ಯಾರಿಗೆ ಬೇಕು ಕವಿತಾ? ಬ್ರೆಡ್ ತಾ ಬೆಣ್ಣಿ ತಾ

ಯಾರಿಗೆ ಬೇಕು ಕವಿತಾ? ಬ್ರೆಡ್ ತಾ ಬೆಣ್ಣಿ ತಾ

‘ಯಾರಿಗೆ ಬೇಕು ಕವಿತಾ, ಬ್ರೆಡ್ ತಾ ಬೆಣ್ಣಿ ತಾ’ ಎಂಬ ಬೇಂದ್ರೆಯವರ ಕವಿತೆಯೊಂದಿದೆ; ಕವಿತೆಯನ್ನೇ ತಮಾಷೆ ಮಾಡುವ ಕವಿತೆ. ಇದು ಬೇಂದ್ರೆಯವರು ಕವಿತಾ ಜತೆ ಹೊಸೆಯುವ ಪ್ರಾಸದ ದೃಷ್ಟಿಯಿಂದ ಸೊಗಸಾಗಿದೆ ಮಾತ್ರವಲ್ಲ, ಕವಿತೆಯ ಜತೆ ಬ್ರೆಡ್ ಮತ್ತು ಬೆಣ್ಣಿಯನ್ನು ತಂದು ನಿಲ್ಲಿಸಿದ್ದರಿಂದಲೂ ವಿಶೇಷವಾಗಿದೆ. ಯಾಕೆಂದರೆ ಇಂಥ ಪ್ರಾಸದಷ್ಪೇ ಈ ತರದ ‘ಸಹವಾಸ’ವೂ ಅನಿರೀಕ್ಷಿತವಾದುದು. ಆದರೂ ಎರಡೂ ಸಹಜವೆನ್ನುವ ರೀತಿಯಲ್ಲಿ ಇಲ್ಲಿ ಬಂದು ಸೇರಿಕೊಂಡಿವೆ. ಅಥವಾ ಹಾಗೆ ಅನಿಸುವಂತೆ ಮಾಡುವುದು ಕವಿತೆಯ ಒಂದು ವಿಶಿಷ್ಟ ಗುಣ. ಆದರೆ ಇಂಥ ಅನಿಸುವಿಕೆಯಲ್ಲೇ ಅವುಗಳ ವಿಘಟನೆಯತ್ತಲೂ ಕವಿತೆ ನಮ್ಮ ಗಮನ ಸೆಳೆಯುತ್ತದೆ: ಕವಿತಾದ ತಾ ಮತ್ತು ಬ್ರೆಡ್ ಮತ್ತು ಬೆಣ್ಣಿಯ ಜತೆಗಿನ ತಾ ಶಬ್ಬದಗುಣದಿಂದ ಒಂದೇ ಆದರೂ ಅರ್ಥದಲ್ಲಿ ಬೇರೆಯೇ! ಅದೇ ರೀತಿ ಕವಿತೆ ಹಾಗೂ ಬ್ರೆಡ್ ಮತ್ತು ಬೆಣ್ಣೆ ಸಮಾನಾಂತರವಾಗಿ ಬಂದಿದ್ದರೂ ಈ ಎರಡೂ ಘಟಕಗಳೂ ಪರಸ್ಪರ ವಿರುದ್ಧ ಆಯ್ಕೆಗಳಾಗಿ ನಮ್ಮ ಮುಂದಿವೆ; ಕವಿತೆ ಒಂದೆಡೆ, ಬ್ರೆಡ್ ಮತ್ತು ಬೆಣ್ಣಿ ಇನ್ನೊಂದೆಡೆ. ಕವಿತೆ ಬೇಡ, ಬ್ರೆಡ್ ಮತ್ತು ಬೆಣ್ಣಿ ಬೇಕು. ಕವಿತೆಯಿಂದ ಏನು ಉಪಯೋಗ, ಅದರಿಂದ ಹೊಟ್ಟೆ ಹೊರೆಯುವುದಿಲ್ಲ ಎಂಬ ಆಂತರ್ಯವೂ ಇಲ್ಲಿ ಮಾರ್ಮಿಕವಾಗಿ ಅಡಕವಾಗಿದೆ. ಎಂದರೆ ಕವಿತೆ ಬೇಕಾದರೆ ಬ್ರೆಡ್ ಮತ್ತು ಬೆಣ್ಣೆಯನ್ನು ಬಿಟ್ಟುಕೊಡಲು ಮನುಷ್ಯ ತಯಾರಾಗಿರಬೇಕು! (ಬ್ರೆಡ್ ಮತ್ತು ಬೆಣ್ಣೆ ಆಧುನಿಕ ಮನುಷ್ಯನ ಉಪಾಹಾರವಾದ್ದರಿಂದ ಬೇಂದ್ರೆ ಇಲ್ಲಿ ಆಧುನಿಕತೆಯತ್ತಲೂ ಒಂದು ಕಲ್ಲೆಸೆದಂತೆ ಅನಿಸಿದರೆ ಆಶ್ಚರ್ಯವಿಲ್ಲ.)

