ರಾಗ ದೇಶ ಜಿಲ್ಲಾ-ತ್ರಿತಾಲ
ಏನೆದ್ಭುತ ಮಹಿಮೆಯೊ ನಿನ್ನ
ಪ್ರಭೋ ಪೊಗಳಲಳವೆ ಎನ್ನ || ಪಲ್ಲ ||
ತಡೆಯರಿಯದೆ ಹರಿಯುವ ಗಗನತಲಂ
ನಿನ್ನೊಡೆತನದ ಪತಾಳೆಯೊಲು ವಲಂ
ನೆಳಲಿಸಿ ಹೊದಿಪುದು ವಸುಮತಿಯಗಲಂ
ನಿನ್ನ ಪ್ರಭಾವವನು || ೧ ||
ನಿಲಲಾರದ ದಿನಕರನನುದಿನದಿ
ಬೆಳಕುಗಳ ತುತೂರಿಯನತಿಘನದಿ
ಪಸರಿಸಿ ಸಾರ್‍ವನು ಭುವನ ಭುವನದಿ
ನಿನ್ನ ಪ್ರತಾಪವನು || ೨ ||
ತಾರಕಿತ ವಾಲೆಗಳ ತೆರೆದಿರಿಸಿ,
ಅಮೃತದ ದೀವಿಗೆಯನು ಮುಂದುರಿಸಿ,
ಪಾಡುವಳು ರಜನಿ ಕಬ್ಬಿಗರರಸಿ
ನಿನ್ನ ಲೀಲೆಯನು || ೩ ||
ಕ್ಷಿತಿಬಾಲೆಯ ತೋಳುಯಲಲಿ ತೂಗಿ,
ಜೀವನ ಜೋಗುಳದನುಪದಮಾಗಿ
ಮೊರೆವುದು ಗಾಳಿಯೀ ಜಗವನು ಕೂಗಿ
ನಿನ್ನ ಕೀರ್ತಿಯನು || ೪ ||
ನಿನ್ನಯ ಕೆಯ್ಗನ್ನಡಿಯಹ ಜಲಧಿ
ಪ್ರತಿಬಿಂಬಮನಾಂತಕಲ ವಿಕಲದಿ,
ಪ್ರಕಟಪುದಲೆಯ ತರಲ ಕಲಕಲದಿ
ನಿನ್ನ ಛಾಯೆಯನು || ೫ ||
ಜಗದೇಕವಾಣಿಯಲಿ ತವ ಚರಿತಂ
ಕೆತ್ತಿರುವ ಯಶಸ್ತಂಭದೊಲಿರುತಂ
ನುಡಿವುದು ನದಿಕಂರದಿ ಗಿರಿ ನಿರತಂ
ನಿನ್ನ ನೀತಿಯನು || ೬ ||
ಬಗೆಬಗೆಯಿಂದಾರಾಧಿಸಲರಿಯೆ,
ಮಗು ತೊದಲುಲಿವೊಲು ತಾಯನು ಕರೆಯೆ,
ಉಲಿವೆನು ಮಗುಳ್ದುಲಿನೆನು ಶ್ರೀ ಹರಿಯೆ
ನಿನ್ನ ನಾಮವನು || ೭ ||
*****