ನೊಣಗಳು

ನೊಣಗಳು

ಬಿಸಿಯಾದ ಕಾಫ಼ಿ ಅಥವ ಚಹಾದ ಬಟ್ಟಲಿಗೆ ನೊಣಗಳು ಬಿದ್ದು ಸಾಯುವುದು ಸ್ವಾಭಾವಿಕ. ಕಾಫ಼ಿ ಚಹಾಗಳ ಉಷ್ಣತಾಮಾನವೋ, ವಾಸನೆಯೋ ಈ ಕೀಟಗಳನ್ನು ಆಕರ್ಷಿಸುತ್ತವೆ. ಬಿಸಿಯಾದ ದ್ರಾವಣದಲ್ಲಿ ಅವು ಬದುಕಲಾರದ್ದರಿಂದ ಎರಡೆರಡು ಬಾರಿ ಎದ್ದು ಪಾರಾಗಲು ಯತ್ನಿಸಿ ಏಳಲಾರದೆ ಸತ್ತು ಹೋಗುತ್ತವೆ. ಇವು ಎಂಥವರಿಗೇ ಆದರೂ ಅಸಹ್ಯವನ್ನು ಉಂಟುಮಾಡುವ ಸಂಗತಿಯೆಂಬುದು ನಿಜ. ಆದರೆ ಹಾಗೆ ಹಾಳಾದ ಚಹಾಕ್ಕೆ ಯಾರು ಹೊಣೆ-ಹೋಟೆಲಿನ ಮಾಲಿಕನೊ ಅಥವಾ ಗಿರಾಕಿಯೋ. ಇಂಥ ಪ್ರಶ್ನೆ ಕೇವಲ ಚರ್ಚೆಗೋಸ್ಕರ ಎತ್ತಿಕೊಂಡಂತೆ ಕೆಲವರಿಗೆ ಕಾಣಿಸಬಹುದಾದರೂ ವಾಸ್ತವವಾಗಿ ಕೆಲವೊಮ್ಮೆ ಇದು ದೊಡ್ಡ ಜಗಳಕ್ಕೆ ಕಾರಣವಾಗುವುದುಂಟು. ಹೋಟೆಲನ್ನು ಶುಚಿಯಾಗಿಟ್ಟುಕೊಳ್ಳುವುದು, ಗಿರಾಕಿಗಳಿಗೆ ಶುದ್ಧವಾದ ಕಾಫ಼ಿ ತಿಂಡಿಗಳನ್ನೊದಗಿಸುವುದು ಮಾಲಿಕನ ಕೆಲಸವೇನೋ ನಿಜ. ಆದರೆ ಇಡಿಯ ಊರೇ ಕೊಳಕಾಗಿರುವಾಗ ಹೋಟೆಲಿನೊಳಗೆ ಮಾತ್ರ ಎಲ್ಲವೂ ಶುಚಿರುಚಿ ಯಾಗಿರಬೇಕೆಂದು ಬಯಸುವುದು ಹೇಗೆ?

ಈಗ್ಗೆ ಕೆಲವು ವರ್ಷಗಳ ಹಿಂದೆ ನಮ್ಮ ಪುಟ್ಟ ಗ್ರಾಮವನ್ನು ನೊಣಗಳು ಭಯಂಕರವಾಗಿ ಆಕ್ರಮಿಸಿಬಿಟ್ಟವು. ನೊಣಗಳೆಂದರೆ ನಿಜವಾದ ನೊಣಗಳೇ ಸರಿ – ಯೆಹೋವನು ಐಗುಪ್ತ ದೇಶಕ್ಕೆ ಮಂತ್ರಿಸಿ ಕಳಿಸಿದ ಹಾಗೆ ನಮ್ಮ ಗ್ರಾಮಕ್ಕೆ ಈ ಉಪದ್ರವ ಜೀವಿಗಳನ್ನು ಯಾರು ಕಳಿಸಿದರೋ! ನೊಣಗಳು ನಮ್ಮ ಪ್ರದೆಶಕ್ಕೆ ಹೊಸತಲ್ಲವಾದರೂ ಈ ಪ್ರಮಾಣದಲ್ಲಿ ಅವು ಹಿಂದೆಂದೂ ಕಾಣಿಸಿಕೊಂಡಿರಲಿಲ್ಲ. ಈಗ ಹಿಂಡು ಹಿಂಡಾಗಿ ಬಂದು ಕಿಟಿಕಿ ಬಾಗಿಲು ಬೆಳಕಿಂಡಿಗಳ ಮೂಲಕ ನಮ್ಮ ಮನೆ ಮಠಗಳನ್ನು ಪ್ರವೇಶಿಸಿ ತಾವೇ ಖಾಯಂ ನಿವಾಸಿಗಳಂತೆ ವರ್ತಿಸತೊಡಗಿದವು.