ಇಡೀ ಸಾಹಿತ್ಯ ಕ್ಷೇತ್ರದಲ್ಲಿ ಬಹುಶಃ ಕವಿತೆಯಷ್ಟು ಅರ್ಥಶಾಸ್ತ್ರದ ಸವಾಲನ್ನು ಎದುರಿಸಬೇಕಾಗಿ ಬಂದಿರುವ ಇನ್ನೊಂದು ಪ್ರಕಾರವಿಲ್ಲ. ಪುಸ್ತಕದಂಗಡಿಯಲ್ಲಿ ಕವನ ಸಂಕಲನವೊಂದಿದ್ದರೆ ಅದನ್ನು ತಿರುವಿ ಹಾಕುತ್ತೇವೆ. ಬೆಲೆಯೆಷ್ಟೆಂದು ನೋಡುತ್ತೇವೆ. ಪುಸ್ತಕವನ್ನು ವಾಪಸು ಅಲ್ಲೇ ಬಿಟ್ಟುಬಿಡುತ್ತೇವೆ. ಪುಸ್ತಕದ ಬೆಲೆ ಒಳ್ಳೆಯದೊಂದು ಉಪಾಹಾರ ಸೇವನೆಗೆ ಆಗುವಷ್ಪೇ ಇದ್ದಿರಬಹುದು. ವಾಸ್ತವದಲ್ಲಿ ಅದೇನೂ ಹೆಚ್ಚಲ್ಲ. ಆದರೂ ಕವಿತೆಯಿಂದ ಏನು ಉಪಯೋಗ ಎಂದುಕೊಳ್ಳುತ್ತೇವೆ. ನಿಜ, ಕವಿತೆಯಿಂದ ಏನೂ ಉಪಯೋಗವಿಲ್ಲ. ಆದರೂ ಕವಿತೆ ಎಂದುಕೊಂಡಿರುತ್ತದೆ: ತಾನು ಜನಜೀವನದ ಅತ್ಯುನ್ನತ ಆಶಯಗಳ ಪ್ರತೀಕ ಎಂದು! ಹೀಗೆ ಅಂದುಕೊಂಡು ಅದು ಪುಸ್ತಕದಂಗಡಿಯ ಅಟ್ಟಳಿಕೆಯಲ್ಲಿ ಕೂತುಕೊಂಡಿರುತ್ತದೆ – ಅದರ ಕಾಗದಗಳೂ ಹಳತಾಗಿ ಒಂದು ದಿನ ಮಾಲೀಕ ಅದನ್ನು ರದ್ಬಿಗೆ ಹಾಕುವ ತನಕ. ಇಂಥ ಅನುಭವವುಳ್ಳ ಮಾಲೀಕ ನಂತರ ಕವನ ಸಂಕಲನಗಳನ್ನು ಮಾರಲು ಇರಿಸಿಕೊಳ್ಳುವುದೇ ಇಲ್ಲ. ಆರ್ಥಿಕವಾಗಿ ಲಾಭದಾಯಕವಲ್ಲದ ಪುಸ್ತಕಗಳಿಗೋಸ್ಕರ ಆತ ಯಾಕೆ ಜಾಗ ಒದಗಿಸಬೇಕು? ಹೈದರಾಬಾದಿನಲ್ಲಿ ವರ್ಷಕ್ಕೆ ಒಂದು ಬಾರಿ ಬೃಹತ್ತಾದ ಪುಸ್ತಕ ಮೇಳ ನಡೆಯುತ್ತದೆ. ಸುಮಾರು ಹತ್ತು ದಿವಸ ನಡೆಯುವ ಈ ಮಾರಾಟ ಮೇಳದಲ್ಲಿ ಭಾರತದ ವಿವಿಧ ಪ್ರಕಾಶನ ಸಂಸ್ಥೆಗಳು ಮತ್ತು ಪುಸ್ತಕದಂಗಡಿಗಳು ಭಾಗವಹಿಸುತ್ತವೆ.

