಿನಾಯಕನಾಗುವ ಹಕ್ಕು ನನಗಿಲ್ಲದೆ ಹೋಯಿತು. ನಾನು ಯಾವ ಜಾತಿ?”

“ನೀನು ಸ್ಮಾರ್ತರವನು-ಅಡ್ಡ ಗಂಧ”

“ಹಾಗೊ ? ನನ್ನ ಅಧಿಕಾರ?”

“ಲೋಕದ ಮೇಲೆಲ್ಲ! ಅದರಲ್ಲೇನು ಸಂದೇಹ?”

“ಇವರ ಮೇಲೆ?”

“ವಿಚಾರಿಸಬೇಕು; ಗೌರ್‍ನಮೆಂಟ್ ಆರ್ಡರು ಸರಿಯಾಗಿ ಹೊರಟಿಲ್ಲ ಈ ವಿಚಾರದ ಮೇಲೆ. ನೀನು ಅರ್ಜಿ ಹಾಕ್ಕೊ ನೋಡೋಣ.”

“ನೀವು ಆ ಬಗ್ಗೆ ಶಿಫಾರಸು ಮಾಡಬಾರದೆ? ನಿಮ್ಮ ವಸೀಲಿ ಹಚ್ಚಬಾರದೆ ?”

“ಬರೀ ಪುಗಸಟ್ಟೆ ಮಾಡಿಕೊಡಬೇಕೆ?”

“ಕೆಲಸ ಆದಮೇಲೆ ಮರ್‍ಯಾದೆ!”

“ಆಲ್ ರೈಟ್-ನಾನೂ ಒಂದೆರಡು ಇಂಗ್ಲೀಷ್ ಮಾತು ಕಲಿತಿದ್ದೇನೆ”

“ಕಲಿಯಬೇಕಾದದ್ದೆ ………….. ಮಾತನಾಡಬೇಡಿ ಸುಮ್ಮನಿರಿ. ಆ ಚೊಟ್ಟೆ ಹುಡುಗ-ಬಣ್ಣದ ಹುಡುಗಿ ಬರುತ್ತಿದ್ದಾರೆ”

“ಏ! ಗಣೇಶ್! ಅದೇನು ಆ ಹುಡುಗರು ಹಾಗೆ ಒಬ್ಬರ ಮೂತಿ ಒಬ್ಬರು ಮೂಸಿನೋಡುತ್ತಿದ್ದರು ? ಒಬ್ಬರ ಬಾಯಿ ಒಬ್ಬರಿಗೆ ತಗುಲಿದರೆ ಎಂಜಲಲ್ಲವೆ?”

“ಅದು ಪ್ರೀತಿಗೆ ಹಾಗೆ ಮಾಡುತ್ತಾರೆ?”

“ಪ್ರೀತಿ ಎಂದರೇನು?”

“ನಿಮಗೆ ತಿಳೀದೆ ಚಿಕ್ಕಪ್ಪಾಜಿ?”

“ಇಲ್ಲಪ್ಪ ನಾನಿದೊಂದನ್ನೂ ಕಂಡವನಲ್ಲ. ನೀನು ಹೇಳಿದೆಯಲ್ಲ ಅದೇನು?”

“ಪ್ರೀತಿ!”

“ಹಾಗೆಂದರೆ ಏನು?”

“ಅದ್ಹೇಳೋಕೆ ನಂಗೊತ್ತಿಲ್ಲ; ಅದೆಂದೂ ನಾನು ಅನುಭವಿಸಿಲ್ಲ”

“ಮತ್ತೆ ಆ ಶಬ್ದ ಹೇಗೆ ಗೊತ್ತು?”

“ಇಂಥವು ಬಂದು ನನ್ನ ಬೇಡಕೊಂತವೆ-ನನಗೆ ಇಂಥವ್ರಲ್ಲಿ ಪ್ರೀತಿ ಬರೊಹಾಗೆ ಮಾಡು; ಅಂಥವರಲ್ಲಿ ಪ್ರೀತಿ ಉಳಿಯೋಹಾಗೆ ಮಾಡು, ಅಂತ, ಅದರಿಂದ, ಅದನ್ನು ಕೇಳಿದ್ದೆ; ಹೇಳಿದೆ ನಿಮಗೆ.”

