ಆ ಒಂದು ನಗು

ಆ ಒಂದು ನಗು

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಕಾಲೇಜು ಸೇರಿದಂದಿನಿಂದ ಅವನಿಗೆ ಮನಃಪೂರ್ವಕ ವಾಗಿ ನಗುವುದು ಮರೆತೇ ಹೋಗಿದೆ. ಬೃಹತ್ ಕಟ್ಟಡದ ಬೃಹತ್ ಕೋಣೆಯೊಳಗೆ ಬೃಹದಾಕಾರದ ಕಪಾಟುಗಳಲ್ಲಿ ಡಬ್ಬದೊಳಗೆ ಅದುಮಿಟ್ಟ ಗೋಧಿ ಹಿಟ್ಟಿನಂತೆ ಪುಸ್ತಕಗಳು! ಕೆಲವಂತೂ ಮಣಭಾರ. “ಈ ಆಥರಿನ ಈ ಪುಸ್ತಕದ ಇಂತಿಷ್ಟನೇ ಪುಟಗಳಲ್ಲಿ ಈ ಮ್ಯಾಟರಿದೆ. ಎರಡು ದಿನಗಳಲ್ಲಿ ಎಸೈನುಮೆಂಟು ಮಾಡಿ ತನ್ನಿ.” ಎಂದು ಬೃಹತ್ ಪುಸ್ತಕಗಳನ್ನು ಓದಿ ಓದಿ ಬೃಹತ್ ಕನ್ನಡಕಗಳನ್ನು ಮೂಗಿನ ಮೇಲಿರಿಸಿಕೊಂಡ ಕಪ್ಪು ಕೋಟಿನ ಪ್ರೊಫೆಸರ್ ಗಳು ಹೇಳಿದ್ದೇ ತಡ ಮುಂದಿನ ಪೀರಿಯಡ್ಡು ಬಂಕ್ ಮಾಡಿ ಹೋಗಿ ಲೈಬ್ರೆರಿಯಲ್ಲಿ ಹುಡುಕಿ ಆ ಪುಸ್ತಕ ಸಿಕ್ಕಾಗ ಕರ್ನಾಟಕ ಲಾಟರಿಯಲ್ಲಿ ಹತ್ತು ಲಕ್ಷ ಹೊಡೆದ ಅನುಭವ. ಕಷ್ಟಪಟ್ಟು ಪುಟ ತಿರುಗಿಸಿದರೆ ಅದರಲ್ಲಿ ಎಲ್ಲಾ ಪುಟಗಳೂ ಇವೆ. ಆದರೆ ಪ್ರೊಫ಼ೆಸರು ಹೇಳಿದಷ್ಟು ಪುಟಗಳನ್ನು ಅದ್ಯಾರೋ, ಅದ್ಯಾವ ಕಾಲದಲ್ಲೋ, ಅದ್ಯಾವ ಮಾಯೆಯಲ್ಲೋ ಎಗರಿಸಿಕೊಂಡು ಹೋಗಿ ಬಿಟ್ಟಿದ್ದಾರೆ.

ನಿರಾಶೆಯಿಂದ ಕ್ಲಾಸಿಗೆ ಬಂದು ” ಮೇ ಐ ಕಮಿನ್ ಸರ್” ಎಂದಾಗ “ಏನಯ್ಯಾ- ಸೂರ್ಯಪುತ್ರ? ಈಗಾಯಿತಾ ಎಚ್ಚರ?” ಎಂದು ಕುಟುಕಿದ ಪ್ರೊಫೆಸರರ ಮಾತಿಗೆ ಕ್ಲಾಸು ಗೊಳ್ಳೆಂದಾಗ ತಲೆತಗ್ಗಿಸಿ ಒಳ ಬಂದು ಕೂತ.

ಪಕ್ಕದಲ್ಲಿದ್ದ ಅರುಣ ತಿವಿದ. “ಗುಗ್ಗು, ಪ್ರೊಫೆಸರರುಗಳು ಹೇಳುವ ಯಾವ ಪುಟಗಳೂ ಲೈಬ್ರರಿ ಪುಸ್ತಕಗಳಲ್ಲಿ ಉಳಿದಿಲ್ಲ. ಸೀನಿಯರ್ಸನ್ನ ಕೇಳಿದರೆ ಜಿರಾಕ್ಸ್ ಕಾಫಿ ಕೊಡ್ತಾರೆ. ಈಗ ಮರ್ಯಾದೆ ಯಿಂದ ಪಾಠ ಕೇಳು.”

