ನಾದನಾಮಕ್ರಿಯಾ
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೧
ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೨
ಒಮ್ಮೆಯೇ ಮೂಸಿದರು
ಜುಮ್ಮು ಜುಮ್ಮೆನುವುದೆದೆ,
ಕಮ್ಮನೆಯ ಹೂಗಳಿವು ಕೊಳ್ಳಿರಮ್ಮಾ!
ನಮ್ಮ ತೊಟಿಗರಣ್ಣ
ಹೆಮ್ಮೆಯಲಿ ಬೆಳೆಯಿಸಿದ
ಸೊಮ್ಮು ಈ ಅರಳುಗಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ… ಹೂವ ಕೊಳ್ಳಿರಮ್ಮಾ !
೩
ಬರಿಯ ಹೊರಬಣ್ಣದಲಿ
ಮಿರುಗಿ ಕಣ್ಣನು ಸೆಳೆವ
ಬರಡುಗಂಪಿನವಲ್ಲ, ಕೊಳ್ಳಿರಮ್ಮಾ!
ಹುರುಳನೆಲ್ಲೆಡೆಯಲಿಯು
ಹರಡಿ ಮಂದಿಯ ಮನವ
ಬೆರಗುಗೊಳಿಸುವ ಅರಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೪
ಬೆಳಗುಜಾವದಿ ಮೂಡಿ-
ದೆಳ ನೇಸರನು ನೋಡಿ
ನಲಿದು ಬಾಯ್ದೆರೆದರಳ ಕೊಳ್ಳಿರಮ್ಮಾ!
ಎಳೆಯ ನೇಸರು ಹೊನ್ನ
ಸೆಳೆಗದಿರ ಸೋಂಕಿಸಲು
ತಳೆದಿಹವು ಹೊಸಚೆಲುವ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ !
೫
ಅಳಿಯ ಬಳಗದ ಕಣ್ಣು-
ಗಳನು ತಪ್ಪಿಸಿ ತಂದೆ
ಗಳಿಲನೇ ನೀವೀಗ ಕೊಳ್ಳಿರಮ್ಮಾ!
ಅಳಿಯ ಬಳಗದ ಬಾಯ್ಗೆ
ಸಿಲುಕಿದರೆ ಈ ಅರಳಿ-
ನೆಳ ಎಸಳು ಸಹ ಸಿಗದು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೬
ದೂರದೂರದಿ ನೋಡೆ
ತೋರದಿವುಗಳ ಸೊಬಗು
ಸೇರಿಸಲು ಮುಡಿಗಿವನು ಕೊಳ್ಳಿರಮ್ಮಾ!
ಸೇರಿಸಲು ಮುಡಿಗಿವನು
ಮುನಿದಿರೆಯು ನಿಮ್ಮವನು
ಸಾರಿಬರುವನು ಬಳಿಗೆ, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೭
ಸುರಲೋಕದರಳುಗಳು
ಸರಿಯೆನಿಸವಿವುಗಳಿಗೆ,
ಗರತಿಯರು ನೆರೆದೀಗ ಕೊಳ್ಳಿರಮ್ಮಾ!
ಗರತಿಯರೆ ನೀವು ಮುಡಿ-
ಗಿರಿಸಿದರೆ ಈ ಅರಳ
ಸುರರನ್ನು ಮೀರುವಿರಿ! ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೮
ಮಡದಿಯರು ಮುಡಿಮುಡಿದು
ಬೆಡಗ ಬಳೆಯಿಸಿರೆಂದು
ಪಡುವೆನಾ ತವಕವನು ಕೊಳ್ಳಿರಮ್ಮಾ!
ಮುಡಿಯದಿರೆ ಈ ಹೂವು
ಕೆಡುತೆ ಸುಮ್ಮಗೆ ಬಾಡಿ
ಹುಡಿಗೂಡಿ ಹೋಗುವುವು; ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೯
ಬೆಡಗಿನರಳಿವು ಬರಿದೆ
ಹುಡಿಗೂಡಿದರೆ ನಾನು
ತಡೆಯೆನೆದೆ ಮಿಡುಕನ್ನು ಕೊಳ್ಳಿರಮ್ಮಾ!
ಒಡೆಯ ತೋಟಿಗರಣ್ಣ
ಒಲವಿನಲಿ ಕೊಟ್ಟರಳ
ಕೆಡಿಸುವುದು ಸರಿಯಹುದೆ? ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೧೦
ಹುಡಿಯ ಕೂಡಿಸಿ ಹೂವ
ಕೆಡಿಸುವುದಕಿಂತಲೂ
ಕೊಡುವೆ ಹಾಗೆಯೆ ಮುಡಿದುಕೊಳ್ಳಿರಮ್ಮಾ!
ಮುಡಿಯೆ ಅರಳನು ನಿಮ್ಮ
ಬೆಡಗನ್ನು ನೋಡುತಲಿ
ಪಡೆವೆ ನಾ ನಲಿವನ್ನು ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!
೧೧
ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಮುಡಿಯಿರಮ್ಮಾ!
ಮುಡಿಯಿರಮ್ಮಾಽ ಬೆಡಗ ಪಡೆಯಿರಮ್ಮಾ!
*****