ಬರುತ್ತಾರೆ
ಬಯಸದೇ ಇದ್ದವರು
ಯಾರುಂಟು ನಿಮ್ಮೊಳಗೆ
ಹೊಚ್ಚ ಹೊಸ ಪದ್ಯಗಳ, ವಿದೇಶಿ ಮದ್ಯಗಳ ?
ಅಂತೆಯೇ ನಮ್ಮ
ದಾವುದರ ಮಗ
ಸುಲೇಮಾನ್ ಎಂಬ ಭೂಪತಿ ರಂಗ !
ಬರುತ್ತಾರೆ ! ಬರುತ್ತಾರೆ !
ಹುಡುಗಿಯರು ಬರುತ್ತಾರೆ !
ಸ್ಕರ್ಟಿನಲಿ ಬರುತ್ತಾರೆ
ಸೀರೆಯಲಿ ಬರುತ್ತಾರೆ
ತಾಳೆಯಂತೆ ತೆಳ್ಳಗೂ
ಬಾಳೆಯಂತೆ ಬೆಳ್ಳಗೂ
ಕಳ್ಳಿನಂತೆ ಬನಿಯುಳ್ಳ
ಸುಳ್ಳಿನಂತೆ ದನಿಯುಳ್ಳ
ಕಳ್ಳ ಕಳ್ಳ ಹೆಜ್ಜೆಯ
ಸುಳ್ಳು ಸುಳ್ಳೆ ಲಜ್ಜೆಯ
ಬಾಗಿಲಲ್ಲೆ ಕಳಚುತ್ತಾರೆ
ಎಲ್ಲ ಎತ್ತಿ ಒಗೆಯುತ್ತಾರೆ
ಮಂಚ ಹತ್ತಿ ಮಲಗುತ್ತಾರೆ
ರಾತ್ರಿಗಳ ಕಲಕುತ್ತಾರೆ
ಸುಲೇಮಾನ ನಮ್ಮ ರಾಜ
ವಯಸು ತುಸು ಮಿಕ್ಕರೂ
ಹಾಕುತ್ತಾನೆ ಎಂಥ ಮೋಡಿ
ಅವರು ಇವರು ಎವರಿಗೂ
ಚಿತ್ತಾರದ ಸೋಪಾನಗಳ
ಹತ್ತಿ ನೀವು ಹೋದರೆ
ಆಚೀಚೆ ಕೋಣೆಗಳು
ಬಾಗಿಲಿಗೆ ಬಿಳಿ ತೆರೆ
ಕುಲುಕುನಗೆಗೆ ಅಳುಕುವಂಥ
ತುಪ್ಪಳದ ಹಾಸು
ಕೈಚಾಚಿದಲ್ಲೆಲ್ಲ
ಮದಿರೆಯ ಗ್ಲಾಸು
ಬಯಸಿದಲ್ಲಿ ಸೋಫ
ದಿಂಬು ಅದರ ತುಂಬ
ನೋಡಿದಲ್ಲಿ ಕನ್ನಡಿ
ಹಿಡಿದು ಪ್ರತಿಬಿಂಬ
ಎಷ್ಟು ನಿಜ, ಎಷ್ಟು ಸುಳ್ಳು
ಹೇಳೋದು ಹೇಗೆ ?
