ಅರಿವಿನ ಬಲದಿಂದ ಕೆಲಬರು ಅರಿಯದವರ ಗೆಲಬೇಕೆಂದು
ಬರುಮಾತಿನ ಉಯ್ಯಲನೇರಿ ಒದೆದು ಒರಲಿ ಕೆಡುವ ದರಿದ್ರರು
ಅರಿವು ತೋರದೆ ಇರಬೇಕು ಕಾಯನಿರ್ಣಯ ನಿಃಪತಿಯೆಂಬಾತನು
ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು
ಅರಿವು ತೊರೆದ ಎರಂಡೆಂಬ ಭಿನ್ನವೇಷವ ತೊಟ್ಟು
ಡಂಬಕವ ನುಡಿದಹೆವೆಂಬ ಉದ್ದಂಡರ ಗುಹೇಶ್ವರ ಕಂಡರೆ ಕನಲುವ
[ಬರುಮಾತಿನ–ಬರಿಯ ಮಾತಿನ, ಕಾಯನಿರ್ಣಯ ನಿಃಪತಿ-ಪೂರ್ಣಪ್ರಬುದ್ಧತೆಯ ಲಕ್ಷಣ]
ಅಲ್ಲಮನ ವಚನ.
ಕೆಲವರಿಗೆ ಜ್ಞಾನದ ಬಲ ಇರುತ್ತದೆ. ಅದನ್ನು ಬಳಸಿಕೊಂಡು ಅರಿಯದವರನ್ನು ಗೆಲ್ಲಬೇಕೆಂದು ಇನ್ನಿಲ್ಲದಂತೆ ಪ್ರಯತ್ನಿಸುತ್ತಾರೆ. ಮಾತಿನ ಉಯ್ಯಾಲೆಯನ್ನು ಏರಿ ಅತ್ತ ಇತ್ತ ತುಯ್ದಾಡುತ್ತಾರೆ, ಒಮ್ಮೆ ಹಾಗೆ, ಒಮ್ಮೆ ಹೀಗೆ ಅಭಿಪ್ರಾಯವ್ಯಕ್ತಪಡಿಸುತ್ತಾರೆ. ಇವರೆಲ್ಲ (ನಾವೆಲ್ಲ?) ಹೀಗೆ ಸುಮ್ಮನೆ ಮಾತು ಒರಲಿ ಕೆಡುವ ದರಿದ್ರರು.
ಮುಂದಿನ ಕೆಲವು ಪಾರಿಭಾಷಿಕಗಳನ್ನು ಬಿಟ್ಟರೂ `ಸೋಂಕಿನ ಸೋಜಿಗವೆಂಬ ಪರಿಣತೆ ಫಲಿಸಬೇಕು’ ಅನ್ನುವ ಮಾತು ಗಮನಿಸಿ, ಸ್ಪರ್ಶದ ಸೋಜಿಗವನ್ನು ಅನುಭವಿಸಿ, ಪರಿಣತರಾಗಿ ಫಲಿಸಬೇಕು.
ನಾವಾಡುವ ವಿಷಯವೆಲ್ಲ ಬರಿಯ ಮಾತಿನ ಮಟ್ಟದ ಮಾಹಿತಿಯಾಗಿದ್ದರೆ ನಾವೆಲ್ಲ ಮಾತಿನ ಉಯ್ಯಾಲೆಯಾಡುವ, ಅನ್ಯರನ್ನು ಗೆಲ್ಲಬಯಸುವ, ಕೆಡುವ, ದರಿದ್ರರು ಅಷ್ಟೆ. ಆಡುವ ಮಾತಿನ ನಿಜವನ್ನು ಮುಟ್ಟಿ, ಸೋಂಕಿ, ಸೋಜಿಗಪಡುವುದು ಮುಖ್ಯ. ಸೋಜಿಗ ಫಲಿಸುವುದು, ಹಣ್ಣಾಗುವುದು ಮುಖ್ಯ. ಅದು ಆಗದಿದ್ದರೆ ಮಾತು ವ್ಯರ್ಥ.
ಇನ್ನು ಮಾತು ಬೇಡ, ಸುಮ್ಮನೆ ಪರಿಣಮಿಸೋಣ.
*****