ಚಿಕುಹೂ ಚಿಕುಹೂ ಚಿಕುಹೂ-
ಸನ್ನೆಯವೊಲು ಮುಹುರ್ಮುುಹು
ಆರೆಚ್ಚರಕೀ ತುತ್ತುರಿ
ಬಾನೊಳು ಮೊಳಗುತ್ತಿದೆ?
ಎನ್ನ ಕಿವಿಯೊಳೀ ಸವಿ ದನಿ
ಸಿಂಪಿಸುತಿದೆ ಸೊದೆಸೀರ್ಪನಿ
ವಿಸ್ಮೃತಿಗೈದಿರುವಾತ್ಮವ-
ನುಜ್ಜೀವಿಪ ತೆರದೆ.
ದಿವಮರೆತಪ್ಸರೆ ಎಚ್ಚರೆ
ಅಗಲುವಳೆಂದಿಳೆ ಬೆಚ್ಚಿರೆ
ಹರಿಕಾರರನಮರಾವತಿ
ದೊರೆಯಟ್ಟಿಹನೆನಲು
ಈ ದನಿ ಬರೆ ಲಾಲಿಸುತದೆ
ಪಯಣಕೆ ಸಡಗರಗೊಳುತಿದೆ
ಮನ್ಮಾನಸ ಸರೋವರದ
ಕರಣಗಳಂಚಿನೊಳು.
ಚಿಕುವೂ ಚಿಕುವೂ ಚಿಕುವೂ-
ಕಂಪೆರಚಿದೆ ಈ ದನಿಹೂ
ರಸ ಸೂಸಿದೆ ಸ್ವಾಹಾ
ಎಂದುಜ್ವಲಿಸಲು ನೆನಹು
ನೋಡುತಲಿದ್ದರು ಕಾಣದು
ಆಲಿಸುತಿದ್ದರು ಕೇಳದು
ಸರ್ವೇಂದ್ರಿಯವಿದಕಾಗಿರೆ
ಪ್ರತ್ಯಕ್ಷವೆ ಮರಹು.
“ಬಂದಿರ ತಂದಿರ ಕೊಡುವಿರ
ಕೊಟ್ಟಿರ ಕೊಳುವಿರ ನಡೆವಿರ”-
ನಿಸ್ಸ್ನೇಹದ ಸಭ್ಯತೆಯೊಳು
ಈ ನಡೆವಳಿಯೆಲ್ಲಾ
ನಡೆಯುತ್ತಿವೆ ಹೊರಬಗೆಯೊಳು,
ಮನೆಯಾಚೆಯ ಗದ್ದಲದೊಲು;
ಯೋಗಕ್ಷೇಮದ ವೇದನೆ
ಇಂದೆನಗಿನಿತಿಲ್ಲ.
ಭವಿ ನಾ ತಾಪಸಿ ನಾನು
ಕವಿ ನಾ ಕಿಂಕರ ನಾನು
ನಾ ನಾ ಇದಕಿತಿಯೇನಿದೆ
ಮಿತಿಯೇನಿದೆ, ದನಿಯೇ,
ಥಟ್ಟನೆರಗಿ ಗರುಡನ ತೆರ
ಅಹಮೆಂಬೀ ನಿಧಿನಾಗರ-
ನೊಯ್ದಿಹೆನೀ ಮುದವಿದ್ಯುತ್-
ಸ್ಪರ್ಶವ ಮನ ಪಡೆಯೆ.
ಚಿಕುವೂ ಕುವ್ವೂ- ಏನ್ ಸವಿ!
ಒಂದೇ ಸರದೊಂದೇ ಛವಿ
ಅಜರಾಮರವಿದು ಅಚ್ಚರಿ
ಪುರಾಣ ನೂತನವು
ಕೋಟಿ ಕೋಟಿ ಕೋಗಿಲೆ ಮೈ
ತರಗೆಲೆಯಂತುದುರಿವೆ ಸೈ
ಇದನು ಹಿಡಿದು ಬಿಡುವಾಟದಿ
ಋತುಋತು ಯುಗಯುಗವೂ.
ಈಯೆಡೆ ಆಯಡೆ ಬೇರಡೆ
ಬಿಡುವಿರುವೆಡೆ ಬಿಡುವಿರದೆಡೆ
ಒಲಿವೆಡೆ ನಲಿವೆಡೆ ಅಳುವೆಡೆ
ದೇಶವಿದೇಶದೊಳು
ಜನ್ಮದಿ ಜನ್ಮದಿ ನಾನಿದ
ಬಗೆಬಗೆಯೊಳು ಕೇಳಿದ ಹದ
ಇಂದೆಂತೆಯೊ ತೆರೆ ತರೆಯುತ
ತೋರಿದೆ ಹೃದಯದೊಳು-
“ಓ ಕೆಳೆಯಾ, ಮನೆ ನೆನೆಯಾ
ಬಿಡುಬಿಡು ಭವದೀ ಕೊನೆಯಾ
ದಿವ್ಯತೆಗೆಯೆ ಕಾಮಂಗೊಂ
ಡೆದೆ ಎರಕೆಯನೆರೆಯಾ”
ಎಂಬರ್ತಿಯ ಆರ್ತಸ್ವರ-
ವಿದು ಬಗೆಗೊಳೆ, ನಾ ಕಾತರ-
ಗೊಂಡೋಗುಟ್ಟುವೆ ನೆನೆನೆನೆ-
ದಾ ದೂರದ ಕರೆಯಾ.
ಚಿಕುವೂ ಕುವು ಕುವು ಟಿಇವೂ-
ಕಾರ ತಂಪು ಮಿಂಚ ಹೊಳಹು
ದಾಳಿಂಬೆಯ ರುಚಿ ಅಗಲಿದ
ಕಾದಲರೆದೆ ಕಾವು,
ಮಗು ತಾಯಿಗೆ, ಕವಿ ಚೆಲುವಿಗೆ,
ನನ್ನಿಗ ನನ್ನಿಗೆ, ಪರಮಗೆ
ಭಕ್ತರು ಹಂಬಲಿಸುವ ಬಗೆ
ಈ ಕೋಗಿಲೆಯುಲಿವು.
ದನಿಹಣ್ಣಿಂದಮೃತದ ರಸ
ತೊಟ್ಟಿಡಲಿಂತೆದೆ ತಾಮಸ-
ವುಳಿದುಜ್ವಲಿಸಿರೆ ಈ ಮಹ-
ದನುಭವಕೇನೆಂಬೆ?
ಈ ಶಾಶ್ವತ ರುತಿಗೊಂದಿದ
ಅಂದಂದಿನ ಸ್ಮೃತಿಯೋಲಿದ
ಪಿಡಿವಾನಂದದೊಳಾನಂ-
ತ್ಯವ ಮುಟ್ಟಿಹೆನೆಂಬೆ.
*****