ಯಾವಳೊಬ್ಬ ಹಾಲುಗಿತ್ತಿ
ಹಾಲ ಕೊಡವ ತಲೆಯೊಳೆತ್ತಿ
ಹೊಳೆಯಾಚೆಗೆ ಕಡೆಯಲೊತ್ತಿ
ಕಡಕೆ ಬಂದಳು ೪
ತಡವಿನಿಸಿರೆ ಕಡವ ತೆರೆಯೆ,
ಕೊಡವನಿಳಿಸಿ ನೀರನೆರೆಯೆ,
ಹಾಲಿನರಕೆ ನೆರೆದು ನೊರೆಯೆ
ತುಂಬಿತಾ ಕೊಡಂ ೮
ಅವಸರದಿಂ ದೋಣಿ ಹತ್ತಿ
ಕುಳಿತಳಾಕೆ ೧ಬಾಣಿಗೊತ್ತಿ;
ತಿರುಗಲಂಬಿ ಹಗಲು ಮುತ್ತಿ
ತಾಕೆಯ ಮೊಗದಿ. ೧೨
ಮುಂಬಿಸಿಲಲಿ ಬೆಮರು ತುರುಗೆ,
ಸೂಸಿತು ಕಿರುನಗೆಯ ನಿರಿಗೆ-
ಜಾಲಾಕ್ಷದಿ ನುಸುಳಿ ಹೊರಗೆ
ಸುಳಿವ ಗಾಳಿಯೊ? ೧೬
ಅನಿಬರ ಗಂಡಸರ ಮುಂತು
ಮೊಗವ ತೊಳೆಯದಿರುವಳೆಂತು?
ಸೆರಗ ಸರಿಸಿ ನಿರಿಯೊಳಾಂತು
ತೊರೆಗೆ ಬಗ್ಗಲು, ೨೦
ಸಡಲಿದ ತಿರುಗಣೆಯ ತಿಳಿಯ
ದವಳ ಬಲದ ಕಿವಿಯ ಗಿಳಿಯ
ವಾಲೆ ಜಗುಳುವೊಡನೆ ಹೊಳೆಯ
ಗುಳುಗುಳೊರೆದುದು. ೨೪
ಕಿವಿಯ ಮುಟ್ಟಲೋಲೆಯಿಲ್ಲ!
ಕಿವಿಯೆ ಕುಸಿದು ಕೆಡೆದುದಲ್ಲ!
ಕಣ್ಣಿಗುಕ್ಕುವೆದೆಯ ಗುಲ್ಲ
ನಿಂತು ಹುಯ್ದಳು- ೨೮
‘ಇದ್ದುದೆಲ್ಲ ಪೋದುದಲ್ಲ!
ಮನದ ನೆಲುಹು ಹರಿದುದಲ್ಲ!
ದೇವರೆ, ಕೆಯ್ಬಿಟ್ಟೆಯಲ್ಲ
ನಟ್ಟನೀರಲಿ! ೩೨
‘ಪೋದುದೆ ಕಟ ಕಣ್ಣಮುಂದೆ?
ನೀರೆ ನನ್ನನದ್ದಿ ಕೊಂದೆ!
ಗಳಿಸಿದೆನೇನ್ನೀರಿಗೆಂದೆ
ವಾಲೆಯಿದನ್ನ? ೩೬
‘ಅಮ್ಮನೆನಗೆ ಕೊಟ್ಟುದಲ್ಲ,
ಗಂಡನಿದಂ ಕೊಂಡುದಲ್ಲ,
ಅಕಟ ನಾನೆ ದುಡಿದೆನಲ್ಲ
ಮೆಯ್ಯ ಮುರಿತದಿಂ? ೪೦
‘ಗೊಲ್ಲರೆಮ್ಮ ಪಾಳ್ಯದಲ್ಲಿ
ನನ್ನೊಬ್ಬಳ ಕಿವಿಗಳಲ್ಲಿ
ಅಲ್ಲದೆ ಮತ್ತಾರಿಗಲ್ಲಿ
ಇಂತಹ ವಾಲೆ? ೪೪
‘ಇದರ ಚಿನ್ನದೇನು ಬಣ್ಣ ?
ಕೆತ್ತನೆಯಿದರಾರ ಕಣ್ಣ
ಕುಕ್ಕದು? ಪದೆದೆದೆಯ ಹುಣ್ಣ
ಬೆಲೆಯ ತೆತ್ತೆನೆ? ೪೮
‘ಯಾವ ಕೆಟ್ಟ ಶನಿಯೊ ಕಣ್ಣ
ಕಟ್ಟುತ ತನಿಸುಖದ ಗಿಣ್ಣ
ಮುಕ್ಕುವೆನ್ನ ಬಾಯ್ಗೆ ಮಣ್ಣ
ನಕಟ ಹೆಟ್ಟಿತು? ೫೨
‘ನಾದಿನಿ ಇದನೆರೆಯಲೊಂದು
ದಿನಕಿತ್ತೆನೆ ಅವಳಿಗಿಂದು?