ಮನೆಮಂದಿಗೆ ಮಾತ್ರವಲ್ಲ. ನಾಯಿ ಬೆಕ್ಕು ದನಕರುಗಳನ್ನು ಬಿಡದೆ ಪೀಡಿಸಿ, ಒಂದೆಡೆ ಕೂತು ಉಣ್ಣುವುದಾಗಲಿ, ವಿಶ್ರಾಂತಿಗೆಂದು ಮೈ ಚಾಚುವುದಾಗಲಿ, ಶಾಲಾ ವಿದ್ಯಾರ್ಥಿಗಳು ಓದಿ ಬರೆದು ಮಾಡುವುದಾಗಲಿ ಅಸಾಧ್ಯವಾಯಿತು. ಈ ಕೀಟಗಳಾದರೊ ಹಗಲೆಲ್ಲ ಭೋಂಯ್ಯೆಂದು ಹಾರಾಡಿ, ತಿಂಡಿ ತಿನಿಸುಗಳಿಗೆ ಎರಗಿ, ಸಂಜೆಯಾಗುತ್ತಲೆ ಯಾರಿಗೂ ಕಾಣಿಸಿಕೊಳ್ಳದಂತೆ ಸೂರುಗಳೆಡೆಯಲ್ಲಿ ಮರೆಯಾಗಿ ಬಿಡುತ್ತಿದ್ದವು. ಮತ್ತೆ ಮನೆಯವರನ್ನು ನಸುಕಿನಲ್ಲಿ ಎಬ್ಬಿಸುವುದು ಇವೆ! ಅಂಗಡಿ ಮನೆಗಳಲ್ಲಿ ಮನುಷ್ಯರು ನೊಣಗಳ ಕುರಿತಾಗಿಯೇ ಮಾತಾಡತೊಡಗಿದರು. ಮನೆಯೊಳಗಿನ ಅಡುಗೆಯಲ್ಲೇ ನೊಣಗಳು ಬಿದ್ದಿರುತ್ತ ಹೋಟೆಲಿನ ಕಾಫ಼ಿಯಲ್ಲಿ ನೊಣವಿದೆಯೆಂದು ತಕರಾರೆಬ್ಬಿಸಲಿಕ್ಕೆ ಸಾಧ್ಯವೆ? ಮನುಷ್ಯರು ಮನುಷ್ಯರನ್ನು ಸಹಿಸುವಂತೆ ಈಗ ಈ ಜೀವಿಗಳನ್ನು ಸಹಿಸದೆ ಬೇರೆ ದಾರಿಯೆ ಇರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಇಷ್ಟೊಂದು ನೊಣಗಳು ಮುತ್ತಿಕೊಳ್ಳಲು ಕಾರಣವೇನು? ಯಾವುದಾದರೂ ದೈವ ದೇವರ ಶಾಪವೇ? ನಮ್ಮ ಪಾಪದ ಕೊಡಗಳು ತುಂಬಿ ತುಳುಕಲು ತೊಡಗಿದುವೆ? ಅಥವಾ ನೊಣಗಳಿಗೆ ಹಿತವಾದ ಪರಿಸರ ನಮ್ಮ ಗ್ರಾಮದಲ್ಲಿದ್ದು ಪಾಕಿಸ್ತಾನದ ಕಡೆಯಿಂದ ಇನ್ನೊಂದು ಕಡೆ ವಲಸೆ ಹೋಗುತ್ತ ಇವು ಇಲ್ಲೆ ತಂಗಿಬಿಟ್ಟವೆ? (ಕಾರಣ ಆ ದೇಶದಿಂದ ನಮ್ಮ ದೇಶಕ್ಕೆ ಕೆಲವು ಸಮಯದ ಹಿಂದೆ ಮಿಡಿತೆಗಳು ಧಾಳಿಯಿಟ್ಟ ಪ್ರಕರಣವನ್ನು ಕೆಲವರು ಪತ್ರಿಕೆಗಳಲ್ಲಿ ಓದಿದ್ದರು. ಆದರೆ ನೊಣಗಳು ಮಿಡಿತೆಗಳಷ್ಟು ಬಲವಾದ ರೆಕ್ಕೆಗಳಾಗಲಿ ಆಯುಸ್ಸಾಗಲಿ ಇಲ್ಲವೆಂಬ ವಿಷಯ ಅವರಿಗೆ ತಿಳಿದಿರಲಿಲ್ಲ!)

ಕೆಲವರ ಚಿಂತನೆ ಹೀಗೆ ಹರಿದರೆ, ಇನ್ನು ಕೆಲವರು ಹೆಚ್ಚು ವೈಜ್ಞಾನಿಕವಾಗಿ ಚಿಂತಿಸುತ್ತ ಈ ವರ್ಷದ ವಿಚಿತ್ರ ಹವಾಮಾನವೇ ಇದಕ್ಕೆಲ್ಲ ಕಾರಣ ಎನ್ನತೊಡಗಿದರು. ತೀರ ತಡವಾಗಿ ಸುರುವಾದ ಮುಂಗಾರುಮಳೆ ಬಿಟ್ಟು ಬಿಟ್ಟು ಬರತೊಡಗಿದುದರಿಂದ ಕೀಟೋತ್ಪತ್ತಿಗೆ ಅತ್ಯಂತ ಸಹಾಯಕವಾಗಿತ್ತು. ಅದೊಂದೇ ಅಲ್ಲ. ಯಥೇಷ್ಟವಾಗಿ ಬೆಳೆದ ಮಾವಿನಹಣ್ಣಿನ ಬೆಳೆ, ಈಚೆಗೆ ಎಲ್ಲೆಲ್ಲೂ ಕಾಣಿಸುವ ಕಬ್ಬಿನ ಹಾಲಿನ ವ್ಯಾಪಾರ, ತೆರೆದ ಗೊಬ್ಬರದ ಗುಂಡಿಗಳು, ಹಿತ್ತಿಲ ಕೊಚ್ಚೆ – ಎಲ್ಲವೂ ನೊಣಗಳಿಗೆ ಮಸಾಲೆಯಿದ್ದಂತೆ! ಅದರೆ ನಿಜಕ್ಕೂ ಮಾವಿನಹಣ್ಣುಗಳು ಅಷ್ಟು ಯಥೇಷ್ಟವಾಗಿ ಬೆಳೆದಿದ್ದವೆ ಎಂಬುದರೆ ಬಗ್ಗೆ ನನಗೆ ಸಂದೇಹವಿದೆ. ಏನಾದುರೊಂದು ಸಂಭವಿಸಿದರೆ ಮನುಷ್ಯನ ಮನಸ್ಸು ತನಗೆ ನಿಲುಕುವ ಕಾರಣಗಳನ್ನು ಕಲ್ಪಿಸುತ್ತದೆ. ಕಾರಣವಿರದಲ್ಲಿ ಇದೆಯೆಂದು ಸಾಧಿಸುತ್ತದೆ! ಅದೇನೇ ಇದ್ದರೂ ಆ ವರ್ಷ ರೋಗ ರುಜನಗಳು ಜಾಸ್ತಿ ಯಾಗಿದ್ದುವೆಂಬುದರಲ್ಲಿ ಸಂದೇಹವೇ ಇರಲಿಲ್ಲ. ಒಂದು ಮನೆಯಲ್ಲಿ ಒಬ್ಬನಾದರೂ ಕಾಯಿಲೆ ಬೀಳುತಲ್ಲೇ ಇದ್ದ. ಇದರಿಂದ ಪೇಟೆಯ ಡಾಕ್ಟರುಗಳಿಗೆ ಒಳ್ಳೆಯ ಸಂಪಾದನೆಯಾಗಿರಬೇಕು. ಹಿಂದಿನ ತಲೆಮಾರಿನವರು ಒಂದು ಕಾಲದಲ್ಲಿ ಇಡೀ ಊರಿಗೆ ಪ್ಲೇಗು ಬಂದು ಹೇಗೆ ಎಲ್ಲರೂ ಊರು ಬಿಟ್ಟು ಬೇರೆಡೆ ಇರಬೇಕಾಗಿ ಬಂತು ಎಂಬುದನ್ನು ನೆನೆಪಿಸಿಕೊಳ್ಳುತ್ತಿದ್ದರು. ಸದ್ಯ ಹಾಗಾಗದಿರಲಿ ಎಂಬುದು ಎಲ್ಲರ ಆಶಯವಾಗಿತ್ತು. ಇದಕ್ಕೋಸ್ಕರ ದೈವ ದೇವರ ಸೇವೆಗಳು ನಡೆದೇ ಇದ್ದವು. ಆದರೆ ಪರಿಸರ ನೈರ್ಮಲ್ಯವೊಂದೇ ಈ ಪಿಡುಗನ್ನು ನಿಯಂತ್ರಿಸುವ ಉಪಾಯವಂಬುದು ಕೆಲವರಿಗೆ ತಿಳಿದಿತ್ತು. ನೂರಕ್ಕೆ ಎಂಬತ್ತು ಅನಕ್ಷರಸ್ಥರೂ ಅದಕ್ಕೂ ಹೆಚ್ಚು ಬಡವರೂ ತುಂಬಿದ ಗ್ರಾಮದಲ್ಲಿ ಇದೇನೂ ಅಷ್ಟು ಸುಲಭವಾಗಿ ಕೈಗೊಳ್ಳಬಹುದಾದ ಕಾರ್ಯಕ್ರಮವಲ್ಲವಷ್ಟೆ. ಅದು ಸಾಧ್ಯವಾಗುವುದಾದರೆ ಸರಕಾರಕ್ಕೆ ಮಾತ್ರ. ಈ ನಿಟ್ಟಿನಲ್ಲಿ ತುಸು ಪ್ರಯತ್ನವನ್ನಾದರೂ ಮಾಡೋಣವೆಂದು ನಾವು ಒಂದಿಬ್ಬರು ಒಂದು ದಿನ ತಾಲೂಕು ಕಚೇರಿಗೆ ಹೋದೆವು.