“ಹಾಗಾದರೆ ಪ್ರೀತಿ ಅನ್ನೋದು ನಿಂಗೊತ್ತಿಲ್ಲ?”

“ನಾನು ಮದುವೆ ಆಗಿದೇನೆಯೇ ನಂಗೊತ್ತಾಗೋದಕ್ಕೆ?”

“ಮದುವೆ ಆಗಬೇಕೋ ಅದು ಗೊತ್ತಾಗೋಕೆ?”

“ಹೌದು”

“ನಿನ್ನ ತಮ್ಮನಿಗೆ ಗೊತ್ತೊ?”

“ಇರಬೇಕು!”

“ನೀನ್ಯಾಕೆ ಮದುವೆ ಆಗ್ಲಿಲ್ಲ?”

“ನನಗೇನೊ ನಮ್ಮಮ್ಮನಂತವಳನ್ನೆ ಮದುವೆ ಆಗಬೇಕು ಅಂತ ಆಸೆ. ಎಲ್ಲಿ ಅವಳೆ ನಮ್ಮಮ್ಮನಂತ ಇನ್ನೊಬ್ಬ ಹೆಣ್ಣು? ಅದಕ್ಕೇ ನಾನಾಗಲಿಲ್ಲ.”

“ಏನೋ ಅಪ್ಪ, ನೀವೇನೋ ಈ ಕಾಲದ ಹುಡುಗರು. ನನಗೇನೂ ಪ್ರಪಂಚದ ಎಲ್ಲ ಹೆಂಗಸರೂ ನಮ್ಮ ಅಮ್ಮ ಗೌರೀದೇವಿಯ ಹಾಗೆ ಕಾಣ್ತಾರೆ.”

“ನೀವು ಮುದುಕರು; ನಿಮಗೆ ಗೊತ್ತಾಗೊಲ್ಲ. ನನ್ನ ಅಮ್ಮನ ಹಾಗೆ ಇನ್ನಾರೂ ಇಲ್ಲ. ಇದ್ದಿದ್ರೆ ಮದುವೆ ಆಗಿಯೇ ಬಿಡುವೆ.”

“ಅದಿರಲಿ, ಈ ಪ್ರೀತಿ ಮಾಡೋದು ನಿಂಗೆ ತಿಳಿದಿರಬೇಕು?”

“ಅಷ್ಟು ತಿಳಿದಿಲ್ಲ.”

“ತಿಳಿದಷ್ಟೆ ಹೇಳು.”

“ನೋಡಿ! ಅಪ್ಪಾಜಿ ಹತ್ತಿರ ಆಗ್ಲಿ ಅಮ್ಮನ ಕೂಡ ಆಗ್ಲಿ ಹೇಳಿದ್ರೆ ನಿಮ್ಮ ಜೊತೇನೆ ಬಿಟ್ಟುಬಿಡ್ತೇನೆ”

“ಇಲ್ಲೋ ಅಣ್ಣ ; ಹೇಳೋ ನನ್ನ ಜಾಣ”

“ಒಂದು ದಿನ, ನಾನು ಕೂತಿದ್ದೆ. ಆಚೆ ಅಮ್ಮ, ಈಚೆ ಅಪ್ಪ ಇದ್ರು ನೋಡಿ ಅದ್ರಿಗೇನಾಯಿತೊ ! ನನ್ನ ಕೆನ್ನೆಗೆ ಮುತ್ತಿಕ್ಕೋಕೆ ಬರೋದೆ ?”

“ಹಾಗಂದ್ರೆ ?”

