ಅಂಬುವಿಲ್ಲದಿರ್‍ದಡೆ ಅಂಬುಜವನಾರು ಬಲ್ಲರು
ನೀರಿಲ್ಲದಿರ್‍ದಡೆ ಹಾಲನಾರು ಬಲ್ಲರು
ನಾನಿಲ್ಲದಿರ್‍ದಡೆ ನಿನ್ನನಾರು ಬಲ್ಲರು
ನಿನಗೆ ನಾ
ನನಗೆ ನೀ
ನಿನಗೂ ನನಗೂ ಬೇರೊಂದು ನಿಜವುಂಟೆ
ನಿಃಕಳಂಕ ಮಲ್ಲಿಕಾರ್‍ಜುನಾ
[ಅಂಬು-ನೀರು, ಅಂಬುಜ-ತಾವರೆ, ನೀರಿಲ್ಲದಿರ್‍ದಡೆ-ನೀರಿಲ್ಲದಿದ್ದರೆ]
ಇದು ಮೋಳಿಗೆ ಮಾರಯ್ಯನ ವಚನ. ಅರ್‍ಥ ಅನ್ನುವುದು ಇರುವುದು ದ್ವಂದ್ವಗಳಲ್ಲೇ. ವ್ಯತ್ಯಾಸಗಳೇ ಇರದಿದ್ದರೆ ಅರ್ಥವೂ ಇಲ್ಲ, ಬೇಕಾಗಿಲ್ಲ.
ಅಂಬು ಇರದಿದ್ದರೆ ಅಂಬುಜ ಯಾರಿಗೆ ಗೊತ್ತಾಗುತ್ತದೆ? ಹೇಗೆ ಇರುತ್ತದೆ? ನೀರು ಇರುವುದರಿಂದಲೇ ಹಾಲು ಅನ್ನುವ ಪದಾರ್‍ಥಕ್ಕೆ ಅರ್‍ಥ ಮತ್ತು ಬೆಲೆ. ನಾನೇ ಇರದಿದ್ದರೆ ನೀನು ಅನ್ನುವುದಕ್ಕೆ ಅರ್‍ಥವೆಲ್ಲಿ? ನಾನು ಇರದಿದ್ದರೆ ನಿನ್ನನ್ನು ಅರ್‍ಥಮಾಡಿಕೊಳ್ಳುವವರಾದರೂ ಯಾರು? ‘ನಾನು’ ಅನ್ನುವುದು ಇರುವುದರಿಂದಲೇ ‘ನೀನು’ ಅನ್ನುವುದಕ್ಕೆ ಅರ್‍ಥ. ನಿಜ. ಆದರೆ ಈ ಎಲ್ಲ ಇಮ್ಮೈ ದ್ವಂದ್ವಗಳಿಗೂ ಇರುವ ನಿಜ ಮಾತ್ರ ಒಂದೇ.
ನನಗೂ ನಿನಗೂ ಬೇರೊಂದು ನಿಜವುಂಟೆ ಎಂದು ದೇವರನ್ನು ಕೇಳುತ್ತಾನೆ. ನನ್ನ ಸತ್ಯ ಬೇರೆ, ನಿನ್ನ ಸತ್ಯ ಬೇರೆ ಅನ್ನುವುದು ನಿಜವಲ್ಲ. ಸತ್ಯ ಅನ್ನುವುದು ಒಂದೇ, ಎರಡೆಂಬಂತೆ ಕಾಣುವ ದ್ವಂದ್ವಗಳೆಲ್ಲಕ್ಕೂ ಸತ್ಯವೇ ಆಧಾರ. ಅದನ್ನು ಹೇಳುವುದಲ್ಲ ಕಾಣಲು ಸಾಧ್ಯವಾಗಬೇಕು.
*****