ಕಾಡುತಾವ ನೆನಪುಗಳು – ೧

ಕಾಡುತಾವ ನೆನಪುಗಳು – ೧

ಲೇಖಕಿಯ ಮಾತು

ಆತ್ಮಕಥೆಯನ್ನು ಬರೆಯುವಷ್ಟು ಸ್ಥೈರ್‍ಯ ನನಗಿಲ್ಲ. ಕಾರಣ ನಾವು ‘ಸೆಲೆಬ್ರಿಟಿಯೂ’ ಅಲ್ಲ ಹುತಾತ್ಮಳಾಗುವಂತಹ ಕಾರ್‍ಯವನ್ನು ಮಾಡಿಲ್ಲ. ‘ಬದುಕು’ ಅವರವರ ಭಾವಕ್ಕೆ ತಕ್ಕಂತೆ ನಡೆಯುತ್ತಿದೆಯೆಂದುಕೊಂಡರೂ ‘ನಿಯತಿ’ಯನ್ನು ಬಲ್ಲವರು ಹೇಳುವುದು, ‘ಹಣೆಬರಹ’ ಎಂದು. ನಮ್ಮ ಹಣೆಯಬರಹವನ್ನು ಬರೆದುಕೊಳ್ಳುವ ಹಾಗಿದ್ದರೆ, ನಾವೇ ಚೆನ್ನಾಗಿ ಹೇಗೆ ಬೇಕೋ ಹಾಗೆಯೇ ಬರೆದುಕೊಳ್ಳುತ್ತಿದ್ದೆನೋ ಏನೋ? ದಿ || ಮಂಜುನಾಥ ಬೆಳಕೆರೆಗೆ, ರಂಗಾಯಣ, ಮೈಸೂರು ನನ್ನ ಆಪ್ತರೂ ಚಿಕ್ಕವರೂ ಕೂಡ. ನಾನು ಭೇಟಿಯಾದಾಗಲೆಲ್ಲಾ ಅವರು ಹೇಳುತ್ತಿದ್ದುದು ಒಂದೇ ಮಾತು “ಡಾಕ್ಟ್ರ್‍ಎ… ಆತ್ಮಕಥೆ ಬರೀರಿ…” ಎಂದು. ನಾನು ಅಂತಹುದೇನಿಲ್ಲಾರಿ ಎಂದು ನಕ್ಕು ಸುಮ್ಮನಾಗುತ್ತಿದ್ದೆ. ಹೀಗೆ ಹೋದ ವರ್‍ಷ ನನ್ನ ಪುಸ್ತಕಗಳ ಪ್ರಕಾಶಕರಾದ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ ಅವರಿಗೆ ಫೋನು ಮಾಡಿ ಕೇಳಿದ್ದೆ. ಅವರು ಹಿಂದು-ಮುಂದು ಯೋಚಿಸದೆ “ಬರೆದುಕೊಡಿ ಡಾಕ್ಟೇ… ನಾನು ಪಬ್ಲಿಷ್ ಮಾಡ್ತೀನಿ” ಎಂದುಬಿಟ್ಟರು. ಆಗ ನಾನು ಬರೆಯಲೇಬೇಕಾಗಿತ್ತು. ಒಂದು ವರ್‍ಷದ ನಂತರ ಅಳೆದು ಸುರಿದು, ಬರೆಯಲು ಕುಳಿತೆ. ನನ್ನ ಮಾನಸ ಪುತ್ರಿ ಕುಮಾರಿ ಚಿನ್ಮಯಿ ಈಗ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಅವಳು ಕೇಳುತ್ತಿದ್ದ ನನ್ನ ಬಗ್ಗೆ, ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬರೆಯತೊಡಗಿದೆ. ಮಧ್ಯೆ ಮಧ್ಯೆ ಆಂಗ್ಲ ಭಾಷೆಯ ಪದಗಳ ಪ್ರಯೋಗವನ್ನು ಬರಹದ ಕೃತಕತೆಯನ್ನು ತಪ್ಪಿಸಲು ಮಾಡಿದ್ದು. ಇದೇನು ದೊಡ್ಡ ಗ್ರಂಥವಲ್ಲ, ಈ ಪುಸ್ತಕ ಹೊರಬರಲು ಪ್ರೋತ್ಸಾಹವನ್ನು ಯಾವಾಗಲೂ ನೀಡುವ, ಶ್ರೀ ನಿಡಸಾಲೆಯವರು, ಶ್ರೀ ಚಂದ್ರಶೇಖರ್-ಕನ್ನಡ ಪ್ರಭ, ಅವರನ್ನು ಸ್ಮರಿಸಲೇಬೇಕು.