“ರೀ ! ನೀವು ಸುಮ್ಮನೆ ವಯಸ್ಸು ಕಳದ್ರಿ! ಹನ್ನೊಂದು ವರ್ಷದ ಹುಡುಗನಿಗಿರೋ ಅನುಭವ ನಿಮಗಿಲ್ಲ! ಕೆನ್ನೆ ಮೂಸಿ ನೋಡೋದಕ್ಕೆ ಮುತ್ತಿಕ್ಕೋದು ಅಂತಾರೆ.”

“ಆಮೇಲೆ?”

“ಅಯ್ಯನೂ ಅಮ್ಮನೂ ನನ್ನ ಕೆನ್ನೆಗೆ ಮುತ್ತಿಕ್ಕೋಕೆ ಬಂದ್ರು-ನಾನೇನು ಮಾಡಿದೆ ಗೊತ್ತೋ?-ನೀವೆಲ್ಲಿದ್ರಿ ಆವಾಗ?”

“ನಿಮ್ಮಮ್ಮ ಬಾಳೆಹಣ್ಣು ಕೊಟ್ಟಿರಬೇಕು-ಮೆಲ್ಲಗೆ ಮೆಲ್ಲುತಾ ಇದ್ದೆನೇನೊ”

“ಇರಲಿ ಕೇಳಿ, ಇಬ್ಬರೂ ಮುಂದಕ್ಕೆ ಬಗ್ಗಿದರು-ಸರಕ್ಕನೆ ಹಿಂದಕ್ಕೆ ಬಾಗಿಬಿಟ್ಟೆ!”

“ಯಾವಾಗ?”

“ಆವಾಗ!”

“ಆವಾಗ?”

“ಛೇ! ಇಷ್ಟು ತಿಳಿಯೋಲ್ಲ? ಕಿವುಡರಿಗೆ ಗುಟ್ಟು ಹೇಳೋದು, ನಿಮಗೆ ಪ್ರೀತಿ ವಿಚಾರ ತಿಳಿಸೋದು ಒಂದೆ!”

“ಏನೋ ಅಪ್ಪ ನಂಗೆ ತಿಳೀಲಿಲ್ಲ. ಹೋಗ್ಲಿ ಬಿಡು, ಮುದುಕನ ಮೇಲೆ ಯಾಕೆ ಬೇಜಾರು?”

“ಅಮ್ಮನಿಗೆ ಹೇಳಬೇಡಿ ನಾನು ಹೇಳ್ದೆ ಅಂತ-”

“ನಂಗೆ ತಿಳಿದರಲ್ಲವೆ ನಾನು ಹೇಳೋದು? ಅದಾಯ್ತಲ್ಲ ಬಿಡು. ಜನ ನಿನ್ನ ಏನೇನು ಕೇಳ್ತಾರೆ?”

“ಏನೇನೋ ಕೇಳ್ತಾರೆ-ಹೆಂಡ್ತಿ ಕೈಲಿ ಹೊಡೆಸಬೇಡ, ಅಂತ ಒಬ್ಬ. ಇನ್ನೊಬ್ಬ, ಹೆಚ್ಚು ಮಸಾಲೆದೋಸೆ ತಿನ್ನೋಕೆ ಕಾಸು ಕೊಡಿಸಪ್ಪ, ಅಂತ. ಮಗದೊಬ್ಬಳು ಅವಳ ಮರೀದು ಸಿಂಬಳ ತೆಗೀಲಾರಳಂತೆ. ಅದಕ್ಕೆ, ಅದಕ್ಕೆ ನೆಗಡಿ ಬರಿಸಬೇಡಪ್ಪ, ಅಂತ, ಇನ್ನೊಬ್ಬನಿಗೆ ಅವನಿಗೆ ಸಂಬಳ ಹೆಚ್ಚಾಗಿಲ್ಲ. ಅದಕ್ಕೆ ನಾನು ಅವ್ರ ಸಾಹೇಬನಲ್ಲಿಗೆ ಹೋಗಿ ಶಿಫಾರಸು ಮಾಡಬೇಕು. ಒಂದು ವೇಳೆ ಮಾಡಿಯೇನು, ಏನು ದೊಡ್ಡದು! ಆದ್ರೆ ನಂಗೇನು ಕೊಡ್ತಾರೆ ಅಂತೀರ. ಹೊಟ್ಟೆ ಬಿಟ್ಟುಕೊಂಡು ಅವ್ರ ಮಹಡಿ ಮೆಟ್ಟಿಲು ಹತ್ತಿದ ಶ್ರಮಕ್ಕೆ? ಏನೂ ಇಲ್ಲ ಅಂದ್ರೆ! ಒಂದು ಕಪ್ ಕಾಫಿ ಕೂಡ ಇಲ್ಲ. ಹಣ್ಣು ಕಾಯಿ ಮಾಡಿಸ್ತವೆ-ಅವನ್ನೂ ಹಿಂದಕ್ಕೆ ಹೊತ್ತುಕೊಂಡು ಹೋಗಿಬಿಡ್ತವೆ. ನಮ್ಮ ಸುಂಡಿಲಿಗಾದ್ರೂ ತಿನ್ನೋಕೆ ಬಿಡೋಲ್ಲ ಅಂದ್ರೆ.”