ಎರಡು ವರ್ಷ ನಾನು ಕೇವಲ ಕುತೂಹಲಕ್ಕೆಂದು ಪ್ರತಿಯೊಂದು ಮಳಗೆಯಲ್ಲೂ ಯಾವುದಾದರೂ ಕಾವ್ಯವೋ ಕವನ ಸಂಕಲನವೋ ಇದೆಯೋ ಎಂದು ವಿಚಾರಿಸಿದ್ದೇನೆ. ಒಂದೇ ಒಂದು ಮಳಿಗೆಯಲ್ಲೂ ನನಗೆ ಸಿಕ್ಕಿಲ್ಲ! ಭಾರತದ ಮುಖ್ಯ ಪಟ್ಟಣಗಳಾದ ತಿರುವನಂತಪುರ, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿಗಳಲ್ಲೂ ಪರಿಸ್ಥಿತಿ ಇದೇ.

ಆದರೆ ಇಂಗ್ಲೆಂಡ್, ಅಮೆರಿಕಾಗಳಲ್ಲಿ ಹೀಗಿಲ್ಲ. ಅಲ್ಲಿಯೂ ಕವನ ಸಂಕಲನಗಳನ್ನು ಕೊಳ್ಳುವವರ ಸಂಖ್ಯೆ ಇತರ ಪುಸ್ತಕಗಳನ್ನು ಕೊಳ್ಳುವವರಿಗಿಂತ ಕಡಿಮೆಯಿದ್ದರೂ ಕವಿತಾ ಪ್ರಿಯರು ಸಾಕಷ್ಟು ಮಂದಿ ಇದ್ದಾರೆ; ಕವಿತೆಗಳಿಗೆ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಇರುವುದಕ್ಕಿಂತ ಹೆಚ್ಚನ ಮಹತ್ವ ಇದೆ. ಒಮ್ಮೆ ನಾನು ಕೇಂಬ್ರಿಜ್‌ನಲ್ಲಿ ಒಬ್ಬರು ಮಿತ್ರರ ಜತೆ ಸುತ್ತಾಡುತ್ತಿದ್ದೆ. ಅವರು ನನ್ನನ್ನು ಒಂದು ಪುಸ್ತಕದಂಗಡಿಗೆ ಕೊಂಡೊಯ್ದರು. ಇದು ಕಲಾಪ್ರೇಮಿ ದಂಪತಿ ನಡೆಸುತ್ತಿದ್ದ ಒಂದು ಚಿಕ್ಕ ಅಂಗಡಿ. ಹೊರಗಿಂದ ನೋಡುವುದಕ್ಕೆ ಅಷ್ಟೇನೂ ಆಕರ್ಷಕವಾಗಿರಲಿಲ್ಲ. ಆದರೆ ಒಳಗೆ ಮಾತ್ರ ಒಳ್ಳೊಳ್ಳೆಯ ಪುಸ್ತಕಗಳು ಮಾರಾಟಕ್ಕಿದ್ದುವು. ನಾನಿಲ್ಲಿಂದ ಸೀಮಸ್ ಹೀನಿಯ ಎರಡು ಕವನ ಸಂಕಲನಗಳನ್ನು ಕೊಂಡುಕೊಂಡೆ. ಎರಡೂ ಹೀನಿಯ ಆರಂಭದ ಅವಧಿಯ ಪುಸ್ತಕಗಳು. ಅವುಗಳ ಮುಖಬೆಲೆಗಿಂತ ಜಾಸ್ತಿ ಹಣ ನಾನು ತೆರಬೇಕಾಯಿತು. ಕಾರಣ ಇಷ್ಟೆ: ಪುಸ್ತಕ ಹಳತಾದಷ್ಟೂ ಮೊದಲ ಆವೃತ್ತಿಗೆ ಈ ದೇಶಗಳಲ್ಲಿ ಬೆಲೆ ಹೆಚ್ಚು! ಯಾಕೆಂದರೆ ಆಗ ಅದಕ್ಕೆ ಚಾರಿತ್ರಿಕ ಮಹತ್ವ ಬರುತ್ತದೆ. ಇದು ಈ ದೇಶದವರ ಪುಸ್ತಕ ಪ್ರೀತಿಗೆ ಒಂದು ಉದಾಹರಣೆ.

