ಖುಶಿ ಬಸಿದು ಹಿಂಡಿ ಎಸೆದು
ಕರುಳ ಕತ್ತಲಲ್ಲಿ ಬತ್ತಿ ಹೊಸೆದು
ಕಣ್ಣಹನಿ ಹತ್ತಿಸಿದ ಬೆಳಕಲ್ಲಿ
ಹುಡುಕುತ್ತಿದ್ದೇನೆ ಸುಖವೇ
ಎಲ್ಲಿ ಹೋದೆ ನೀನೆಲ್ಲಿ ಹೋದೆ?
ಹಜ್ಜೆ ಮುಂದಿಟ್ಟಂತೆಲ್ಲ ಗುರುತು ಹಿಂದಾಗಿ
ಹಿನ್ನೋಟ ಮುನ್ನೋಟ ಬೆರೆತು ಒಂದಾಗಿ
ಬತ್ತಿ ಬೆಳಕಲ್ಲಿ ಕತ್ತಿ ಮಸೆಯುವ
ನೆನಪು ನೆರಳನ್ನು ನುಂಗಿ ನೊಣೆಯುತ್ತ
ಎಲ್ಲಿ ಹೋದೆ ಸುಖವೇ ನೀನಲ್ಲಿ ಹೋದೆ?
ಬೋಳು ಮರದ ಗೋಳು ಒತ್ತರಿಸಿ
ಬಾಳ ಹರಿತಕ್ಕೆ ಸೂಕ್ತ ಉತ್ತರಿಸಿ
ಜೀವಗಾಳಿಯ ಹಿಡಿದು ಒಳಸೇರಿಸುತ್ತ
ಧೂಳು ತುಂಬಿದ ನೆಲ ಸಾರಿಸುತ್ತ
ನಗಬೇಕಾದ ಸುಖವೇ
ಎಲ್ಲಿ ಹೋದೆ ನೀನೆಲ್ಲಿ ಹೋದೆ?
*****