ನಿನ್ನೆ ಹೆಸರಳಿದು ನೀರಾದುದಾ ಪ್ರಭವಂ
ಜೀವನಪ್ಲವಮೆನ್ನ ಸಂಪ್ಲವಿಸಿ ನಿನ್ನ!
ಇಂದೆನ್ನನೀಚಿಸುವ ವೀಚಿಯೂ ವಿಭವಂ
ಸಾರ್ಥಮಕ್ಕೆಮ ವಿಯೋಗಿಸಿ ಭವದಿನೆನ್ನ ೪
ಆ ಯುಗಾದಿಯಲಿ ನೀನೆನ್ನ ಕಣ್ತಣಿಮೆ-
ಈ ಯುಗಾದಿಯಲಿ ನೀನೆಲ್ಲಿ? ನಾನೆಲ್ಲಿ?
ನನ್ನೆದೆಯಮಾಸೆಗಿನ್ನಶ್ರು ತರ್ಪಣಮೆ-
ಹಬ್ಬಮಿನ್ನೆನಗೆ ನಿನ್ನೊಡಗೂಡುವಲ್ಲಿ! ೮
ಕೊನೆಯ ತವರ್ಮನೆಗಕಟ! ನೀ ತೆರಳುವಂದು
ತಿಂಗಳಾರರ ಮುನ್ನಮುಟ್ಟ ಮಡಿಸೀರೆ
ಕಡೆಗಾಯ್ತೆ? ಇನ್ನುಡೆಯನೆಂತೀವೆನೆಂದು
ನೆನವ ನೂಲಂ ಮೀಸಲಿಡುವೆನಿದೊ ನೀರೆ! ೧೨
ಸರ್ವಮಂಗಲೆ! ಸರ್ವಶೃಂಗಾರವೆತ್ತು-
ಕೆಚ್ಚೆರಂಕದಿನೆನ್ನ ಹಚ್ಚಿ ಕುಂಕುಮಮಂ,
ನೆನವ ಬಾಗಿನವನೆನಗನುವಿಂದ ತೆತ್ತು,
ಮುಡಿದು ಮುಡಿಗೆನ್ನ ಸುರಿಕಂಬನಿಯ ಸುಮಮಂ- ೧೬
ಮದವಳಿಗೆ ಲಗ್ನವೇದಿಕೆಯಂತೆ, ಚಿತಿಯ
ಪೊಗುತಗ್ನಿಯಂ ಮನ್ಮನೋರಣಿಯಿನಾಂತು,
ನಮ್ಮೇಕ ಗಾರ್ಹಪತ್ಯವ್ರತವ ಸತಿಯ
ಧರ್ಮದಿಂದುದ್ಯಾಪಿಸಿದೆ ನೀ ಸಮಂತು ೨೦
ನಿನ್ನಯ ಚಿತಾಗ್ನಿಯಾಗಳಿನೆದೆಯೊಳೆನ್ನ
ಬೇಯೆ ಬಾಂಗಿನೆಯೆ ಬೈಗಿನ ಬೆಂಕಿಯಂತೆ
ಮೂಡಿಂದುವಂತೆ! ಕರೆಯಕ್ಕರೆಯ ಜೊನ್ನ
ದುಮ್ಮನದ ಗುಮ್ಮನೆರಕೆಯಿಳುಂಕಿಪಂತೆ. ೨೪
ಕಂತಿದಿಂ ಬಳಿಕ ನೀ ನಿನ್ನೊಸಗೆಯರಿಯೆಂ,
ನೀನಾದಡಂ ಬಲ್ಲೆಯೇನಳಲನೆನ್ನ?-
ನನೆನಲಿನಮಂ ನಿಟ್ಟಿಪಂತಿರುಳ ಮರೆಯಿಂ
ನೇಸರೇನಿರುಳ ನಲಿನಂ ನೇಸರನ್ನ? ೨೮
ಕುಂದೇನು ಮನದನ್ನೆ ನೊಂದಡಾನಿಲ್ಲಿ?
ಮಗು ಮುಡಿದ ತೊಟ್ಟಿಲೇನಾದಡೇನಂತೆ?
ನೀರ ಕೆರೆ ತಾರದಂತರಗಾಲದಲ್ಲಿ,
ನೀನಲ್ಲಿ ನೆಮ್ಮದಿಯಿನಿರೆ ಸಾಕು, ಕಾಂತೆ! ೩೨
ಪತಿಗೆ ಹೆಂಡತಿ ಸಾಲಗಾತಿ ತಾನಂತೆ,
ನಮ್ಮೊಳಂತಲ್ಲ, ನಾ ಸಾಲಿಗನೆ ನಿನ್ನ-
ಕಣ್ಣ ಕಾಣಿಕೆಯಂತೆ ನನ್ನಿರವನಾಂತೆ,
ಪಾಲಾಗಿ ನೀರನಿನಿವಾಲೆಸಗಿದೆನ್ನ ೩೬
ಇದ್ದೆ ಸೆಯಿನಿದ್ದೊರೆಗಳೆದ್ದು ಮುಂಬೆರೆಯೆ,
ಒಂದನಿನ್ನೊಂದು ಮರೆಸಂದು ಹರಿವಂತೆ,
ಬಲ್ಲೆನೆನ್ನಯ ಕಂಗಣಂಗಿ ನೀ ಸರಿಯೆ,
ಬೆರತಿನ್ನುಮಿರವನ್ನ ಹರಿವೆ ಮುನ್ನಂತೆ. ೪೦
ಕಡಲೆನಿತು ಕೆರಳ್ದೊಡಂ, ಕಡೆವುದೇಂ ಕರೆಯಂ?-
ಆಯುರವಧಿಯನೆನ್ನ ನನ್ನಳವೆ ಮೀರೆ?
ಕಾವೆನಾಚೆಗೆ ನಿನ್ನ ತೇರಿಸಿದ ತರಿಯಂ,
ಗೆಣೆವಕ್ಕಿ ಹಗಲಂತೆ ತನ್ನೆಣೆಯ ಸೇರೆ. ೪೪
ಎನಿತಿನ್ನುಮೆನ್ನ ಬಾಳ್ವೆಯ ಹುಳುಕು ವಾಲೆ
ಮಗಚುವುದೊ ನಾನರಿಯೆ- ಬರೆದವನೆ ಬಲ್ಲಂ!
ಇನ್ನುಮಳ್ತಿಯೆ ನನ್ನನಿಂತು ವಿಧಿಯಾಲೆ
ಹಿಳಿಯಲೇವಾಳ್ತೆ? ಕಳಲಿಂದಹುದೆ ಬೆಲ್ಲಂ? ೪೮
ತಾಳದು ವಿಕಾಳಿಸುವ ಕಾಳಿಮೆ! ಇದನ್ನ
ತಾಳದಕಟಾ ನಿನ್ನ ಬಾಳೆನೆನೆ, ಮನವಂ
ಸೇರುವೆಗೆ ಕೋರಿಸಿ ಚಕೋರಿಸುವೆನೆನ್ನ
ಪ್ರೇಮಪರಿಧಿಯ ಸುಧಾನಿಧಿಯೆ ನಿನ್ನೆನವಂ! ೫೨
*****