ನನ್ನ ಹೃದಯಪೂರ್‍ವಕ ಧನ್ಯವಾದಗಳು;

– ನನ್ನ ಮಾನಸ ಪುತ್ರಿ ಚಿನ್ಮಯಿ
– ಕಲ್ಪನಾ ಚಂದ್ರಶೇಖರ್
– ಚಂದ್ರಶೇಖರ್
– ನಿಡಸಾಲೆ ಪುಟ್ಟಸ್ವಾಮಯ್ಯ ಮತ್ತವರ ಮಗ ವಿಜಯ್ ನಿಡಸಾಲೆ
– ಡಿ.ಟಿ.ಪಿ. ಮಾಡಿದ ಮಹೇಶ್ ಕುಮಾರ್ ಬಿ.
– ಉತ್ತಮವಾಗಿ ಮುದ್ರಿಸಿದ ಜಾಗೃತಿ ಪ್ರಿಂಟರ್‍ಸ್ ಬಳಗಕ್ಕೆ
– ಮುಖಪುಟ ಚಿತ್ರ ವಿನ್ಯಾಸ ರಚಿಸಿದ ಅರುಣ್ ಕುಮಾರ್ ಜಿ.
– ನನ್ನ ಬದುಕಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ ಎಲ್ಲರಿಗೂ
– ಎಂದಿನಂತೆ ನನ್ನ ಪ್ರಿಯ ಓದುಗರಿಗೆ ಸಲ್ಲುತ್ತವೆ. ಕೃತಜ್ಞತೆಗಳೊಡನೆ,

ಇಂತಿ ನಿಮ್ಮ,

ಗಿರಿಜಾ
(ಡಾ. ಎಚ್. ಗಿರಿಜಮ್ಮ)

ಕಾಡುತಾವ ನೆನಪುಗಳು

ಆಷಾಡದ ಮಳೆ ಜೋರಾಗಿ ಸುರಿದರೆ ಮತ್ತೊಮ್ಮೆ ಹೂಮಳೆಯಂತಾಗುತ್ತಿತ್ತು. ಮಳೆ ನಿಂತ ಕೂಡಲೇ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಬಿಸಿಲು ಮಳೆಯಾಗುತ್ತಿತ್ತು. ಬಾಲ್ಕನಿಗೆ ಬಂದು ನಿಂತೆ, ನಾನಿದ್ದುದ್ದು ಒಂದು ಅಪಾರ್‍ಟ್‌ಮೆಂಟಿನಲ್ಲಿ. ಹೀಗಾಗಿ ಭೂಮಿ ನೆನೆದು ಮಣ್ಣಿನ ವಾಸನೆಯನ್ನು ತರುವಂತಹ ಜಾಗವೂ ಆಗಿರಲಿಲ್ಲ. ಅಪಾರ್ಟ್‌ಮೆಂಟಿನ ಕೈತೋಟದಲ್ಲಿ ಗಿಡಗಳು, ಮರಗಳು ಮಳೆಯ ನೀರಿನಲ್ಲಿ ಮಿಂದು ಶುಭ್ರವಾಗಿ ಎಲ್ಲೆಲ್ಲೂ ಹಸಿರೆಲೆಗಳು ಕಾಣುತ್ತಿದ್ದವು. ಅಪಾರ್‍ಟ್‌ಮೆಂಟಿನವರೇ ಆಗಿದ್ದ ಪುಟ್ಟ ಮಕ್ಕಳು ಮಳೆಯ ಹನಿಗಳಲ್ಲಿ ನೆನೆಯುತ್ತಾ ತಕತಕನೆ ಕುಣಿಯುತ್ತಾ, ಆಗಾಗ್ಗೆ ಸಂತೋಷದಿಂದ ಕೇಕೆ ಹಾಕುತ್ತಾ, ಕಿರಿಚಿಕೊಳ್ಳುತ್ತಾ ಮಳೆಯ ಆನಂದವನ್ನು ಪಡೆಯುತ್ತಿದ್ದವು. ಎಂಥಾ ನಿರ್‍ಮಲ ಆನಂದವದು!

ಆದರೆ ನನಗೆ ಮಳೆಯನ್ನು ನೋಡಿದರೆ ಮೊದಲು ನೆನಪಾಗುವುದು ನನ್ನ ಅವ್ವಾ… ಹೌದು ಭೂಮಿತಾಯಿಯಷ್ಟೇ ತೂಕದಾಕೆ, ಕಷ್ಟಗಳು ಎದುರಾದಾಗ ಬಂಡೆಗಲ್ಲಿನಂತೆ ಎದೆಯೊಡ್ಡಿ ನಿಲ್ಲುತ್ತಿದ್ದ ನನ್ನವ್ವ.

