ಚಂದ್ರಶೈಲದುನ್ನತಿಯ ರಾಜವೀಥಿಯಲಿ ಅಬ್ಬ ಬಂಡೆ
ಆದಿ ಶಂಕರನ ಚಿಕ್ಕ ಗುಡಿಯೊಂದ ಕಟ್ಟಿದಂತೆ ಕಂಡೆ-
ಹೊತ್ತು ಮುಗಿದ ಮುಮ್ಮೂಕ ತುದಿಗೆ ಆನಂತ್ಯದಿದಿರುಕಡೆಗೆ
ಇಹದಭಂಡ ಕಥೆ ಮುಗಿಸಿದಂತೆ ಪಾಳಿನಲಿ ಒಂಟಿನಡಿಗೆ
ನಿರಾಕಾರ ಏಕಾಂತ ತಂತು ಸುತ್ತುತ್ತಲಿತ್ತು ನನ್ನ
ಹೆಸರೆ ಕೊಡಬರದ ಹೊಸದೆ ಏನೂ ಇತ್ತಲ್ಲಿ ಜಗದ್ಭಿನ್ನ
ಅಂಕುರಿಸದಿದ್ದ ಏಕೈಕ ನೈಜ ಜಗಮೂಡದಂತೆ ನಗ್ನ
ಅಚಲ ಅಚಲ ಬೇರಿಲ್ಲ ಬುಡಕೆ; ಶಿಖೆಯಿಲ್ಲ ಅಗ್ರ ಭಗ್ನ.
ಸದ್ರೂಪವೆಲ್ಲ ನೆಲಿಸಿಹುದೊ ಮೌನನಾಮವನೆ ಧರಿಸಿ ಮಾತ್ರ
ಹಾದಿಯಿರಲಿಲ್ಲ ಆದಿಗೂನು ಕೊನೆಯೂನು ಧ್ವನಿಗಪಾತ್ರ
ದೃಷ್ಟನಷ್ಟ ಕ್ಷಣದಲ್ಲಿ, ಶ್ರುತವು ಅಶ್ರುತದಿ ಲಯಿಸಬಹುದು.
ನಿರ್ವಚನದಾಚೆಯಾ ಶೃಂಗದಲ್ಲಿ ರಾರಾಜಿಸುತ್ತಲಿಹುದು.
ಅಕುಬ್ದವಾದ ಏಕಾಕಿ-ಶಾಂತಿ ಅವಿಚಲಿತ ಶೂನ್ಯವೆಲ್ಲಿ.
ಪ್ರಕೃತಿದೇವಿಯಾಂತರ್ಯಗೂಢದಾ ಮೂಕ ಶಿಖರದಲ್ಲಿ.
*****