ಅಂದು- ಶಾಲೆಗೆ ಡಾ. ವಿ.ನಾಗರಾಜುರವರು ಆಗಮಿಸಿದ್ದರು. ಮಕ್ಕಳಿಗೆ ಆರೋಗ್ಯ ಭಾಗ್ಯದ ಬಗೆಗೆ ವಿವರಿಸಿದರು.
ಅವರು ಹೇಳುವುದ ಕೇಳುತ್ತಾ ಕುಳಿತ ನಮಗೆಲ್ಲ ಐದಾರು ದಶಕಗಳ ಕೆಳಗೆ ನಾವೆಲ್ಲ ಕಡ್ಡಾಯವಾಗಿ ನಿತ್ಯ ಹಾಲು-ಮೊಸರು-ಮಜ್ಜಿಗೆ-ಬೆಣ್ಣೆ-ಗಿಣ್ಣು-ತುಪ್ಪ ಉಂಡು ಬೆಳದ ಆ ಸವಿಸವಿ… ದಿನಗಳು ಕಣ್ಣ ಮುಂದೆ ಮೆರವಣಿಗೆ ಹೊರಟವು. ಪ್ರತಿಯೊಬ್ಬರ ಮನೆಮನೆಗಳಲ್ಲಿ ಹತ್ತಾರು ದನಕರು ಕುರಿಮೇಕೆಗಳ ಹಿಂಡು ಹಿಂಡು…
ಡಾ. ವಿ.ನಾಗರಾಜು ಅವರ ಅನುಭವಾಮೃತವನ್ನು ಅಂದು ಅಲ್ಲಿದ್ದವರಿಗೆಲ್ಲ ಉಣಬಡಿಸತೊಡಗಿದರು. ನೀವು ಏನೆಲ್ಲ ಎಷ್ಟೆಲ್ಲ ಸೇವಿಸಿದರೂ ಕೊನೆಗೆ ಮಜ್ಜಿಗೆಯನ್ನು ಕಡ್ಡಾಯವಾಗಿ ಮೂರು ಹೊತ್ತು ಸೇವಿಸುವುದನ್ನು ಮರೆಯಬಾರದೆಂದು ಒತ್ತಿ ಹೇಳಿದರು. ಕಾರಣ- ಮಜ್ಜಿಗೆಯಲ್ಲಿ ಏನೆಲ್ಲ ಪ್ರೋಟೀನ್, ಪೊಟ್ಯಾಶಿಯಂ, ‘ಬಿ’ ಕಾಂಪ್ಲೆಕ್ಸ್ ಇತ್ಯಾದಿ ವಿಟಮಿನ್‌ಗಳ ಗಣಿಯಾಗಿದೆ. ತೂಕ ಇಳಿಸಲು ಮಜ್ಜಿಗೆ ಔಷಧಿಯ ಹಾಗೆ ಕೆಲಸ ಮಾಡುವುದು. ಬಾಯಿ ವಾಸನೆಯನ್ನು, ತೂಕವನ್ನು, ತಡೆಗಟ್ಟುವುದು, ಅಜೀರ್ಣವನ್ನು ನಿವಾರಿಸುವುದು. ಅಲರ್ಜಿಗೆ ರಾಮಬಾಣ, ಕರುಳು ಬೇನೆ, ಭೇದಿ, ಆಮಶಂಕೆ, ಗ್ಯಾಸ್, ಉರಿ, ಉಬ್ಬರ ವಿಳಿತ ಇತ್ಯಾದಿಗೆ ಮಜ್ಜಿಗೆ ಸೇವನೆ ಹೇಳಿಮಾಡಿಸಿದ ಪಾನೀಯ. ಜೀರ್ಣಕ್ರಿಯೆಗೆ ಸಹಕಾರಿ.