ಅಮೆರಿಕದಲ್ಲಿ ‘ದ್ವಿತೀಯ’ (ಸೆಕೆಂಡ್ ಹ್ಯಾಂಡ್) ಪುಸ್ತಕದಂಗಡಿಗಳನ್ನು ಅಲ್ಲಲ್ಲಿ ಕಾಣಬಹುದು. ಓದಿ ಅಗತ್ಯವಿಲ್ಲದ ಪುಸ್ತಕಗಳನ್ನು ಜನ ರದ್ದಿಗೆ ಹಾಕದೆ ಇಂಥ ಅಂಗಡಿಗಳಿಗೆ ಮಾರುತ್ತಾರೆ. ಇವು ಹೊಸ ಪುಸ್ತಕದಂಗಡಿಗಳಷ್ಟೇ ನಾಜೂಕಾಗಿರುತ್ತವೆ. ಇಲ್ಲಿಯೂ ಕವನ ಸಂಕಲನಗಳು, ಕಾವ್ಯಗಳು ದೊರಕುತ್ತವೆ. ಆದರೆ ಪುಸ್ತಕಗಳು ಬಿಸಾಕುವ ಬೆಲೆಗೆ ದೊರಕುತ್ತವೆ ಎಂದು ಯಾರಾದರೂ ಅಂದುಕೊಂಡರೆ ತಪ್ಪಾಗುತ್ತದೆ. ಪ್ರಸಿದ್ಧರ ಕೃತಿಗಳಿಗೆ ಸಾಕಷ್ಟು ಬೆಲೆ ಈ ದ್ವಿತೀಯ ಪುಸ್ತಕದಂಗಡಿಗಳಲ್ಲೂ ತೆರಬೇಕಾಗುತ್ತದೆ. ಇದರರ್ಥ ಇಷ್ಟು ಬೆಲೆ ತೆತ್ತು ಪುಸ್ತಕ ಕೊಳ್ಳುವ ಮಂದಿ ಈ ದೇಶಗಳಲ್ಲಿ ಇದ್ದಾರೆ ಎಂದು. ಯುನಿವರ್ಸಿಟಿ ಶಹರಗಳಲ್ಲಂತೂ ಇಂಥ ಪುಸ್ತಕದಂಗಡಿಗಳು ಸಾಕಷ್ಟು ಪ್ರಮಾಣದಲ್ಲಿವೆ. ನಮ್ಮ ವಿಶ್ವವಿದ್ಯಾಲಯಗಳ ಸುತ್ತ ಮುತ್ತ ಪುಸ್ತಕದಂಗಡಿಗಳು ಈ ಪ್ರಮಾಣದಲ್ಲಿ ಬಹುಶಃ ಇಲ್ಲ. ಇನ್ನು ದ್ವಿತೀಯ ಪುಸ್ತಕದಂಗಡಿಗಳ ಸಂಸ್ಕೃತಿ ನಮ್ಮಲ್ಲಿ ಕಡಿಮೆ; ಇದ್ದರೆ ಅದು ರಜಾದಿನಗಳಲ್ಲಿ ಬೀದಿ ಬದಿಗೆ ಸೀಮಿತ.

ಈಗ ಅಂತರ್ಜಾಲದ ಅನುಕೂಲತೆಯಿರುವುದರಿಂದ ಅಮೆಜಾನ್, ಈಬೆ ಮುಂತಾದ ಆಕಾಶದಂಗಡಿಗಳಿಂದಲೂ ನಾವು ಪುಸ್ತಕಗಳನ್ನು ತರಿಸಿಕೊಳ್ಳಬಹುದು. ಅಮೇರಿಕದಲ್ಲಿದ್ದಾಗ ನಾನು ಅಮೆಜಾನ್ ಮೂಲಕ ಕೆಲವು ಪುಸ್ತಕಗಳನ್ನು ಖರೀದಿಸಿದ್ದೇನೆ. ಇದಕ್ಕೆ ಬ್ಯಾಂಕ್‌ನ ಬೆಂಬಲ ಬೇಕಾಗುತ್ತದೆ. ಪುಸ್ತಕಗಳ ನಮೂದಿತ ಬೆಲೆಯಲ್ಲದೆ ಅಂಚೆ ಖರ್ಚನ್ನೂ ಕೊಡಬೇಕಾಗುತ್ತದೆ. ಆದರೆ ಎಲ್ಲಿಗೂ ಹೋಗದೆ ಮನೆಯಲ್ಲಿ ಕುಳಿತೇ ಬೇಕಾದ ಪುಸ್ತಕಗಳನ್ನು ಖರೀದಿಸಿಕೊಳ್ಳಬಹುದು. ಒಂದೆರಡು ವಾರಗಳಲ್ಲಿ ಪುಸ್ತಕಗಳು ನಿಮ್ಮ ವಿಳಾಸ ತಲಪುತ್ತವೆ. ಭಾರತಕ್ಕೂ ಅಮೆಜಾನ್‌ನ ಈ ಅನುಕೂಲತೆ ಲಗಾವಾಗುತ್ತದೋ ಎಂದು ನನಗೆ ಗೊತ್ತಿಲ್ಲ.