ಅವನ ಮಾತು ನಿಲ್ಲುತ್ತಿರುವಂತೆ ಪ್ರೊಫ಼ೆಸರು ’ಸ್ಟೇಂಡಪ್ಪ್’ ಎಂದು ಗರ್ಜಿಸಿದರು. ಯಾರಪ್ಪಾ ಇಂದಿನ ಬಲಿಪಶು ಎಂದು ಪ್ರೊಫೆಸರರನ್ನು ನೋಡಿದಾಗ ಅವರ ಕನ್ನಡಕ ದೊಳಗಿನ ಕಣ್ಣುಗಳು  ಅವನತ್ತ ಬೆಂಕಿ ಉಗುಳುತ್ತಿದ್ದವು. “ಬ್ಲಡಿಫೂಲ್. ತಡವಾಗಿ ಬರೋದಲ್ಲದೆ ಡಿಸ್ಟರ್ಬು ಮಾಡ್ತಿದ್ದೀಯಾ? ಐ ಡೋಂಟ್ ವಾಂಟ್ ಟು ಸೀ ಯುವರ್ ಅಗ್ಲೀ ಪೇಸ್.ಗೆಟ್ ಲಾಸ್ಟ್” ಎಂದರಚಿಬಿಟ್ಟರು.

ದೂರ್ವಾಸನ ಪ್ರತಿರೂಪದಂತಿರುವ ಅವರಲ್ಲಿ ಪ್ರತಿಯಾಡುವುದೆಂದರೆ ಇಂಟರ್ನಲ್ ಮಾರ್ಕಿಗೆ ಸಂಚಕಾರ ಬಂದಂತೆ ಎಂಬ ಸತ್ಯ ಗೊತ್ತಾಗಿ ಪುಸ್ತಕ ತೆಗೆದುಕೊಂಡು ಹೊರಡು ವಾಗ ಅರುಣ” ಯು ಆರ್ ಲಕ್ಕಿ” ಎಂದು ಪಿಸುಗುಟ್ಟಿದ. ಮೇಜಿನ ಬಳಿ ಒಂದು “ಸಾರಿ ಸರ್” ಎಂದವನೇ ತಲೆ ತಗ್ಗಿಸಿ ಹೊರ ಬಂದು ಬಸ್ ಸ್ಟ್ಯಾಂಡಿನಂತ್ತ ನಡೆದ. ಇವತ್ತಿಡೀ ದಿನ ಯಾಕೋ ಸರಿಯಿಲ್ಲ ಎಂದು ಕೊಳ್ಳುತ್ತಾ ನಡೆಯುತ್ತಿದ್ದವನಿಗೆ ನೆನಪಾದದ್ದು ಆ ಒಂದು ನಗು.!

ಅವನ ತರಗತಿಯಲ್ಲಿ ನಗುವಿಗೇನೂ ಬರವಿರಲಿಲ್ಲ. ಕಾರಣವೇ ಇಲ್ಲದೆ ನಗುವ ಹುಡುಗಿಯರು ಅವನ ಕಣ್ಣಲ್ಲಿ ಅಗ್ಗದ ವಸ್ತುಗಳಾಗಿದ್ದರು. ಪ್ರೊಫೆಸರುಗಳು ಜೋಕು ಹೇಳಿದಾಗ ಅರ್ಥವಾದವರು ನಗುವುದು ಒಂದು ರೀತಿ ಯಾದರೆ ಅರ್ಥವಾಗದವರದ್ದು ಅದು ನಗುವಲ್ಲ, ಅಟ್ಟಹಾಸ!

“ನಗು ಮತ್ತು ಮಂದಹಾಸ ಬೇರೆ ಬೇರೆ. ನಗು ಘಟನೆಯೊಂದಕ್ಕೆ ತಕ್ಷಣದ ಪ್ರತಿಕ್ರಿಯೆ. ಮಂದಹಾಸ ಆತ್ಮವಿಶ್ವಾಸದ ಪ್ರತೀಕ. ನಿಮ್ಮ ಮುಖದಲ್ಲೊಂದು ಮಂದಹಾಸವಿದ್ದರೆ ಸಾಕು. ಅದುವೇ ನಿಜವಾದ ಸೌಂದರ್ಯ.” ಎಂದು ಕನ್ನಡದ ಪ್ರೊಫ಼ೆಸರು ಹೇಳಿದ್ದರು. ನಗು, ಮಂದಹಾಸ, ಅಟ್ಟಹಾಸಗಳ ಸಾಲಿಗೆ ಆ ಒಂದು ನಗುವನ್ನು ಸೇರಿಸಲು ಅವನಿಂದ ಸಾಧ್ಯವಾಗಿರಲಿಲ್ಲ.