ನಾವೆಂದರೆ ಏಳೆಯೂರು ಕೇಶವ, ನಡುಮನೆ ರಾಮಚಂದ್ರ ಮತ್ತು ನಾನು. ಎಳೆಯೂರು ಕೇಶವ ಆಗ ತಾನೆ ಗ್ರಾಮದ ಯುವ ಕಾಂಗ್ರೆಸ್ ನೇತಾರನೆಂದು ಪ್ರಸಿದ್ದಿಗೆ ಬರತೊಡಗಿದ್ದ. ಗ್ರಾಮಕ್ಕೋಸ್ಕರ ಏನಾದರೂ ಮಾಡಿ ತನ್ನ ಹೆಸರನ್ನು ಸ್ಥಾನವನ್ನೂ ಭದ್ರಗೊಳಿಸಬೇಕೆಂಬ ಮಹಾ ಇರಾದೆ ಅವನ ಮನಸ್ಸಿನಲ್ಲಿತ್ತು. ನಡುಮನೆ ರಾಮಚಂದ್ರ ಕವಿ. ಅವನ ಎರಡು ಮೂರು ಕವಿತೆಗಳು ಈಗಾಗಲೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಇನ್ನಷ್ಟು ಬರೆದು ಅಖಿಲ ಕರ್ನಾಟಕ ಖ್ಯಾತಿಯ ಕವಿಯಾಗಬೇಕೆಂದಿದ್ದ. ಅವನು ನೊಣಗಳ ಬಗ್ಗೆಯೆ ಒಂದು ಕವಿತೆ ಬರೆದು ನಮಗೆಲ್ಲ ಓದಿ ಹೇಳಿದ್ದ. ಅದರಲ್ಲಿ ನನಗೀಗ ನೆನಪಿರುವ ಸಾಲುಗಳೆಂದರೆ ಇವು.

ನೊಣ ನೊಣ!
ಎಷ್ಟೊಂದು ನೊಣ!
ಊರೆಲ್ಲ ಸುರಿಯಲು
ಭಣ ಭಣ!

