ಎಲ್ಲಾ ಸ್ವಚ್ಛಂದದ ಸೆಳವು
ಒಳಗೊಳಗೆ ಇಳಿದ ತಂಗಾಳಿ,
ಮೈ ಹಗುರಾಗುವ ನಿನ್ನ ಸ್ಪರ್ಶ,
ಹರವು ದಾಟಿದ ಒಂದು ನದಿ ಬಯಲು.
ಘಮ ಘಮಿಸಿದ ಮುಂಜಾನೆ,
ಕಿರಣಗಳ ಸೋಕಿ ಉಮೇದಗೊಂಡ
ಭಾವಗಳು ಹೊಸ ಹಾಡು ಹಕ್ಕಿ ಕೊರಳು,
ಒಡಲ ತುಂಬ ಹಸಿರು ಚಿಮ್ಮುವ ಹವಣಿಕೆ.
ನಡೆಯುವ ದಾರಿತುಂಬ ಸತ್ಯದ ಬೆಳಕು.
ದಿವ್ಯ ದರ್ಶನಗಳ ಪದಕೋಶ ಎದೆಗೆ ಅಮರಿ,
ಮೂರ್ತದಲಿ ಅಮೂರ್ತಗಳ ಕವಿತೆಗಳು.
ಫಳಿಫಳಿಸಿದ ಕಣ್ಣ ಕಾಂತಿಯ ಪ್ರಭೆ ಮನೆಯೊಳಗೆ.
ನೆಲ ನೀರು ಗಾಳಿ ಮಳೆಯಲಿ ಕರಗಿ ಸೂರ್ಯ,
ಹುಡುಕುವ ಹೊಸ ಹುಟ್ಟಿನ ದಾರಿ ತಾಯಿ ಗರ್ಭ.
ಪುಟ್ಟ ಚಂದಿರನ ಬೆಳದಿಂಗಳು ಹರಡಿ ಹಾಸಿದ ಮಾಡು,
ಚಂದದ ಲಾಲೀ ಹಾಡಿದ ಪ್ರಥಾ ಪೂರ್ಣ ಸುಂದರಿ.
ಎಲ್ಲಾ ದಿಕ್ಕುಗಳು ಕಂಪನಗಳ ಕಂಪು ಹಣಿದು
ಬಯಲಲ್ಲಿ ಬೆತ್ತಲಾದ ಮುಪ್ಪು, ಅದಕ್ಕೂ ಇದಕ್ಕೂ
ಎಲ್ಲರೊಳಗೊಂಡು ಜೇನು ಹಂಚಿ ಜನನಿಬಿಡ ಸಂತೆ.
ಸಂತನಾಗುವ ಪರಿಯ ಅಚ್ಚರಿಯ ವಿಸ್ಮಯ ವ್ಯೋಮ.
*****