ನನ್ನ ಬೆನ್ನಿಗೆ ಬಿದ್ದವ ನೀನು ತಮ್ಮ
ಮೊದಲಿನ ಮನೆಯ
ಅಟ್ಟದ ಕತ್ತಲೆ ಕೋಣೆಯಲ್ಲಿ ಹುಡುಕಿದೆವು
ಗುಮ್ಮ
ಮಾದನಗೇರಿಯ ಭವ್ಯ ರಂಗಮಂಟಪದಲ್ಲಿ
ಯಕ್ಷಗಾನ
ಮನೆಯ ಅಂಗಳದಲ್ಲಿ ಪುನಃ ಆಡಿದೆವು
ಅಳಿದುಳಿದ ಮಾತನಾಡಿದೆವು
ಆಯಿಗೆ ಸಿಕ್ಕದ ಹಾಗೆ
ದೂರ ಓಡಿದೆವು
ದಿನ ವಾರ ಗಂಟೆಗಳನ್ನು
ಒಂದು ಕ್ಷಣ ಮರೆತೆವು
ಹದಿನೈದು ನಿಮಿಷ ಮೊದಲೇ
ಶಾಲೆಯ ಕೊನೆ ಬೆಲ್ಲು ಹೊಡೆದೆವು
ಕೊನೆಗೆ
ನಾವೆಲ್ಲಿ ನಡೆದೆವು ?
ಮತ್ತೆ ಎದುರಾದಾಗ
ಮೂಡಿದ್ದವು ಇಬ್ಬರಿಗೂ ಮೀಸೆ ಗಡ್ಡ
ಈಗ ಮೈಲಿಗಳಾಚೆ ನೀನು.
ನಾನು ಇಲ್ಲಿ
ನಾವಿಬ್ಬರೂ ಕೂಡಿ
ಕಳೆದ ದಿವಸಗಳೆಲ್ಲಿ ?
ನನ್ನ ಬೆನ್ನಿಗೆ ಬಿದ್ದವ ನೀನು ತಮ್ಮ
ನಮ್ಮಿಬ್ಬರ ನಡುವೆ
ಈಗ ಕುಳಿತಿದ್ದಾನೆ ಒಂದು ಗುಮ್ಮ
*****