ಬಹಳ ಹಿಂದೆ ಒಂದು ಹಳ್ಳಿಯಿತ್ತು. ಆ ಹಳ್ಳಿಯಲ್ಲಿ ಕುಲ್ಡಪ್ಪ ಶೆಟ್ಟಿ ಎಂಬ ಮಹಾ ವರ್ತಕನಿದ್ದ.
ಆತ ಒಂದು ಉತ್ತಮವಾದ ಬಿಳಿ ಕತ್ತೆ ಸಾಕಿದ್ದ. ಆ ಕತ್ತೆ ಮೇಲೆ ಕುಳಿತು ಶಿರೇಕೊಳ್ಳ- ದೇವಸಮುದ್ರ- ರಾಂಪುರ ಸಂತೆಗಳಿಗೆ ಹೋಗಿ ಮುತ್ತು, ರತ್ನ, ವಜ್ರ, ವೈಡೂರ್ಯ, ಮಾಣಿಕ್ಯದ ವ್ಯಾಪಾರ ಮಾಡಿ ಬರುತ್ತಿದ್ದ, ಭಾರೀ ಭಾರೀ ಶ್ರೀಮಂತನಾಗಿದ್ದ. ಸುತ್ತ ೧೮ ಹಳ್ಳಿಗೆಲ್ಲ ಕುಲ್ಡಪ್ಪ ಶೆಟ್ಟಿ ಒಂದು ಕತ್ತೆ ಕಟ್ಟಿ ದೊಡ್ಡ…. ಹೆಸರು ವಾಸಿಯಾಗಿದ್ದ…!
ಅದೇ ಹಳ್ಳಿಯ ಮೂಲೆಯಲ್ಲಿ ಮೃತ್ಯುಂಜಯನೆಂಬ ಗುಡಿ ಪೂಜಾರಿಯೊಬ್ಬನಿದ್ದ. ಇವನು ಗುಡಿ ಪೂಜಾರಿಕೆ ಒಂದನ್ನು ಬಿಟ್ಟು ಜೊಲ್ಲು ಸುರಿಸುತ್ತಾ… ಇಡೀ ಹಳ್ಳಿಯ ಮೇಲು ಉಸಾಬರಿಕೆ ಮಾಡಿ ನಿತ್ಯ ಎಲ್ಲರ ಮೇಲೆ ಸುಮ್ಮನೇ ಕರುಬುತ್ತಿದ್ದ. ಬರೀ ಬೂಟಾಟಿಕೆ ನಡೆಸಿದ್ದ, ಎಲ್ಲರಿಗೆ ತಲೆನೋವಾಗಿ ಪರಿಣಮಿಸಿದ್ದ.
ಒಮ್ಮೆ- ಕುಲ್ಡಪ್ಪ ಶೆಟ್ಟಿಯನ್ನು ಮೃತ್ಯುಂಜಯ ಅಡ್ಡಗಟ್ಟಿ- “ಶೆಟ್ಟಿ… ಶೆಟ್ಟಿಽಽ… ನಿನ್ನ ಅದೃಷ್ಟವಂತದ ಬಿಳಿ ಕತ್ತೆಯನ್ನು ನನಗೆ ಮಾರಿ ಬಿಡು, ಗುಡಿ ಮುಂದಲ ತೋಟ, ಗದ್ದೆ, ಮಾಗಣೆ, ಹೊಲ… ನಿನಗೆ ಕೊಡ್ತೀನಿ! ನನಗದು ಕತ್ತೆಯಾಗಿ ಕಾಣುತ್ತಿಲ್ಲ! ಬಿಳಿ ಅರಬಿಯನ್ ಕುದುರೆಯಾಗಿ ಕಾಣುತ್ತಿದೆ. ನಾನೂ ನಿನ್ನಂಗೇ ವ್ಯಾಪಾರ ಮಾಡಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕೆಂದಿದ್ದೇನೆ” ಎಂದ… ಮೃತ್ಯುಂಜಯ…ಽಽ…
ಕುಲ್ಡಪ್ಪ ಶೆಟ್ಟಿ ಗಹಗಹಿಸಿ ನಕ್ಕ.
