ಇಜ್ಜೋಡು

ನನ್ನಾಕೆಯಂತಾಕೆ ಲೋಕಕೆ ಒಬ್ಬಾಕೆ
ಅವಳಿಗೆ ಅವಳೆ ಹೋಲಿಕೆ.

ಓದಿಯೂ ಓದದ
ದೂರದವಳಲ್ಲದ ಇವಳ ಮಾಡಿಕೊಂಡು ಬಂದೆ
ಇವಳ ಜೋಡಿ ಸಂಸಾರ ನನಗೆ
ಕತ್ತಿ ಮೇಲೆ ಸಾಮು ಮಾಡಿದಂಗಾಗುತಿಹುದು.

ಮೇಲೆ, ನೋಡೋಕೆ ಇವಳು ಮೆತ್ತನ್ನಾಕೆ
ಒಳಗೆ ಬಲು ಘಾಟಿಯೀಕೆ
ಸದಾ ನೆರೆಕೆರೆ ಒಬ್ಬರಲ್ಲ ಒಬ್ಬರ, ಒಂದಲ್ಲ ಒಂದು ಕೊಂಕ
ಎತ್ತಿಯಾಡದಿದ್ದರೆ ತಿಂದದ್ದು ಅರಗದು ಇವಳಿಗೆ.
ನಮ್ಮದು ನಮಗೆ
ಅನ್ಯರ ಸುದ್ದಿ ಯಾಕೆಂದರೆ ಮೂತಿ ಮುರಿಯುವಳು

ಇವಳು ಚೆನ್ನಾಗಿದ್ದಾಗ ಮಾತ್ರ
ಇವಳಂತ ಹೆಣ್ಣಿಲ್ಲ
ಉಳಿದಂತೆ ಹೀಗೆ ಅಂತ ಹೇಳೋಕೆ ಬರಲ್ಲ.

ದೊಡ್ಡಾಕೆಯಿವಳು
ನೀನು ಬುದ್ದೀನೆ ಹೇಳು ಕೇಳಳು
ಅವಳಿಗೆ ಏನು ಹೇಳಬಾರದು
ಅವಳು ನಡೆದದ್ದೆ ದಾರಿಯೆಂದರೆ ಸಮ
ತಪ್ಪಿದರೆ ಮನೆಯಾದ ಮನೆಯನ್ನೆಲ್ಲಾ
ಕಾಳಿಂಗ ಮಡುವಾಗಿ ಮಾಡಿ ಬಿಡುವಳು.

ಅನುನಯ ಇವಳಲ್ಲಿ ಕೇಳಬೇಡ
ಹರಿ ಹಾಯೋದು ಬಿಟ್ಟರಿವಳು ಮನುಷ್ಯಳಲ್ಲ!
ಎದ್ದಾಗಿನಿಂದ ಮಲಕೊಳ್ಳೊವರೆಗೆ ಅದು ನಡದೇ ಇರುತ್ತೆ
ಇಗ! ಅವಳಿಗೆ ನಿದ್ದೆ ಬಂದಾಗಲೊಂದು ಕ್ಷಣ
ಮನೆ, ಮನ ತಣ್ಣಗಿರುತ್ತೆ, ನಿರಾಳವಿರುತ್ತೆ.

ಅವಳು ನನ್ನ ಮೇಲಷ್ಟೆ ಅಲ್ಲ
ಮಕ್ಕಳ ಮೇಲೂ ಅಷ್ಟೆ!
ಅವು ಆಟ ಗೀಟ ಅಂದರೆ ಉಹೂಂ! ಇಲ್ಲ!
ಅವಳು ಹೇಳಿದ್ದ ಮಾಡಬೇಕು
ಅವಳಿಷ್ಟದಂಗೆ ಇರಬೇಕು
ಒಂದೇ ಒಂದು ಕ್ಷಣ ಮರೆಯಾದರೂ ಸಿದುಮುವಂಗಾಡುವಳು

