ನುಜ್ಜುಗುಜ್ಜಾಗಿದೆ ಪ್ರೀತಿ ಸಿಲುಕಿ ಈ ಚಕ್ರದಡಿ
ಬೂದಿಯಾಗಿದೆ ಸುಟ್ಟು ಬೆಟ್ಟದ ಆ ತಪ್ಪಲಲಿ
ಅಗೋ ಅಲ್ಲಿ ತೂಗುತಿದೆ ಮರದಲಿ
ಇಗೋ ಇಲ್ಲಿ ತೇಲುತ್ತಿದೆ ಹುಚ್ಚು ಹೊಳೆಯಲಿ.
ಕೊಚ್ಚಿ ಹಾಕಿಹರು ಅದನು ಕೂಡು ರಸ್ತೆಯಲಿ
ವಿಷಕೆ ವಶವಾಗಿ ರೋಷಕ್ಕೆ ಈಡಾಗಿ
ಎವೆ ಮುಚ್ಚಿ ಮಲಗಿದೆ ಪ್ರೀತಿ
ಮಣ್ಣೊಳೊಳಗೆ ಹಣ್ಣಾಗಿ.
ದಂಡನೆಗೆ ಅಂಜಿ ಅಳಿಯುವುದೆ ಪ್ರೀತಿ?
ಅಡಗುವುದೆ? ಉಡುಗುವುದೆ?
ನಡುಗುವುದಿಲ್ಲ ಅದರ ನಾಡಿ;
ಅದರ ಉಸಿರೇ ನಿರ್ಭೀತಿ.
ಮರುಹುಟ್ಟು ಪಡೆಯುವುದು,
ಅನುದಿನವೂ ಅರಳುವುದು ಗಿಡದಲ್ಲಿ ಹೂವಾಗಿ,
ನದಿಯಲ್ಲಿ ಅಲೆಯಾಗಿ,ಗಿರಿಯಲ್ಲಿ ನವಿಲಾಗಿ
ನಲಿಯುವುದು, ಬಲಿಯುವುದು ಬಿದಿಗೆಯ ಚಂದ್ರನಂತೆ
ಮಿನುಗುವುದು ನಕ್ಷತ್ರವಾಗಿ, ಹಂಬಲಿಸುವ
ಹೃದಯದಲಿ ಹಾಡಾಗಿ ಹೊಮ್ಮುವುದು……
ಹಗೆಯೆಂದು ಬಗೆದವರೆಷ್ಟೋ ಮಂದಿ ಮುಟ್ಟಿ
ಮನುಷ್ಯರಾದರು ಪ್ರೀತಿಯ ಆತ್ಮವನ್ನು…
ಮನುಷ್ಯರಾದವರು ಮತ್ತೆ ಮತ್ತೆ ಬಿತ್ತಿ ಬೆಳೆದರು
ಪ್ರೀತಿ ಬೆಳೆಯನ್ನು…
*****