ಸುಂದರ ಶ್ರೀಮಂತ
ಶಿಲ್ಪಕಲೆ ಬಲೆಯೊಳು ನಿಂತ
ಶ್ರೀ ಚನ್ನಕೇಶವಾ….|
ನಿತ್ಯ ನೂತನ ನಿತ್ಯ ಚೇತನ
ನಿತ್ಯ ವೈಭವವೀ ದೈವಸನ್ನಿದಾನ|
ಗಂಟೆ ಜಾಗಟೆಗಳಿಲ್ಲದ
ಅಪರೂಪದ ದೇವಸ್ಥಾನ||
ಕಲೆಯೋ ಇದು
ಕವಿಯ ಕಲ್ಪನೆಯೋ ಇದು
ಕಲ್ಲಲರಳಿದ ತರತರದ ಹೂಮಾಲೆಯೋ|
ಯುಗ ಯುಗಾಂತರದ
ಕಥಾ ಹಂದರದ ಅರಮನೆಯೋ|
ಮಹಾಕಾವ್ಯ
ರಾಮಾಯಣ, ಮಹಾಭಾರತದ
ಕಾವ್ಯವಾಚನವೋ|
ಹರಿಯ ಹತ್ತು ಅವತಾರವ
ಚಿತ್ತಾರ ಮೂಡಿರುವ ಬ್ರಹ್ಮಾಂಡವೊ ಇದು
ಸನಾತನಧರ್ಮದ ಕೈಗನ್ನಡಿಯೋ||
ಬಳ್ಳಿಯಂದದಿ ಹಬ್ಬಿನಿಂತಿಹ
ಅಪ್ಸರೆಯರ ಅಂದಚೆಂದವೋ|
ದೇವಲೋಕವೋ ಇಂದ್ರಲೋಕವೋ
ರಂಬೆ ಮೇನಕೆಯರ ಭಂಗಿಯೋ|
ಶಿಲ್ಪ ಸ್ತಂಭದಲಿ ಸರಿಗಮ ಹೊಮ್ಮುವ
ಸಂಗೀತ ಸಾಕ್ಷತ್ಕಾರವೋ|
ಇದು ಅಕ್ಷರಸಹ ಆ ಬ್ರಹ್ಮಸುತ
ಶ್ರೀವಿಶ್ವಕರ್ಮನ ಅವಿಷ್ಕಾರವೋ||
*****