ನಾನು ಭಾವ ನೀನು ಗೀತ
ನಾನು ರಾಮ ನೀನು ಸೀತ
ಹೀಗೆಲ್ಲ ಹಾಡಿದ ಕವಿಗಳು ಒಂದು ದಿನ
ನಾನು ಶವ ನೀನು ಪ್ರೇತ
ಎಂದು ಸಾಯುತ್ತಾರೆ
ನಾನು ದೇವರ ಪುತ್ರ ಬನ್ನಿ ನನ್ನಡಿಯಲ್ಲಿ
ಮೋಕ್ಷದ ಹಾದಿ ಸುರಳೀತ
ಎಂದು ಸಾರಿದ ಸಾಧಕರೆಲ್ಲ
ಗೊತ್ತಿದ್ದೋ ಗೊತ್ತಿಲ್ಲದೆಯೋ
ಇನ್ನೂ ಏಳದ ಹಾಗೆ ಮಲಗಿದ್ದಾರೆ
ಅಣು ಅರಸಿದವನು, ಕೃತಕ
ಮಳೆ ಸುರಿಸಿದವನು, ವಿದ್ಯುತ್
ಒಲೆ ಉರಿಸಿದವನು
ಒಂದು ಸಲ ಅರಸಿ ಹೋಗಿದ್ದಾರೆ ಏನನ್ನೋ
ತಿರುಗಿ ಬಂದಿಲ್ಲ
ಎಲ್ಲರೂ ಕಂಡದ್ದು ಒಂದೇ ಕೊನೆ
ಹೊಡೆದವನದೊಂದೇ ಬೆಣೆ
ನಾನಿಂತ ಮಣ್ಣಲ್ಲೆಲ್ಲ ಕರಗಿದವರ ಕತೆ
ಒಂದು ನರಿಯಂತೆ ಮತ್ತೊಂದು ಹುಲಿಯಂತೆ
ಇನ್ನೊಂದು ಬೀದಿ ನಾಯಿಯಂತೆ
ಎಲ್ಲಾ ಕೂಡಿ
ನಮ್ಮ ಮನೆಯಂಗಳಕ್ಕೆ ಮಣ್ಣಾದವಂತೆ
ಒಬ್ಬ ಮಾಸ್ತರನಂತೆ
ಉಣ್ಣದೇ ಸತ್ತವನು
ಒಬ್ಬ ಕಾರಕೂನನಂತೆ
ಹೊಟ್ಟೆ ತುಂಬಿಯೇ ಸತ್ತವನು
ಇದ್ದಾಗ ಒಬ್ಬರ ಮುಖ
ಇನ್ನೊಬ್ಬರಿಗಾಗದು
ಅವನ ಬಯ್ಯದೇ ಇವಗೆ
ಹೊತ್ತೇ ಹೋಗದು
ಇಬ್ಬರೂ ಸೇರಿ
ಚೌತಿಯ ಗಣಪತಿಗೆ
ಆಕಾರವಾದರು
ಮಣ್ಣ ಹಣತೆಯದೊಂದು ಕತೆ
ಮಡಕೆಯದೊಂದು ನೀಳ್ಗತೆ
ಹೊಸ ಮನೆಯ ಗೋಡೆಯದೊಂದು
ಕಾದಂಬರಿಯೇ ಇದೆ
ಕೇಳುತ್ತ ದಂಗಾದೆ
ಬೆರಳು ಕಚ್ಚಿದೆ ಆಶ್ಚರ್ಯಕ್ಕೆ
ಥೂ ! ಥೂ !
ಉಗಿದೆನು ಬರೀ ಮಣ್ಣು !
ಇಡೀ ಮೈ ನಕ್ಕಿತು ಒಳಗಿನವನನ್ನು ನೋಡಿ
“ನಾನು ನಿನಗಿಂತ ಹಿಂದೆ
ಸತ್ತವರ ಬೂದಿ”
ತಾಳಲಾರದೇ ಮನಸ್ಸಿನ
ಸ್ವಾಸ್ಥ್ಯಕ್ಕೆಂದು
ಮೆಲ್ಲಗೆ ಪಕ್ಕದ ಮನೆಯ
ಹುಡುಗಿಯನ್ನೆತ್ತಿಕೊಂಡೆ
ಎತ್ತಿಕೊಂಡರೆ ಪೂರಾ ಮಣ್ಣಿನದೆ ವಾಸನೆ
ಮೂಗೊತ್ತಿಕೊಂಡೆ
ಪೇಟೆಯಲ್ಲೆಲ್ಲ ಮಣ್ಣಿನದೆ ಮೆರವಣಿಗೆ
ಕ್ಲಾಸಿನಲ್ಲೆಲ್ಲ ಮಣ್ಣಿನದೆ ಬರವಣಿಗೆ
ಮಣ್ಣಿಗೆ ಮಣ್ಣು ಗೋಪುರ ಕಟ್ಟುತ್ತ
ಚೌತಿಯ ಗಣಪತಿ
ಈಶ್ವರ ಕೆರೆಯ ನೀರಲ್ಲಿ
ಹಗು-ಹಗೂರ
ಕರಗುವ ಹಾಗೆ
ನನ್ನೊಳಗೆ ಕರಗುತ್ತಿದ್ದೆ
ಮಣ್ಣಿನ ಮುದ್ದೆ
ಸತ್ತವರ ನೆರಳುಗಳಲ್ಲಿ
ಇದ್ದವರ ಕೊರಳು
ಕೊರೆಯುವ ಗೆದ್ದಲಗಳಲ್ಲಿ
ಬೀಳುತ್ತೆ ಉರುಳು
ಬಜಾರಿನ ತರಕಾರಿ, ಬಜಾರಿಯ ಚಿನ್ನಾಭರಣ
ಈ ಪ್ರಯೋಗಾಲಯದ ಗಾಜಿನುಪಕರಣ
ಜೊತೆಯಲ್ಲಿ ನಾನೂ, ನೀವೂ
ಮಾನವ ಕುಲದ
ಇತಿಹಾಸದಶ್ವತ್ಥ ಮರದಡಿಗೆ
ಮಣ್ಣಲ್ಲಿ ಮಣ್ಣಾಗಿ ಕರಗುವ ಕತೆಯೇ
ಇಂದಿನೀ ಉಸಿರು
*****