ಅವರ ಪಾದಗಳು ನೆರಿಗೆಗಟ್ಟಿವೆ ಹಾಗೂ
ಹಾಕಿಕೊಂಡ ಬೂಟುಗಳು ಮೆತ್ತಗಾಗಿವೆ.
ಅವರು ಏನನ್ನೂ ಹುಡುಕುತ್ತಿಲ್ಲ ಬರೀ ನಿಧಾನವಾಗಿ
ನಡೆಯುತ್ತಿದ್ದಾರೆ. ಅವರೀಗ ಹಳದಿ ಎಲೆ.
ಹಗುರಾಗಿದ್ದಾರೆ ಮಾಗಿದ್ದಾರೆ.
ಅವರಿಗೆ ಹೊಸದೇನು ಬೇಕಾಗಿಲ್ಲ. ನಡೆದ
ದಾರಿಯ ಹಳವಂಡಗಳು ನೆನಪುಗಳು,
ಅವರಲ್ಲಿ ಹೂತು ಹೋಗಿವೆ. ರಾತ್ರಿಯ
ಕತ್ತಲಲ್ಲಿ ಅವರು ಕನವರಿಸುತ್ತಿದ್ದಾರೆ, ಮತ್ತು
ದಾಟಿ ಹೋಗುವ ದಾರಿಯನು ಕಣ್ಣುಗಳು ಅರಸುತ್ತಿವೆ.
ಒಮ್ಮೊಮ್ಮೆ ಖಾಲಿ ಆಕಾಶದ ಕಡೆ ಮುಖ
ಮಾಡುತ್ತಾರೆ, ನಡುಗುವ ಕೈಗಳಿಂದ ನೀರು
ಕುಡಿಯುತ್ತಾರೆ, ಗೋಡೆಯ ಮೇಲಿನ ಭಾವಚಿತ್ರಗಳ
ಅವರು ಗುರುತಿಸುತ್ತಿಲ್ಲ. ಕಣ್ಣುಗಳ ತುಂಬ ರಾತ್ರಿಯ
ಭಾವ ಭರವಾಗಿ ಸುಮ್ಮನೆ ನಿಟ್ಟುಸಿರು ಬಿಡುತ್ತಾರೆ.
ಅವರ ಕೋಣೆಗಳಲಿ ನಿಶ್ಯಬ್ದ ದಾಖಲಾಗಿದೆ.
ಮೊಮ್ಮಕ್ಕಳು ಮಾತು ಮರೆತಿದ್ದಾರೆ, ಏನೋ ಅರಸುವ
ಭೂತದಂತೆ ಮೌನದಲಿ ಅವರು ಹುದುಗಿದ್ದಾರೆ ಮತ್ತೆ
ಮನೆ ಮಂದಿ ಮರೆತವರಂತೆ ಇದ್ದಾರೆ. ವಿಷಾದದಲಿ
ಅವರು ಸದ್ದಿಲ್ಲದೇ ಕಾಲನ ಕರೆ ಕಾಯುತ್ತಿದ್ದಾರೆ.
*****