ಜುಲೈ ೨೦೧೫ ರಂದು ಗುರುವಾರ ದಿನದಂದು ಚಿಕ್ಕ ಮಗಳೂರಿನಲ್ಲಿ ಜರುಗಿದ ಕತೆಯಿದು. ಚಿಕ್ಕ ಮಗಳೂರಿನ ಹೃದಯ ಭಾಗದಲ್ಲಿರುವ ಟೌನ್ ಮಹಿಳಾ ಸಮಾಜ ಶಾಲೆಗೆ (ಟಿಎಂಎಸ್) ಚಿರತೆಯೊಂದು ಬಂದೇ ಬಿಟ್ಟಿತು!
ಅಲ್ಲಿದ್ದ ಮಕ್ಕಳು ಶಿಕ್ಷಕರೆಲ್ಲ ಗಾಬರಿ ಬಿದ್ದು ಓಡಿದರು. ಈ ಚಿರತೆ ಶಾಲೆಗೆ ಬರುವ ಮುನ್ನ- ಕೋರ್ಟು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಟ್ಟಾಭಿರಾಮೇಗೌಡ ಎಂಬುವವರ ಮೇಲೆ ಎರಗಿ ಗಾಯ ಮಾಡಿದೆ!
ಶಾಲೆಗೆ ಬಂದ ಚಿರತೆಯನ್ನು ಕೊಠಡಿಯಲ್ಲಿ ಬಂದಿಯನ್ನಾಗಿಸಿ ಉಪಾಯವಾಗಿ ಮೆಲ್ಲಗೆ ಕಿಟಕಿ ಹಾಕುವಾಗ ಅದು ಅರಣ್ಯ ಇಲಾಖೆಯ ಚಾಲಕ ಗಣೇಶ್ ಎಂಬುವರ ಬಲಗೈಯ ನಾಲ್ಕು ಬೆರಳುಗಳನ್ನು ಕಚ್ಚಿದೆ! ಇವರನ್ನು ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿದ್ದಾರೆ! ಶಾಲೆ ಪಕ್ಕದ ಕಡೂರು ಕ್ಲಬ್ ಕಡೆಯಿಂದ ಮರದ ಮೇಲಿಂದ ರಸ್ತೆಗೆ ಚಿರತೆ ಜಿಗಿದಿದೆ. ಅಲ್ಲಿಂದ ಶಾಲೆಗೆ ಬಂದಿದೆ. ಅದನ್ನು ಕಂಡು ಎಲ್ಲರೂ ಹೌಹಾರಿದ್ದಾರೆ. ಅಲ್ಲೇ ಇದ್ದ ನೆರಳಚ್ಚು ಯಂತ್ರದ ಕೊಠಡಿ ಸೇರಿಕೊಂಡಿದೆ.
ತದ ನಂತರ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಸತತವಾಗಿ ಐದಾರು ತಾಸು ಕಾರ್ಯಚರಣೆಯ ಮೂಲಕ ಸುರಕ್ಷಿತವಾಗಿ ಚಿರತೆಯನ್ನು ಸೆರೆ ಹಿಡಿದರು.
ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಡಾ. ವಿನಯ್ ಅವರು ಅರಿವಳಿಕೆಯ ಚುಚ್ಚುಮದ್ದನ್ನು ಅಲ್ಲಿದ್ದ ಚಿರತೆಗೆ ಯಶಸ್ವಿಯಾಗಿ ಸಿಡಿಸಿ ಅಲ್ಲಿದ್ದ ಜನರಿಂದ ಮೆಚ್ಚುಗೆ ಗಳಿಸಿದರು.
ಈ ಅರಿವಳಿಕೆಯ ಚುಚ್ಚುಮದ್ದನ್ನು ಸಿಡಿಸುವ ಪರಿಣಿತ ಪಶು ವೈದ್ಯರು ಇಡೀ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇಲ್ಲದಿರುವುದರಿಂದ ಈ ಒಂದು ಚಿರತೆಯ ಕಾರ್‍ಯಚರಣೆಯು ತುಂಬಾ ತಡವಾಯಿತು.
ತದನಂತರ ಈ ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಸಿಬ್ಬಂದಿ ಹಿಡಿದರು. ಸಕಲ ಬಂದೋಬಸ್ತೋವಿನ ನಡುವಿನ ಮಧ್ಯೆ ಭದ್ರಾ ಅಭಯಾರಣ್ಯಕ್ಕೆ ಕ್ಷೇಮವಾಗಿ ಬಿಟ್ಟು ಟಾಟಾ ಮಾಡಿ ಬಂದರು.
ಚಿಕ್ಕಮಂಗಳೂರಿನ ತುಂಬೆಲ್ಲ ಎರಡು ಮೂರು ದಿನ ಚಿರತೆ ಶಾಲೆಗೆ ಬಂದ ಸುದ್ದಿನೇ ಚರ್‍ಚೆಗೆ ಗ್ರಾಸವಾಯಿತು.
ಈಗೀಗ ಕಾಡಿನ ಪ್ರಾಣಿಗಳು ಆಹಾರ, ನೀರು, ಹರಸುತ್ತಾ ನಾಡಿಗೆ ಬರುತ್ತಿವೆ. ನಾಡಿನ ಜನ ಕಾಡನ್ನು ಉಳಿಸಿದರೆ ಮಾತ್ರ ನಾಡು ಉಳಿದೀತೂ ಇಲ್ಲವಾದರೆ ವಿಪತ್ತು ತಪ್ಪಿದ್ದಲ್ಲ! ಗಂಡಾಂತರ ಕಟ್ಟಿಟ್ಟ ಬುತ್ತಿ…
*****