ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯ್ತ್ತು
ತುಂಬಿ ನೋಡಾ ಆತುಮ ತುಂಬಿ ತುಂಬಿ ನೋಡಾ
ಪರಮಾತುಮ ತುಂಬಿ ತುಂಬಿ ನೋಡಾ
ಗುಹೇಶ್ವರನೆಂಬ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ
ಹೂವಿಗೆ ದುಂಬಿ ಎರಗಿದರೆ ದುಂಬಿ ಮಧುವನ್ನು ಹೀರಿ ವಿಕಾಸಗೊಳ್ಳುವುದು ಸರಿ, ಆದರೆ ಹೂವು ಕೂಡ ದುಂಬಿಯೊಡನೆ ವಿಕಾಸಗೊಂಡದ್ದು ಕಾಣುತ್ತಿದೆ ಅಲ್ಲಮನಿಗೆ.
ಇಡೀ ವಚನದಲ್ಲಿ ತುಂಬಿ ಎಂಬುದನ್ನು ನಾಮಪದವಾಗಿಯೂ ಕ್ರಿಯಾಪದವಾಗಿಯೂ ನೋಡಬಹುದು. ಹೂವು ಮತ್ತು ದುಂಬಿ ಎರಡೂ ವಿಕಾಸಗೊಳ್ಳುವ ಸಾಧ್ಯತೆಯನ್ನು ದೇವರು ಮತ್ತು ಆತ್ಮಕ್ಕೆ ಹೊಂದಿಸಿ ನೋಡುತ್ತಿದ್ದಾನೆ ಅಲ್ಲಮ. ದೇವರು ಹೂವಾದರೆ ಭಕ್ತನೆಂಬ ದುಂಬಿ ಎರಗಿದಾಗ ಭಕ್ತನೊಂದಿಗೆ ದೇವರೂ ಅರಳುತ್ತಾನೆ ಅನ್ನುವ ಮಾತೇ ಅದ್ಭುತವಾದದ್ದು. ಜೊತೆಗೇ ದುಂಬಿಗೆ ಆದ ಬೆರಗು ಕೂಡ ಇಲ್ಲಿದೆ. ತುಂಬಿಯಂತಿರುವ ಭಕ್ತ ಗುಹೇಶ್ವರನ ಮೇಲೆರೆಗುತ್ತಾ ತನ್ನೊಳಗೇ ಪರಮಾತ್ಮ ತುಂಬಿರುವುದನ್ನು ಕಂಡು ಬೆರಗಾಗಿರುವುದು ಕೂಡ ವ್ಯಕ್ತವಾಗಿದೆ.
*****