ಕಂಡಿದ್ದೇನೆ ಹಿಂದೆ ಸಂಜೆ ವೇಳೆ
ಬ್ಯಾಂಕು ಆಫೀಸಿನಲಿ ಕೆಲಸ ಮುಗಿಸಿ
ಹಳೆಯ, ಹದಿನೆಂಟನೆಯ ಶತಮಾನದ
ಬಿಳಿಗಪ್ಪು ಬಣ್ಣದ ಮನೆಗಳಿಂದ
ಹೊರಬರುತ್ತಿದ್ದವರ ಹೊಳಪು ಮುಖವ.
ಬಳಿಗೆ ಬರಲವರು ತಲೆದೂಗಿ ನಕ್ಕು
ಅರ್‍ಥವಿಲ್ಲದೆ ಏನೋ ಉಸುರುತ್ತಿದ್ದೆ,
ಅಥವ ಅಲ್ಲೇ ಕೊಂಚ ನಿಂತು ಮತ್ತೆ
ಅರ್‍ಥವಿಲ್ಲದ ಕುಶಲ ಕೇಳುತ್ತಿದ್ದೆ,
ಕ್ಲಬ್ಬಿನಲಿ ಉರಿಗೂಡಿನ ಸುತ್ತ ಕೂತು
ಜೊತಯವನ ಖುಷಿಗೆಂದು ಅಣಕು ಮಾತು,
ಗೇಲಿಕಥೆಗಳ ನಾನು ಹೇಳುತ್ತಿದ್ದೆ;
ತಿಳಿದಿದ್ದೆ ನನ್ನಂತೆ ಈ ಜನಗಳೂ
ಕೋಡಂಗಿ ನಾಡಿನವರೆಂದು, ಅಲ್ಲ:
ಬದಲಾಗಿ ಹೋಗಿದೆ ಎಲ್ಲ ಪೂರಾ
ಹುಟ್ಟಿಬಿಟ್ಟಿದ ರುದ್ರಚೆಲುವು ಈಗ.
ತೀರಿದವು ಆ ಹೆಣ್ಣ ದಿನಗಳೆಲ್ಲ
ಪೆದ್ದುಪೆದ್ದಾದ ಸೌಜನ್ಯದಲ್ಲಿ,
ತೀರಿದವು ರಾತ್ರಿಗಳು ವಾದದಲ್ಲಿ
ದನಿ ಕೀರಲಾಗಿಬಿಡುವಷ್ಟು ಕೂಗಿ.
ಸೌಂದರ್‍ಯ ಯೌವನ ಸೇರಿದ್ದಾಗ
ಏನು ಮೃದುವಾಗಿತ್ತು ಅವಳ ಕಂಠ!
ಸ್ಕೂಲು ನಡೆಸಿದ್ದ ಈತ ನಮ್ಮ ಹಾಗೆ
ರೆಕ್ಕೆಗುದುರೆಯ ಏರಿದಂಥ ಭಂಟ;
ಇನ್ನೊಬ್ಬ ಅವನ ಬೆಂಬಲಿಗ ಮಿತ್ರ
ಸೊಗಸಾಗಿ ಅರಳುತ್ತಲಿದ್ದ ಚಿತ್ರ;
ಬಲು ಕೀರ್‍ತಿ ಗಳಿಸಬಹುದಾಗಿದ್ದವ
ಅಷ್ಟು ಸೂಕ್ಷ್ಮ ಅವನ ನಡೆ ಸ್ವಭಾವ,
ಅಷ್ಟು ದಿಟ್ಟ, ಅಂಥ ಮಧುರ ಭಾವ.
ನನಗೆ ಗೊತ್ತಿದ್ದ ಮತ್ತೊಬ್ಬ ವ್ಯಕ್ತಿ
ಮೂರ್‍ಖ, ಬಡಾಯಿಗಾರ, ಶುದ್ದ ಕುಡುಕ,
ನನಗಾಪ್ತರಾದಂಥ ಕೆಲ ಜನಕ್ಕೆ
ಭಾರಿ ಕೇಡುಗಳನ್ನೆ ತಂದ ಕೆಡುಕ;
ಆದರೇನಂತೆ ಈ ಹಾಡಿನಲ್ಲಿ
ಜಾಗವಿದೆ ಅವನಿಗೂ ಮಾನ್ಯರಲ್ಲಿ.
