ಆಕಾಶದಲ್ಲಿ ತಾರೆಗಳು ಕಾಣಬಾರದೆಂಬ ಯೋಚನೆಯುಳ್ಳಡೆ
ಸೂರ್ಯೋದಯಕ್ಕಯ್ಯಾ
ಆಕಾಶದಲ್ಲಿ ತಾರೆಗಳು ಕಾಣಬೇಕೆಂಬ ಯೋಚನೆಯುಳ್ಳಡೆ
ಸೂರ್ಯಾಸ್ತಮಾನಕ್ಕಯ್ಯಾ
ಕಾಣಬಾರದು ಕಾಣಬಾರದು ಜ್ಞಾನದಲ್ಲಿ ಆನಂದ ಅನಾನಂದವ
ಕಾಣಬಹುದು ಕಾಣಬಹುದು ಅಜ್ಞಾನದಲ್ಲಿ
ಸುಖದುಃಖೋಭಯದ್ವಂದ್ವವ
ಭೋ ಭೋ ಕಪಿಲಸಿದ್ಧಮಲ್ಲಿಕಾರ್ಜುನಾ ಭೋ
ಸಿದ್ಧರಾಮನ ವಚನ. ಇದು ನಿತ್ಯಾನುಭವದ ರೂಪಕವೊಂದನ್ನು ಬಳಸಿಕೊಂಡು ಜ್ಞಾನದ ಸ್ವರೂಪವನ್ನು ಹೇಳುತ್ತದೆ.
ನಕ್ಷತ್ರಗಳು ಕಾಣಬಾರದು ಎಂದಿದ್ದರೆ ಸೂರ್ಯ ಹುಟ್ಟುವವರೆಗೆ ಕಾದಿರಬೇಕು, ನಕ್ಷತ್ರಗಳು ಕಾಣಬೇಕೆಂದಿದ್ದರೆ ಸೂರ್ಯಮುಳುಗುವವರೆಗೆ ಕಾದಿರಬೇಕು. ನಕ್ಷತ್ರ ಕಾಣದೆ ಇರುವುದು ಸುಖ, ಕಾಣುವುದು ಕಷ್ಟ ಎಂದು ಬೇಕಾದರೂ ಅರ್ಥಮಾಡಿಕೊಳ್ಳಬಹುದು ಅಥವಾ ಪಲ್ಲಟಗೊಳಿಸಿಯೂ ತಿಳಿಯಬಹುದು. ಏನೇ ಇದ್ದರೂ ಒಂದು ಸುಖ, ಇನ್ನೊಂದು ದುಃಖದ ಸೂಚಕ.
ಒಂದು ಬೇಕು ಇನ್ನೊಂದು ಬೇಡ ಎನ್ನುವುದಾದರೆ ಅದು ಬರುವವರೆಗೆ, ಅಥವ ಹೋಗುವವರೆಗೆ ಕಾದಿರಬೇಕು. ಜ್ಞಾನವೆನ್ನುವುದು ಸುಖವೂ ಅಲ್ಲ ಸುಖವಲ್ಲದ್ದೂ ಅಲ್ಲ. ಅಜ್ಞಾನವಿದ್ದಾಗ ಮಾತ್ರ ಇವೆರಡೂ ಬೇರೆ ಎಂಬ ದ್ವಂದ್ವವಿರುತ್ತದೆ ಎನ್ನುತ್ತದೆ ವಚನ.
*****