ಆಗಿನ್ನೂ ನನಗೆ ಆರೇಳು ವರ್‍ಷಗಳಿರಬಹುದು, ಕಪ್ಪು ಹೆಂಚಿನ ಮನೆ, ಹಸಿ ಇಟ್ಟಿಗೆಯಿಂದ ಕಟ್ಟಿಸಿದ್ದು, ಅಜ್ಜನ ಜಾಗವದು. ತನ್ನ ಹತ್ತೊಂಭತ್ತು ವರ್‍ಷದಲ್ಲಿ ಗಂಡನನ್ನು ಕಳೆದುಕೊಂಡು ಎರಡು ವರ್‍ಷಗಳ ನನ್ನನ್ನು ಕೈಹಿಡಿದು ಮೂರು ತಿಂಗಳ ಪುಟ್ಟ ಮಗು ನನ್ನ ತಂಗಿಯನ್ನು ಎತ್ತಿಕೊಂಡು ತಾಯಿಯಿಲ್ಲದ, ತಂದೆಯಿಲ್ಲದ ನನ್ನ ತಾಯಿ ಬಂದಿದ್ದು ಈ ಮನೆಗೆ. ತನ್ನ ಅಜ್ಜನನ್ನೇ ಅಪ್ಪಾ ಎಂದು ತಿಳಿದಿದ್ದಳು. ಹಾಗೆಯೇ ಕರೆಯುತ್ತಿದ್ದಳು. ಅಲ್ಲಿ ನನ್ನ ಸಣ್ಣವ್ವಾ ಅಂದರೆ ನನ್ನ ಅವ್ವನ ತಂಗಿ ಮತ್ತವಳ ಸಂಸಾರವನ್ನು ನೋಡಿಕೊಳ್ಳಬೇಕಾಗುತ್ತಿತ್ತು. ಚಿಕ್ಕಪ್ಪ ತರುತ್ತಿದ್ದ ದುಡ್ಡು ಸಾಕಬೇಕನ್ನುವಂತಾಯಿತು. ಅವ್ವ ಧೃತಿಗೆಡಲಿಲ್ಲ. ಆಕೆ ಹೈಸ್ಕೂಲು ಮುಗಿಸಿದ್ದರಿಂದ ಒಂದು ಶಾಲೆಯಲ್ಲಿ ಒಂದು ವರ್‍ಷ ಮಾಸ್ತರಾಗಿ ದುಡಿದಳು. ಅವಳ ಅದೃಷ್ಟವೆಂದರೆ ಆಸ್ಪತ್ರೆಯಲ್ಲಿ ದಾದಿಯ ಕೆಲಸ ಸಿಕ್ಕಿತ್ತು. ಅದು ಸರ್‍ಕಾರಿ ನೌಕರಿಯಾಗಿತ್ತು. ಅವ್ವ ಸಮಾಧಾನದ ಉಸಿರು ಬಿಟ್ಟಳು. ಮೂರು ಹೊತ್ತು ಅಲ್ಲದಿದ್ದರೂ ಒಂದು ಹೊತ್ತಿಗಾದರೂ ಎಲ್ಲರಿಗೂ ಊಟ ಸಿಗುವಂತಾಗಿತ್ತು. ಚಿಕ್ಕಪ್ಪ ತರುತ್ತಿದ್ದ ಹಣ ಆತನ ಬೀಡಿ, ಚಹಾಕ್ಕೆ ಹೋಗಿಬಿಡುತ್ತಿತ್ತು. ಅವ್ವ ಅತ್ಯಂತ ಸ್ವಾಭಿಮಾನಿ ಹೆಣ್ಣಾಗಿದ್ದಳು. ಎಂದೂ ಯಾರಿಂದಲೂ ಏನನ್ನೂ ನಿರೀಕ್ಷಿಸಿರಲಿಲ್ಲ!

ತಿಂಗಳ ಕೊನೆಯ ವಾರದಲ್ಲಿ ಮನೆ ಖಾಲಿಯೆನ್ನುವಂತಾಗುತ್ತಿತ್ತು. ಅನ್ನ ಮಾಡುವುದು ದುಸ್ತರವಾಗುತ್ತಿತ್ತು. ಆಗೆಲ್ಲಾ ನಾವು ಅಕ್ಕಿ ಅನ್ನ, ಜೋಳದ ಮುದ್ದೆ, ನವಣೆ ರೊಟ್ಟಿಯನ್ನೇ ಉಣ್ಣಬೇಕಾಗುತ್ತಿತ್ತು. ಒಂದು ‘ಸೇರು’ ಅಂದಿನ ಸೇರು ಈಗ ಕೆ.ಜಿ.ಯಾಗಿದೆ. ಒಂದು ಸೇರು ಜೋಳದ ಹಿಟ್ಟಿದ್ದರೆ ಇಡೀ ಕುಟುಂಬಕ್ಕೆ ಒಂದು ಹೊತ್ತಿಗೆ ಸಾಕಾಗುತ್ತಿತ್ತು. ಅನ್ನವನ್ನು ಹಬ್ಬ-ಹರಿದಿನಗಳಲ್ಲಿ ಮಾಡುತ್ತಿದ್ದರು. ಹಸಿದ ಹೊಟ್ಟೆಗಳಿಗೆ ಒಮ್ಮೊಮ್ಮೆ ಜೋಳದ ಹಿಟ್ಟಿನ ಗಂಜಿಯೇ ಸಾಕಾಗುತ್ತಿತ್ತು. ಬೇಕೆಂದು ಕೇಳಿದರೂ ಅಲ್ಲಿರುತ್ತಿರಲಿಲ್ಲ.

ಇದ್ದ ಒಂದೇ ಆಶ್ರಯವಾಗಿದ್ದ ಆ ಕಪ್ಪು ಹೆಂಚಿನ ಮನೆ, ಮಳೆ ಬಂದರೆ ಅದರ ಸ್ಥಿತಿ ಅಧೋಗತಿ!