“ಅಲ್ಲ ಗಣೂ”

“ಏನು ಚಿಕ್ಕಪ್ಪಾಜಿ?”

“ಡಾಕ್ಟರಿಗೆ ತೋರಿಸಬೇಕಾಗಿತ್ತೋ ! ಈ ಸೀಮೆ-ಮಲೇರಿಯಾ ಜಾಸ್ತಿ ನಿನ್ನ ಹೊಟ್ಟೆ ದೊಡ್ಡದಾಯ್ತು. ಹೊಟ್ಟೇಲಿ ಏನಾದ್ರೂ ಗಡ್ಡೆ ಬೆಳೆದಿದೆಯೊ, ಏನೊ? ನೋಡಿಸಿದ್ರೆ?”

“ಏನು ನೀವು ಹೀಗೆಲ್ಲ ಕೆಟ್ಟದ್ದು ನುಡೀತೀರಿ! ಮಲೇರಿಯ ಸಾಮಾನ್ಯವೆ! ಛೇ! ನನಗೆ ನೆನಿಸಿಕೊಂಡ್ರೆ ಭಯ ! ಆ ಛಳಿ ! ಆ ಜ್ವರ ! ನಮ್ಮ ಅಮ್ಮ ಹೇಳಿದ್ಲು ಹಾಲು ಮೈ-ಸುಖವಾಗಿ ಬೆಳೆದ್ರೆ ಹಾಗೆ ಅಂತ. ಅಷ್ಟೆ. ಅಂಧ ಭಾರಿ ಹೊಟ್ಟೆ ಅದೆಯ? ನನಗೆ ?”

“ಇಲ್ಲ ಸುಮ್ಮನೆ ಹೇಳ್ದೆ. ನೀವು ಬೆಳೆಯೊ ಹುಡುಗರು, ಚೆನ್ನಾಗಿರ ಬೇಕು. ನಮ್ಮ ಕಾಲ ಆಯಿತು. ನೀನು ಹೇಳಿದ ಹಾಗೆ-ಅಮ್ಮ ತಿಳಿದಿರೋ ಹಾಗೆ, ಅದು ಹಾಲು ಮೈಯೇ ಇರಬೇಕು. ನೀನು ಒಂದೊಂದು ದಿನ ನನ್ನ ಕತ್ತಿಗೆ ನಿನ್ನ ಹೊಟ್ಟೆ -ಮೆತ್ತನ್ನ ಹೊಟ್ಟೆ ಒರಗಿಸಿಕೊಂಡು, ನನ್ನ ಕೊಂಬಿನ ಸಂದೀಲಿ ಕೈ ಆಡಿಸುತ್ತ, ತುರಿಸುತ್ತ ನನ್ನ ಮೈ ಮೇಲೆ ಬಿದ್ದಿದ್ರೆ ನನಗೆಷ್ಟು ಸುಖ ಅನ್ನಿಸುತ್ತೆ! ಆದರೆ ನಿಮ್ಮ ಅಮ್ಮನ ತೊಡೆ ಮೇಲೆ ಕೂತಿರುತ್ತೀಯಲ್ಲ ಅಷ್ಟು ಹೊತ್ತು ಅಮ್ಮನ ತೊಡೆ ಜೋಮು ಹಿಡಿಯೋಲ್ಲವೆ? ಒಂದೊಂದು ದಿವಸ ನನ್ನ ಬೆನ್ನ ಮೇಲೂ ಹತ್ತಿ ಬಿಡ್ತೀಯ-ಏನು ಮಾಡಬೇಕು ನಿನಗೆ? ನಿನ್ನ ತಂದೇ ಹೇಳಬೇಕೊ?”

