ಯಾವುದೇ ಬೆಳೆಗಳ ನಡುನಡುವೆ ಕಸದಂತಹ ಕಳೆಗಿಡಗಳು ಬೆಳೆದು ಬಿತ್ತಿದ ಸಸಿಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಭೂಮಿಯಲ್ಲಿಯ ಸಾರವನ್ನೆಲ್ಲ ಹೀರಿಮೂಲ ಸಸಿಗಳಿಗೆ ಆಹಾರ ಮತ್ತು ನೀರು ಪೂರೈಕೆಯಾಗದಂತೆ ಈ ಕಳೆ ಕಸವೇ ಹೀರಿಕೊಳ್ಳುತ್ತದೆ. ಅದರಲ್ಲೂ ‘ಯುಪಟೋರಿಯಮ್’ ಕಳೆ ಸಸ್ಯಮಾತ್ರ ಹವೆಯ ವ್ಯೆಪರಿತ್ಯದಲ್ಲೂ ಬೆಳೆಯುತ್ತದೆ. ಆರುವರೆ ಸಾವಿರ ಎತ್ತರದ ಪ್ರದೇಶಗಳವರೆಗೆ ಹುಲುಸಾಗಿ ಬೆಳೆಯುವ ಈ ಕಳೆಗಿಡವು ಭೂಸಾರವನ್ನೆಲ್ಲ ಹೀರುವುದರಿಂದ ಅಕ್ಕಪಕ್ಕದಲ್ಲಿ ಬೇರೆ ಸಸ್ಯಗಳು ಬೆಳೆಯದಂತೆ ಮಾಡುತ್ತದೆ. ಜತೆಗೆ ಅರಣ್ಯನಾಶಕ್ಕೂ ಕಾರಣವಾಗುವ ಈ ಕಳೆಗಿಡವನ್ನು ನಿಯಂತ್ರಿಸಲು ಅರಣ್ಯವಿಜ್ಞಾನಿಗಳು ಶ್ರಮಿಸುತ್ತಾರೆ.
ಇತ್ತೀಚೆಗೆ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಒಂದು ಸರಳವಾದ ವಿಧಾನವನ್ನು ಕಂಡುಹಿಡಿದು ಈ ಯುಪಟೋರಿಯಂ, ಗಿಡಗಳಿಂದ ‘ಕಾಂಪೋಸ್ಟ್’ವನ್ನಾಗಿ ಪರಿವರ್ತಿಸುವಲ್ಲಿ ಸಫಲರಾಗಿದ್ದಾರೆ. ಈ ಯುಪಟೋರಿಯಂ, ಗಿಡಗಳನ್ನು ಒಂದೆಡೆ ಸಂಗ್ರಹಿಸಿ ಸಣ್ಣಸಣ್ಣ ಚೂರುಗಳನ್ನಾಗಿ ಕತ್ತರಿಸಿ ವಿಶೇಷ ರೀತಿಯ ವಿನ್ಯಾಸದಲ್ಲಿ ಕೊಠಿಡಿಗಳಲ್ಲಿ ತುಂಬುತ್ತಾರೆ. ಈ ಕೊಠಿಡಿಗಳ ಛಾವಣಿಯನ್ನು ಫೈಬರ್ ಗ್ಲಾಸಿನಿಂದ ಹೊದಿಸಿರುತ್ತಾರೆ. ಈ ಫೈಬರ್ ಗ್ಲಾಸ್ ಹೊದಿಕೆಯನ್ನು ಬಳೆಸುವುದರಿಂದ ಕೊಠಿಡಿಯೊಳಗೆ ಬಿಸಿಲಿನ ಮುಖಾಂತರ ಪ್ರವೇಶಿಸಿದ ಉಷ್ಣತೆಯು ಮತ್ತೆ ಹೊರಬಲಾರದೇ ಅಲ್ಲಿಯೇ ಉಳಿಯುತ್ತದೆ. ಕತ್ತರಿಸಿದ ಕಳೆಗಿಡಗಳ ತುಂಡುಗಳನ್ನು ಸೇರಿಸಿಟ್ಟಿದ್ದರಿಂದ ತೇವವು ಆರುವುದಿಲ್ಲ ಅದರಂತೆ ಮೊದಲು ಆಗಾಗ ನೀರನ್ನು ಹಾಕುತ್ತಾರೆ. ಬಿಸಿಲಿನ ಉಷ್ಣತೆಯನ್ನು ಇಷ್ಟಪಡುವ ಎಷ್ಟೋ ಬಗೆಯ ಸೂಕ್ಷ್ಮ ಜೀವಿಗಳು ಕಳೆಗಿಡಗಳ ತುಂಬ ಭಾರಿ ಪ್ರಮಾಣದಲ್ಲಿ ತುಂಬಿಕೊಂಡು ಗಿಡಿಗಳ ತುಂಡುಗಳನ್ನು ವಿಭಜನೆ ಮಾಡತೊಡಗುತ್ತವೆ. ಇದರಿಂದ ಗಿಡವು ಅತಿ ಶೀಘ್ರವಾಗಿ ಕೊಳೆಯಲು ಪ್ರಾರಂಭವಾಗುತ್ತದೆ. ಗಿಡ ಸಂಪೂರ್ಣವಾಗಿ ಕೊಳೆತಾಗ ಗೊಬ್ಬರ ಸಿದ್ಧವಾಗುತ್ತದೆ. ಗಿಡದಲ್ಲಿದ್ದ ಪೋಷಕಾಂಶಗಳಲ್ಲಿ ವ್ಯರ್ಥಗೊಳ್ಳದೇ ಗೊಬ್ಬರವಾಗುಳಿಯುತ್ತದೆ. ನಂತರ ಈ ಕೊಳೆತ ಗೊಬ್ಬರಗಳನ್ನು ಒಣಗಿಸಿ ಸಂಗ್ರಹಿಸಿ ಪ್ಯಾಕಿಂಗ್ ಮಾಡಿ ಮಾರಲಾಗುತ್ತದೆ.
ಈ ಗೊಬ್ಬರವು ಬಹಳ ಹಗುರವಾಗಿದ್ದು, ಉತ್ಕೃಷ್ಟ ಗುಣಮಟ್ಟವನ್ನು ಹೊಂದಿರುತ್ತದೆ. ಇದನ್ನು ತರಕಾರಿ, ಹಣ್ಣು ಹಂಪಲು ಮುಂತಾದ ಎಲ್ಲ ಕೃಷಿಗೂ ಇದನ್ನು ಬಳೆಸಬಹುದು. ಅರಣ್ಯಗಳಿಗೆ ಹಾನಿಕಾರಕವಾದ ಈ ‘ಯುಪಟೊರಿಯಂ’ ಕಳೆಗಿಡವು ಇದೀಗ ಅರಣ್ಯ ಅಭಿವೃದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ.
*****