ಗದುಗಿನ ನಾಡಹಬ್ಬದಲ್ಲಿ ಶ್ರೀ ಮಧುರ ಚೆನ್ನ ರಿ೦ದ ಪರೀಕ್ಷಿಸಲ್ಪಟ್ಟು ರಜತ ಪದಕವನ್ನು ಪಡೆದುದು
ಅಮಾ, ಚಿತ್ರದ ಅಂಗಡಿ ನೋಡೆ !
ಸುಂದರ ಸೊಬಗಿನ ಅಂಗಡಿ ನೋಡೆ !
ಬಗೆ ಬಗೆ ಬಣ್ಣದ ಪಟಗಳ ನೋಡೆ !
ಭಾರತದೇಶದ ಚಿತ್ರವನೋಡೆ ! || ೧ ||
ಅಮ್ಮಾ, ಇಲ್ಲಿದೆ ಹೆಚ್ಚಿನ ಚಿತ್ರ !
ಸಕಲರ ಮನವನು ಸೆಳೆಯುವ ಚಿತ್ರ !
ಇದುವೇ ನಾ ಹಟ ಮಾಡಿದ ಚಿತ್ರ !
ಕನ್ನಡ ಕುವರರ ಹೆಮ್ಮೆಯ ಚಿತ್ರ ! || ೨ ||
ಸುಂದರ ಬನಗಳ ಚಿತ್ರಿಪ ಚಿತ್ರ !
ಗುಡ್ಡ ಬೆಟ್ಟಗಳು ತುಂಬಿಹ ಚಿತ್ರ !
ಗೋದಾವರಿ ಹೊಳೆ ಹರಿದಿಹ ಚಿತ್ರ !
ಕಾವೇರಿಯು ತಾ ಕಾಖವ ಚಿತ್ರ ! || ೩ ||
ಅಮಾ, ಇಲ್ಲಿಹ ಗುಡಿಗಳ ನೋಡು !
ಜಕ್ಕಣ ಶಿಲ್ಪಿಯ ಜಾಣ್ಮಯ ನೋಡು !
ವಿಜಯನಗರದಾ ವೈಭವ ನೋಡು !
ಹುಕ್ಕ ಬುಕ್ಕ ಮಾಧವರನು ನೋಡು ! || ೪ ||
ಅಮ್ಮಾ, ಕುಮಾರವ್ಯಾಸನ ಚಿತ್ರ !
ಕಲ್ಯಾಣದ ಆ ಬಸವನ ಚಿತ್ರ !
ಚೆನ್ನಮ್ಮನ ಕಿತ್ತೂರಿನ ಚಿತ್ರ !
ಬೆಳವಡಿ ರಾಣಿಯ ಶೌರ್ಯದ ಚಿತ್ರ ! || ೫ ||
ಅಮ್ಮಾ, ಇದದೋ ಹಳ್ಳಿಯ ಚಿತ್ರ !
ನೇಗಿಲ ಹೊಡೆಯುವ ಯೋಗಿಯ ಚಿತ್ರ !
ರಾಟಿಯ ತಿರುಗಿಹ ಭಗಿನಿಯ ಚಿತ್ರ !
ಖಾದಿಯ ಕೊಳ್ಳುವ ಜನಗಳ ಚಿತ್ರ ! || ೬ ||
ಅಮ್ಮಾ ! ಭೀಕರ ದೃಶ್ಯವಿದಲ್ಲೆ ?
ಬಡವನ ಗೋಳಿನ ಚಿತ್ರವಿದಲ್ಲೆ ?
ಹೊಲೆಯರೆಂದು ಸಲೆ ಹಳಿಯುವರಲ್ಲೆ ?
ದಾಸ್ಯದ ದಾಹದಿ ಬಳಲುವರಲ್ಲೆ ? || ೭ ||
ಅಮ್ಮಾ, ಇಲ್ಲಿಹ ನೋಟವಿದೇನು ?
ಕನ್ನಡದಮ್ಮನು ಅಳುತಿಹಳೇನು ?
ಕರುನಾಡಿನ ಜನ ಮಲಗಿಹುದೇನು ?
ಪರನಾಡಿನ ಜನ ಬರುತಿಹುದೇನು ? || ೮ ||
ಅಮ್ಮಾ, ಬೇಕಿದು ಚಿತ್ರವು ನೋಡು !
ಅಯ್ಯೋ ! ಮರಾಠ ಬಂದನು ನೋಡು !
ತೆಲುಗನು ಬಂದನು ಕೊಳ್ವನು ನೋಡು !
ಅಪ್ಪನ ಹುಡುಕುವ ಬೇಗನೆ ಓಡು || ೯ ||
ಅಪ್ಪಾ ! ಅಪ್ಪಾ !! ಎಲ್ಲಿಹೆ ಬಾರೊ !
ಪ್ರೀತಿಯ ಚಿತ್ರವ ಕೊಳ್ವರು ಬಾರೋ !!
ಕರ್ನಾಟಕವಿದು ಪೊಪುದು ಬಾರೋ !!!
ಕನ್ನಡಿಗನೆ ನೀ ಬೇಗನೆ ಬಾರೋ !!!! || ೧೦ ||
*****