ಕ್ಷಣಿಕ ಪ್ರಹಸನದಂಥ ಬಾಳಿನಲ್ಲಿ
ಕೊಟ್ಟ ಪಾತ್ರವ ಆತ ಕಳಚಿಬಿಟ್ಟ,
ಸರದಿ ಬಂದದ್ದೆ ಬದಲಾಗಿಬಿಟ್ಟ;
ಬದಲಾಗಿ ಹೋಯಿತು ಎಲ್ಲ ಪೂರಾ
ಹುಟ್ಟಿಬಿಟ್ಟಿವೆ ರುದ್ರಚೆಲುವು ಈಗ.
ಬಿಸಿಲು ಮಳೆ ಚಳಿಗಳ ಪರಿವೆಯಿರದೆ
ಕೀಲಿಸಿದವೋ ಹೃದಯ ಒಂದೆ ಗುರಿಗೆ
ಹರಿವ ತೊರೆಗೆ ಅಡ್ಡಿ ಮಾಡಲೆಂದು
ಮಂತ್ರಕ್ಕೆ ಶಿಲೆಯಾಗಿ ನಿಂತ ಹಾಗೆ.
ಅಗೋ ರಸ್ತೆಯಿಂದ ಬರುತ್ತಿರುವ ಕುದುರೆ
ಏರಿ ಬರುವ ಸವಾರ, ಮುಗಿಲ ನಡುವೆ
ಎಡವಿ ಹಾಯುವ ಆ ಹಕ್ಕಿಮಾಲೆ
ಬದಲಾಗುವುವು ಪ್ರತೀ ಗಳಿಗೆ ಗಳಿಗೆ;
ತೊರೆಮೇಲೆ ಬಿದ್ದ ಈ ಮುಗಿಲ ನೆರಳು
ಬದಲಾಗುವುದು ಪ್ರತೀ ಗಳಿಗೆ ಗಳಿಗೆ;
ಆ ಕುದರೆ ಗೊರಸು ಅಂಚಿನಲಿ ಜಾರಿ,
ಕೆಳಗುರುಳಿತಿನ್ನೊಂದು ಕೊಂಚ ಮೀರಿ;
ನೀಳ ಕಾಲಿನ ಬಾತು ಕೆಳಜಿಗಿದುವು,
ಕೋಳಿಗಳು ಕಾಡುಹುಂಜವ ಕರೆದುವು;
ಬಾಳುವುವು ಈ ಎಲ್ಲ ಪ್ರತಿಗಳಿಗೆಯೂ :
ಶಿಲೆ ಮಾತ್ರ ಜಡ ಎಲ್ಲದರ ನಡುವೆಯೂ.
ಹೃದಯವೂ ಕಲ್ಲಾಗಿ ಬಿಡಲು ಸಾಧ್ಯ
ಬಹುಕಾಲ ನಡೆದು ಬರಲೊಂದು ತ್ಯಾಗ.
ಅಂಥ ತ್ಯಾಗಕ್ಕೆ ಕೊನೆ ಬಂದೀತೆಂದು?
ದೈವಕ್ಕೆ ಬಿಟ್ಟುದದು, ನಾವು ಇಂದು
ಪಿಸುನುಡಿಯುವುದು ಹೆಸರ ಒಂದೊಂದನೇ,
ತಾಯಿ ಮಗುವಿನ ಹೆಸರ ಕರೆವ ಹಾಗೆ
ದಿನವಿಡೀ ದುಡಿದು ಬೆಂಡಾದ ಮೈಯ
ಕಟ್ಟಕಡೆಯಲಿ ನಿದ್ದೆ ಕವಿದ ವೇಳೆ.
ಅದು ಕೂಡ ಮತ್ತೇನು ಇರುಳು ತಾನೆ?
ಅಲ್ಲ, ಇರುಳಲ್ಲ ಅದು, ಮರಣವೇನೆ.
ಏನೆ ಆಗಿರಲಿ ಹೋಗಿರಲಿ ಕಡೆಗೆ
ಕೊಟ್ಟ ವಚನವ ಇಂಗ್ಲೆಂಡ್ ನಡೆಸುವಲ್ಲಿ
ಇದು ವ್ಯರ್‍ಥ ಸಾವು ಎನ್ನಿಸದೆ ಹೇಗೆ?
ಅವರ ಕನಸೇನಿತ್ತೊ ಗೊತ್ತು ನಮಗೆ;
ತಮ್ಮ ಕನಸಿಗೆ ಜೀವವನ್ನೆ ತೆತ್ತು
ನಡೆದರೆನ್ನುವ ಅರಿವು ನಮಗೆ ಸಾಕು;
ಅತಿ ಪ್ರೀತಿಯಲಿ ಭ್ರಮಿಸಿ ಸತ್ತರೋ ಹೇಗೆ?
