ಕಾಳರಾಣಿ ಕೊಲೆಪಾತಕ ಬಂದ!
ಮೂಳನಾಗಿ ಮೊಗದೋರಲು ಬಂದ!! ೧
ಮುಗಿಲರಮನೆ ಮುಂಭಾಗದಿ ನಿಂದ!
ಜಗದ ಜಾತಿಗಳ ನೆಬ್ಬಿಸಿರೆಂದ!! ೨
ಮನುಜನೊಬ್ಬ ಮನೆಯಿಂದಲಿ ಬಂದ!
ಹನಿನೀರಿಗೆ ತಾ ಕೆರೆಗೈ ತಂದ !! ೩
`ಕೊನೆಯಮನುಜ ನಾ ಕಾಣಿರಿ’ ಯೆಂದ!
`ಕನಿಕರ ಕಣ್ಣೀರೆರೆಯಿರಿ’ ಯೆಂದ!! ೪
ಸೂರ್ಯನು ಸಹಿಸದೆ ಸಾಗುತೆ ಬಂದ!
ಕೌರ್ಯಾ೦ಬುಗಳಂ ಕೆಡುಹಲು ಬಂದ!! ೫
ಸಾಲದೆ, ಸಾಗಿಯೆ ಸಾಗಿಯೆ ಬಂದ!
ಕೋಲು ಕಿರಣಗಳ ಕೆಡಹುತೆ ಬಂದ!! ೬
ಪಡುವಣಾಂಗನೆಯ ಪತಿಯಾಗಲು ಬಂದ!
ಕಡಲಿನೊಡೆತನವ ತಾ ಕೋರಲು ಸಂದ!! ೭
ಮರುಗಿ ಮರಳಿ ಆ ಮನುಜನು ಬಂದ!
ಬರಿಯ ಕೊಡವ ತಾ ಮನೆಯೊಳು ತಂದ!! ೮
ಮಕ್ಕಳ ಮುಖಗಳ ನೋಡುತೆ ನೊಂದ!
ಉಕ್ಕುವ ದುಃಖದಿ ಕಂಬನಿ ತಂದ!! ೯
`ಸಲಹುವ ಸೃಷ್ಟಿಯ ನ್ಯಾಯವಿದೆಂ’ ದ!
`ಹೊಲೆಯರೆಲ್ಲ ಹಾಳಾಗಲಿ’ ಯೆಂದ!! ೧೦
*****