ತಾಯಿ ಭಿಕ್ಷಾ ನೀಡವ್ವ
ಮಂದಿ ಭಂಗಾ ನೋಡವ್ವ.
ತೊಗಲು ಚೀಲದ ಬದುಕು ಕೆಟ್ಟೆ
ಎಷ್ಟು ಕೊಟ್ಟರು ತುಂಬದ ಹೊಟ್ಟೆ
ಅಲೆದು ಬೇಡಿ ಬಣ್ಣಗೆಟ್ಟೆ
ನಾಯಿಗಿಂತ ಗೋಳುಪಟ್ಟೆ
– ತಾಯಿ ಭಿಕ್ಷಾ ನೀಡವ್ವ.
ಇಲ್ಲೆನಬೇಡವ್ವ, ಮುಂದಕ್ಕೆ
ಹೋಗೆನಲೇಕವ್ವ
ಒಂದು ಮಾತು, ಒಂದು ಕಾಸು
ಎಂಜಲಿತ್ತು ಹರುಕು ಹಾಸು
ನಿಮ್ಮೀ ಬಳಗದಿ ಬಂದೆನಗಾಯ್ತು
ಬೆಳೆಯಲಿ ನಿಮ್ಮೀ ಸುಖಸಂಪತ್ತು
ಬಡವರ ಗೋಳಿನ ಬಾಳ ವಿಪತ್ತು
ಅಡಗಲಿ ತಾಯಿ ಉರ ತೆರಪಾಯ್ತು
– ತಾಯಿ ಭಿಕ್ಷಾ ನೀಡವ್ವ.
ಹೊಟ್ಟೆಯ ಪಾತ್ರೆ ಹಸಿವೇ ಬೆಂಕಿ
ಕಲ್ಲೂ ಬೇವುದು ಅಲ್ಲೇನಂಕಿ
ಪಾಪಿಯ ಗೋಳಿಗೆ ಮರುಗುವರಾರು
ಸಾಸಿರ ಶಾಪದಿ- ಮೈಗೂಡರಾರು
– ತಾಯಿ ಭಿಕ್ಷಾ ನೀಡವ್ವ.
*****