ರಾಮಚಂದ್ರ ಮುಂದೆ ಅಷ್ಟೇನೂ ಪ್ರಸಿದ್ಧನಾಗದೆ ಉಳಿಯಬೇಕಾಯಿತು. ಅದು ಅವನ ದುರದೃಷ್ಟ, ಇರಲಿ. ಅಂದು ನಾವು ತಾಲೂಕು ಕಚೇರಿಗೆ ಹೋಗಿ ತಹಶೀಲ್ದಾರರನ್ನು ಕಂಡೆವು. ಅವರು ನಮಗೆ ಆರೋಗ್ಯ ಅಧಿಕಾರಿಯನ್ನು ಕಾಣಲು ಸೂಚಿಸಿದರು. ಆರೋಗ್ಯ ಅಧಿಕಾರಿಯ ಕಚೇರಿ ಪೇಟೆಯ ಇನ್ನೊಂದು ಬದಿಯಲ್ಲಿತ್ತು. ಅಲ್ಲಿಗೆ ಹೋಗುವ ಮೊದಲು ವಸಂತ ಭವನಕ್ಕೆ ಹೋಗಿ ಅಲ್ಲಿ ಸುಪ್ರಸಿದ್ಧ ವಾಗಿದ್ದ ಬಾಳೆಹಣ್ಣಿನ ಭಜಿ ಎರಡೆರಡು ಪ್ಲೇಟು ತಿಂದು ಕಾಫ಼ಿ ಕುಡಿದು ಹೊಟ್ಟೆ ಗಟ್ಟಿ ಮಾಡಿಕೊಂಡೆವು. ನಾವು ಹೆಲ್ತಾಫ಼ೀಸು ತಲುಪಿದಾಗ ಅಲ್ಲಿನ ಮುಖ್ಯಾಧಿಕಾರಿ ಟೂರಿಗೆ ಹೊರಡಲು ತಯಾರಾಗಿದ್ದರು. ಆದರೂ ನಮ್ಮ ಆಹವಾಲನ್ನು ಕೇಳುವ ತಾಳ್ಮೆ ತೋರಿದ್ದರಿಂದ ನಾವು ಎಲ್ಲ ವಿವರವನ್ನು ಹೇಳಿದೆವು. ಅಧಿಕಾರಿಯ ಹೆಸರು ವಿಜಯಕುಮಾರ್ ಎಂದಿದ್ದು ಯಾವುದೋ ದೂರದ ಊರಿನಿಂದ ಈ ಕಡೆಗೆ ವರ್ಗವಾಗಿ ಬಂದಿದ್ದರು. ನಮ್ಮ ಈ ಪ್ರದೇಶ ಅವರಿಗೆ ಒಗ್ಗು ವುದಿಲ್ಲವೆಂದೂ ಇಲ್ಲಿನ ವಿದ್ಯಮಾನಗಳಲ್ಲಿ ಅವರಿಗೆ ಸ್ವಲ್ಪವೂ ಆಸಕ್ತಿ ಯಿರಲಿಲ್ಲವೆಂದೂ ನಮಗೆ ಐದು ನಿಮಿಷಗಳ ಮಾತುಕತೆಯಲ್ಲಿ ಗೊತ್ತಾಗಿಬಿಟ್ಟಿತು. ಒಂದು ಅರ್ಜಿ ಬರೆದು ಕೊಡಿ ಎಂದು ಹೇಳಿ ಅವರು ಟೂರಿಗೆ ಹೋದರು. ಎಳೆಯೂರು ಕೇಶವನೆ ಕಾಗದ ಪೆನ್ನು ತಂದು ಒಂದು ಅರ್ಜಿ ತಯಾರಿಸಿದ. ಅದಕ್ಕೆ ಮೂವರೂ ಸಹಿ ಹಾಕಿ ಗುಮಾಸ್ತನಿಗೆ ಕೊಟ್ಟು ನಮಸ್ಕರಿಸಿ, ಬಂದ ಕೆಲಸವನ್ನು ನೆರವೇರಿಸಿದ ತೃಪ್ತಿ ಯಿಂದ ವಾಪಸಾದೆವು.

ಆರೋಗ್ಯ ಇಲಾಖಿಯವರು ಏನಾದರೂ ಕ್ರಮ ತೆಗೆದುಕೊಳ್ಳುತ್ತಾರೆಂದು ನಾವಾರೂ ನಿರೀಕ್ಷಿಸಿರಲಿಲ್ಲ. ಆದರೆ ಒಂದು ತಿಂಗಳಾಗುವಷ್ಟು ಹೊತ್ತಿಗೆ ಜೀಪೊಂದು ಬಂದು ಪಂಚಾಯತು ಕಟ್ಟಡದೆದುರು ನಿಂತಿತು. ಜೀಪಿನಿಂದ ಐದಾರು ಮಂದಿ ಧಡಧಡನೆ ಇಳಿದರು. ಅವರೆಲ್ಲ ಬೆನ್ನಿಗೆ ಒಂದೊಂದು ಪಂಪನ್ನು ಕಟ್ಟಕೊಂಡಿದ್ದು ಸರಕಾರಿ ಔಷಧಿ ಚಿಮುಕಿಸುವವರೆಂದು ನೋಡಿದ ತಕ್ಷಣ ಗೊತ್ತಾಗುತ್ತಿತ್ತು. ಅವರು ಮೊದಲು ಕೇಶವನನ್ನು ಹೋಗಿ ಕಂಡರು. ನಂತರ ಅವನನ್ನು ಜೊತೆಯಲ್ಲಿ ಕರೆದುಕೊಂಡು ಮನೆ ಮನೆಗೆ ಹೊಕ್ಕು ಔಷಧಿ ಚಿಮುಕಿಸಿದರು. ಬರೇ ಮನೆಗಳಿಗೆ ಮಾತ್ರವಲ್ಲ, ಹಿತ್ತಿಲ ಕೊಳಚಿ, ಅಂಗಡಿ ಬೀದಿಗಳು, ಕೆರೆ ಚರಂಡಿ ಎಲ್ಲಕ್ಕೂ ಔಷಧಿ ಪ್ರಯೋಗ ನಡೆಯಿತು. ಇದರಿಂದ ಉಪಯೋಗ ಪಡೆದವನೆಂದರೆ ಕೇಶವನೇ ಸರಿ. ಊರ ಜನರ ದೃಷ್ಟಿಯಲ್ಲಿ ಅವನ ಪ್ರತಿಷ್ಠೆ ಹೆಚ್ಚಾಯಿತು. ಅವನ ಪಕ್ಷಕ್ಕೂ ಸಾಕಷ್ಟು ಜನಪ್ರಿಯತೆ ಬಂತು. ಆದರೆ ನೊಣಗಳ ಸಂಖ್ಯೆಯೇನಾದರೂ ಕಡಿಮೆಯಾಯಿತೆ? ಆಯಿತು – ಒಂದೆರಡು ದಿನಗಳ ಮಟ್ಟಿಗೆ. ಔಷಧಿಯ ಕಟು ವಾಸನೆ ಹೊರಟು ಹೋಗುತ್ತಲೆ ಅವು ತಾವು ಅಡಗಿ ಕುಳಿತ ಜಾಗಗಳಿಂದ ಹೊರಬಂದು ಮತ್ತೆ ಮೊದಲಿನಂತೆ ಸ್ವೇಚ್ಛೆಯಿಂದ ವಿಹರಿಸತೊಡಗಿದವು. ಅಷ್ಟೇ ಅಲ್ಲ. ಔಷಧಿಗೆ ಪ್ರತಿ ಔಷಧಿಯನ್ನು ಉತ್ಪಾದಿಸಿಕೊಂದವುಗಳಂತೆ ಮೊದಲಿಗಿಂತಲೂ ರಾಜಾರೋಷವಾಗಿ ವರ್ತಿಸತೊಡಗಿದವು. ಹೀಗೆ ಇವುಗಳನ್ನೆದುರಿಸಲು ಯಾವ ಉಪಾಯವೂ ಇಲ್ಲವೇ ಎಂದು ಜನ ಕೈಚೆಲ್ಲಿ ಕುಳಿತಾಗಲೆ ಊರಲ್ಲೊಬ್ಬ ನೊಣ ಹಂತಕನು ಕಾಣಿಸಿಕೊಂಡದ್ದು. ಈತ ಊರಿಂದೂರಿಗೆ ತಿರುಗುವ ವ್ಯಾಪಾರಿಯಾಗಿದ್ದು, ನೊಣಗಳನ್ನು ಕೊಲ್ಲುವ ರಾಮಬಾಣ ತನ್ನ ಬಳಿಯಿದೆಯೆಂದು ಜಾಹೀರು ಮಾಡುತ್ತಿದ್ದ. ಇವನು ಮಾರುತ್ತಿದ್ದುದು ಗೋಲಿ ಕಾಯಿಯಂಥ ಕರಿ ಉಂಡೆಗಳನ್ನು. ಈ ಉಂಡೆಗಳನ್ನು ಎಲ್ಲಿ ಇಟ್ಟರೆ ಅಲ್ಲಿ ನೊಣಗಳು ಬಂದು ಮುತ್ತುತ್ತಿದ್ದುವು. ಆಗ ಅವುಗಳ ಮೇಲೆ ಬಟ್ಟೆಯೊಂದನ್ನು ಹಾಕಿ ಕೊಲ್ಲುವುದು ಸುಲಭವಾಗಿತ್ತು. ಈ ಉಂಡೆಗಳನ್ನವನು ರೂಪಾಯಿಗೆ ಒಂದರಂತೆ ಮಾರಾಟ ಮಾಡುತ್ತಿದ್ದ. ಜನರ ಕೇವಲ ಕುತೂಹಲದಿಂದಲೂ ನಿಜವಾದ ನಂಬಿಕೆಯಿಂದಲೂ ಅವನಿಂದ ಉಂಡೆಗಳನ್ನು ಖರೀದಿಸಿದರು. ಸಾಕಷ್ಟು ಹಣ ಸಂಪಾದಿಸಿದ ನಂತರ ಈತ ಇನ್ನೆರಡು ವಾರಗಳಲ್ಲಿ ಬರುತ್ತೇನೆಂದು ಹೇಳಿ ಹೊರಟು ಹೋದ. ಹಾಗೆ ಹೋದವನು ಮತ್ತೆಂದೂ ನಮ್ಮ ಊರ ಕಡೆ ಬರಲಿಲ್ಲ. ಅವನು ಮಾರುತ್ತಿದ್ದ ಉಂಡೆಗಳು ಇನ್ನೇನಾಗಿರದೆ ಕೆಟ್ಟು ಹಳಸಿದ ಬೆಲ್ಲದಿಂದ ತಯಾರಿಸಿದ್ದೆಂಬ ಸಂಗತಿ ಎಲ್ಲರಿಗೂ ಗೊತ್ತಾಗಿ ಬಿಟ್ಟುದೇ ಇದಕ್ಕೆ ಕಾರಣವಿರಬಹುದು.