“ಬೇಡಿ, ಅಪ್ಪಾಜಿ ಬೈತಾರೆ ಅವರಿಗೆ ಗೊತ್ತಾದ್ರೆ.”

“ನಾನು ಹೇಳಿಲ್ಲ ಅನ್ನು; ಆದ್ರೆ ಒಂದೊಂದು ದಿವಸ ನಿನ್ನ ಭಾರಕ್ಕೆ, ನನ್ನ ಬೆನ್ನಿನ ಮುದಿ ಎಲುಬು ಕೂಡ ಕಡ ಕಡ ಅನ್ನುತ್ತವಯ್ಯ?”

“ಇವತ್ತು ನಾನೊಂದು ಮಾತು ಹೇಳ್ತನೆ, ಕೇಳ್ತಿರಾ?”

“ನನ್ನಪ್ಪ, ಏನೋ ಅದು ?”

“ಇವತ್ತು ಬೆನ್ನ ಮೇಲೆ ಹತ್ತಿಸಿಕೊಂಡು ನನ್ನ ಕರಕೊಂಡು ಹೋಗಿ ಸುಂಡಿಲ ಮೇಲೆ ಹತ್ತಿದ್ರೆ ಮೈಯೆಲ್ಲ ದಡುಕು, ಎಷ್ಟು ಕಡೆ ಬೀಳಬೇಕು. ನಿಮಿಷ ನಿಮಿಷಕ್ಕೂ ಬೆದರತದೆ. ಸಾಕಾಗಿ ಹೋಗಿದೆ ನನಗೆ ಅದರ ಸಹವಾಸ!”

“ಬಿಟ್ಟು ಬಿಡೋದು ತಾನೆ ಅದನ್ನ ! ನಿನ್ನ ತಮ್ಮ ನೋಡು, ಎಂತಹ ಜೋಕುಕಾರ ! ನವಿಲು ಮಡಗವ್ನೆ!”

“ಮೊದಲು ಆರಿಸೋವಾಗ್ಲೆ ಸರಿಯಾಗಿ ಆರಿಸಬೇಕು ಅಂದ್ರೆ ಹೆಂಡತಿ ಕಟ್ಟಿಗೊಂಡು ಆದಮೇಲೆ ಬಿಡೋಕಾಗತ್ತಾ? ನಮ್ಮ ಅಯ್ಯನ್ನ ನೋಡಿ! ಎಷ್ಟೋ ಸರ್ತಿ ಓಡಿ ಹೋಗಿದ್ದರು ಕಾಡಿಗೆ-ಮೂಗು ಹಿಡಿದು ಕೂರೋಕೆ ಎಳ ಕೊಂಡು ಬಂದ್ಲು ನಮ್ಮ ಅಮ್ಮ, ಆದ್ರೆ ಈ ಸುಂಡಿಲಿ-ಹಾಳಾದ್ದು – ಹೋಗೊಲ್ಲ ಬಿಟ್ಟು, ಇನ್ನೂ ಯಾವದಾದ್ರೂ ಕಟ್ಟಿಕೊಂಡೇನು.”

“ಒಂದು ಏರೋಪ್ಲೇನ್ ಮಡಗಿಬಿಡು.”

