ಸೂರ್ಯನಿಗೆ ಛತ್ರಿ
ಅಡ್ಡಿ ಹಿಡಿದರೇನಂತೆ?
ಸೂರ್ಯ ಹುಟ್ಟಲೇ ಇಲ್ಲವೆ?
ಎದೆಯಲ್ಲಿ ಮಾನವ ಕಾವ್ಯ
ಕೈಯಲ್ಲಿ ಖಡ್ಗ ಹಿಡಿದರೇನು
ಮಾನವೀಯತೆ ಮೊಳಗಲಾರದೆ?
ನಾಝಿಗಳ ಜೈಲಿನಲ್ಲಿ
ಸರಳು ಬಂದಿಖಾನೆಯಲಿ
ಎದೆ ಝಲ್ಲೆನಿಸುವ ವಾಸ್ತವಗಳು
ಅನುಭವ ಉಲಿಯುತ್ತಿದ್ದಾರೆ
ಮಂಡೇಲನ ಬಂಧುಗಳು.
ನರಳಿದ ನಕ್ಷತ್ರ ಮಂಡಲಗಳು
ದೌರ್ಜನ್ಯಗಳ ನಡುವೆ
ದಿಗ್ಧಂಧನಗಳ ಮಧ್ಯದಲಿ
ಬಸವಳಿದ ಹೂವುಗಳವರು
ಪ್ರೀತಿಗೆ ದುಂಬಾಲು ಬಿದ್ದವರು.
ಮೋಡ ಘನಿಗಟ್ಟಿ ಹನಿಯೊಡೆದು
ಹುಟ್ಟಿದರು ಸಾವಿರಾರು
ಶ್ರಮಜೀವಿ ಬಂಧುಗಳು.
ತೊಟ್ಟಿಕ್ಕಿ ನೆಲಕ್ಕುರುಳಿದರೆ ಸಾಕು
ಹನಿಗೊಂದು ನದಿಯಾಗುವವರು.
ಸೂರ್ಯ ಹುಟ್ಟುತ್ತಾನೆ ಇಲ್ಲಿ
ಕತ್ತಲೆಯ ಭಯ ಕಾಡದು.
ಬೆಳಕಾಗಿ ಜೀವಂತವಾಗಿದ್ದಾರವರು
ಮಂಡೇಲನ ಬಂಧುಗಳಿನ್ನೂ!
ಅವರು ಮಂಡೇಲನ ಬಂಧುಗಳು.
*****