ಈ ಕತೆಯನ್ನು ಇಲ್ಲಿಗೆ ನಿಲ್ಲಿಸುವುದು ಸಾಧ್ಯವಿದ್ದರೂ ಬಹು ಮುಖ್ಯವಾದ ವಿಷಯವೊಂದನ್ನು ಹೇಳದಿದ್ದರೆ ಇದು ಪೂರ್ತಿಯಾಗುವುದಿಲ್ಲ. ಒಮ್ಮಿಂದೊಮ್ಮೆಲೆ ನೊಣಗಳು ವೃದ್ಧಿಸಿದುದಕ್ಕೆ ಅನೇಕರು ಅವರವರಿಗೆ ತೋಚಿದ ಕಾರಣಗಳನ್ನು ಊಹಿಸಿಕೊಂಡಿದ್ದರೆಂದು ಈಗಾಗಲೆ ಹೇಳಿದೆಯಷ್ಠೆ. ಇಂಥ ಕಾರಣಗಳಲ್ಲಿ ಒಂದು ನಮ್ಮ ಗ್ರಾಮದ ಜೋಯಿಸಿರಾದ ಸುಬ್ರಾಯರಿಗೆ ಸಂಬಂಧಿಸಿದಂತಿತ್ತು. ಸುಬ್ರಾಯ ಜೋಯಿಸರು ಹೇಳಿದ್ದೆಲ್ಲ ಸರಿಯಾಗುತ್ತದೆ ಎಂಬುದಾಗಿ ಎಲ್ಲೆಡೆ ಪ್ರಸಿದ್ಧಿಯಾದ್ದರಿಂದ ಇವರನ್ನು ನೋಡಲು ಬರುವವರ ಸಂಖ್ಯೆ ಜಾಸ್ತಿಯಾಗಿತ್ತು. ತೀರ ಬಡವರಾಗಿ ಜೀವನ ಆರಂಭಿಸಿದ್ದ ಅವರು ಇದ್ದಕ್ಕಿದ್ದಂತೆ ಶ್ರೀಮಂತರಾಗಿಬಿಟ್ಟಿದ್ದರು. ಹೊಸ ಮನೆ ಕಟ್ಟಿಸಿದರು, ಜಮೀನು ಕೊಂಡರು, ಕೆಲಸಕ್ಕೆ ಆಳುಗಳನ್ನು ಇರಿಸಿದರು. ಪ್ರತಿ ಗುರುವಾರ ಅವರು ವಿಶೇಷ ಪೂಜೆ ಇಟ್ಟುಕೊಂಡಿದ್ದರು. ಅವರನ್ನು ಕಂಡು ಭವಿಷ್ಯ ನುಡಿಸಿಕೊಳ್ಳಲು ಬರುತ್ತಿರುವವರಲ್ಲಿ ಪರವೂರವರೇ ಹೆಚ್ಚಾಗಿದ್ದರು. ಹಲವು ಮಂದಿ ಮೋಟಾರುಗಳಲ್ಲಿ ಬರುತ್ತಿದ್ದರು. ಸುಬ್ರಾಯ ಜೋಯಿಸರು ಇಷ್ಟೊಂದು ಪ್ರಸಿದ್ಧರಾದುದು ಹೇಗೆಂಬುದು ನಮಗೆಲ್ಲ ಅಚ್ಚರಿಯ ಸಂಗತಿಯಾಗಿತ್ತು. ನಮ್ಮ ಗ್ರಾಮದಲ್ಲಿ ಹುಲಿಕೆರೆ ವೆಂಕಟಯ್ಯ ಎಂಬ ಒಬ್ಬ ಬುದ್ಧಿ ವಾದಿಯಿದ್ದರು; ಅವರಿಗೆ ಜೋಯಿಸರ ಈ ಸುಲಭ ಪ್ರಸಿದ್ಧಿ ಸರಿಬರಲಿಲ್ಲ. ವೆಂಕಟಯ್ಯ ನವರದು ಎಲ್ಲವನ್ನೂ ಪ್ರಶ್ನಿಸುವ ಪ್ರವೃತ್ತಿ. ದೈವದೇವರು, ಮೂಢನಂಬಿಕೆ, ಭೂತ ಪ್ರೇತ ಮಂತ್ರ ಎಲ್ಲವನ್ನೂ ಅವರು ಛೇಡಿಸುತ್ತಿದ್ದರು. ವೆಂಕಟಯ್ಯ ಚಿಕ್ಕಂದಿನಲ್ಲಿ ಊರು ಬಿಟ್ಟು ಹತ್ತಾರು ಕಡೆ ಸುತ್ತಿ ಏನೇನೋ ಕೆಲಸ ಮಾಡಿಕೊಂಡಿದ್ದು ಕೊನೆಗೆ ಸ್ವಗ್ರಾಮಕ್ಕೆ ಮರಳಿ ಇದ್ದ ತುಸು ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಂಥ ವ್ಯಕ್ತಿ ಜನಪ್ರಿಯನಾಗುವುದು ಸಾಧ್ಯವಿಲ್ಲವೆಂದು ಬೇರೆ ಹೇಳಬೇಕಿಲ್ಲವಷ್ಟೆ.