ಇದೆಲ್ಲ ಇಂಗ್ಲಿಷ್ ಪುಸ್ತಕಗಳ ವಿಷಯವಾಯಿತು. ಕನ್ನಡದಲ್ಲಿ ನಮಗೊಂದು ಪುಸ್ತಕ ಬೇಕೆಂದರೆ ಏನು ಮಾಡಬೇಕು? ಈಚೆಗೆ ಸಂಶೋಧಕರೊಬ್ಬರು ನನಗೊಂದು ಈಮೇಲ್ ಕಳಿಸಿ, ಡಿವಿಜಿಯವರ ಇಂತಿಂಥ ಕೃತಿಗಳು ಬೇಕಿದ್ದುವು, ಗಂಥಾಲಯಗಳಲ್ಲೂ ಪುಸ್ತಕದಂಗಡಿಗಳಲ್ಲೂ ವಿಚಾರಿಸಿದೆ. ಸಿಗಲಿಲ್ಲ, ಇವು ಎಲ್ಲಿ ದೊರಕುತ್ತವೆ ಎಂದು ಕೇಳಿದ್ದರು. ನಾನು ಕನ್ನಡದಲ್ಲಿ ಬರೆಯುವುದರಿಂದ ಇಂಥ ಮಾಹಿತಿಗಳು ನನ್ನಲ್ಲಿವೆ ಎಂದು ಅವರು ತಿಳಿದುಕೊಂಡು ಕೇಳಿದ್ದಿರಬಹುದು. ಆದರೆ ಕನ್ನಡದ ಪರಿಸರದಲ್ಲೇ ಇರದ ನನಗೆ ಇಂಥ ವಿವರಗಳೆಲ್ಲಿ ಲಭ್ಯ? ನನ್ನ ಪರಿಸ್ಥಿತಿಯ ಬಗ್ಗೆ ಏನೂ ಗೊತ್ತಿಲ್ಲದವರು, ವಿಷಯವೊಂದನ್ನು ನೀಡಿ ಈ ಬಗ್ಗೆ ಜರೂರಾಗಿ ಒಂದು ಲೇಖನ ಬರೆದುಕೊಡಿ ಎಂದು ನನ್ನನ್ನು ಕೇಳುವುದಿದೆ. ಆಕರ ಗ್ರಂಥಗಳಿರಲಿ, ಮೂಲ ಕೃತಿಯೇ ದೊರಕುವುದು ದೂರದಲ್ಲಿರುವ ನನಗೆ ಅಸಾಧ್ಯವಾಗಿರುತ್ತ, ನಾನು ಇಂಥ ಆಮಂತ್ರಣಗಳನ್ನು ಹೇಗೆ ಸ್ವೀಕರಿಸಲಿ? ಅಂತೂ ಸಂಶೋಧಕರಿಗೆ ನಾನು ಬೆಂಗಳೂರಿನ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ, ಸೆಲೆಕ್ಟ್ ಬುಕ್ ಶಾಪಿನ ಮೂರ್ತಿಯವರಲ್ಲಿ, ಪುಸ್ತಕ ಮನೆಯ ಹರಿಹರಪ್ರಿಯರಲ್ಲಿ ಅಥವಾ ಕನ್ನಡದ ಸಂಚಾರಿ ವಿಶ್ವಕೋಶವಾಗಿರುವ ಎಸ್. ದಿವಾಕರರಲ್ಲಿ ವಿಚಾರಿಸುವಂತೆ ಹೇಳಿದೆ.