ಅಂದೂ ದೊಡ್ಡ ಮಳೆಯೇ ಬರತೊಡಗಿತ್ತು. ಈಗಲೂ ಕಣ್ಣುಗಳ ಮುಂದೆ ಆ ದೃಶ್ಯವನ್ನು ನೋಡುತ್ತಿದ್ದೆನೇನೋ ಎಂದೆನ್ನಿಸುತ್ತದೆ. ಅಂದು ಬಂದ ಮಳೆ ಅಂತಿಂಥಾ ಮಳೆಯಲ್ಲ! ಆಲಿಕಲ್ಲುಗಳು ಮಳೆ ರಪರಪನೆ ಸುರಿಯತೊಡಗಿತ್ತು. ಹಳೆಯದಾಗಿದ್ದ ಕಪ್ಪು ಹೆಂಚಿನ ಮೇಲೆ ಆಲಿಕಲ್ಲುಗಳು ಕಲ್ಲುಗಳು ಬಿದ್ದ ಹಾಗೆ ಬೀಳತೊಡಗಿದ್ದವು. ನಾಲ್ಕಾರು ಕಡೆ ಮನೆಯ ಸೂರು ಸೋರತೊಡಗಿತ್ತು. ಚಿಕ್ಕವರಾಗಿದ್ದ ನಮಗೆ ಅರೆಬಟ್ಟೆಯಲ್ಲಿದ್ದ ನಾವು ಆಲಿಕಲ್ಲುಗಳನ್ನು ಆಯ್ದು ತರುವುದು, ಅವ್ವನ ಗದರಿಕೆಗೆ ಮಣಿಯುವಂತಿರಲಿಲ್ಲ. ಅವ್ವ ನೀರು ಸೋರುತ್ತಿದ್ದ ಜಾಗಗಳಲ್ಲಿ ಡಬರಿಗಳನಿಟ್ಟು ನೆಲಕ್ಕೆ ಬೀಳದಂತೆ ತಡೆಯುವ ಪ್ರಯತ್ನದಲ್ಲಿದ್ದಳು. ಡಬರಿಗಳು ತುಂಬಿದ ಕೂಡಲೇ ನೀರನ್ನು ತಂದು ಹೊರಚೆಲ್ಲುತ್ತಿದ್ದಳು. ನನ್ನ ಕೈಗಳೂ ನೀರು ತುಂಬಿದ ಡಬರಿಗಳನ್ನು ಹಿಡಿದು ತಂದು ನೀರನ್ನು ಹೊರಚೆಲ್ಲುತ್ತಿದ್ದವು.

ಅವ್ವಾ ಚಿಂತಾಕ್ರಾಂತಳಾಗಿ ಕುಳಿತುಬಿಟ್ಟಿದ್ದಳು. ಅಜ್ಜನೂ ಮೌನವಾಗಿ ಕುಳಿತಿದ್ದ. ಮಳೆಯಿಂದ ನಮಗಾಗುತ್ತಿದ್ದ ಆನಂದ ಅವರ ಮುಖದಲ್ಲಿರಲಿಲ್ಲ.

“ಅಪ್ಪಾ…” ಅವ್ವ ದುಗುಡದಿಂದ ಕರೆದಳು.

ಅಜ್ಜ-ಅವ್ವನ ಮುಖ ನೋಡಿದ. ಅವನ ಕಣ್ಣುಗಳಲ್ಲೂ ಹತಾಶೆ, ನೋವು ಇದ್ದಿತ್ತಾ?

ಪಾತ್ರೆಗಳು ಸೋರುತ್ತಿರುವ ಮಳೆ ನೀರಿನಿಂದ ತುಂಬಿದ ಕೂಡಲೆ ಒಳಗೆ ಬಂದು ಅವುಗಳನ್ನೆತ್ತಿಕೊಂಡು ಹೊರಗೆ ಮಳೆ ನೀರು ಚೆಲ್ಲುತ್ತಿದ್ದ ನನಗೆ ಆಗೆಲ್ಲಾ ಅರ್‍ಥಮಾಡಿಕೊಳ್ಳುವ ವಯಸ್ಸಾಗಿರಲಿಲ್ಲ. ಈಗ ಆ ವೇದನೆ ತುಂಬಿದ ಮುಖಗಳು ಎದುರಿಗೆ ಬಂದಾಗ ನನ್ನ ಕಣ್ಣುಗಳಿಗೆ ತಿಳಿಯುತ್ತಿದೆ. ಆ ಮುಖಗಳಲ್ಲಿ ಸಂತೋಷ ತುಂಬಿರಲು ಹೇಗೆ ಸಾಧ್ಯ?

ಅವ್ವಾ ಹೇಳುತ್ತಿದ್ದಳು.