ವೆಂಕಟಯ್ಯ ಒಂದು ಗುರುವಾರದ ದಿನ ಜೋಯಿಸರು ತಮ್ಮ ವೃತ್ತಿಯಲ್ಲಿ ನಿರತರಾಗಿದ್ದಾಗ ಅವರ ಮನೆ ಚಾವಡಿಯನ್ನೇರಿ ಬಲಗೈ ಹಿಡಿಯನ್ನು ಮುಂದಕ್ಕೆ ಚಾಚಿ ಹೀಗಂದರು: “ಸ್ವಾಮೀ ಜೋಯಿಸರೆ, ನೀವು ಭೂತ ಭವಿಷ್ಯತ್ತು ವರ್ತಮಾನಗಳನ್ನು ಬಲ್ಲವರಂತೆ. ಹಾಗೆಂದು ಎಲ್ಲರೂ ಹೇಳುತ್ತಾರೆ. ಇದೇ ನಂಬಿಕೆ ಯಿಂದ ಎಷ್ಟೆಷ್ಟೋ ದೂರದಿಂದ ಜನರು ನಿಮ್ಮನ್ನು ಕಾಣಲು ಬರುತ್ತಾರೆ. ಅವರು ಕೊಟ್ಟ ಹಣದಿಂದ ನೀವು ಕುಬೇರರಾಗಿ ಮೆರೆಯುತ್ತಿದ್ದೀರಿ. ಅದಕ್ಕೆ ನಿಮ್ಮ ಈ ಹೊಸ ಮನೆಯೇ ಸಾಕ್ಷಿ. ನೀವು ಅಷ್ಟು ದಿವ್ಯ ಜ್ಞಾನಿಗಳೂ ವಿದ್ವಾಂಸರೂ ಆಗಿದ್ದರೆ ನನ್ನ ಕೈಯೊಳಗೇನಿದೆಯೆಂದು ಈ ನೆರೆದ ಸಭೆಯ ಮುಂದೆ ಹೇಳೋಣಾಗಲಿ!” ಅಂದರು. ಚಾವಡಿಯಲ್ಲಿ ಸುಮಾರು ಇಪ್ಪತ್ತು ಮೂವತ್ತು ಮಂದಿ ನೆರೆದಿದ್ದರು. ಅವರೆಲ್ಲ ಅವಾಕ್ಕಾಗಿ ಒಮ್ಮೆ ಜೋಯಿಸರ ಮುಖವನ್ನೂ ಒಮ್ಮೆ ವೆಂಕಟಯ್ಯ ನವರ ಮುಖವನ್ನೂ ನೋಡತೊಡಗಿದರು. ಜೋಯಿಸರು ಸ್ನಾನ ಪೂಜೆ ಮುಗಿಸಿ ರೇಶ್ಮೆಯ ಮಡಿಯುಟ್ಟು ಗಂಧ ಚಂದನ ಲೇಪಿಸಿಕೊಂಡು ಪದ್ಮಾಸನ ಹಾಕಿ ಕುಳಿತಿದ್ದರೆ ವೆಂಕಟಯ್ಯನ ಅವತಾರವೇ ಬೇರೆಯಿತ್ತು. ವೆಂಕಟಯ್ಯ ಸಣಕಲು ವ್ಯಕ್ತಿ, ಮುಖದ ಮೇಲೆ ಕುರುಚಲು ಗಡ್ಡ, ಹೆದರಿಕೆ ಹುಟ್ಟಿಸುವಂಥ ಪೊದೆ ಹುಬ್ಬುಗಳು, ಮಾಸಲು ಬಣ್ಣದ ಬಟ್ಟೆ ಬರೆ, ಮೊಂಡು ಹಟದ ವ್ಯಕ್ತಿಯೆಂಬುದು ನೋಡಿದ ತಕ್ಷಣ ಗೊತ್ತಾಗುವುದು. ಸುಬ್ರಾಯ ಜೋಯಿಸರು ಒಂದರೆಕ್ಷಣ ಧ್ಯಾನ ಮಾಡುವವರಂತೆ ಕಣ್ಣು ಮುಚ್ಚಿ ಕುಳಿತರು. ನಂತರ ವೆಂಕಟಯ್ಯ ನನ್ನು ನೋಡಿ, ” ಅದು ನೊಣವಂಟನಲ್ಲದೆ ಇನ್ನ್ನೇನು?” ಎಂದರು. ವೆಂಕಟಯ್ಯ ತುಸುವೂ ವಿಚಲಿತನಾಗದೆ, “ನೀವು ಗೆದ್ದುದು ಅರ್ಧ ಮಾತ್ರ. ಈ ನೊಣವಂಟ ಬದುಕಿದೆಯೋ ಸತ್ತಿದೆಯೋ ಹೇಳೋಣಾಗಲಿ. ಅದೇ ಅಂತಿಮ ಪಂಥ!” ಎಂದು ಎಲ್ಲರತ್ತ ನೋಡಿದರು. ಜನರ ಕುತೂಹಲ, ಕಾತರ, ಆತಂಕಗಳು ಹೆಚ್ಚಿದವು. ಜೋಯಿಸರು ಹೇಳಿದ್ದು ಒಂದು ಸತ್ಯವಾಯಿತಲ್ಲ! ಇನ್ನು ಈ ಎರಡೆನೆಯದು ಸತ್ಯವಾಗುತ್ತದೋ ಸುಳ್ಳಾಗುತ್ತದೋ? ಜೋಯಿಸರು ಮಾತ್ರ ದಿಙ್ಮೂಢರಾದವರಂತೆ ಕುಳಿತಿದ್ದರೇ ವಿನಾ ಏನೊಂದೂ ಹೇಳಲಿಲ್ಲ. ಅವರು ಫ಼ಕ್ಕನೆ ಮಾತು ಮರೆತವರಂತೆ ಸುಮ್ಮನಾಗಿ ಬಿಟ್ಟಿದ್ದರು. ವೆಂಕಟಯ್ಯ ಗಹಗಹಿಸಿ ನಗುತ್ತ, “ಏಳಿ! ಏಳಿ! ಎದ್ದು ಹೊರಟು ಹೋಗಿ! ನಿಮ್ಮ ಮೂಢನಂಬಿಕೆಗಿಷ್ಟು ಮಣ್ಣು ಹಾಕಿತು! ” ಎನ್ನುತ್ತ ಅಲ್ಲಿ ನೆರೆದವರು ನೋಡುವಂತೆ ಹಿಡಿಯೊಳಗಿನ ನೊಣವನ್ನು ಹಾರಲು ಬಿಟ್ಟು ಮೆಟ್ಟೆಲಿಳಿದು ಹೊರಟು ಹೋದರು. ಈ ಕತೆ ಎಷ್ಟು ನಿಜವೋ ಎಷ್ಟು ಸುಳ್ಳೋ. ಆದರೆ ಊರಲ್ಲೆಲ್ಲ ನೊಣಗಳು ಹರಡುವುದಕ್ಕೆ ವೆಂಕಟಯ್ಯನ ಈ ಉದ್ಧಟತನವೇ ಕಾರಣವೆಂದು ಕೆಲವರು ಆಡಿಕೊಳ್ಳುತ್ತಿದ್ದರು. ಒಂದಂತೂ ನಿಜ. ಸುಬ್ರಾಯ ಜೋಯಿಸರು ಅಂದಿನಿಂದ ಕವಡೆ ಚೀಲ ಮುಟ್ಟುವುದಿಲ್ಲ. ಅವರ ಮಕ್ಕಳೂ ಈ ಕಸುಬು ಮಾಡುತ್ತಿಲ್ಲ. ಇಷ್ಟು ಹೇಳಿ ಆತನನ್ನ ನೋಡಿ ಕೊಂಚ ಅನುಮಾನದಿಂದ ನಕ್ಕ – ನಿಮಗಿದರಲ್ಲಿ ನಂಬಿಕೆಯಿರಲಾರದು, ಆದರೂ ನಡೆದುದು ಹೀಗೆ ಎಂಬ ರೀತಿಯಲ್ಲಿ, ನನಗಾದರೆ ನನ್ನ ನಂಬಿಕೆಗಿಂತ ಆತನ ಗ್ರಾಮಸ್ಥರ ನಂಬಿಕೆ ಅಪನಂಬಿಕೆಗಳು ಮುಖ್ಯವಾಗಿದ್ದುವು. ಇನ್ನಷ್ಟು ತಿಳಿಯುವ ಸಹಜ ಕುತೂಹಲದಿಂದ ಕೇಳಿದೆ. “ನಂತರ ನೊಣಗಳೇನಾದುವು?”