ಪುಸ್ತಕ ಬೇಟೆಗಾರರಾದ ಈ ಸಂಶೋಧಕರ ಹಾಗೂ ನನ್ನಂಥವರ ಸಮಸ್ಯೆಗೆ ನಮ್ಮಲ್ಲಿ ಪರಿಹಾರವೇನಾದರೂ ಇದೆಯೇ? ಅದರಲ್ಲೂ ಯಾರೂ ಕೊಂಡುಕೊಳ್ಳದ ಹಾಗೂ ಇಟ್ಟುಕೊಳ್ಳದ ಸಾಹಿತ್ಯ ಪ್ರಕಾರಗಳಾದ ಕಾವ್ಯ ಮತ್ತು ಕವನ ಸಂಕಲನಗಳು ಬೇಕೆಂದಾದರೆ ಏನು ಮಾಡಬೇಕು? ಉದಾಹರಣೆಗೆ, ಸು. ರಂ. ಎಕ್ಕುಂಡಿಯವರ ಎಲ್ಲ ಕವನ ಸಂಕಲನಗಳನ್ನೂ ಓದಬೇಕೆಂದು ನೀವು ಬಯಸುತ್ತೀರಿ ಎಂದುಕೊಳ್ಳೋಣ. ಅವು ನಿಮ್ಮಲ್ಲಿ ಇಲ್ಲ; ಅಥವಾ ಸಂಪೂರ್ಣವಾಗಿ ಇಲ್ಲ. ಏನು ಮಾಡುತ್ತೀರಿ? ಕೆಲವು ಕೃತಿಗಳು ಕೆಲವು ಗ್ರಂಥಾಲಯಗಳಲ್ಲಿ ಸಿಗಬಹುದು; ಆದರೆ ಸಮಗ್ರವಾಗಿಯಲ್ಲ. ಯಾರೋ ಪುಸ್ತಕ ಪ್ರೇಮಿಗಳ ಖಾಸಗಿ ಸಂಗ್ರಹದಲ್ಲಿ ಸಮಗ್ರವಾಗಿ ಇರಲೂಬಹುದು. ಆದರೆ ಅಲ್ಲಿವೆ ಎಂದು ಇತರರಿಗೆ ಗೊತ್ತಾಗುವುದಿಲ್ಲ. ಹಾಗೂ ಯಾವನೇ ಒಬ್ಬಾತ ಎಲ್ಲ ಪುಸ್ತಕಗಳನ್ನೂ ಕೊಂಡು ಸಂಗ್ರಹಿಸಿ ಇಟ್ಟುಕೊಳ್ಳಲೂ ಆಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಕರ್ನಾಟಕಕ್ಕೆ ಒಂದು ಕೇಂದ್ರಿಯ ಗಂಥಾಲಯದ ಅಗತ್ಯವಿದೆಯೆಂದು ನಾನ ಭಾವಿಸುತ್ತೇನೆ. ಇದು ಸಮಗ್ರ ಕನ್ನಡ ಸಾಹಿತ್ಯದ ಭಂಡಾರವಾಗಬೇಕು.

ಅದೇ ರೀತಿ, ಆಕರ ಗ್ರಂಥ ಸಂಸ್ಕೃತಿಯೂ ನಮ್ಮಲ್ಲಿ ಕಡಿಮೆಯೇ, ಸು. ರಂ. ಎಕ್ಕುಂಡಿಯವರನ್ನೇ ತೆಗೆದುಕೊಂಡರೆ, ಅವರ ಜೀವನದ ಸಂಕ್ಷಿಪ್ತ ವಿವರಗಳೇನು, ಅವರು ಒಟ್ಟಾರೆ ಎಷ್ಟು ಕೃತಿಗಳನ್ನು ರಚಿಸಿದ್ದಾರೆ, ಅವು ಎಲ್ಲಿ ಯಾವಾಗ ಪ್ರಕಟವಾದುವು, ಅವುಗಳ ಕುರಿತಾಗಿ ಬಂದಿರುವ ವಿಮರ್ಶಾಲೇಖನಗಳು ಯಾವುವು ಎಂಬ ಮಾಹಿತಿಗಳಿರುವಂಥ ಆಕರ ಗ್ರಂಥ ಎಲ್ಲಾದರೂ ದೊರಕುತ್ತದೆಯೇ? ವಾಸ್ತವದಲ್ಲಿ ಇಂಥ ಸೇವೆಯನ್ನು ಗಂಥಪಾಲಕರು ಮಾಡಬೇಕಾದ್ದು. ಆಧುನಿಕ ಗ್ರಂಥಾಲಯ ವಿಜ್ಞಾನದಲ್ಲಿ ಆಕರ ಗ್ರಂಥಗಳ ಪ್ರಕಟಣೆಯೂ ಒಂದು ಪ್ರಧಾನ ಭಾಗ.

