ಚೂರಾದ ಕನ್ನಡಿ ಜೋಡಿಸಿ
ಪ್ರತಿಬಿಂಬ ಕಾಣುವ ತವಕ
ಹರಡಿದ ತುಂಡು ಕನಸುಗಳ
ಹರಿದ ಚಿಂದಿಗಳ ಹೊಂದಿಸಿ
ಎಲೆ ಚಂಚಿ ಹೊಲಿಯುವಾಸೆ
ಬಿರಿದ ಹಾಳು ಗೋಡೆಗಳಲ್ಲಿ
ಹುಟ್ಟಿದ ಹುಲ್ಲು ಗರಿಕೆ, ಹುತ್ತಗಳು
ಬೆಳದಿಂಗಳ ಆ ಬಯಲಿನಲಿ
ಲಾಂದ್ರದ ಮಂದ್ರ ಬೆಳಕು
ಚಂದ್ರನಿಗೆ ನಾಚಿಕೆ ಮೂಡಿಸುವಾಸೆ.
ಮೌನದ ಪರದೆಯಲಿ ಏಕಾಂಗಿ
ಕಮಲದ ಮೇಲಣ ಜಲಬಿಂದು
ಪಾರದರ್ಶಕ ಸ್ಪಟಿಕದ ಬೆಳದಿಂಗಳು
ಕನಸು ಚೆಲ್ಲಿದ ನದಿಯ ಹರವು
ಶಬ್ದ ಮಡುತ್ತ ಹರಿಯುವಾಸೆ.
ಹೊಸೆದ ಕನಸುಗಳ ಪೋಣಿಸಿ
ಸೋರಿ ಹೋಗುವ ವಾಸ್ತವಗಳ
ಕತ್ತಲೆಗೆ ಬೆವರುವ ಶಬ್ದಗಳ
ಉಸುಕಿನೊಳಗಿಂದ ಒಸರುವ ನೀರು
ಜೀವಪೋಷಕವಾಗಿ ಹರಿಸುವಾಸೆ.
ಬೇಡವೆಂದರೂ ಕೂಗುತ್ತಿದ್ದ ಸೈರನ್ನು
ಆಗಸದಿಂದ ಸುರಿದ ಆಲಿಕಲ್ಲಿನ
ಹೆಪ್ಪುಗಟ್ಟಿದ್ದ ಕೆಂಪು ರಕ್ತವಿತ್ತು
ವಿನಾಶದ ಸೂಚನೆಯಿತ್ತು
ಮುಚ್ಚಿಟ್ಟ ಗುಟ್ಟು ಬಿಚ್ಚಿ ತೋರಿಸುವಾಸೆ.
ಪರದೆಯ ಹಿಂದಿನ ಅವಳ ಕಣ್ಣು
ಅಮೂರ್ತದ ನೆರಳಿನ ಭಾರ
ಸ್ಮಶಾನದಲ್ಲಿ ಇಟ್ಟ ಹೆಜ್ಜೆಗಳು
ಸುಟ್ಟ ಬಾಗಿಲಿನ ಚೌಕಟ್ಟುಗಳಾಚೆ
ಕರಕಲಾದ ಅವಳ ಕರಳುಗಳ
ತೆರೆದು ಲೋಕಕೆ ತೋರಿಸುವಾಸೆ.
ಮಣ್ಣಿನ ಕಣಕಣದಲ್ಲಿ ಪ್ರತಿರೂಪ
ಅತಂತ್ರದ ಅಹವಾಲುಗಳ ಅಂಗಳದಲ್ಲಿ
ಮರುಜೀವ ಪಡೆದು ನಳನಳಿಸಿದ
ಆಗಸದ ಚುಕ್ಕಿ ತಾರೆಗಳ ಹುಡುಕುತ್ತ
ಸ್ಥಬ್ದ ವೃತ್ತದಲ್ಲಿ ಶಬ್ದ ಮಡುತ್ತ
ನಾಳಿನ ಕನಸುಗಳ ಹೊಸೆಯುವಾಸೆ.
*****