ಅಯ್ಯಾ
ನಿನ್ನ ಮುಟ್ಟಿ ಮುಟ್ಟದೆನ್ನ ಮನ
ನೋಡಾ
ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಗಿಕಗನಂತೆ ಹೊದಕುಳಿಗೊಂಡಿತ್ತೆನ್ನ ಮನ
ಎರಡೆಂಬುದ ಮರೆದು ಬರಡಾಗದೆನ್ನ ಮನ
ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನಾ
[ಬೀಸರ-ವ್ಯರ್ಥ, ಹೊಳಲ ಸುಂಕಿಗ-ನಗರದಲ್ಲಿರುವ ಸುಂಕ ಕೊಡುವಾತ, ಹೊದಕುಳಿಗೊಂಡಿತ್ತು-ಸಂಕಟಪಟ್ಟಿತ್ತು, ಆನಪ್ಪ-ನಾನಾಗುವ]
ಅಕ್ಕಮಹಾದೇವಿಯ ವಚನ.
ನಾನು-ನೀನುಗಳ ವ್ಯತ್ಯಾಸವನ್ನು ಕುರಿತ ವಚನ ಇದು. ನಾವು ಸಾಮಾನ್ಯವಾಗಿ ಬಳಸುವ ಮಾತಿನ ಕ್ರಮವನ್ನು, ಆದ್ದರಿಂದಲೇ ಗ್ರಹಿಕೆಯ ಕ್ರಮವನ್ನೂ ಅಕ್ಕ ಇಲ್ಲಿ ತಲೆಕೆಳಗುಮಾಡಿದ್ದಾಳೆ.
ನೋಡು, ನನ್ನ ಮನಸ್ಸು ನಿನ್ನನ್ನು ಮುಟ್ಟುತ್ತಿದೆ, ಆದರೆ ಮುಟ್ಟುತ್ತಿಲ್ಲ! ನಿನ್ನನ್ನು ತಲುಪಿದೆ. ಆದರೆ ‘ಮುಟ್ಟಿಲ್ಲ’. ಮನಸ್ಸು ಬಿಚ್ಚಿಕೊಂಡು, ಕಳಚಿಕೊಂಡು ದಂಡವಾಗಿಬಿಟ್ಟಿದೆ (ಬೀಸರ).
ಮುಟ್ಟು ಅನ್ನುವ ಮಾತಿಗೆ ತಲುಪು ಮತ್ತು ಸ್ಪರ್ಶಿಸು ಅನ್ನುವ ಅರ್ಥ ಇರುವ ಹಾಗೆಯೇ ಬಿಚ್ಚಿಕೊಂಡು ಅಂದರೆ ತೆರೆದುಕೊಂಡು, ಕಳಚಿಕೊಂಡು ಅನ್ನುವ ಎರಡೂ ಅರ್ಥಗಳು ಹೊಳೆಯುತ್ತವೆ.
ಸುಂಕ ತೆರಬೇಕಾದ ನಗರದ ಮನುಷ್ಯನ ಹಾಗೆ ನನ್ನ ಮನಸ್ಸು ಸಂಕಟಪಡುತ್ತಿದೆ. ಕೊಡಬೇಕಾದ್ದನ್ನು ಕೊಡಲೊಲ್ಲದೆ, ನನಗೇ ಬೇಕು ಎಂದು ಹಂಬಲಿಸಿ ಚಡಪಡಿಸುತ್ತಾನಲ್ಲ ತೆರಿಗೆದಾರ ಹಾಗೆ.
ಕೊಡಬೇಕಾದದ್ದು, ಉಳಿಸಿಕೊಳ್ಳಬೇಕಾದದ್ದು-ನನ್ನ ಮನಸ್ಸು ದ್ವಂದ್ವವನ್ನು ಮರೆತಿಲ್ಲ, ಆದ್ದರಿಂದ ಮನಸ್ಸು ಬರಡಾಗುವುದಿಲ್ಲ. ಒಂದೇ ಆಗಲು ಸಾಧ್ಯವೇ ಇಲ್ಲವಾಗಿದೆ. ನೀನು ನಾನಾಗುವ ರೀತಿ ಹೇಗೆ ಹೇಳು?
