ಕವನ ಬರೆಯುವುದಷ್ಟು
ಸುಲಭದ ಕೆಲಸವಲ್ಲ
ತರಕಾರಿ ಅಕ್ಕಿ ಮಸಾಲೆ ಉಪ್ಪು
ನೀರು ಪಾತ್ರೆ ಪಡಗ ಎಲ್ಲಾ ಸಾಧನ
ಇದ್ದರೂ ಗೊತ್ತಿರಬೇಕಲ್ಲ
ಅಡುಗೆ ಮಾಡುವ ವಿಧಾನ
ಕವನ ಬರೆಯುವುದಷ್ಟು ಸುಲಭವಲ್ಲ
ಪದಗಳೆಲ್ಲವ ಒಟ್ಟುಗೂಡಿಸಿ
ತೂಗಿಸಿ ಅಳತೆ ಮಾಡಿ
ಜೋಡಿಸಿ ಕಳೆದು ಕೂಡಿ
ಗುಣಾಕಾರ ಭಾಗಾಕಾರ ಲೆಕ್ಕಾಚಾರ
ಮಾಡಿದರಷ್ಟೇ ಕವನ ಪ್ರಕಾರ.
ಕವನ ಬರೆಯುವುದಷ್ಟು ಸುಲಭವಲ್ಲ
ಹಾಲು ಬೆಳದಿಂಗಳ ತೊಟ್ಟಿಲಲ್ಲಿ
ಸಂಜೆಯ ತಂಬೆಲರಿನ ಜೋಗುಳ
ಮಿನುಗುವ ನಕ್ಷತ್ರಗಳ ಲಾಲಿ
ಭಾವನೆಗಳ ತಬ್ಬಿ ರಮಿಸಿ
ಲಾಲಿಸಿ ಲಲ್ಲೆಗರೆದು ಮುದ್ದು
ಮಾಡಿದಾಗಲೇ ಕವನದ ಹುಟ್ಟು.
ಕವನ ಬರೆಯುವುದಷ್ಟು ಸುಲಭವಲ್ಲ
ಚಿನ್ನದ ಅದಿರ ಕುಟ್ಟಿ ಕುಟ್ಟಿ
ಪುಡಿ ಮಾಡಿ ಕಾಯಿಸಿ ಕರಗಿಸಿ
ಪುಟಕ್ಕಿಟ್ಟಾಗಲೇ ಅಪರಂಜಿ
ಮಿಡಿದ ಭಾವನೆಗಳ ಕಟ್ಟಿ
ಉಡಿಸಿ ತೊಡಿಸಿ ಮುಡಿಸಿ
ಒನಪು ವೈಯ್ಯಾರ ಸಿಂಗಾರ
ಅಲಂಕಾರ ದೃಷ್ಟಿ
ಬೊಟ್ಟು ಇಟ್ಟಾಗಲೇ ಕವನದ ಸೃಷ್ಟಿ
*****