“ಹೌದು ತಾಳಿ, ಈಸರ್ತಿ ದರ್ಬಾರಿನಲ್ಲಿ ಕುಬೇರ ಬಂದಿದ್ದಾನೆ ಅವ್ನಿಗೆ ಹೇಳ್ತೇನೆ ನಿನ್ನ ವಿಮಾನ ನಮಗೆ ಕೊಡು ಅಂತ. ನಂಗೆ ಕೊಡಲಾರನೆ. ಅಯ್ಯ ಹೇಳಿ ಅಂದ್ರೆ?”

“ಈ ಲೋಕದ ಜನರೂ ವಿಮಾನ ಮಾಡಿದಾರೆ?”

“ಹೌದು, ಗುಂಗಾಡು ಗುಂಯ್ ಅಂದ ಹಾಗೆ ಆಗುತ್ತೆ. ಇವೇನೊ ಯುದ್ದ ಮಾಡ್ತಾ ಇವೆಯಂತೆ-ಇರುವೆಗ್ಳ ಯುದ್ಧ ಅಂದ್ರೆ. ಅಲ್ಲಿ ಇವನ್ನು ಹಾರಾಡಿಸೋದು ಬಹಳ ಅಂತೆ. ನಾನು ಎಂದೋ ಒಂದು ದಿವಸ ಪೇಪರ್ ನೋಡಿದೆ; ಅದರಲ್ಲಿತ್ತು”

“ಅವರ ಯುದ್ದ ನಿನ್ನ ಕಣ್ಣಿಗೆ ಕಾಣಿಸೋಲ್ಲವೆ”

“ನಂಗೆ ಕಾಣಿಸೋದು ನನ್ನ ಹೊಟ್ಟೆ ಒಂದೆ-ಕೆಳಗೆ ನೋಡಿದ್ರೆ; ಮೇಲೆ ನೋಡಿದ್ರೆ ನಮ್ಮ ತಂದೆ ಪಾದ, ಎಲ್ಲೊ ಕಚ್ಚಾಡ್ತಿರಬೇಕು. ಯಾರು ಹಾಗೆ ಬಗ್ಗಿ, ಹೊಟ್ಟೆ ನೋವು ತಂದುಕೊಂಡು ಕಣ್ಣುರಿಸಿಕೊಂಡು ನೋಡ್ತಾರೆ? ಅಂತೂ ಏನೇನೋ ಮಾತು ಎತ್ತಿ ನಾನು ಕೇಳಿದ್ದನ್ನು ಮರೆಸಿ ಬಿಟ್ರಲ್ಲ!”

“ಏನಯ್ಯ ನೀನು ಕೇಳಿದ್ದು? ಬಾಳೆಹಣ್ಣೆ?”

“ಅಲ್ರೀ! ನನ್ನ ಇವತ್ತು ಹತ್ತಿಸಿಕೊಂಡು ಕರಕೊಂಡು ಹೋಗ್ರೀ ಅಂದ್ರೆ? ಅಮ್ಮ-ಚಕ್ಕುಲಿ ಕೋಡಬಳೆ ಮಾಡ್ತೀನಿ ಜಾಗ್ರತೆ ಬಾ; ಇಸ್ಪೀಟು ಆಡೋಕಾಗ್ಲಿ, ಸಿನೇಮಾ ನೋಡೋಕಾಗ್ಲಿ, ಬೀದಿ ಅಲೆಯೋಕಾಗ್ಲಿ ಹೋಗಬೇಡ. ಸಂಜೆ ಆಗತ್ತೋ, ಸೀದಾ ಮನೆಗೆ ಬಾ ಅಂದಿದ್ಲು. ನಾನು
ಅತ್ತು ಬಿಡ್ತೀನಿ ನೀವು ಬಿಟ್ಟು ಹೋದ್ರೆ ಕತ್ತಲಲ್ಲಿ”

“ಅಲ್ಲಯ್ಯ? ಸ್ವಾಮಿ ಮುಹೂರ್ತ ಮಾಡೋ ಜಾಗದಲ್ಲಿ ನೀನು ಕೂಡಬಹುದೆ? ಅವರಿಗೆ ತಿಳಿದರೆ ಸುಮ್ಮನೆ ಬಿಟ್ಟಾರೆ ನಿನ್ನನ್ನೂ ನನ್ನನ್ನೂ?”

