ಅಮಾವಾಸ್ಯೆಯ ಮರುದಿನ ಸಂಜೆಯಷ್ಟು ಹೊತ್ತಿಗೆ ಆಕಾಶದಲ್ಲಿ ಚಂದ್ರ ದರ್ಶನವಾಯಿತು. ಗಲ್ಲಿಯಲ್ಲಿ ಸಂಭ್ರಮ. ಸಾರಾಬೂ ಬೀದಿಗೆ ಬಂದು ತನ್ನ ನಾಲ್ಕು ಮಕ್ಕಳಿಗೂ ಚಂದ್ರನನ್ನು ತೋರಿಸಿದಳು. “ನಾಳೆ ರೋಜಾ ಚಾಲು” ಎಂದಳು. ಅವಳ ಮೂರು ಗಂಡು ಮಕ್ಕಳು “ನಾವೂ ನಾಳೆಗೆ ರೋಜಾ ಇರ್ತೀವಿ” ಎಂದರು.
ಮಾತಿನಲ್ಲಿ ಚುರುಕಾಗಿದ್ದ ಎಂಟು ವರ್ಷದ ನಫೀಸಾ “ನಾನೂ ರೋಜಾ ಮಾಡ್ತೀನಿ ಅಮ್ಮಾ” ಎಂದಳು.
“ನಿನಗೆ ಆಗುದಿಲ್ಲ ಬಿಡು” ಎಂದ ಅವಳ ಅಣ್ಣ.
“ನಾನು ರೋಜಾ ಮಾಡ್ತೀನಿ” ನಫೀಸಾ ಹಟದ ಧೋರಣೆಯಲ್ಲಿ ಹೇಳಿದಳು.
“ಬೇಟಿ ರೋಜಾ ಅಂದ್ರ ಬಾಯಲ್ಲಿ ಹನಿ ನೀರೂ ಹಾಕಬಾರ್‍ದು. ಹಾಗಾದರೆ ರೋಜಾ ಕಬುಲು ಆಗುವುದು. ನೀನಿನ್ನೂ ಚಿಕ್ಕವಳು, ನಿನಗೆ ತ್ರಾಸಾಗುವುದು” ಸಾರಾಬೂ ಮಗಳನ್ನು ರಮಿಸಿದಳು.
“ನನ್ಗೇನೂ ಆಗುದಿಲ್ಲ ನಾನು ರೋಜಾ ಮಾಡ್ತೀನಿ” ಉತ್ಸಾಹ ತೋರಿದಳು ನಫೀಸಾ.
“ಒಂದು ಕಡ್ಡಿ ಕೂಡಾ ಬಾಯಲ್ಲಿ ಹಾಕಬಾರ್‍ದು. ಅದೆಲ್ಲ ನಿನ್ನಿಂದ ಆಗುದಿಲ್ಲ. ಇನ್ನಷ್ಟು ದೊಡ್ಡವಳಾದ ಮೇಲೆ ರೋಜಾ ಹಿಡಿಯುವಂತೆ ಬೇಟಿ” ತಂದೆ ಹುಸೇನಲಿ ಹೇಳಿದ.
“ನಾನು ರೋಜಾಮಾಡ್ತೀನಿ” ನಫೀಸಾ ಹಟ ಬಿಡಲಿಲ್ಲ.
“ಇನ್ ಷಾ ಅಲ್ಲಾ!” ಎಂದು ಸುಮ್ಮನಾದರು ಸಾರಾಬೂ-ಹುಸೇನಲಿ.
ಮಸೀದಿಯ ಮೀನಾರಿನಿಂದ ಸೈರಿಗೆ ಕರೆ ಕೇಳಿಸಿತು. ಮಕ್ಕಳು ಉತ್ಸಾಹದಿಂದಲೇ ಎದ್ದರು. ಮನೆಯಲ್ಲಿ ಇದ್ದದ್ದು ಮೂರು ರೊಟ್ಟಿ ಮಾತ್ರ. ಮಕ್ಕಳು ಹಂಚಿಕೊಂಡು ತಿಂದು ನಿಯತ್ತು ಹೇಳಿ ರೋಜಾ ಹಿಡಿದರು. ಸಾರಾಬೂ ಕರಿ ಚಹ ಕುಡಿದಳು. ಹುಸೇನಲಿ ಹಮಾಲಿ ಮಾಡಬೇಕು ಅವನು ರೋಜಾ ಹಿಡಿಯಲಿಲ್ಲ.
ಹೊತ್ತೇರ ತೊಡಗಿದ್ದಂತೆ ಸಾರಾಬೂ ಚಿಂತೆಗೊಳಗಾದಳು. ಮಗಳ ರೋಜಾ ಪೂರ್ತಿಯಾಗುವುದೋ ಇಲ್ಲವೋ ಎಂಬ ಅನುಮಾನ ಕಾಡಿತು. “ಹೇ ಅಲ್ಲಾಹುವೆ! ಮಗು ಉಪವಾಸ ಅರ್ಧಕ್ಕೆ ನಿಲ್ಲಿಸಿದರೆ ತಪ್ಪು ಮನ್ನಿಸು” ಎಂದು ಹತ್ತಾರು ಸಲ ಪ್ರಾರ್ಥಿಸಿದಳು.
ನಫೀಸಾ ಮಾತ್ರ ಲವಲವಿಕೆಯಿಂದಲೇ ಇದ್ದಳು. ಶಾಲೆಗೂ ಹೋಗಿ ಬಂದಳು. ಒಂದು ಹನಿ ನೀರೂ ಎನ್ನಲಿಲ್ಲ. ಮಧ್ಯಾಹ್ನದ ಇಳಿ ಹೊತ್ತಿಗೆ ಆಟದಲ್ಲಿ ಮಗ್ನಳಾದಳು.
ಸೂರ್ಯ ಮುಳುಗಿದ. ಅಂದಿನ ರೋಜಾದ ವ್ರತ ಮುಗಿಯಿತು.
“ಬೇಟಿ ನಿನಗೆ ಹಸಿವು ಅನಿಸಲಿಲ್ಲವೆ?” ಸಾರಾಬೂ ಕೇಳಿದಳು.
“ಇಲ್ಲಾ ಅಮ್ಮಾ”
“ಸ್ವಲ್ಪೂ ತ್ರಾಸು ಅನಿಸಿಲ್ಲ” ಕೆದಕಿ ಕೇಳಿದ ಹಿರಿಯಣ್ಣ.
“ರೋಜಾ ಅಂದ್ರ ಉಪವಾಸ. ಅದು ನಮ್ಗ ರೂಢಿ ಐತಲ್ಲ ಭಯ್ಯಾ” ಎಂದು ಗಳಿಬಿಳಿ ಮಾತಾಡಿ ಒಣಚುರುಮುರಿಯನ್ನು ಬಾಯಿ ತುಂಬಿಕೊಂಡಳು ನಫೀಸಾ. ಸಾರಬೂ ಕಣ್ಣಲ್ಲಿ ಹನಿಯೊಡೆದಿತ್ತು.
*****