ಮಾಹಿತಿ ತಂತ್ರಜ್ಞಾನ ದಾಪುಗಾಲಿಡುತ್ತಿರುವ ಈ ಸಂದರ್ಭದಲ್ಲಿ ಕನ್ನಡಿಗರಾದ ನಾವು ಹಿಂದುಳಿದಿದ್ದೇವೆ. ಇಂಗ್ಲಿಷ್‌ನಲ್ಲಿ ವಿಕಿಪೀಡಿಯಾ ಎಂಬ ಅಂತರ್ಜಾಲದ ವಿಶ್ವಕೋಶವೊಂದಿದೆ. ಇದರಲ್ಲಿ ನೂರಾರು ವಿಷಯಗಳ ಕುರಿತಾದ ಲೇಖನಗಳು ಕಾಣಸಿಗುತ್ತವೆ. ಇಂಥದೊಂದು ವಿಶ್ವಕೋಶವನ್ನು ಕನ್ನಡಕ್ಕಾಗಿ ಸಿದ್ಧಗೊಳಿಸುವುದು ಸಾಧ್ಯವಿಲ್ಲವೇ? ಜ್ಯೋತ್ಸ್ನಾ ಕಾಮತರ ಕಾಮತ್ಸ್ ಪಾಟ್‌ಪುರಿ ಎಂಬ ಅಂತರ್‍ಜಾಲ ತಾಣ ಸಣ್ಣಮಟ್ಟಿಗೆ ಇಂಥ ಕೆಲಸ ಮಾಡುತ್ತಿದೆ. ಸದ್ಯ ಹತ್ತು ಹಲವು ಕನ್ನಡಿಗರು ತಮ್ಮದೇ ಆದ ಬ್ಲಾಗ್ (ಖಾಸಗಿ ಅಂತರ್ಜಾಲ ಪತ್ರಿಕೆ)ಗಳನ್ನು ಮಾಡಿಕೊಂಡಿದ್ದಾರೆ; ಇಲೆಕ್ಟ್ರಾನಿಕ್ ಪತ್ರಿಕೆಗಳೂ ಪಕಟಗೊಳ್ಳುತ್ತಿವೆ. ಆದ್ದರಿಂದ ಮನಸ್ಸಿದ್ದರೆ ವಿಕಿಪೀಡಿಯಾದಂತೆ ಕನ್ನಡ ಸಾಹಿತ್ಯದ ಸಮಗ್ರ ವಿಶ್ವಕೋಶವನ್ನು ಕೂಡಾ ಅಂತರ್ಜಾಲದಲ್ಲಿ ಹಾಕಬಹುದು. ಅಂತೆಯೇ ಅಮೆಜಾನ್‌ನಂಥ ಆಕಾಶದಂಗಡಿಯೊಂದನ್ನು ಯಾರಾದರೂ ಕರ್ನಾಟಕದಲ್ಲಿ ತೆರೆಯುವುದು ಸಾಧ್ಯವಿಲ್ಲವೇ ಎನ್ನುವುದು ಯೋಚಿಸಬೇಕಾದ ಸಂಗತಿ. ಸಾಹಿತ್ಯ ಪ್ರೀತಿಯಂತೆಯೇ ಪುಸ್ತಕ ಪ್ರೀತಿ ಎಂಬುದೊಂದಿದೆ. ಸಾಹಿತ್ಯ ನಮಗೆ ಪುಸ್ತಕ ರೂಪದಲ್ಲಿ ದೊರಕುವುದರಿಂಂದ ಪುಸ್ತಕ ಪ್ರೀತಿ ವಿನಾ ಸಾಹಿತ್ಯ ಪ್ರೀತಿ ಸಾಧ್ಯವಿಲ್ಲ. ನಮ್ಮ ಇಂಗ್ಲಿಷ್ ಪ್ರೊಫೆಸರರೊಬ್ಬರು ಹೇಳುತ್ತಿದ್ದರು: ಲೈಬ್ರರಿಗೆ ಹೋಗಿ, ನೀವು ಓದದಿದ್ದರೆ ಬೇಡ, ಪುಸ್ತಕಗಳನ್ನು ಕೈಗೆತ್ತಿ ನೋಡಿ, ಅವುಗಳ ವಾಸನೆ ಗಹಿಸಿ! ಅವರ ಮಾತಿನ ತಾತ್ಪರ್‍ಯವೆಂದರೆ, ಪುಸ್ತಕಗಳನ್ನು ಕೈಗೆತ್ತಿಕೊಂಡು ಅವುಗಳ ಚಂದ ನೋಡಿದ ಮನುಷ್ಯನಿಗೇ ಮುಂದೆ ಅವುಗಳನ್ನು ಓದುವ ಆಸಕ್ತಿಯೂ ಬೆಳೆಯುವುದು. ಹೊಸ ಪುಸ್ತಕಗಳನ್ನು ಕೊಂಡು ತಂದರೆ ಅವುಗಳಿಗೆ ತಟ್ಟಿ ಹಾಕುವ ಕ್ರಮವೊಂದು ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿತ್ತು. ಕೆಲವೊಂದು ಪುಸ್ತಕಗಳ ಮಟ್ಟಿಗೆ ಆ ಕ್ರಮವನ್ನು ನಾನು ನನ್ನ ಅರುವತ್ತರ ಇಳಿಗಾಲದಲ್ಲೂ ಅನುಸರಿಸುತ್ತಿದ್ದೇನೆ!