ತುಂಬಿದ ಬಸ್ಸಲ್ಲಿ ಅದೆಷ್ಟೋ ಯುವಕ-ಯುವತಿಯರು ಮೈಮರೆತು ಮಾತಾಡುತ್ತಾರೆ. ಕಾಮಣ್ಣಗಳು ಎಲ್ಲೆಲ್ಲೋ ಕೈಯಾಡಿಸುತ್ತಾರೆ. ಎಲ್ಲರೂ ತಮ್ಮಿಂದ ಆಕರ್ಷಿತ ರಾಗಬೇಕೆಂದು ಪ್ರಾಯದ ಹುಡುಗಿಯರು ವಿನಾಕರಣ ನಗುತ್ತಾರೆ. ಪಡ್ಡೆ ಹುಡುಗರ ತಲೆ ಖಾಲಿಯಾದರೂ ಹುಡುಗಿಯರನ್ನು ಎಲ್ಲಿ ಬೇಕೆಂದರಲ್ಲಿ ನಿಲ್ಲಿಸಿಗಂಟೆಗಟ್ಟಲೆ ಮಾತಾಡುತ್ತಾರೆ. ಹುಡುಗರು-ಹುಡುಗಿಯರು ಗಹಗಹಿಸಿ ದೃಶ್ಯವೊಂದನ್ನು ಸೃಷ್ಟಿಸುತ್ತಾರೆ. ಈ ಮಾಮೂಲಿ ಸಂಗತಿಗಳ ನಡುವೆ ಅವನಿಗೆ ಪದೇ ಪದೇ ನೆನಪಾಗುತ್ತಿದ್ದುದು ಆ ಒಂದು ನಗು.

ಅದೊಂದು ದಿನ ತುಂಬಿದ ಬಸ್ಸಿಲ್ಲಿ ಅದ್ ಹೇಗೋ ಸೀಟು ಗಿಟ್ಟಿಸಿಕೊಂಡು ಕೂತಿದ್ದ ಅವನಿಗೆ ಎದುರಿನ ಲೇಡೀಸ್ ಸೀಟಿನಲ್ಲಿ ಒಂದು ಆಕೃತಿ ಹಿಂದೆ ನೋಡುತ್ತಿರುವುದು ಭಾಸವಾಯಿತು. ಅವನು ಅದನ್ನೇ ದಿಟ್ಟಿಸಿದ. ಅದು ಅವನ ಕ್ಲಾಸ್ ಮೇಟು ಆರತಿ. ಅವಳು ಕ್ಲಾಸಲ್ಲೂ ಅವನನ್ನು ಹಾಗೆ ನೋಡುತ್ತಿದ್ದುದುಂಟು. ಅವಳದು ಹುಡುಕುವ ಸ್ವಭಾವ. ಆದರೂ ಅವನ ಕತೆ ಕವನಗಳ ಮೊದಲ ವಿಮರ್ಶಕಿ ಅವಳೇ. ಅವನಿಗೂ ಅವಳಲ್ಲಿ ಸಂಕೋಚವಿಲ್ಲದೆ ಮಾತಾಡಲು ಸಾಧ್ಯವಾಗುತ್ತಿತ್ತು. ಬಸ್ಸಲ್ಲಿ ಆರತಿ ನಕ್ಕಾಗ ಅವನು ಇದು ತನಗೆ ಸಂಬಂಧಿಸಿದ್ದೇ ಅಲ್ಲವೇನೋ ಎಂಬಂತೆ ಕೂತಿದ್ದ.