“ನೀ ಬುದ್ಧಿಗೇಡಿ ಪೂಜಾರಿ ಇದ್ದೀಗಿ. ಮನೆ ಮುಂದೆ ಗುಡಿ, ನಿತ್ಯ ಮೂರು ಹೊತ್ತು ಪೂಜಾರಿಕೆ ಮಾಡಿಕೊಂಡು ಹಣ್ಣು, ಕಾಯಿ, ಪ್ರಸಾದ, ಹೂವು, ತೀರ್‍ಥ, ಫನ್ನೀರು, ಚಂದನ ಎಂದು ಖುಷಿಖುಷಿಯಾಗಿರದೂ ಬಿಟ್ಟು ಹಳ್ಳಿಹಳ್ಳಿ ತಿರುಗಿ ನೀ ಏನು ವ್ಯಾಪಾರ ಮಾಡೀಗಿ? ನಿನ್ನ ಹೊಟ್ಟೆ ಕರಗಿ ನೀರಾಗಿ ಗುಂಡೇರಹಳ್ಳವಾಗಿ ಹರಿವದು” ಎಂದು, ಬಲು ವ್ಯಂಗ್ಯ ಮಾಡಿ ನಕ್ಕು, ಬಿಳಿ ಕತ್ತೆ ಏರಿ ಹೊರಟೇ ಬಿಟ್ಟ….!
ಮೃತ್ಯುಂಜಯನಿಗೆ ಭಲೇ ಅವಮಾನವೆನಿಸಿತು. ಈ ಬಿಳಿ ಕತ್ತೆ ಏರಿ ನಾನೂ ವ್ಯಾಪಾರ ಆರಂಭಿಸಲೇಬೇಕು. ಪೂಜಾರಿಕೆಯಲ್ಲಿ ಈಗೀಗ ಸುಖ, ಶಾಂತಿ, ನೆಮ್ಮದಿಯಿಲ್ಲವೆನಿಸಿದೆ! ಎಂದು ಯೋಚಿಸಿದ.
ಹೀಗಿರಲಾಗಿ- ಒಂದು ದಿನ ಕುಲ್ಡಪ್ಪ ಶೆಟ್ಟಿ ಎಂದಿನಂತೆ ಕತ್ತೆ ಏರಿ ರಾಂಪುರದ ಸಂತೆಗೆ ಹೊರಟಿದ್ದ. ದಾರಿಯಲ್ಲಿ ದಂಡಿನ ಬೇಲಿಯಲ್ಲಿ ಯಾರೋ ರೋಧಿಸುವ “ಅಯ್ಯೋ ಅಪ್ಪ, ಅಮ್ಮಾ ನನ್ನ ಕಾಪಾಡಿಽ..” ಎಂಬ ಕೂಗು ಕೇಳಿದ. ಅಲ್ಲೇ ಕತ್ತೆಯಿಂದ ಇಳಿದ ಅವನನ್ನು ಬಾಚಿ ಎತ್ತಿ ತಂದು ಕತ್ತೆ ಮೇಲೆ ಕೂಡಿಸಿ ತಾನು ಹಿಂದಿಂದೆ ನಡೆಯುತ್ತಾ ಸಾಗಿದ್ದ.
ತುಸು ದೂರ ಅಲ್ಲೇ ತುರುಕರ ಘೋರಿಗಳ ಬಳಿ ಹೋಗಿ “ಏ ಶೆಟ್ಟೀ ನಾನೇ ಮೃತ್ಯಂಜಯ! ನಿನಗಿನ್ನು ಗುರ್‍ತು ಸಿಗಲಿಲ್ಲವೇ? ಈ ಕತ್ತೆ-ಕತ್ತೆ ಮೇಲಿನ ಮುತ್ತು, ರತ್ನ, ವಜ್ರ, ವೈಡೂರ್ಯ… ಎಲ್ಲ ಈಗ ನನ್ನದು! ನಾನಿನ್ನು ಬರುತ್ತೇನೆ” ಎಂದು ಮೃತ್ಯುಂಜಯ ಕತ್ತೆಯನ್ನು ಜೋರಾಗಿ ಓಡಿಸಲು ಮುಂದಾದ.
