ಎಷ್ಟೋ ಕವಿಗಳು ಆಗಿಹೋದರೂ
ಇನ್ನಷ್ಟು ಕವಿಗಳು ಬರಲಿರುವರು
ಈ ಇಷ್ಟರಲ್ಲಿ ನೀನೆಷ್ಟರವನೊ ನಾನೆಷ್ಟರವನೊ
ಜಾಗ ಹಿಡಿದಿಟ್ಟಿರುವ ಆ ಇನ್ನೊಬ್ಬ ಎಷ್ಟರವನೊ
ಕಾಲಾಂತರದಲ್ಲಿ ನುಡಿ ಹೀಗೇ ಉಳಿಯದಲ್ಲಾ
ಅದು ಯಾರಿಗೂ ತಿಳಿಯದೇ ಬದಲಾಗುವುದಲ್ಲಾ
ನುಡಿ ಬದಲಾಗುವುದು ನಡೆ ಬದಲಾಗುವುದು
ಈಗಿನದೆಲ್ಲವೂ ಪಳಿಯುಳಿಕೆಯಾಗುವುದು
ಮೇಲೇರಿದುದೆಲ್ಲ ಕೆಳ ಬೀಳಲೆ ಬೇಕು
ಕೆಳ ಬಿದ್ದುದೆಲ್ಲಾ ಮಣ್ಣಾಗಲೆ ಬೇಕು
ಮಣ್ಣು ಹಸನಾಗುವುದು ಮತ್ತೆ ಸಸಿ ಮೂಡುವುದು
ಮರವಾಗಿ ಕಾಯಾಗಿ ಮಾಗಿ ಹಣ್ಣಾಗುವುದು
ಆ ಹಣ್ಣನು ಹಕ್ಕಿಯೊಂದು ಕುಕ್ಕಿ ತಿನ್ನುವುದು
ಆ ಹಕ್ಕಿಯನಿನ್ನೊಂದು ನೋಡುತ್ತಲು ಇರುವುದು
ಮಲ್ಲಿಗೆಗೊಂದು ದಿನ ಗುಲಾಬಿಗೆ ಎರಡು ದಿನ
ಬನದಿಂದ ಬನಕೆ ಹಾರಾಡುವ ತುಂಬಿಗೆ ಎಷ್ಟು ದಿನ
ಕೆಲವಿಂದ್ರ ಚಾಪ ಮೂಡುವಾಗಲೆ ಮಾಯ
ಇನ್ನು ಕೆಲವಿರಬಹುದು ಇನ್ನಷ್ಟು ಸಮಯ
ನಿನ್ನೆಯೆಂಬುದು ನೆನಪು ನಾಳೆಯೆಂಬುದು ಕನಸು
ಬಣ್ಣ ಹಚ್ಚಿದ ಮೇಲೆ ನಿಷ್ಕ್ರಮಣ ತನಕ ನಟಿಸು
ಕರತಾಡನದರ್ಥ ಏನೆಂದು ಕೇಳದಿರು
ಪರದೆ ಬೀಳುವ ವೇಳೆ ಇದು ಸಹಜವೆಂದೇ ತಿಳಿದಿರು
*****