ಅರ್ಥ ಸನ್ಯಾಸಿ ಬ್ರಹ್ಮಚಾರಿ ಆನಯ್ಯ
ದೊರೆಕೊಳ್ಳದಿರ್ದಡೆ ಒಲ್ಲೆನೆಂಬೆನು
ದಿಟಕ್ಕೆ ಬಂದರೆ ಪರಿಹರಿಸಲರಿಯೆನು
ಎನಗೆ ನಿಸ್ಪೃಹದ ದೆಸೆಯನೆಂದಿಂಗೀವೆಯಯ್ಯಾ
ಸಕಳೇಶ್ವರದೇವಾ
[ನಿಸ್ಪೃಹ-ಆಸೆ ಇರದ; ತೃಪ್ತ; ಸಮಚಿತ್ತ]
ಸಕಳೇಶಮಾದರಸನ ವಚನ. ನಿಸ್ಪೃಹತೆಯ ಪ್ರಶ್ನೆಯನ್ನು ನಮ್ಮ ಮುಂದೆ ಒಡ್ಡುತ್ತದೆ ಈ ವಚನ. ದುಡ್ಡಿಲ್ಲದಿದ್ದಾಗ, ಹೆಣ್ಣು ದೊರೆಯದಿದ್ದಾಗ ಸನ್ಯಾಸಿ, ವಿರಕ್ತ, ಅಂದುಕೊಳ್ಳುವುದು ಸುಲಭ. ಸಿಗದಿರುವಾಗ ಬೇಡ ಅನ್ನುವುದು ಕಷ್ಟವಲ್ಲವೇ ಅಲ್ಲ. ಆದರೆ ಯಾವುದು ಬೇಡ ಅನ್ನುತ್ತೇನೋ ಅದು ನಿಜವಾಗಿಯೂ ಎದುರಿಗೆ ಬಂದಾಗ ಪರಿಹರಿಸಲು ಆಗದೆ ತಳಮಳಕ್ಕೆ ಒಳಗಾಗುತ್ತೇನೆ. ನನ್ನ ಮನಸ್ಸಿಗೆ ನಿಸ್ಪೃಹತೆಯ ದೆಸೆಯನ್ನು ಯಾವಾಗ ಕೊಡುತ್ತೀಯೆ ದೇವರೇ ಎಂದು ವಚನಕಾರ ಬೇಡುತ್ತಿದ್ದಾನೆ.
ನಮ್ಮ ನಮ್ಮ ವ್ಯಕ್ತಿತ್ವದ ಬಗ್ಗೆ ಆಕರ್ಷಕ ಕಲ್ಪನೆಗಳನ್ನಿಟ್ಟುಕೊಂಡು ಭ್ರಮೆಗೆ ಒಳಗಾಗುವುದು ಸುಲಭ. ಆದರೆ ದಿಟಕ್ಕೂ ನಮಗೆದುರಾಗುವ ಪ್ರಲೋಭನೆಗಳನ್ನು ಗೆಲಲ್ಲಾಗದು ಎಂಬ ಮನುಷ್ಯ ಸಹಜವಾದ ದೌರ್ಬಲ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಿದ್ದಾನೆ ಸಕಳೇಶ ಮಾದರಸ.
*****