೨ನತ್ತೆ ಕರಿಯ ಕೊತ್ತಿಗೆಂದು
ಮನದಿ ನಕ್ಕೆನೆ? ೫೬
‘ಹರಿದೆನಾರ ವಾಲೆಯನ್ನ
ಮುನ್ನ ಹುಟ್ಟೊಳಲ್ಲಡೆನ್ನ
ಹಾಲೆ ಹರಿವ ಹರಕೆಯನ್ನ
ಹೊಳೆಗೆ ಹೊತ್ತೆನೆ? ೬೦
‘ಯಾರ ಸೊಟ್ಟ ಮೋರೆಯನ್ನ
ಕಂಡೆನೊ ಹೊತ್ತಾರೆಯನ್ನ?
ಜೀವಕೆ ಗಂಟಿಕ್ಕಿದೆನ್ನ
ತೊಡವೆ ಪೋದುದೆ? ೬೪
‘ಕಳೆದು ಹೋದ ವಾಲೆಗಳಲೊ?
ಅಣಕುವ ನೆರೆಯವರಿಗಳಲೊ?
ತವರಂ ತಿವಿವತ್ತೆಗಳಲೊ?
ನನಗಾನಳಲೊ? ೬೮
‘ಇನ್ನೆನಗಿದು ಬರುವುದುಂಟೆ?
ಬರಿದಿನ್ನೇಕಿದರ ತಂಟೆ?’
ತಿರುಪತಿಯಲಿ ಹಣದ
ಮನಸಿನ ೩ತನೆ ಕರಗಲಿಂತೆ
ಯಾರ ಮನಂ ಕೊರಗದಂತೆ?-
ಹಾಲುನಗೆಗೆ ಹನಿಯೆ ಚಿಂತೆ
ಹೆಪ್ಪುಗೊಳಿಸದೆ? ೭೬
ಮೊಳಕಾಲಲಿ ಮೊಗವಸೂರಿ
ಕುಳಿತಳಾಕೆ ತರಿಯ ಗೀರಿ,
ದಿನಮುಖದೆಲಿವನಿಯೊ? ಸೋರಿ
ತಾಕೆಯಂಬಕಂ. ೮೦
ದೋಣಿಯೆಲ್ಲ ಮರುಗಿತಲ್ಲಿ-
ನುಡಿಗಳ ಬಾಯ್ಮರುಕವೆಲ್ಲಿ?
೪ಜಲ್ಲೆ ತಗಲದಾಳವೆಲ್ಲಿ?
ಓಡವೋಡಿತು. ೮೪
ತೊರೆಯನೊಬ್ಬ ರಸಿಕನಂತೆ,
ನಗುತ ನುಡಿದನವಳಿಗಿಂತೆ-
ಹೆರರ ಚಿಂತೆ ನಗೆಯ ಸಂತೆ
ಯಾರಿಗೊಲ್ಲದು? ೮೮
‘ಏತಕಮ್ಮ ಬರಿದೆ ಚಿಂತೆ?
ಹೂವೆಯನಿತೆ ನನೆಯಿನಿಂತೆ,
ದುಡಿದಂತೆಯೆ ದುಡಿವೆಯಂತೆ
ಹರೆಯವಿಲ್ಲವೆ? ೯೨
‘ಊರೊಳಿರಲು ನೀರಿನೊರತೆ
ಚಿನ್ನಕೆ ನಿನಗೇನು ಕೊರತೆ?
ಹಾಲಿಗೈಸೆ ನೀರ ಬೆರತೆ
ಎಣ್ಣೆ ತುಪ್ಪಕೇಂ? ೯೬
‘ನೀರಿಗಾಯ್ತು ನೀರ ಪಾಲು,
ಉಳಿದುದಿನ್ನು ಹಾಲ ಪಾಲು;
ಗೆಯ್ದ ಗೆಯ್ಮೆ ತನ್ನ ಪಾಲು
ಕೊಳ್ಳದಿರುವುದೆ? ೧೦೦
*****
೧ ದೋಣಿಯ ಒಂದು ಭಾಗ
೨ ನತ್ತು = ಮೂಗಿನದೊಂದು ಆಭರಣ
೩ ಆಕಳ ಗಬ್ಬ
೪ ಜಲ್ಲು=ದೋಣಿಯನ್ನು ನಡಸುವ ಗಳ