ಚಲನೆಯ ಗತಿಯಲ್ಲಿ ನಿನ್ನ ನಾದ
ಹೂವುಗಳ ಅರಳಿಸಿ ಗಂಧ ತೀಡಿ,
ತೊಟ್ಟಿಲ ಜೀಕಿ ನಡೆದ ದಾರಿ ತುಂಬ,
ಎಚ್ಚರದ ಹೆಜ್ಜೆಗಳು. ನದಿಯಲ್ಲಿ
ನಾವಿಕನ ಹುಟ್ಟಿ ದೀರ್‍ಘ ಅಲೆಗಳು.
ಕಾಲಬೆರಳ ಸಂದಿಯಲಿ ಹುಲ್ಲುಗರಿ
ಚಿತ್ತಾರವ ಅರಳಿಸಿ, ಹಿಮ ಮಣಿಯ
ತಂಪು ಹರಡಿ ತಿಳಿಗಾಳಿ ಸುಳಿದು,
ಮಲ್ಲಿಗೆ ಜಾಜಿ ಪರಿಮಳ ಗೆಜ್ಜೆಗಳ
ನಾದ ಅರಳಿದ ಮುಂಜಾನೆ ಸೂರ್‍ಯ.
ನೀಲ ಬಾನತುಂಬ ಬೆಳ್ಳಕ್ಕಿ ರಾಶಿ ಹಿಂಡು,
ಮೋಡದ ಅಲೆಗಳ ಸಂಚಾರ,
ಚೆಂದದ ಹರಣಿಯಂತೆ ಕಣ್ಣರಳಿಸಿ,
ಸಾಗುವ ಪುಟ್ಟ ಬಾಲೆ ಅಮ್ಮನ ಸೆರಗಿನ
ವಾಸನೆ ಹರಡಿ, ಹೃದಯ ತುಂಬ ಶಿವನರ್‍ತನ.
ಒಂದು ದಿನ ಹಗುರಾಗಿ ಪೂರ್‍ತಿ ಮಾಡಿದ
ಸೂರ್ಯನ ಬೆಳ್ಳಿಯ ಹೊಂಬಣ್ಣದ ಕಿರಣಗಳು,
ಸಂಜೆ ದೇವರ ಮನೆಯಲಿ ನೀಲಾಂಜನ ಮಿಣಿ
ಮಿಣಿಯಾಗಿ, ನೀ ಪಡೆಯುವ ಪ್ರೀತಿ ಹಾಡಾಗಿ,
ಅನ್ನ ಅರಳಿದೆ ಘಮ ಘಮ ಸಮಯದಲಿ.
*****