ಆರತಿ ಬಳಿ ಬುರಕಾ ಹಾಕಿ ಕೂತಿದ್ದವಳು ಅವನ ಆಸಕ್ತಿಯ ಕೇಂದ್ರವಾದಳು. ಬುರುಕಾದ ಹಿಂದೆ ತನ್ನ ಆಸೆ ಆಕಾಂಕ್ಷೆಗಳನ್ನೆಲ್ಲಾ ಬಚ್ಚಿಡಬೇಕಾದ ಹದಿಹರೆಯದವರ ದುಗುಡಗಳ ಬಗ್ಗೆ ಚಿಂತಿಸುತ್ತಾ ಮನೆಗೆ ಹೋದವ ಒಂದು ಕತೆ ಬರೆದು ಅದ್ಯಾವುದೋ ಪತ್ರಿಕೆಗೆ ಕಳುಹಿಸಿದ. ಅದು ಅವನ ಪುಟ್ಟ ಊರಲ್ಲಿ ಒಂದು ಸಂಚಲನವನ್ನೇ ಉಂಟು ಮಾಡಿತು. ಒಂದು ದಿನ ನಾಲ್ಕೈದು ಕಾರುಗಳಲ್ಲಿ ಬಂದ ಜಮಾತಿನವರು ಪ್ರಿನ್ಸಿಪಾಲರಲ್ಲಿ ತಮ್ಮ ಧರ್ಮಕ್ಕೆ ಅವನ ಕತೆಯಿಂದಾಗಿ ಹಾನಿಯಾದುದನ್ನು ದೂರಿದದು. ಪ್ರಿನ್ಸಿಪಾಲರು ಅವನನ್ನು ಅವರೆದುರೇ ಕರೆದು ಸಹಸ್ರನಾಮಾರ್ಚನೆ ಮಾಡಿದರು. ” ಇನ್ನು ಮುಂದೆ ಹೀಗೆಲ್ಲಾದರೂ ಮಾಡಿದರೆ ಟಿ.ಸಿ. ಕೊಟ್ಟು ಓಡಿಸಬೇಕಾಗುತ್ತದೆ” ಎಂದರು.ತನ್ನದೊಂದು ಕತೆಯಿಂದ ಧರ್ಮವೊಂದಕ್ಕೆ ಹೇಗೆ ಹಾನಿಯಾಗುತ್ತದೆನ್ನುವುದು ಅರ್ಥವಾಗದೆ ಆತ ಸುಮ್ಮನೆ ನಿಂತುಬಿಟ್ಟ.

ಅದು ಸಂಜೆ ಬಸ್ಸಲ್ಲಿ ಅದೇ ಲೇಡೀಸ್ ಸೀಟಿಲ್ಲಿ ಅದೇ ಬುರುಕಾ ಕೂತಿತ್ತು. ಅಂದೂ ರಶ್ಶಿತ್ತು.  ಆರತಿಗೆ ಬುರುಕಾದ ಹತ್ತಿರವೇ ಸೀಟು ಸಿಕ್ಕಿತ್ತು. ಆರತಿ ಯೊಮ್ಮೆ ಹಿಂದೆ ನೋಡಿ ನಕ್ಕಳು. ಅವನು ತನ್ನ ಕತೆಯಿಂದ ಧರ್ಮಕ್ಕೆ ಹಾನಿಯಾದುದು ಹೇಗೆಂದ ರಿಯದ ಗೊಂದಲದಲ್ಲಿ ಮುಳುಗಿದ್ದ, ಹಾಗಾಗಿ ಅವಳ ನಗುವಿಗೆ ಪ್ರತಿಕ್ರಿಯಿಸಲಿಲ್ಲ. ಈಗ ಬುರುಕಾ ಹಿಂದೆಕ್ಕೆ ತಿರಿಗಿತು. ಮುಖಕ್ಕಡ್ಡವಾಗಿದ್ದ ತೆರೆಯನ್ನು ಮೇಲೆತ್ತಿ ಒಂದು ಕ್ಷಣ ಅವನನ್ನು ನೋಡಿ ತುಂಬು ನಗೆ ನಕ್ಕು ಮತ್ತೆ ಮುಸುಕು ಹಾಕಿಕೊಂಡಿತು.

ಆ ಬುರುಕಾದ ಒಡತಿ ಅಷ್ಟೊಂದು ಚೆಲುವೆಯಾಗಿರಬಹುದೆಂದು ಅವನು ಊಹಿಸಿರಲೇ ಇಲ್ಲ. ಅವಳ ನಿಷ್ಕಲ್ಮಶ ನಗುವಿನಲ್ಲಿ ಪ್ರಿನ್ಸಿಪಾಲರ ಗದರಿಕೆ, ಜಮಾತಿನವರ ಹ್ಞೂಂಕಾರ ಮತ್ತು ಕೆಂಗಣ್ಣುಗಳೆಲ್ಲಾ ಕೊಚ್ಚಿಹೋಗಿ ಅವನಿಗೊಂದು ದಿವ್ಯತೆಯ ಅನುಭವ ಉಂಟಾಯಿತು. ಅದು ಅವನ ನರನಾಡಿಗಳೆಲ್ಲಾ ವ್ಯಾಪಿಸಿ ಅವನಲ್ಲಿದ್ದ ಜಡತೆಯನ್ನೆಲ್ಲಾ ಹೋಗಲಾಡಿಸಿತು. ವಿಚಿತ್ರವಾದ ಅನುಭೂತಿ ಮತ್ತು ಲಹರಿಯನ್ನು ಉಂಟು ಮಾಡಿದ ಆ ನಗು ಮತ್ತೊಮ್ಮೆ ಸಿಗಲಿ ಎಂದವನು ಕಾದ. ಊಹ್ಞುಂ!