“ಲೋ… ಮೃತ್ಯುಂಜಯ! ನೀ ಗಂಟೆ ಅಲ್ಲಾಡಿಸಿದಷ್ಟು ಜೋಲ್ಲು ಸುರಿಸಿ… ಹಸಿರು ಗೊಣ್ಣೆ ಬಿಟ್ಟಷ್ಟು… ಆರತಿ ತಟ್ಟೆ ಬೆಳಗಿದಷ್ಟು- ಗುಡಿಯ ಪೂಜಾರಿಕೆ ಮಾಡಿದಷ್ಟು ಸುಲಭವಲ್ಲ…! ಅದೂ ನನ್ನ ಕತ್ತೆ! ಅಷ್ಟು ಸಲೀಸಿಲ್ಲ ನೀ ಅದರ…. ಮೇಲೆ ಕುಳಿತು ಸವಾರಿ ಮಾಡುವುದು?? ಅದು ನನ್ನ ಕತ್ತೆ! ಅದೂ ಕುದುರೆಗೂ ಮಿಗಿಲು! ಅದೃಷ್ಟ ಲಕ್ಷ್ಮೀ…. ನಾ ಹೇಳಿದಂತೆ ಕೇಳುವುದು…. ಬೇಗ ಕೆಳಗಿಳಿ! ಇಲ್ಲವಾದರೆ… ಆಹಾಽ ನಿನಗೇ ಆಪತ್ತು!” ಎಂದು ಕುಲ್ಡಪ್ಪ ಶೆಟ್ಟಿ ಮೃತ್ಯುಂಜಯನಿಗೆ ಅಂದನಲ್ಲದೆ ಕತ್ತೆಯಂಗೇ ಒಂದು ಕೂಗು ಹಾಕಿದ! ಅಷ್ಟೇ ಸಾಕಾಯಿತು ಕತ್ತೆಗೇ….!
ಮೃತ್ಯುಂಜಯ ಉಢಾಳ- ದುಷ್ಠ- ಕ್ರೂರಿ-ಕೆಡುಕ-ಕುಡುಕ, ಕೆಟ್ಟ ಬುದ್ಧಿಯವ… ಕತ್ತೆಗೆ ಓಡಿಸಲು ಕೈಯಿಂದ ಜೋರಾಗಿಯೇ ಗುದ್ದಿದ. ಆ ಬಿಳಿ ಕತ್ತೆ ಓಡದೆ ಅವನನ್ನು ಕೆಳಕ್ಕೆ ಬೀಳಿಸಿ, ಕಾಲಿನಿಂದ ಜೋರಾಗಿ ಎರಡು ಮೂರು ಸಾರಿ ಒದೆಯಿತು. ಕಾಲುಗಳಿಂದ ತುಳಿಯಿತು, ಕೆನೆಯಿತು…. ಅವನನ್ನು ಹಣ್ಣುಗಾಯಿ ನೀರಾಯಿ ಮಾಡಿತು!
ಅಷ್ಟರಲ್ಲಿ ಕುಲ್ಡಪ್ಪ ಶೆಟ್ಟಿ ಓಡಿ ಬಂದು ಕತ್ತೆಯಿಂದ ಮೃತ್ಯುಂಜಯನನ್ನು ರಕ್ಷಿಸಿದ. ಅವನ ಬೆನ್ನು ಶಾಶ್ವತವಾಗಿ ಮುರಿದು ಹೋಗಿತ್ತು! ಹಲ್ಲುಗಳು ಉದುರಿ ಮೈ ಮನವೆಲ್ಲ ರಕ್ತಮಯವಾಗಿ ಹೋಗಿದ್ದವನನ್ನು ಆಸ್ಪತ್ರೆಗೆ ಸಾಗಿಸಿ, ಶೆಟ್ಟಿ ಪುಣ್ಯ ಕಟ್ಟಿಕೊಂಡ.
*****