“ಅವು ಕ್ರಮೇಣ ಸತ್ತು ಹೋದುವು. ಅದಕ್ಕೆ ಪ್ರತ್ಯೇಕವಾದ ಕಾರಣಗಳೇನೂ ಇರಲಿಲ್ಲ. ಬಹುಶಃ ಅವುಗಳ ಸಂಖ್ಯೆಗೆ ಸಾಕಾಗುವಷ್ಟು ಆಹಾರ ನಮ್ಮ ಗ್ರಾಮದಲ್ಲಿ ದೊರಕಿರಲಾರದು. ಅಥವಾ ಇರುವೆ ಮುಂತಾದ ಇತರ ಜೀವಿಗಳು ಅವುಗಳನ್ನುಕೊಂದು ಹಾಕಿರಬಹುದು. ಮನುಷ್ಯರ ಸಂಖ್ಯೆ ಕೂಡ ಮಿತಿಮೀರಿ ಬೆಳಿದರೆ ಹೀಗೆಯೇ ಆಗಬಹುದಲ್ಲವೆ ಎಂಬ ಕೆಟ್ಟ ಗುಮಾನಿ ನನಗೆ ಒಮ್ಮೊಮ್ಮೆ ಬರುವುದುಂಟು!”

“ಜೋಯಿಸರು ಮತ್ತೆಂದೂ ಜ್ಯೋತಿಷ್ಯಕ್ಕೆ ಇಳಿಯಲಿಲ್ಲವೇ?”

“ಇಲ್ಲ. ಆದರೂ ವೆಂಕಟಯ್ಯನಂಥವರು ಮಾತ್ರ, ಆತನಿಗೆ ಇನ್ನೇಕೆ ಈ ಕಸುಬು, ಆಗಲೆ ಎರಡು ತಲೆಮಾರಿಗೆ ಸಾಕಾಗುವಷ್ಟು ಸಂಪಾದನೆ ಮಾಡಿದ್ದಾನಲ್ಲ ಎಂದು ಆಡದೆ ಇರಲಿಲ್ಲ.”

“ಒಂದು ವಿಷಯ ನನಗೆ ಅರ್ಥವಾಗುತ್ತಿಲ್ಲ. ನಿಮ್ಮ ಜೋಯಿಸರು ಬುದ್ಧಿವಂತರೇ ಇರಬೇಕು. ಯಾಕೆಂದರೆ ವೆಂಕಟಯ್ಯ ಹಿಡಿದುಕೊಂಡಿದ್ದುದು ನೊಣವೆಂಬುದು ಅವರಿಗೆ ಗೊತ್ತಾಯಿತು. ಆದರೆ ಅದು ಸತ್ತಿದೆಯೋ ಬದುಕಿದೆಯೋ ಎಂಬುದನ್ನು ಅವರೇಕೆ ಹೇಳುವುದು ಸಾಧ್ಯವಾಗಲಿಲ್ಲ?”

ಆತ ನಕ್ಕು ಹೇಳಿದ:

“ಇಷ್ಟೆ: ವೆಂಕಟಯ್ಯನ ಕೈಯೊಳಗಿದ್ದುದು ಜೀವಂತ ನೊಣ. ಅದು ಬದುಕಿದೆಯೆಂದು ಜೋಯಿಸರು ನುಡಿದಿದ್ದರೆ ವೆಂಕಟಯ್ಯ ಅದನ್ನು ಅಲ್ಲಿಗೆ ಅಮುಕಿ ಅವರ ಮಾತನ್ನು ಸುಳ್ಳು ಮಾಡುತ್ತಿದ್ದರು. ಸತ್ತಿದೆಯೆಂದು ನುಡಿದಿದ್ದರೆ ಅದೂ ಸುಳ್ಳಾಗುತ್ತಿತ್ತು. ನೊಣದ ಅದೃಷ್ಟ ವೆಂಕಟಯ್ಯನ ಕೈಯಲ್ಲಿರುತ್ತ ಆದರ ಭವಿಷ್ಯವನ್ನು ಜೋಯಿಸರು ಹೇಳುವುದು ಹೇಗೆ?”

“ಎಂದರೆ ಜ್ಯೋತಿಷ್ಯ ಸುಳ್ಳು ಎನ್ನುವಿರ?”

“ಹಾಗಲ್ಲ. ಈ ಲೋಕದ ಕೆಲವೊಂದು ವಿದ್ಯಮಾನಗಳನ್ನಾದರೂ ಮನುಷ್ಯನು ನಿಯಂತ್ರಿಸುವುದು ಸಾಧ್ಯ. ಇದರ ಬಗ್ಗೆ ಕಣೆ ಹೇಳುವುದರಲ್ಲಿ ಅರ್ಥವಿಲ್ಲ. ಸುಬ್ರಾಯ ಜೋಯಿಸರಿಗೆ ಈ ಸತ್ಯ ಅರಿವಾಗಿರಬೇಕು. ಅದ್ದರಿಂದಲೆ ನಂತರ ಅವರು ಜ್ಯೋತಿಷ್ಯಕ್ಕೆ ಕೊಡ್ರಲಿಲ್ಲ.”

“ಹಾಗಾದರೆ ಈಗ ನಿಮ್ಮ ಊರಲ್ಲಿ ಜ್ಯೋತಿಷಿಗಳು ಯಾರೂ ಇಲ್ಲವೆ?”

“ಇಲ್ಲದೇನು, ಬೇಕಷ್ಟು ಮಂದಿ ಇದ್ದಾರೆ. ಅವರಲ್ಲೊಬ್ಬರು ಈಗಾಗಲೆ ಸಾಕಷ್ಟು ಪ್ರಸಿದ್ಧಿಯನ್ನೂ ಗಳಿಸಿರುವರು. ಆದರೂ ವೆಂಕಟಯ್ಯನವರು ಸುಬ್ರಾಯ ಜೋಯಿಸರನ್ನು ಪ್ರಶ್ನಿಸಿದಂತೆ ಇವರನ್ನು ಪ್ರಶ್ನಿಸುವ ಧೈರ್ಯ ಮಾತ್ರ ಯಾರಿಗೂ ಇಲ್ಲ. ಬಹುಶಃ ಹಿಂದಿನ ಬಾರಿ ಬಂದ ನೊಣಗಳ ಪೀಡೆ ಜನರ ನೆನಪಿನಿಂದ ಇನ್ನೂ ಅಳಿದಿಲ್ಲವೆಂದು ತೋರುತ್ತದೆ!”

“ವೆಂಕಟಯ್ಯನವರೇನಾದರು?”

“ಬಾವಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಣ್ಣು ಜರಿದು ಸತ್ತು ಹೋದರು. ಅದಕ್ಕೂ ಅವರ ಸ್ವಭಾವದೋಷವೇ ಕಾರಣವೆಂದು ಊರವರ ಅಭಿಪ್ರಾಯ.”
*****
ಕೀಲಿಕರಣ: ಬುಸಿರಾಜು ಲಕ್ಷ್ಮೀದೇವಿ ದೇಶಾಯಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವರ
Next post ಯಾವ ಹೆಣ್ಣು ಬರುವಳೊ ಇಲ್ಲವೊ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…