ಸಾಹಿತ್ಯದಿಂದ, ಮುಖ್ಯವಾಗಿ ಕವಿತೆಯಿಂದ, ಏನು ಉಪಯೋಗ ಎಂದು ಸಾಮಾನ್ಯ ಮನುಷ್ಯರು ಕೇಳುತ್ತಾರೆ ನಿಜ; ಇದಕ್ಕೆ ವಿಮರ್ಶಕರು ಭಾರೀ ವಜನಿನ ಉತ್ತರಗಳನ್ನೂ ಕೊಡುತ್ತ ಬಂದಿದ್ದಾರೆ: ಸಾಹಿತ್ಯವೆಂದರೆ ಜೀವನ ವಿಮರ್ಶೆ, ಜೀವನ ದರ್‍ಪಣ, ಸಾಹಿತ್ಯದಿಂದ ಸಾಮಾಜಿಕ ಕ್ರಾಂತಿಯಾಗುತ್ತದೆ, ಸಮಾಜ ಸುಧಾರಣೆ ಆಗುತ್ತದೆ, ಪಾರಮಾರ್ಥಿಕ ದರ್ಶನವೊದಗುತ್ತದೆ ಮುಂತಾಗಿ. ಇದೊಂದೂ ಸ್ಪಷ್ಟವಾಗದ ಮನುಷ್ಯ ಕವಿತೆಗೆ ಬದಲು ಬ್ರೆಡ್ ಮತ್ತು ಬೆಣ್ಣೆ ಕೇಳುತ್ತ ಇದ್ದಾನೆ. ವಿಮರ್ಶಕರು ಏನೇ ಹೇಳಲಿ, ಕವಿತೆಗೆ ವ್ಯಕ್ತವಾದೊಂದು ಉಪಯೋಗ ಇರುವಂತೆ ಅನಿಸುವುದಿಲ್ಲ. ಅಂಥ ಉಪಯೋಗ ಅದಕ್ಕೆ ಇಲ್ಲದಿರುವುದೇ ಅದರ ಉಳಿವಿಗೂ ಕಾರಣವೆಂದು ತೋರುತ್ತದೆ. ಯಾಕೆಂದರೆ ಯಾವುದಾದರೂ ಉಪಯೋಗವಿರುತ್ತಿದ್ದರೆ, ಆ ಉಪಯೋಗವನ್ನು ಅದಕ್ಕಿಂತ ಸಮರ್ಥವಾಗಿ ಮಾಡಬಲ್ಲ ಉಪಕರಣವೊಂದನ್ನು ಮನುಷ್ಯರು ಈಗಾಗಲೇ ಆವಿಷ್ಕರಿಸುತ್ತಿದ್ದರು-ಎತ್ತಿನ ಬಂಡಿಯ ಬದಲು ಏರೋಪ್ಲೇನ್ ಬಂದಂತೆ. ಆದರೆ ಇದು ಕವಿತೆಯ ಗುಟ್ಟು. ‘ಯಾರಿಗೂ ಹೇಳೋಣು ಬ್ಯಾಡ!’
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಂಪತಿ
Next post ಬುದ್ಧ ಪಾದದ ಮೇಲೆ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…