ಮಜ್ಜಿಗೆಯನ್ನು ಯಥೇಚ್ಛವಾಗಿ ಸೇವಿಸುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಆರೋಗ್ಯ ಪರಿಣಿತರು ಈಗಾಗಲೇ ರುಜುವಾತು ಪಡಿಸಿರುವುದನ್ನು ಅವರು ಒತ್ತಿಒತ್ತಿ ಹೇಳಿದರು. ಅವರ ಮಾತೇ ಹಾಗೇ ಹಾಲು ಜೇನಿನಾ ಹಾಗೇ ಕಲ್ಲು ಸಕ್ಕರೆಯಾ ಹಾಗೇ.. ಹೌದೌದು ಎನ್ನುವ ಹಾಗೇ ತುಂಬ ಸೊಗಸಾಗಿ ಹೇಳುತ್ತಾ ಹೋದರು…
ಮಜ್ಜಿಗೆಗೆ ಮಸಾಲೆ ಹಾಕುವುದು ಒಗ್ಗರಣೆ ಕೊಡುವುದು ಹಸಿಮೆಣಸಿನಕಾಯಿ ಸೇರಿಸುವುದು ಸಕ್ಕರೆ ಬೆಲ್ಲ ಇತ್ಯಾದಿ ಏನೆಲ್ಲ ಸೇರಿಸಿ ಕುದಿಸಿ ಕುಡಿಯುವುದೂ… ಇದೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಡ್ಡ ಪರಿಣಾಮಕ್ಕೆ ರಹದಾರಿಗಳು…….. ಮಜ್ಜಿಗೆಯಲ್ಲಿ ಕಣ್ಣಿಗೆ ಕಾಣದಂಥ ಬ್ಯಾಕ್ಟಿರಿಯಾಗಳಿರುತ್ತವೆ! ಇವು ಆರೋಗ್ಯಕ್ಕೆ ಬೇಕೇ ಬೇಕು…! ಬೇಕಾದ ಬ್ಯಾಕ್ಟಿರಿಯಾಗಳು…. ಇವು ವಿನಾಶವಾಗದಂತೆ ಎಚ್ಚರಿಕೆ ವಹಿಸುವುದು ಎಲ್ಲರಿಗೆ ತಿಳಿದಿರಲೇಬೇಕು! ಇವನ್ನು ನಾಶ ಮಾಡಿಕೊಂಡು ಅಂದಚೆಂದಕ್ಕೆ ಮಂಜುಗಡ್ಡೆ ಹಾಕಿ ಕುಡಿಯುವುದರಿಂದ ಆರೋಗ್ಯದ ಮೇಲೆ ಅನಗತ್ಯವಾದ ಕೆಟ್ಟ ಪರಿಣಾಮ ಬೀರುವುದೆಂದು ಡಾಕ್ಟರ್ ವಿ. ನಾಗರಾಜು ಅವರು ವಿವರಿಸುತ್ತಾ ನಿಂತರು.
ಕಾಲ ಸರಿದಿದ್ದೇ ಗೊತ್ತಾಗಲಿಲ್ಲ. ಅಲ್ಲಿದ್ದ ಮಕ್ಕಳೇನು… ಶಿಕ್ಷಕರೆಲ್ಲ… ನಾವೆಲ್ಲ ಕೇಳಿ ಬಲು ಸಂಭ್ರಮಿಸಿದೆವು…. ಅವರಿಗೆ ಶಾಲಾವತಿಯಿಂದ ಸನ್ಮಾನಿಸಿದರು.
ಅಲ್ಲಿಗೆ ಅಂದಿಗೆ ‘ಜ್ಞಾನ ವಿಜ್ಞಾನ’ ಮಾಲಿಕೆಯ ಉಪನ್ಯಾಸ ಮುಕ್ತಾಯಗೊಂಡಿತು.
ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಡಾ. ವಿ.ನಾಗರಾಜು ಅವರು ಮಕ್ಕಳತ್ತ ಕೈಬೀಸಿ ಖುಷಿಲಿ ಶಾಲೆಯಿಂದ ನಿರ್ಗಮಿಸಿದರು.
*****