ಪದ್ಯದಲಿ ನಾನು ಬರೆದಿಡುವೆ ಹೀಗೆ –
ಇಂದು, ಮುಂದೆಂದೂ, ಎಲ್ಲೆಲ್ಲಿಯೂ
ಹಸಿರು ತೊಟ್ಟಿರುವ ಎಲ್ಲ ಎಡೆಯಲ್ಲಿಯೂ
ಮ್ಯಾಕ್‌ಡೊನಾಲ್ಡ್ ಮ್ಯಾಕ್‌ಬ್ರೈಡ್, ಪಿಯರ್‍ಸ್, ಕೆನೊಲಿ
ಬದಲಾಗಿ ಹೋದರು ಎಲ್ಲ ಪೂರಾ
ಹುಟ್ಟಿಬಿಟ್ಟಿದ ರುದ್ರಚೆಲುವು ಈಗ.
*****
ಐರಿಷ್ ಕ್ರಾಂತಿಕಾರರು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಬಂಡೆದ್ದರು. ಬಂಡಾಯ ಆರಂಭವಾದದ್ದು ೧೯೧೬ನೇ ಏಪ್ರಿಲ್ ೨೪. ಅದು ಈಸ್ಟರ್ ದಿನ, ಎಂದರೆ ಶಿಲುಬೆಗೆ ಹೋದ ಏಸುಕ್ರಿಸ್ತ ಎದ್ದುಬಂದ ದಿನವೂ ಹೌದು. ಬ್ರಿಟಿಷ್ ಸರ್‍ಕಾರ ದಂಗೆಯನ್ನು ಹತ್ತಿಕ್ಕಿತು. ಕ್ರಾಂತಿಯ ಮುಂದಾಳುಗಳನ್ನು ಗಲ್ಲಿಗೆ ಹಾಕಿತು.
(೧೭-೨೨) ಈ ಸ್ತ್ರೀಯ ಹೆಸರು ಕೌಂಟಿಸ್ ಮಾರ್‍ಕ್‌ವಿಜ್, ಇವಳೂ ಐರಿಷ್ ಕ್ರಾಂತಿಯ ಮುಂಚೂಣಿಯಲ್ಲಿದ್ದವಳು.
(೨೩-೨೪) ಪ್ಯಾಟ್ರಿಕ್ ಪರ್‍ಸ್. ಇನ್ನೊಬ್ಬ ಐರಿಷ್ ಕ್ರಾಂತಿಕಾರ ಕವಿ, ಸ್ಕೂಲು ನಡೆಸುತ್ತಿದ್ದವನು.
(೨೫-೨೯) ಈತ ಮ್ಯಾಕ್‌ಡೊನಾಗ್ ಎಂಬ ಐರಿಷ್ ಬಂಡಾಯಕಾರ ಕಾವ್ಯ ಮತ್ತು ನಾಟಕಗಳನ್ನು ರಚಿಸಿದವನು.
(೩೦-೩೩) ಜಾನ್ ಮೆಕ್‌ಬ್ರೈಡ್ ಐರಿಷ್ ಕ್ರಾಂತಿಯ ಅಗ್ರಪಂಕ್ತಿಯ ನಾಯಕ. ಏಟ್ಸನ ಪ್ರೀತಿಯ ಹೆಣ್ಣು ಮಾಡ್‌ಗಾನಳನ್ನು ವಿವಾಹವಾಗಿ ನಂತರ ಅವಳಿಂದ ದೂರವಾದವನು ಅವಳನ್ನು ಕೆಟ್ಟದಾಗಿ ನಡೆಸಿಕೊಂಡು ಏಟ್ಸನ ಅಸಮಾಧಾನಕ್ಕೆ ಗುರಿಯಾಗಿದ್ದ. ಆದರೆ ದೇಶಕ್ಕಾಗಿ ಅವನು ಮಾಡಿದ ತ್ಯಾಗಕ್ಕೆ ಮಾರುಹೋದ ಏಟ್ಸ್ ಅವನನ್ನು ಮುಕ್ತಕಂಠದಿಂದ ಪ್ರಶಂಸೆ ಮಾಡುತ್ತಾನೆ.
ಮೂಲ: ವಿಲಿಯಂ ಬಟ್ಲರ್ ಏಟ್ಸ್