ಏನುಬೇಡಲಿ ಬಂದು ಭಾರತಿಯೆ ನಿನ್ನ |
ಮಾನವಂತಿಯೆ ಜನನಿ ಸಲಹು ನೀನೆನ್ನ ||ಪಲ್ಲ||
ಬಂಗಾರ ಬೇಡುವೆನೆ ಬಳಿದೆಲ್ಲ ಪೋಗಿಹುದು |
ಶೃಂಗಾರ ಬೇಡುವೆನೆ ಶಿವನ ಮನೆಯು ||
ಮಂಗನಂತಿಹ ಮನವು ಇಂಗಿತವನರಿಯದಲೆ |
ಅಂಗಹೀನನ ತೆರದಿ ತಿರುಗುವದಕಂಡು || ೧ ||
ಅನ್ನವನು ಬೇಡುವೆನೆ ನಿನ್ನೆನಿನಗುಪವಾಸ |
ಅಣ್ಣನನು ಕೇಳುವೆನೆ ವನವಾಸವವಗೇ ||
ಇನ್ನೊಂದುಗಳಿಗೆಯನು ಬಾಳಿಕಳೆಯೆನುಯೆಂದು
ಸನ್ನು ತಾಂಗಳೆ ನಿನ್ನ ನಾ ಜವದಿ ಕಂಡು || ೨ ||
ಬೇಡುವೆನೆ ಸ್ವಾತಂತ್ರ್ಯ ಬಳಲುತಿಹಿ ಬಂಧನದಿ |
ಆಡುವೆನೆ ಸವಿಮಾತ ಅಳುತಿರುವಿ ತಾಯೇ ||
ಪೊಡವಿಯೊಳು ಒಡಲುರಿಯು ಸುಡುತಿಹುದು ತಡೆಯದಲೆ |
ಪೊಡಮಡುವೆ ಗಡಬಂದು ಸಲೆಪೊರೆವುದೆಂದು || ೩ ||
*****