ದೂರದೊಂದು ತೀರದಿಂದ ಹಾಡು ಕೇಳಿಬಂದಿತು;
ಅದೆ ಕನ್ನಡವಾಯಿತು
ನಿಂತ ನೆಲವು ಪುಲಕಗೊಂಡು ಮರುಧ್ವನಿಯ ನೀಡಿತು;
ಕರ್ನಾಟಕವೆನಿಸಿತು
ಬ್ರಹ್ಮನೂರ ಶಿಲ್ಪಿಗಳನು ಕೈ ಬೀಸಿ ಕರೆಯಿತು;
ಬೇಲೂರ ಕಟ್ಟಿತು
ಶಿವನೂರಿನ ಬೆಟ್ಟಗಳನು ತನ್ನೆಡೆಗೆ ಸೆಳೆಯಿತು;
ಸಹ್ಯಾದ್ರಿಯ ಮಾಡಿತು
ಕೃಷ್ಣನ ಬೃಂದಾವನವ ಕನಸಲ್ಲಿ ಕಂಡಿತು;
ಮೈಸೂರಿಗೆ ಇಳಿಸಿತು
ವೈಕುಂಠದ ಹಾಲ್ಗಡಲ ಕರಾವಳಿಗೆ ಬೆಸೆಯಿತು;
ತನ್ನ ಚೆಲುವ ಮೆರೆಸಿತು
ವೀಣೆ ಹಿಡಿದ ಶಾರದೆಯ ಭಕ್ತಿಯಿಂದ ಭಜಿಸಿತು;
ಶೃಂಗೇರಿಯಲಿರಿಸಿತು
ಕಲ್ಲು ಮಣ್ಣು ಮೂರ್‍ತಿಗಳನು ಕವಿಗಳಂತೆ ನುಡಿಸಿತು ನನ್ನ
ಲಿಪಿಕಾರನ ಮಾಡಿತು
*****