“ಅಪ್ಪಾ ಮನೀ ಮ್ಯಾಲಿನ ಹೆಂಚುಗಳು ಆಲಿಕಲ್ಲು ಮಳೀಗೆ ಒಡೆದು ಚೂರು ಚೂರಾಗ್ತಾ ಅದಾವು. ಈಗ ಸೋರೋದನ್ನು ನಿಲ್ಲಿಸ್‌ಬೇಕಂದ್ರೆ ಏನಿಲ್ಲಾಂದ್ರು ನೂರು ಹೆಂಚುಗಳು ಬೇಕಾಗ್ತವೆ. ಏನ್ ಮಾಡ್ಲಿ? ಒಂದ್‌ಕಡೆ ಸೋರಿದ್ರೆ ಹೆಂಗೋ ಕೂತ್ಕಂಡಾದ್ರೂ ಕಾಲ ಕಳಿಬೋದು. ಈಗ ಅಡಿಗೆ ಮಾಡೋ ಒಲಿ ಜಾಗ ಬಿಟ್ಟು ಮತ್ತೆಲ್ಲಾ ಕಡೀ ನೆಲ ತೋಯ್ತು ತಪ್ಪಡಿ ಆಗೈತಿ. ಏನ್ ಮಾಡ್ಬೇಕೋ ಏನೋ ತಲೀಗೆ ಹೊಳೀವಲ್ದು…”

ಹೊರಗಡೆ ಮಳೆ ಮಾತ್ರ ಭೂಮಿ ತಾಯಿಯ ಮೇಲೆ ಸಿಟ್ಟುಗೊಂಡಂತೆ “ಧೋ” ಎಂದು ಒಂದೇ ಸಮನೆ ಸುರಿಯತೊಡಗಿತ್ತು. ಹೊರಗಡೆ ಮಳೆಯಲ್ಲಿ ತೋಯುತ್ತಾ, ಆಲಿಕಲ್ಲುಗಳನ್ನು ಆರಿಸಿ ಕೈಯ್ಯಲ್ಲಿ ಹಿಡಿದುಕೊಳ್ಳುತ್ತಾ ಕುಣಿಯುತ್ತಿದ್ದ ನಮಗೆ ಏನೂ ತಿಳಿಯದಿದ್ದರೂ ಅಂದು ಅವ್ವ ತೆಗೆದುಕೊಂಡ ನಿರ್‍ಧಾರ ಮರೆಯಲಾಗುತ್ತಿಲ್ಲ.

ಕಬ್ಬಿಣದ ಟ್ರಂಕ್‌ನಿಂದ ಚಿಕ್ಕದೊಂದು ಪರ್‍ಸ್ ತೆಗೆದು, ನಂತರ ಟ್ರಂಕಿನ ಮೂಲೆಗಳನ್ನು ತಡಕಾಡಿದ ನಂತರ ದುಡ್ಡು ತೆಗೆದುಕೊಂಡು ಆ ಮಳೆಯಲ್ಲಿಯೇ ನೆನೆಯುತ್ತಾ ದಢದಢನೆ ಹೋದವಳು, ಕೈಗಾಡಿಯ ಮೇಲೆ ಕಪ್ಪು ಹೆಂಚುಗಳನ್ನೇರಿಸಿಕೊಂಡು ಬಂದಿದ್ದಳು! ಕೈಗಾಡಿಯವನಿಗೆ ಕೊಡಬೇಕಾದ ಹಣಕೊಟ್ಟು ಹೆಂಚುಗಳನ್ನು ಕೆಳಗಿಳಿಸಿಕೊಂಡಳು. ಪಕ್ಕದ ಗಲ್ಲಿಯೊಂದರ ಮನೆಯಿಂದ ಏಣಿಯೊಂದನ್ನು ಕೇಳಿ ತೆಗೆದುಕೊಂಡು ಬಂದು ಮನೆಯ ಮುಂದಿನ ಗೋಡೆಗೆ ನಿಲ್ಲಿಸಿದ್ದಳು.

ನಮ್ಮ ಕುಣಿದಾಟ ನಿಂತಿತ್ತು.

ಅವ್ವ ಉಟ್ಟಿದ್ದ ಒದ್ದೆಯಾದ ಸೀರೆಯನ್ನೆ ಕಚ್ಚೆ ಹಾಕಿ ಕಟ್ಟಿಕೊಂಡಳು. ಸುರಿಯುತ್ತಿದ್ದ ಮಳೆಯಲ್ಲಿಯೇ ಮನೆ ಮೇಲೆ ಹತ್ತಿದ ಅವ್ವ ಒಡೆದುಹೋಗಿದ್ದ ಹೆಂಚಿನ ಚೂರುಗಳನ್ನು ಆಯ್ದು ಕೆಳಗೆಸೆದಳು. ನಮಗೆ ಕೆಳಗಡೆಯಿದ್ದ ಹೆಂಚುಗಳನ್ನು, ಒಂದೊಂದಾಗಿ ಜಾಗರೂಕತೆಯಿಂದ ಕೊಡಬೇಕೆಂದು ತಾಕೀತು ಮಾಡಿದಳು. ನನಗೆ ಏಣಿಯ ಮೇಲೆ ನಿಂತು ಮೇಲೆ ನಿಂತಿದ್ದ ಅವ್ವನ ಕೈಗೆ ಒಂದೊಂದಾಗಿ ಕೊಡತೊಡಗಿದ್ದೆವು. ಇದೂ ಒಂದು ಆಟದಂತೆ ಆಗಿತ್ತು.

