ನೀವು ಆಡಾಡ್ತಾ ಅಡವಿ ಬೀಳ್ತೀರೇನೋ
ದೊಡ್ಡ ಆಟಂಬಾಂಬ ಪಟಾಕಿ ಹಾರುತ್ತದೆಂದು
ಬೆಂಕಿ ಹಚ್ಚಿದಾಗ ನೀವು, ಕಿವಿ ಮುಚ್ಚಿಗೊಳ್ಳಲು ಜನ
ಅದು ಸುರು ಸುರು ಎಂದು ಮೊದಲು ಬುಸುಗುಟ್ಟಿ
ನಂತರ ಮದ್ದು ಮುಟ್ಟುವುದರೊಳಗೇ ಟಿಸ್ಸೆನ್ನುವುದೇನೋ!
ತಳದೊಳಗಿಂದೇಳದೆ
ಒಳತಂತು ಮಿಡಿಯದೆ ಸಹಜರಾಗ
ಆ ಕೂಗು ಈ ಕೂಗು ಸೇರಿ ಜಾತ್ರೆಯಬ್ಬರದೊಳಗೆ
ನಾಲ್ವರಂತೆ ನಾರಾಯಣ ಎನ್ನುತ್ತ ಬೊಗಳುವ ನಾಯಿಗಳೊಡನೆ
ನಮ್ಮದೂ ಇರಲೆಂದು ಸೇರಿಸಿದ ಬೊಗಳಾಗಿಬಿಡುವುದೇನೋ
ಗುರಿಯಿಟ್ಟವನನ್ನು ಪಲ್ಲಕ್ಕಿಯಲ್ಲಿಟ್ಟು ಮೆರೆಸಿ ಒಣ ಒಣ
ನೀವು ನಿಮ್ಮ ನಿಮ್ಮ ಬಣ್ಣ ಬಯಲುಗೊಳಿಸಿಕೊಳ್ಳಲು
ಮೆರೆದಾಟದ ನಿಮ್ಮ ತಿಂಡಿಯನ್ನಿಷ್ಟು ತೀರಿಸಿಕೊಂಡು
ಪಲ್ಲಕ್ಕಿಯನ್ನು ಸುಡುಗಾಡಿನಲ್ಲಿಟ್ಟು
ನೀವು ಕೈ ಒರೆಸಿಕೊಂಡು ಹೋಗಿ ಬಿಡುವಿರೇನೋ!
ಚಲಿಸಲಾಗದ ಬೆಟ್ಟದ ಮುಂದೆ ನಿಂತು ಕೂಗುವ ಕೂಗಾಗುವುದೇನೋ
ಅಥವ ಹೊರಲು ಹೋಗಿ ಗೂದೆ ಹಾದು ಅರಚಿದ
ರಾವಣನ ರೋದನವಾಗುವುದೇನೋ?
ಮಾತಿನ ಮಂತ್ರದಿಂದ ಮಾವಿನಕಾಯಿಯನುದುರಿಸುವಿರೇನೋ?
ಹರೆಯದ ಹರವಿಗೊಂದು ಕಾಲುವೆ ತೋಡಿಕೊಂಡು
ಹರಿಸಿಕೊಂಡು ಕಾವಳಿದು ಉಕ್ಕಿಳಿದು ಸೆಲೆಬತ್ತಿದಾಗ
ನಿಮ್ಮ ಹರಿದಾಟವೂ ಸತ್ತು ಬಿಡುವುದೇನೋ
ಕಾವ್ಯಗರತಿಯನ್ನು ರಾಜಕಾರಣ ವಿಟನಿಗೆ ಮಾರಿ
ಹೊಟ್ಟೆ ತುಂಬಿಕೊಳ್ಳುವ ಹೇಸಿತನವಾಗುವುದೇನೋ?
ಬೇರನ್ನೆಲ್ಲ ಬೈದು ಭೇದಿಸಿ ಅತಂತ್ರ ಜೋತಾಡುವ
ಕಾಗದ ಹೂವಾಗುವಿರೇನೋ?
ಅಥವಾ ಮೇಲಂಟಿಸಿಕೊಂಡ ಮೀಸೆಯಾಗಿಬಿಡುವಿರೇನೋ?
*****