೧೯೬೩-೧೯೬೪ರಲ್ಲಿ ನಮ್ಮಪ್ಪನ ಹಿಂದಿಂದೆ… ಎರೆಹೊಲ, ಕೆನ್ನೊಲ, ಕಣಗಳಿಗೆ ಸುತ್ತುತ್ತಿದ್ದೆ.
ನೂರಾರು ಎಕರೆ ಬರೀ ನವಣೆಯನ್ನೇ ಬೆಳೆಯುತ್ತಿದ್ದರು. ನೂರಾರು ರೈತರು ಕೂಡಾ ಕಡ್ಡಾಯವಾಗಿ ನೂರಾರು ಚೀಲದಿಂದ ಹಿಡಿದು ಕನಿಷ್ಠ ಹತ್ತು ಚೀಲಗಳಾದರೂ ನವಣೆ ಬೆಳೆದು ಖುಷಿಪಡುತ್ತಿದ್ದರು.
ಕೆಲವರಂತೂ ಪ್ರತಿ ವರ್‍ಷ ನವಣೆ ಬೆಳೆದು ಅವುಗಳನ್ನು ಬಂಡಿಗಳ ಮೇಲೆ ಮೆರವಣಿಗೆ ಮಾಡುತ್ತಾ ತಾಳಮೇಳ ಭಾಜಭಜಂತ್ರಿಯಲ್ಲಿ ಮನೆದುಂಬಿಸಿಕೊಳ್ಳುತ್ತಿದ್ದರಲ್ಲದೆ ಆವತ್ತು ಇಡೀ ಊರು ಕೇರಿಗೆಲ್ಲ ನವಣೆಬಾನ- ಹುರುಳಿಕಟ್ಟು, ಮಜ್ಜಿಗೆ ನವಣೆ ಅನ್ನ… ನೀಡಿ ಸಂಭ್ರಮಿಸುತ್ತಿದ್ದರು!
ನವಣೆ ಬೆಳೆ-ತೆನೆ-ನವಣೆ-ನವಣೆ ಅಕ್ಕಿ ಎಲ್ಲ… ಬಂಗಾರದ ಬಣ್ಣ… ಅದರ ಹೊಳಪು, ಘಮಾ ಘಮಾ.. ಹಬ್ಬ ಹರಿದಿನಗಳಲ್ಲಿ ನವಣೆ ಅನ್ನ ಇದ್ದರೆ ಹಬ್ಬ ಮುಗಿದಂತೇ…
ಒಮ್ಮೆ ನವಣೆ ಹೊಲದಲ್ಲಿ ನಿಂತು ಹರ್‍ಷದ ಹೊನಲು ಹರಿಸಿ ನಾನು ನನ್ನಪ್ಪನ ಕೇಳಿಯೇ ಬಿಟ್ಟೆ ‘ಅಪ್ಪ ನೂರಾರು ಜನರು ನೂರಾರು ಎಕರೆಯಲ್ಲಿ ಬರೀ ಎರೆಹೊಲದಲ್ಲಿ ನೀರು ಗೊಬ್ಬರವಿಲ್ಲದೆ ನವಣೆ ಬೆಳೆಯುವ ಗುಟ್ಟಾದರೂ ಏನು?’ ಅಂತಾ ಅಂದೆ.
‘ನವಣೆ ಗಟ್ಟಿ, ಆಯುಷ್ಯ ವೃದ್ಧಿ, ಮಳೆಯಿಲ್ಲದೆ ಗೊಬ್ಬರವಿಲ್ಲದೆ ಮೂರು ತಿಂಗಳಲ್ಲಿ ಸಮೃದ್ಧಿ ಬೆಳೆ. ನಮ್ಮಪ್ಪ ಬಬ್ಲೆಪ್ಪ, ತಾತ ದೊಡ್ಡೆಲ್ಲಪ್ಪ, ಮುತ್ತಾತ ನಡುವಲ ಯಲ್ಲಪ್ಪ ಇವರೆಲ್ಲ ನವಣೆ ಬೆಳೆದು ನಳನಳಸಿ ಬೆಳೆದಿದ್ದರು ಗಟ್ಟಿ ಮುಟ್ಟಾಗಿದ್ದರು.’ ಎಂದ ಅಪ್ಪ.
‘ಅಪ್ಪ ಇದರಲ್ಲಿ ಏನಿದೆ? ಅಂಥಾದೇನಿದೆ?’ ಎಂದೆ.
ಅಪ್ಪ ಮಾತುಗಾರ.
‘ಇದರಲ್ಲಿ ಏನಿಲ್ಲ ಎಂದು ನನ್ನ ಕೇಳು… ಮೂಳೆ ಬೆಳೆಯಲು ಗಟ್ಟಿಗೊಳ್ಳಲು ಇದರಲ್ಲಿ ಕ್ಯಾಲ್ಸಿಯಂ ಔಷಧಿ ಇದೆ. ಮಲಬದ್ಧತೆಗೆ ಮೂಲ ವ್ಯಾಧಿಗೆ ನಾರಿನಾಂಶವಿದೆ. ಶಕ್ತಿವರ್‍ಧಕವಾಗಿ ಪ್ರೋಟಿನ್ ಅಂಶವಿದೆ. ಜೀರ್‍ಣಶಕ್ತಿಗೆ ಕಾರ್‍ಬೋಹೈಡ್ರೇಟ್ ಅಂಶವಿದೆ. ಕೊಬ್ಬಿನಾಂಶ ಕಡಿಮೆ ಇದೆ. ಸಕ್ಕರೆ ಕಾಯಿಲೆಗೆ ರಾಮಬಾಣ. ಇದು ಮಕ್ಕಳಿಗೆ ವೃದ್ಧರಿಗೆ ಬಾಣಂತಿಯರಿಗೆ ಕಾಯಿಲೆವುಳ್ಳವರಿಗೆ ಸರ್‍ವೋತೋಮುಖ ಆಹಾರ. ಕ್ಯಾನ್ಸರ್ ನೀಗಿಸುವ ಗುಣ ಹೊಂದಿದೆ. ನವಣೆಯಿಂದ ಅನ್ನ-ಗಂಜಿ-ಮುದ್ದೆ-ರೊಟ್ಟಿ, ದೋಸೆ-ಹಪ್ಪಳ, ಸಂಡಿಗೆ, ಸಿಹಿತಿಂಡಿಗಳು ಖಾರದ ತಿಂಡಿ ತಿನಿಸುಗಳನ್ನು ಮಾಡಿ, ತಿನ್ನಬಹುದು. ಮೂರು ಹೊತ್ತು ತಿಂದರೆ ಅಡ್ಡ ಪರಿಣಾಮವಿಲ್ಲ! ಬದಲಿಗೆ ರೋಗ ನಿರೋಧಕ ಶಕ್ತಿ ವೃದ್ಧಿಗೊಳ್ಳುವುದೆಂದು ಅಪ್ಪ ವಿವರಿಸಿ ಹೇಳಿದ.
ಇದು ಬರೀ ಬಡವರ ನವಣೆಯಲ್ಲ. ಸರ್‍ವಜನರ ಸರ್‍ವೋತೋಮುಖ ಆಹಾರ.
ಇದನ್ನು ಮಕ್ಕಳೆಲ್ಲ ತಿಂದು, ಆರೋಗ್ಯವಂತರಾಗುವಿರಲ್ಲವೇ?
*****