ಮನಸ್ಸು ಬರಡಾದರೆ, ಇತರ ಕಲ್ಪನೆ, ಭ್ರಮೆಗಳನ್ನು ಹೆರದೆ ಬಂಜೆಯಾದರೆ ಮಾತ್ರವೇ ಅಲ್ಲಿ ಚೆನ್ನಮಲ್ಲಿಕಾರ್ಜುನನಿಗೆ ಜಾಗ. ಆದರೆ ಮನಸ್ಸೇ ದಂಡವಾಗಿ ಹೋಗುತ್ತಿದೆ. ಮನಸ್ಸು ಸುಂಕದವನ ಹಾಗೆ, ಅತ್ತ ರಾಜನ ಕಡೆಯವನು ಇತ್ತ ಜನರ ದುಃಖ ಅರಿತರೂ ಏನೂ ಮಾಡಲಾಗದವನು, ಇಡೀ ನಾನುತನವೇ ಚನ್ನಮಲ್ಲಿಕಾರ್ಜುನನಿಗೆ ಕೊಡಬೇಕಾದ ಸುಂಕ, ಅದನ್ನು ಕೊಡಲೊಲ್ಲದೆ ಸಂಕಟಪಡುತ್ತಿರುವ ಮನಸ್ಸು ಬಂಜೆಯಾಗದು. ಲೋಕದ ವ್ಯವಹಾರವಾದ ಸುಂಕದ ಸುಖ ದುಃಖಗಳಲ್ಲಿ ಮನಸ್ಸು ಸಿಲುಕಿದೆ ಅನ್ನುತ್ತಿದ್ದಾಳೋ ಅಕ್ಕ?
ನಾನು ನಿನ್ನಂತೆ ಆಗಬೇಕು ಅನ್ನುವುದಿಲ್ಲ ಅಕ್ಕ. ಅದಕ್ಕೆ ಬದಲಾಗಿ ನೀನು ನನ್ನಂತೆ ಆಗುವುದು ಸಾಧ್ಯವೇ ಎನ್ನುತ್ತಿದ್ದಾಳೆ. ಒಡಲಿಲ್ಲದ, ಸುಖ ದುಃಖವಿಲ್ಲದ, ಮನಸ್ಸಿನಲ್ಲಿ ಸೀಳು ಬಿರುಕುಗಳಿಲ್ಲದ, (ಕ್ಷಣಕ್ಕೊಂದು ಬಗೆಯಾಗುವ) ಮನಸ್ಸೇ ಇಲ್ಲದ ಚೆನ್ನಮಲ್ಲಿಕಾರ್ಜುನ ನನ್ನಂತೆ ದೇಹ, ಮನಸ್ಸು ಇರುವವನಾಗುವುದು ಅಸಾಧ್ಯ, ಅದು ಅಸಾಧ್ಯವಾದ್ದರಿಂದಲೆ ಅವನು ತನಗೆ ದಕ್ಕಲಾರ. ಅವನು ನನ್ನಂತೆ ಆಗಬೇಕು. ಅಥವಾ ನನ್ನ ಮನಸಿನ ಸುಂಕ ತೆತ್ತರೆ ಸಾಧ್ಯ.
ತನಗೂ ತನ್ನ ಪ್ರಿಯಕರ ದೈವಕ್ಕೂ ಇರುವ ವ್ಯತ್ಯಾಸವೇ ಅಕ್ಕನ ಅಳಲಿಗೆ ಕಾರಣವೇನೋ. ಪ್ರಿಯದೈವವನ್ನೂ ತನ್ನಂತೆ ಆಗು ಎಂದು ಎಸೆಯುವ ಸವಾಲೋ ಇದು? ಅಥವಾ ಸಂಬಂಧ ಸಾಧ್ಯವಾಗಬೇಕಾದರೆ ಇಬ್ಬರಿಗೂ ಇರುವ ಜವಾಬ್ದಾರಿಯನ್ನು ನೆನಪಿಸುವ ಮಾತೋ? ಯೋಚಿಸಿದಷ್ಟೂ ಮನಸ್ಸನ್ನು ಕದಲಿಸಿ ಅರ್ಥದ ಅಲೆಗಳನ್ನು ಎಬ್ಬಿಸುವ ವಚನ ಇದು.
*****