ಮನೆಯ ಛಾವಣಿಯ ಮೇಲೇರಿದ್ದ ಅವ್ವ ಒಡೆದು ಚೂರಾಗಿದ್ದ ಹೆಂಚುಗಳ ಜಾಗದಲ್ಲಿ ಹೊಸ ಹೆಂಚುಗಳನ್ನು ಜೋಡಿಸತೊಡಗಿದ್ದಳು. ರಸ್ತೆಯಲ್ಲಿ ಹೋಗುತ್ತಿದ್ದವರು ಹೆಂಚು ಸೇರಿಸುತ್ತಿದ್ದ ಅವ್ವನನ್ನು ಅಚ್ಚರಿಯಿಂದ ನೋಡುತ್ತಾ ಹೋಗುತ್ತಿದ್ದರು. ಅವ್ವನಿಗೆ ಅದರ ಪರಿವೇ ಇರಲಿಲ್ಲ. ಕೆಲಸದಲ್ಲಿ ಮಗ್ನಳಾಗಿದ್ದಳು. ಆಕೆಗೆ ಸೂರು ಭದ್ರ ಮಾಡುವುದು ಮುಖ್ಯವಾಗಿತ್ತು.

ಕೂಲಿಯವರನ್ನು ಕರೆದು ತಂದು ಮಾಡಿಸಿದರೆ ಹೆಚ್ಚು ದುಡ್ಡು ಕೇಳುತ್ತಿದ್ದರು. ಅದೇ ದುಡ್ಡಿನಲ್ಲಿ ಮತ್ತಷ್ಟು ಕಪ್ಪು ಹೆಂಚುಗಳನ್ನು ಖರೀದಿಸಿ ತಂದಿದ್ದಳು.

ಅಲ್ಲಿನ ಕೆಲಸ ಮುಗಿಸಿ ಬಂದ ಅವ್ವಾ ಒಂದು ಬಾರಿ ಒಳಗೆ ಬಂದು ನೋಡಿದಳು. ಸೋರುವುದು ನಿಂತಿತ್ತು. ಅವ್ವಾ ಸಮಾಧಾನದ ಉಸಿರು ಬಿಟ್ಟರೂ ಆತಂಕವನ್ನು ಮರೆಯಾಗಿರಲಿಲ್ಲ.

“ಅಪ್ಪಾ… ಈ ಮಳಿ ಹೀಂಗ ಬಂದ್ರೆ ಹಸಿ ಇಟ್ಟಿಗಿಮನಿ ತಡ್ಕೊಂಡ್ತಾದಾ? ಇಡೀ ಮನೀನೇ ಕುಸಿದು ಬೀಳ್ತೈತಿ ಅಷ್ಟೇ…” ಎಂದು ಅವ್ವನ ಮುಂದೆ ಭಯ ರಾಕ್ಷಸನಂತೆ ನಿಂತಿತ್ತು.

“ಹಂಗೇನೂ ಆಗಂಗಿಲ್ಲ ಬಿಡು. ದ್ಯಾವರಿದ್ದಾನೆ…” ಅಜ್ಜನ ಮಾತುಗಳಿಂದ ಅವ್ವ ಏನೂ ವ್ಯತ್ಯಾಸವಾಗದವಳಂತೆ ಕುಳಿತಿದ್ದಳು. ಅವ್ವನ ಪಾಲಿಗೆ ದೇವರಿದ್ದನೋ… ಬಿಟ್ಟನೋ… ಮಳೆಯ ರಭಸ ಕಡಿಮೆಯಾಗತೊಡಗಿತ್ತು.

“ಅವ್ವಾ… ಈಗ ಆಲಿಕಲ್ಲು ಬೀಳ್ತಾಯಿಲ್ಲ…” ಎಂದು ನಾನು ನಿರಾಶೆಯಿಂದ ಹೇಳಿದ್ದೆ.

ದಢಕ್ಕನೆ ಎದ್ದು ಬಂದ ಅವ್ವಾ ನನ್ನ ಬಾಯಿ ಮುಚ್ಚಿ, “ಹಂಗನಬ್ಯಾಡ ಮಗಳೇ. ಆಲಿಕಲ್ಲು ಮಳಿ ಹೀಗ ಬಿದ್ರೆ ನಿನ್ನ ಡಬರಿಯಿರಲಿ, ಇಡೀ ಮನೀನ ಕುಸಿದು ಬೀಳ್ತೈತಿ. ಮಳಿ ನಿಂತ್ರ ಸಾಕನ್ನು…” ಎಂದಳು ಉದ್ವೇಗದಿಂದ.

ಅಂದು ಅವಳ ಕಣ್ಣುಗಳಲ್ಲಿ ಮೂಡಿದ್ದ ಆತಂಕ, ಭಯ ಇಂದೂ ನನ್ನ ಕಣ್ಣುಗಳಿಗೆ ಕಟ್ಟಿದಂತಿದೆ. ಸುರಿಯುತ್ತಿದ್ದ ಮಳೆಯಲ್ಲಿ ಸೀರೆಯನ್ನು ಕಚ್ಚೆಯಂತೆ ಕಟ್ಟಿ, ಮನೆಯ ಮೇಲೇರಿ ಒಬ್ಬಳೇ ಹೆಂಚು ಜೋಡಿಸಿದ್ದ ಅವ್ವಾ ನನ್ನೊಳ ಮನಸಿನಲ್ಲಿ ಭದ್ರವಾಗಿ ಕುಳಿತಿದ್ದಾಳೆ.

