ಹೆಜ್ಜೆ-೧
ಅವನ ದೃಢ ವಿಶಾಲ
ಪಾದದ ಮೇಲೆ
ಪುಟ್ಟಾಣಿ ಹುಳು
ಅಂಗುಲಂಗುಲ ಏರಿ
ಪುಟ್ಟ ಪಾದವನೂರಿ
ಅತ್ತಿಂದಿತ್ತ ಜೀಕುತ್ತಾ ಜೋಕಾಲೆ.
ಅವನ ಪಾದದ ಮೇಲೆ
ಅದರ ಪದತಳ.
ಒಂದಿಂಚೋ ಎರಡಿಂಚೋ ಮೂರೋ
ತಗುಲದೇ ಬಿಟ್ಟೂ ಅಂಟುವ
ಆ ಪುಟಾಣಿ ಪಾದ
ಭೂಮಿಗಪ್ಪಿದ ಅವನ ಪಾದಕ್ಕೆ
ಖೋ ಕೊಟ್ಟೆಬ್ಬಿಸಿ
ಆತು ಹಿಡಿದ
ಚುಲ್ಟಾಣಿ ಹುಳುವಿನ ಪಾದ
ಹೆಜ್ಜೆಯೂರಲು ಉಳಿದ
ಕೊನೆಯ ಜಾಗ!
ಹೆಜ್ಜೆ-೨
ಅವನ ದೃಢ ವಿಶಾಲ
ಪಾದದ ಮೇಲೆ
ಚಿಕ್ಕಾಣಿ ಚಿಕ್ಕ ಕೀಟ
ತನ್ನ ಅಂಗೈ ಇಟ್ಟು
ಒತ್ತುತ್ತಾ ಒತ್ತುತ್ತಾ
ಹೆಬ್ಬೆರಳು ಅದರ ಪಕ್ಕದ್ದು
ನಡುಕಿನದು, ಉಂಗುರದ್ದು, ಕಿರಿಯದು
ನೆಕ್ಕುತ್ತಾ ನೇವರಿಸುತ್ತಾ
ಆಟವೋ ಹುಡುಗಾಟವೋ….
ಹೆಜ್ಜೆ-೩
ಅವನ ದೃಢ ವಿಶಾಲ
ಪಾದದ ಮೇಲೆ
ಬೊಟ್ಟಿನಗಲದ ಕ್ರಿಮಿಯೊಂದು ತಲೆಯೂರಿ
ತನ್ನ ತಲೆಗೂದಲಲೇ ಗುಡಿಸಿ ಒರೆಸಿ
ತಲೆಕೆಳಗೆ ಕಾಲು ಮೇಲೆತ್ತಿ ಶಿರ್ಷಾಸನ
ಪಾದದ ಮೇಲಿಂದ
ಬೆರಳ ತುದಿವರೆಗೆ
ಜೊಯ್ಯನೆ ಜಾರೋಬಂಡಿ
ಮತ್ತೆ ಮೊದಲಿಂದ
ಪಾದಕ್ಕೆ ತಲೆಯೂರಿ
ಉಲ್ಟಾಪಲ್ಟಾ ಸರ್ಕಸ್
ಆಟಕ್ಕೆ ಉಳಿದ ಏಕೈಕ ಮೈದಾನ!
ಹೆಜ್ಜೆ-೪
ಅವನ ದೃಢ ವಿಶಾಲ
ಪಾದದ ಮೇಲೆ
ಬೆನ್ನುತಿಕ್ಕಿ ಹಗುರಾಗುವ
ಈ ಕ್ಷುದ್ರಜಂತು
ಅಂಗಾತ ಮಲಗಿ ಶವಾಸನ.
ಕ್ಷಣಕ್ಕೇ ತಿರುವು ಮುರುವಾಗಿ
ಹೊಟ್ಟೆ ಮೇಲೆ ದೇಕುತ್ತಾ
ಬೆರಳಿಂದ ಪಾದಬುಡಕ್ಕೆ
ಪಾದ ಮೂಲದಿಂದ
ಬೆರಳ ತುತ್ತತುದಿಗೆ ಉರುಳಾಟ
ಕೊಬ್ಬಿದ ದೇಹ ಸವೆತಕ್ಕೆ ಒದ್ದಾಟ!
ಹೆಜ್ಜೆ-೫
ಕೊಟ್ಟಕೊನೆಯ ವಿಹಾರಧಾಮ!
*****