ವರ್ಷದ ನಿಶಿಯೊಳು ಮುಗಿಲಿನ ಮರೆಯೊಳು
ಇಣಿಕುವ ಚಂದ್ರನ ಜೊನ್ನದೊಲು,
ಹರ್‍ಷವು ಮೂಡಿತು ಚಿಂತೆಯ ಸದನದಿ
ಹೊಳೆಯಲು ಆಂಡಾಳಿನ ನಗೆಯು.
ಜಾಜಿಯ ಮುಗುಳನು ಮುತ್ತಿಡೆ ನುಸುಳಿದ
ಕಿರಣದ ಚೆಲುವಿನ ಹೊಸ ನಗೆಯು,
ವ್ಯಾಜವೆ ಇಲ್ಲದೆ ಸೋಜಿಗಪಡುವಾ
ಬಲು ಬಲು ಸೊಗಸಿನ ಹೊಸ ನಗೆಯು.
ಉಡುಗಣದೊಡೆಯನ ನಗೆ ಇದ ಹೋಲ್ವುದೆ?
ಈ ಬಗೆ ಚಪಲತೆ ಅದಕೆಲ್ಲಿ?
ಮೋಡದ ಮಿಂಚನು ಹೋಲುವುದೆನಲೆ?
ತುಮುಲವನೆಬ್ಬಿಸದೆದೆಯೊಳಗೆ.
“ಮುದ್ದಾಂಡಾಳೀ ನಗೆಯೆಲ್ಲಿತ್ತೆ,
ಬಗೆಯನು ಸೆರೆಹಿಡಿವೀ ಬಲೆಯು?
ಕದ್ದೆಯ ಭೂತಳಕಿಳಿಯುವ ಸಮಯದಿ
ದಿನದಿಂದೀ ಹೊಸ ಸೋಜಿಗವ?”
ಎಂದೆನು ಹರುಷದಿ ಮುತ್ತಿಡುತವಳಾ
ಸೋಜಿಗ ಪಡುವಾ ಕಂಗಳನು.
ಎಂದೆನು ಅಚ್ಚರಿ ಹೆಚ್ಚಲು ತಿರುಗಿಯು,
“ಆಂಡಾಳೀ ನಗೆಯೆಲ್ಲಿತ್ತೆ?”
ಎನಲಾ ಮಗುವಿನ ನಗೆಯಿಮ್ಮಡಿಸಿತು,
ಕಂಗಳು ಹೊಳೆದುವು ಕೌತುಕದಿ.
ಮೌನದೊಳರೆಚಣ ಒಳಮೊಗವಾದುವು,
ಆತ್ಮನ ನೋಡುವ ತೆರದೊಳಗೆ.
“ಎನ್ನಾಂಡಾಳೀ ನಗೆಯೆಲ್ಲಿತ್ತೆ?”
ಥಟ್ಟನೆ ನುಡಿಯಿತು ಕಿರುಗೂಸು:
“ಎನ್ನೀ ಕಿರುನಗೆ ಕಣ್ಣೊಳಗಿದ್ದಿತು,
ಅಲ್ಲಿಂದುಕ್ಕಿತು ಬಾಯೊಳಗೆ.”
ಉತ್ತರ ಸಿಕ್ಕಿತು, ಒಗಟೂ ಒಡೆಯಿತು,
ಹೊಮ್ಮಿತು ಹರುಷದ ತೆರೆ ತೆರೆಯು.
ಮುತ್ತಿನೊಲಿರುವೀ ಮಾತಿಗೆ ಸೋತೆನು,
ಮೂಡಿತು ಮನದೊಳಗಚ್ಚರಿಯು.
*****