ಮಳೆ ಬಂದರೆ ಈಗಲೂ ನನ್ನ ಎದೆ ನೆನಪುಗಳಿಂದ ಒದ್ದೆಯಾಗುತ್ತದೆ. ಇನ್ನು ಬಾಲ್ಯ ಹೇಗಿತ್ತೂಂತ ಹೇಳಲೇಬೇಕಾಗುತ್ತದೆ. ಬಡತನದ ವಾತಾವರಣದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಬಾಲ್ಯವೇ ಅತಿ ಮುಖ್ಯ ಎಂಬಂತೇನಿರುವುದಿಲ್ಲ. ಕೂಲಿ ಕಾರ್‍ಮಿಕರಾಗಿಯೋ, ಜೀತದಾಳಾಗಿ ದುಡಿಯುತ್ತಲೇ ಬದುಕನ್ನು ಕಳೆಯುತ್ತಾರೆ. ಸದ್ಯ ನಮ್ಮದಾಗಿರಲಿಲ್ಲ!

ನನ್ನ ನೆನಪಿರುವ ಹಾಗೆ, ಶ್ರೀಮಂತ ಜೀವನ ಕಾಣದಿದ್ದರೂ, ಮೊದಲ ದಿನಗಳ ಹಾಗೆ ಒಂದು ಹೊತ್ತು ಊಟದ ಜಾಗದಲ್ಲಿ ಮೂರು ಹೊತ್ತು ಊಟ, ತಿಂಡಿ ಸಿಗುವಂತಿತ್ತು. ಅವ್ವನಿಗೆ ಸರ್‍ಕಾರಿ ಆಸ್ಪತ್ರೆಯಲ್ಲಿ ದಾದಿಯ ನೌಕರಿ ಸಿಗುತ್ತಿತ್ತು. ಹಾಗೆಯೇ ಆಕೆಗೆ ವಸತಿ ಗೃಹವೊಂದನ್ನು ಕೊಡಲಾಗಿತ್ತು. ಮಳೆಯಿಂದ ಸೂರು ಸೋರುವ ಆತಂಕವಿರಲಿಲ್ಲ.

ಅವ್ವ, ಅಜ್ಜನನ್ನು ಇಷ್ಟಪಡುತ್ತಿದ್ದೆ. ನಮ್ಮ ಜೊತೆಗೆ ಇದ್ದ ಸಣ್ಣವ್ವಾ ಎಂದರೆ ನನ್ನ ತಾಯಿಯ ತಂಗಿ, ಆಕೆಯ ನಾಲ್ಕು ಮಕ್ಕಳೊಡನೆ, ಗಂಡನೊಡಗೆ ನಮ್ಮೊಂದಿಗೇ ಇದ್ದಳು. ಎಲ್ಲಾ ಚಿಕ್ಕ ಮಕ್ಕಳು, ಇನ್ನು ಸ್ಕೂಲಿಗೆ ಹೋಗದ, ಹೋಗುವ ಮಕ್ಕಳಿದ್ದುದರಿಂದ ಅವ್ವ, ಮನೆಗೆ ತಾನೇ ಕರೆಯಿಸಿ ಇಟ್ಟುಕೊಂಡಿದ್ದಳು. ತಾನು ಕೆಲಸಕ್ಕೆ ಹೋದರೆ, ಅಡಿಗೆ ಮಾಡಿ ಮಕ್ಕಳನ್ನು ಸುಧಾರಿಸುವವರು ಬೇಕಿತ್ತು. ಬದುಕನ್ನು ಕಣ್ಣರಳಿಸಿ ನೋಡುವ ವಯಸ್ಸಿಗೆ ಬಂದಿರುವಾಗಲೇ ನನ್ನ ಅವ್ವಾ “ಗಂಡಿನಂತೆ” ಹೊರಗೆ ಹೋಗಿ ದುಡಿದು ಎಲ್ಲರನ್ನೂ ಸಾಕುವ ಹೊಣೆ ಹೊತ್ತಿರುವುದನ್ನು ಕಂಡಿದ್ದೆ. ನಾನಾಗಲೇ ಶಾಲೆಗೆ ಹೋಗತೊಡಗಿದ್ದೆ. ಮೈಲಿಗಟ್ಟಲೇ ದೂರ ನಡೆದು, ಸುಸ್ತಾಗಿ ಬರುತ್ತಿದ್ದ, ಅವ್ವ ಸುಸ್ತಾಗಿ ಕುಳಿತುಕೊಳ್ಳುವುದನ್ನು ಕಂಡಿದ್ದೆ.