ಮರುದಿನ ಕ್ಲಾಸಲ್ಲಿ ಆರತಿ “ಅವಳು ಸುರಯ್ಯಾಬಾನು ಅಂತ ಪಿ.ಯು.ಸಿ. ಹುಡುಗಿ. ನಿನ್ನ ಕತೆ ಓದಿ ಅವಳಿಗೆ ಅದು ಅವಳದೇ ಕತೆ ಎಂದಾಯಿತಂತೆ. ನಿನಗೊಂದು ಕೃತಜ್ಞತೆ ಎಂದು ನಿನ್ನನ್ನು ನೋಡಿದ್ದಂತೆ. ಹೇಗಿದ್ದಾಳೆ ಚೋಕ್ರಿ? “ಎಂದು ನಕ್ಕಳು.

ಮತ್ತೆ ಆ ನಗು ತನಗೆ ಸಿಕ್ಕೇತೇ ಎಂದವನು ವರ್ಷ ಪೂರ್ತಿ ನಿರೀಕ್ಷಿಸಿದ. ತಪ್ಪಿಯೂ ಆ ಬುರುಕಾ ಮತ್ತೆಂದೂ ಹಿಂದೆ ನೋಡಲಿಲ್ಲ!

ಇದಾಗಿ ನಾಲ್ಕೈದು ವರ್ಷ ಉರುಳಿವೆ. ಅವನೀಗ ರಾಜಧಾನಿಯಲ್ಲಿ ಒಬ್ಬ ಮರಿವಕೀಲನಾಗಿ ಒಂದೆಷ್ಟು ಹೆಸರು ಮಾಡಿದ್ದಾನೆ. ಮದುವೆಯಾಗಿ ಪುಟ್ಟದೊಂದು ಕೂಸನ್ನು ಹೆಂಡತಿಗೆ ದಯಪಾಲಿಸಿದ್ದಾನೆ. ಜೀವನದ ತುರ್ತು ಜಂಜಡಗಳ ಮಧ್ಯೆ ಆ ಒಂದು ನಗು ಸಂಜೀವಿನಿ ಯಾಗಿ ಹೊಸ ಹುರುಪು ನೀಡುತ್ತದೆ.

ಒಂದು ದಿನ ಸಿಟಿ ಮಾರ್ಕೆಟ್ಟಿನಲ್ಲಿ ತರಕಾರಿಕೊಳ್ಳುವಾಗ “ಎಕ್ಸ್ ಕ್ಯೂಸ್ ಮಿ” ಕೇಳಿ ತಲೆ ಎತ್ತಿದ. ಹಣೆಗೆ ಬಿಂದಿ ಯಿಲ್ಲದ ಅತಿ ಸುಂದರ ತರುಣಿಯೊಬ್ಬಳು ಗಂಡಸೊಬ್ಬನ ಜತೆ ನಿಂತಿದ್ದಾಳೆ. “ನನ್ನ ಹಸ್ಬೆಂಡು. ಇವರು ಒಳ್ಳೆ ಕತೆಗಾರರು. ಒಮ್ಮೆ ಬುರುಕಾದ ಬಗ್ಗೆ ಬರೆದಿದ್ದರು. ಕತೆ ನನಗಿಷ್ಟವಾಗಿತ್ತು. ಆದರೆ ಇವರಲ್ಲಿ ಮಾತಾಡುತ್ತಿರುವುದು ಇದೇ ಮೊದಲು.” ಎಂದು ಗಂಡನಿಗೆ ಪರಿಚಯ ಮಾಡಿಕೊಟ್ಟಳು. ಗಂಡ ಅವನ ಕೈ ಕುಲುಕಿ ಮಾತಾಡಿದ.

ತೀರಾ ಬೀಳ್ಕೊಡುವ ಮುನ್ನ ಅವಳು ಒಮ್ಮೆ ನಕ್ಕಳು. ಅದು ಅದೇ ನಗು. ಆ ಒಂದು ನಗು! ಅಂದು ಅವನು ಅವನಾಗಿರಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಲ್ಲನ್ ಬೆಳೆಯೋದ್
Next post ಬಾಳುವೆ ಮಾಡೋದು

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…