ಯಾಕೆ ನಿಂತಿ ಬೆರ್‍ಚಪ್ಪ
ಹೊಲದ ಮಧ್ಯೆ ಇಂತು ನೀನು
ಯಾರು ಬೆದರುತಾರೆ ನಿನಗೆ
ಬೆದರಲ್ಲ ನಾವಂತು
ತಲೆಗೆ ಒಡಕು ಮಡಕೆ ಕಟ್ಟಿ
ಕಣ್ಣಿಗೆ ಸುಣ್ಣದ ಬೊಟ್ಟನಿಟ್ಟಿ
ಕಿವಿ ಬಾಯಿ ತೂತು
ಕೈ ಮಾತ್ರ ದಾಯ ಬಾಯ
ಮೂಗು ಮಂಗಮಾಯ
ಯಾರದೀ ಹರಕಂಗಿ
ಯಾರದೀ ದೊಗಲೆ ಚಡ್ಡಿ
ಯಾರದೀ ಕೆಂಪು ರುಮಾಲು
ಕಾಲೊಂದು ಬಿದಿರ ಕೋಲು
ಕಾದು ಕೂತಿಯಲ್ಲೊ ನೀನು
ಕಬ್ಬಕ್ಕಿ ಸಾಲು
ರಾತ್ರಿ ಕನಸ ಹೇಳೆಲೊ
ಹಗಲು ಕನಸ ಹೇಳೆಲೊ
ನಿನ್ನೆ ಕಂಡ ರಾಜಕುಮಾರಿ
ಇಂದು ಎಲ್ಲಿ ಹೋದಳೋ
ನಿನ್ನೆ ನೀನು ಉಂಡಿದ್ದ
ಅರಮನೆಯೂ ಮಾಯವೋ
ನೀನಲ್ಲಿ ಬಿಸಿಲಿಗೆ
ನಾವಿಲ್ಲಿ ತಣಲಿಗೆ
ನೀನಲ್ಲಿ ಮಂಜಿಗೆ
ನಾವಿಲ್ಲಿ ಬೆಚ್ಚಗೆ
ಒಂಟಿಯ ಮಾಡಿದರಲ್ಲೊ ನಿನ್ನ
ನಂಟರಿಲ್ಲದಾದರೋ
ನಂಟರಿಲ್ಲ ಬಂಟರಿಲ್ಲ
ಮೆಂಟೆಯೆ ಗತಿಯಾಯಿತಲ್ಲ
ಆದರು ಅಪ್ಪಾ ಕೋಪ ಮಾಡದೆ
ನಮ್ಮ ಭತ್ತ ಕಾಯೊ ಅಪ್ಪ
ಭತ್ತ ಕಾಯೋ ರಾಗಿ ಕಾಯೊ
ರಾಗಿ ಕಾಯೊ ಜ್ವಾಳ ಕಾಯೊ
ಜ್ವಾಳ ಕಾಯೊ ಬಾಳುವೆ ಕಾಯೊ
ಸ್ವಾಮಿ ನಮ್ಮ ಬೆರ್‍ಚಪ್ಪ
ಮನೆ ತುಂಬಿದಾಗ ನಿನ್ನ
ಮನತುಂಬ ಮರೆತೆವೋ
*****