ಮನೆಗೆಲಸಗಳಲ್ಲಿ ಸಣ್ಣವ್ವನಿಗೆ ನಾನೇ ನೆರವಾಗಬೇಕಾಗುತ್ತಿತ್ತು. ನಾನು ಸ್ಕೂಲಿಗೆ ಹೋಗುವ ಮೊದಲು ಇಂತಿಷ್ಟೇ ಕೆಲಸಗಳೆಂದು ಪಟ್ಟಿ ಮಾಡಿರುತ್ತಿದ್ದಳು. ಅವ್ವನಿಗೆ ಹೇಳುವ ಹಾಗಿರಲಿಲ್ಲ. ಇನ್ನುಳಿದವರು ಒಂದನೆಯ ತರಗತಿ, ಎರಡನೇ ತರಗತಿಯಲ್ಲಿದ್ದರು. ಐದು ಜನ ತಮ್ಮ ತಂಗಿಯರಿಗೆ ನಾನೇ ನಾಯಕಿ, ಊಹೂಂ… ದಂಡನಾಯಕನಂತಿದ್ದೆ. ಹೆಚ್ಚಾಗಿ ತಂಟೆ-ಗಲಾಟೆ ನಾನೇ ಮಾಡುತ್ತಿದ್ದ ನೆನಪು.

ಹೆಚ್ಚಾಗಿ ವಸತಿ ಗೃಹಗಳಲ್ಲಿದ್ದ ನನ್ನದೇ ವಯಸ್ಸಿನ ಹುಡುಗರ ಜೊತೆ ಆಟವಾಡುತ್ತಿದ್ದೆ. ಶಾಲೆಗೆ ರಜೆ ಇದ್ದಾಗ, ಸಂಜೆ ಶಾಲೆಯಿಂದ ಬಂದಾಗ, ನನಗಾಗಿ ಕಾಯುತ್ತಿದ್ದ ಅವರನ್ನು ಸೇರಿಕೊಳ್ಳುತ್ತಿದ್ದೆ. ನನ್ನ ತಂಗಿ ಮಾತ್ರ ಪಕ್ಕಾ ಗೃಹಿಣಿಯಂತೆ, ಪುಟ್ಟ-ಪುಟ್ಟ ಮಣ್ಣಿನ ಅಡಿಗೆ ಮಾಡುವ ಆಟಿಕೆಗಳೊಡನೆ ಮಗ್ನಳಾಗಿರುತ್ತಿದ್ದಳು. ಚಿನ್ನಿದಾಂಡು, ಮರಕೋತಿಗಳ ಆಟವನ್ನು ನಾನು ಹುಡುಗರಿಗಿಂತಲೂ ಚೆನ್ನಾಗಿ ಆಡುತ್ತಿದ್ದೆ. ಅಲ್ಲಿಯೂ ನಾನೇ Leader!

ಸಂಜೆ ಶಾಲೆಯಿಂದ ಬರುತ್ತಿದ್ದ ಹಾಗೆಯೇ, ಮನೆಯೊಳಗೂ ಹೋಗದೆ, ಬಾಗಿಲ ಬಳಿಯೇ ನಿಂತು ಪುಸ್ತಕಗಳು ತುಂಬಿದ ಬ್ಯಾಗನ್ನು ಅಲ್ಲಿಂದಲೇ ನಿಂತು ಒಳಗೆಸೆದು ಆಟಕ್ಕೆ ಓಡಿ ಬರುತ್ತಿದ್ದೆ. ಸಂಜೆಯ ಮನೆಗೆಲಸಕ್ಕೆ ‘ಚಕ್ಕರ್’ ಹೊಡೆಯುತ್ತಿದ್ದುದರಿಂದ ಸಣ್ಣವ್ವನಿಗೆ ಪ್ರಚಂಡವಾದ ಸಿಟ್ಟು ಬರುತ್ತಿತ್ತು. ಆದರೆ “ಅವ್ವ ಇದ್ದಾಗ ಆಕೆ ಸಿಟ್ಟನ್ನೂ ಹೊಟ್ಟೆಯಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತಿತ್ತು. ಆದರೆ ಮರುದಿನ ಎರಡರಷ್ಟು ಕೆಲಸಗಳು ಬೀಳುತ್ತಿದ್ದವು. ನನ್ನ ಈ ವರ್‍ತನೆಗೋ ಅಥವಾ ಅವ್ವ ಬಂದಾಗ ಎಲ್ಲಿ ಹೇಳಿ ಬಿಡುತ್ತಾಳೆಂಬ ಭಯಕ್ಕೋ ಕೆಲವೊಮ್ಮೆ ಹಲ್ಲು ಕಚ್ಚಿಕೊಂಡು ಸಹಿಸಿಕೊಂಡುಬಿಡುತ್ತಿದ್ದಳು. ಯಾಕೋ ಏನೋ ನನಗೂ ನನ್ನ ಸಣ್ಣವ್ವನಿಗೆ? ’Chemistry Gel’ ಆಗುತ್ತಿರಲಿಲ್ಲ. ಏನಾದರೂ ತಂಟೆ ಮಾಡುತ್ತಲೇ ಇರುತ್ತಿದ್ದೆ. ಬಯ್ಗಳು, ಹೊಡೆತಗಳು ಬೀಳುವುದು ಸಾಮಾನ್ಯವಾಗಿತ್ತು. ಆಕೆ ತಿಳಿದುಕೊಂಡಿದ್ದ ಹಾಗೆ ನಾನು ಎಂದೂ ಅವ್ವನ ಬಳಿ ಆಕೆಯ ಬಗ್ಗೆ ದೂರು ಹೇಳುತ್ತಿರಲಿಲ್ಲ.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದ್ರೋದಯ
Next post ಈಸ್ಟರ್ ೧೯೧೬

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…