ಹೇಳಿ ಕೇಳಿ ನಾನೊಬ್ಬ ಮಾಸ್ತರ
ಯಾರಾದರೊಬ್ಬರು ತಪ್ಪದೇ ಬರುವರು
ನನ್ನ ಹತ್ತಿರ.
ಹಾಗೆ ಬಂದಾಗ ಮಾತಾಡುತ್ತ ಕುಳಿತರೆ
ಅಬ್ಬಬ್ಬಾ! ಏನದು ಮಾತೂ ಮಾತು!
ಮಾಡೋಕಿನ್ನೇನು ಬೇರೆ ಉದ್ಯೋಗ
ಅದರ ಬದಲು ಮನೆಯೊಳಗೆ ಏನಾದರೂ ನೋಡಿದರೆ ಆಗೋದಿಲ್ಲವೆ!
ನಿಮಗೇನೋ ಬೇರೆ ಕೆಲಸವಿಲ್ಲವೆಂದರೆ
ಇದ್ದವರಿಗೆ ಇರೋದಿಲ್ವೆ?
ಜೊತೆಗೆ ನಿಮಗೆ ಕಾಫಿ, ತಿಂಡಿ, ಸರಬರಾಜು ಬೇರೆ ಆಗಬೇಕು
ನೀವು ಮನೆಯೊಳಗಿದ್ದೀರಿಯೆಂದರೆ
ನನಗೆ ಒಂದೇ ಒಂದು ಕೆಲಸವೂ ಸಾಗದು
ದೊಡ್ಡ ತಲೆನೋವೆನ್ನುವಳು.

ಇನ್ನು ಹುಡುಗಿಯರು ಯಾರಾದರೂ ಬಂದು ಬಿಟ್ಟರೆ
ಮುಗೀತು!
ಒಳಗಿದ್ದು ಕೊಂಡೇ ಎಲ್ಲಾ ಗಮನಿಸುವಳು
ಅವರೊಂದೊಂದು ಅಲಂಕಾರ, ಆಕಾರ, ಬಟ್ಟೆ, ಬರೆ, ನಡೆ ನುಡಿ
ಎಲ್ಲಾ ವಿಮರ್ಶೆ ನಡೆಸುವಳು
ನನ್ನನ್ನು ಅವರನ್ನು ಒಟ್ಟುಗೂಡಿಸಿ ಅಂದು ಬಿಡುವಳು.

ರೇಗತ್ತಿ ನಾನು,
ನಾನು ಕೆಡಬೇಕೆಂದರೆ
ನೀನು ಹಿಡಿದು ಕೊಳ್ಳುವೆಯೇನೆ?
ನನಗೆ ನನ್ನ ಗೌರವ, ಘನತೆಯ ಬಗೆಗೆ ತಿಳಿಯದೆ?
ಏನು ಮೊದಲಿಂದಲೂ ನೀನೇ ಇದ್ದೆಯಾ? ಎಂದರೆ
ಆ ಹ . ಹ .. ಹ .. ! ಎನ್ನುವಳು

ಯಾವುದೊಂದರಲ್ಲೂ ಹೀಗೆ
ನಾನು ಯಾವುದೆಂದರೂ ಅವಳಿಗೆ ತಪ್ಪೆ!
ಕೊನೆಗೆ ಸರಸದ ವಿಷಯಕ್ಕೆ ಬಂದರೂ
ಬಲು ಮಡಿ, ಬಿಗಿ
ತೂಕ ಮಾಡಿದಂಗೆ

ಅದೇನೋ
ಓದು ಬರೆಯೋದು ಅಂದರೆ
ಇವಳಿಗಾಗದು
ನಾನೇನಾದರೂ ಪುಸ್ತಕ, ಪೆನ್ನು ಎತ್ತಿಕೊಂಡರೆ
ಹೂಂ! ಇನ್ನು ಕುಂತು ಬಿಟ್ಟರಾ ಎನ್ನುವಳು

ಒಂದಾದರೆ ಹೇಳ ಬಹುದು

ರೋಸಿ ಹೋಗಿ
ಲಟ ಪಟ ಅಂದರೆ
ಮುಸುಗಿಟ್ಟು ಮಲಗಿದಾಕೆ ಮರುದಿನವಾದರೂ ಎದ್ದರೆ ಕೇಳಿ!

ನಾನು,
ಅನ್ನೋದೇನೋ ಅಂದು ಬಿಡುವೆ
ಆಮೇಲೆ ಏನಾದರೊಂದು ಮಾಡಿಕೊಂಡರೇನು ಗತಿಯೆಂದು
ಬಹಳ ಅಂಜುವೆ.

ಜೊತೆಗೆ
ಕಸ ಮುಸುರೆ, ಮಕ್ಕಳು ಮರಿ ಕೆಲಸ
ನನಗೆ ಭಾರಿ ಕೆಲಸ.
ಇದೆಲ್ಲಾ ತಿಳಿದೋ ಏನೋ ಅವಳು ಉರಿದಾಡುವಳು
ನಾನು ನಾಯಿಯಂಗೆ ಮುಚ್ಚಿಕೊಂಡಿರ ಬೇಕಾಗುವುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ದಂಡಿಸಿದ್ದಾರೆ ನೋಡಿ…
Next post ಮೊದಲು-ನಂತರ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…