“ಹೇಳೋದೆ ಬೇಡ”

“ಕತ್ತಲಲ್ಲಿ ಒಬ್ಬನೆ ಹೇಗೆ ಬಂದೆ ಅಂದ್ರೆ?”

“ಹೇಳ್ತಿನಿ, ಅಮ್ಮ ಚಕ್ಕುಲಿ ಮಾಡ್ತೀನಿ ಅಂತಿದ್ಲು, ಅದಕ್ಕೆ ಆಫೀಸಿಗೆ ನಾನು ಹೋಗಿಲ್ಲ. ಮನೇಲೆ ಇದ್ದು ಬಿಟ್ಟೆ, ಅಂತ”

“ನೋಡು, ನೀನು ಹುಡುಗ, ನಿನ್ನ ಮಾತು-ಏನೊ ಹುಡುಗನ ಮಾತು ಅಂದುಕೊಂಡು ಸುಮ್ಮನಾದಾರು. ಮುದುಕ ಆಗೋತನಕ, ಕಣ್ಣು ಮಂಜು ಆಗೋತನಕ, ಬೆನ್ನು ಬಾಗೋತನಕ, ಸರ್‍ವಿಸ್ ಮಾಡಿದ್ದೇನೆ; ಒಂದು ದಿನ ಸುಳ್ಳು ಹೇಳಲಿಲ್ಲ ದಣಿ ಹತ್ರ. ಈಗ ನೀನು, ಸುಳ್ಳು ಹೇಳಬೇಕು ಅಂತೀಯ?”

“ಹೋಗ್ಲಿ ಬಿಡಿ, ನಾನೊಬ್ನೆ ಹೋಗ್ತೇನೆ ರಾತ್ರಿ ಕಪ್ಪೆ ಕೈಲಿ ಕಚ್ಚಿಸಿ ಕೊಂಡು, ಚಿಟ್ಟೆ ಕೈಲಿ ಪರಚಿಸಿಕೊಂಡು.”

“ಅಸಾಸೂರನಯ್ಯ ನೀನು! ನಿನ್ನ ತಮ್ಮನ್ನ ನೋಡಬಾರದೆ? ಏಳು ದಿನದ ಕಂದಮ್ಮ-ಕೊಂದ ಆರಾಕ್ಷಸರನ್ನ!”

“ಬಿಡಿ, ಮಹಾ! ಅಷ್ಟೊಂದು ಜನ ಹಿಂದಿದ್ದಾಗ ಮಹಾ ಶೂರತನ! ತ್ರಿಪುರಾಸುರ ದಹನದ ಕಾಲದಲ್ಲಿ ನಮ್ಮ ಅಪ್ಪನ ಕುದುರೆ ಗಾಡಿ ನಿಲ್ಲಿಸಿ ಬಿಟ್ಟೆ!

“ಸರಿಯಪ್ಪ!”

“ಅದಿರಲಿ, ಹತ್ತಿಸಿಕೊಂಡು ಹೋಗ್ತಿರೊ? ಇಲ್ಲೇ ಬೆಂಗಳೂರು ಚಳೀಲಿ ನರಳೋ ಹಾಗೆ ಮಾಡ್ತೀರೋ?”

“ಆಗ್ಲಿ, ಬಾ ಅಪ್ಪ, ಭಾರಬಿಡಬೇಡ-ಬೆನ್ನು ನೋಯುತ್ತೆ”

“ನೀವು, ನಾನು ಚೆನ್ನಾಗಿ ಹತ್ತಿ ಕೂತೊಳ್ಕೊ ತನಕ ಮೇಲೇಳಬಾರದು. ನೀವುಗಾನ ಬೀಳಿಸಿದ್ರೆ ಅಮ್ಮನಿಗೆ ಹೇಳ್ತೆನೆ”

“ಈಗ ಹೇಳ್ದೆ, ಯಾರಿಗೂ ಹೇಳಬೇಡ ಅಂತ?”

“ಅಯ್ಯೋ! ಮರತೆ ಅಂದ್ರೆ! ಚಿಕ್ಕಪ್ಪಾಜಿ! ಮೆಲ್ಲಗೆ ಕರಕೊಂಡು ಹೋಗಿ ………….ಚಿಕ್ಕಪ್ಪಾಜಿ! ಬೆನ್ನು ನೋಯುತ್ತ?”

“ಕಾಲು, ಮೈ, ಎಲ್ಲ ನೋಯುತ್ತೆ”

“ನಾನು ಮೈ ತಿಕ್ಕೋದು ಕಲೀಲಿಲ್ಲ. ನಮ್ಮ ಇಸ್ಕೂಲಲ್ಲಿ ಮೇಡಂ ಹೇಳಿಕೊಟ್ಟಿಲ್ಲ!”

“ನೀನು ಯಾವ ಸ್ಕೂಲಿಗೆ ಹೋಗಿದ್ದೆಯಯ್ಯ?”

“ನಮ್ಮ ಅಮ್ಮಂದೆ ಸ್ಕೂಲು. ಅಮ್ಮನೆ ಮೇಡಂ, ಒಂದು ದಿನ ಸಾನೂ ಹೊಡೀಲಿಲ್ಲ. ನೀವು ನಿಮ್ಮ ಅಮ್ಮನ ಹತ್ತಿರ ಪಾಠ ಕಲಿತಿದ್ದಿರಾ?”

“ಇಲ್ಲ, ಸ್ವಾಮಿ ಹತ್ತಿರ ಕಲಿತೆ”

“ನನ್ನ ಅಯ್ಯ ಒಳ್ಳೆಯವರಲ್ಲವೆ?”

“ಹೌದು……..ಈವಾಗ ನಾನು ಮನೆಗೆ ಹೋದಕೂಡಲೆ ಎಣ್ಣೆ ಹಚ್ಚಿ ಮೈ ನೀವಿ, ಕಾಲುಜ್ಜಿ, ಬಿಸಿನೀರು ಹಾಕ್ತಾರೆ. ನೀನು ಒಂದು ದಿವಸವಾದ್ರೂ ನಿನ್ನ ಇಲಿಗೆ ಹಾಗೆ ಮಾಡಿದ್ದೀಯ?”

“ಛೇ! ಅದು ಇಲಿ, ನೀವು ನಮ್ಮ ಅಯ್ಯನಿಗೆ ತಮ್ಮ. ನಿಮಗೂ ಅದಕ್ಕೂ ಒಂದೇನೆ!”

“ಮನೆ ಬಂತು. ಮೆಲ್ಲಗೆ ಇಳಿ-ಮಾತಿನಲ್ಲಿ ಗೊತ್ತೆ ಆಗಲಿಲ್ಲ. ಅಲ್ಲಿ ನೋಡು ಅಯ್ಯ ಅಮ್ಮ ನಿಂತವ್ರೆ”

“ಅಪ್ಪಾಜಿ ರೇಗವ್ರೊ ಏನೊ!”

“ನನ್ನ ಹೊಟ್ಟೆ ಕೆಳಗೆ ಅಡಗಿಕೊ”

ಪ್ರಮಥರಿಬ್ಬರೂ ನಕ್ಕರು. ದೇವತೆಗಳು ನಕ್ಕಾಗ ಹೀಗೂ ಆಗಬಹುದಲ್ಲವೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತಿಭ್ರಮಣೆ
Next post ಯಾವ ಹೆಣ್ಣು ಬರುವಳೊ ಇಲ್ಲವೊ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…