ರಾಜಾಸ್ಥಾನದಲ್ಲೆಲ್ಲ
ಇರೋದೇ ಹಾಗೆ
ಪ್ರತಿದಿನವೂ ಸುಲೇಮಾನ್
ಮಾಡುತ್ತಾನೆ ವ್ಯಾಯಾಮ
ಹತ್ತು ಮೈಲಿ ನಡೆಯುತ್ತಾನೆ
ಕುದುರೆಯಲ್ಲೂ ಹೋಗುತ್ತಾನೆ
ಭಾರವಾದ ಚಕ್ರಗಳ
ಎತ್ತಿ ಎತ್ತಿ ಎಸೆದುಬಿಡುವ
ನೂರು ಸಲ ಬಿಡದೇ
ಬಸ್ಕಿಯನೂ ತೆಗೆಯುವ
ಯೋಗ ಹೇಳಿಕೊಡುವುದಕೆ
ಪ್ರತ್ಯೇಕ ಗುರು
ಎಣ್ಣೆಯೊತ್ತಿ ತೀಡುವುದಕ್ಕೆ
ಲಾವಣ್ಯವತಿಯರು
ಅಡಿಯಿಂದ ಮುಡಿವರೆಗೆ
ಅವರು ಅಡಿಯಿಡುವರು
ಒಬ್ಬರ ಮೇಲೊಬ್ಬರು
ಅವನ ಮೇಲೆ ಕುಣಿವರು
ತಾ ಮುಂದೆ ತಾ ಹಿಂದೆ
ಜಾರುಬಂಡೆ ಜಾರುವರು
ತಮ್ಮ ಬರೀ ಕುಂಡೆಗಳ
ಅವನ ಮೇಲೆ ಸಾರುವರು
ರಾಜನಿದ್ದಲ್ಲಿಗೇ
ದಫ್ತರಗಳು ಬರುತ್ತವೆ
ಬರೆಯೋದಕ್ಕೆ ಪೀಠವಿಲ್ಲ
ಅವಳ ಇವಳ ಪೃಷ್ಠವೇ!
ನಂಬದವರು ಕೇಳುತ್ತಾರೆ
ಅರೇ ಉಂಟೆ ಹೀಗೂ ?
ರಾಜಾಜ್ಞೆ ರಾಜಾಜ್ಞೆಯೆ
ಹೇಗೆ ಹೊರಟರೂ !
ಸುಲೇಮಾನನ ಮಾದರಿ ಗಾದೆಗಳು
೧ ಮುಚ್ಚಿದವ ಮಾತ್ರವೇ ಬಿಚ್ಚಬಲ್ಲ ತನ್ನ
ಬಿಚ್ಚುವುದಕಾದರೂ
ಮುಚ್ಚಿಡಬೇಕು ಕೆಲವನ್ನ.
೨ ಕುಡಿಯುವ ಸಮಯದಲಿ ಹಿಡಿದಿರಯ್ಯ
ಹಿಡಿಯುವ ಸಮಯದಲಿ ಮಾತ್ರ
ಬಿಡದಿರು ಕೈಯ.
೩ ಗುರುತಿರದ ಕಡೆ ಹೋಗಬೇಡ-ಹೊಕ್ಕರೂ
ಬಾಗಿಲ ಬಿಟ್ಟು ಸರಿಯಬೇಡ ದೂರ
ಯಾರೇ ಕರೆದರೂ.
೪ ಒಂದು ಕಾಲಿನ ಮೆಟ್ಟು ಇನ್ನೂಂದಕ್ಕೆ ತೂರಿ
ನೋಡು, ನೋಡಿದರೆ ತಿಳಿಯುವುದು
ನಡೆತದ ಸರಾಸರಿ.
೫ ಭಗವಂತನ ನಂಟು
ಭಗವೊಂದಕ್ಕೆ ಅಲ್ಲ, ಎದೆಯುಂಟು, ತುಟಿಯುಂಟು
ಜಘನವೂ ಉಂಟು.
೬ ಎಡಬಲದ ವ್ಯತ್ಯಾಸ ಕೈಗೆ, ಮೊಲೆಗೆ.
ಎಡವೇನು ಬಲವೇನು
ಲಿಂಗಕ್ಕೆ, ಯೋನಿಗೆ ?
೭ ತಲೆಯೊಂದು, ಮೊಲೆಯೆರಡು; ಮೂಗೊಂದು, ಕಿವಿಯೆರಡು.
ದ್ವೈತ-ಅದ್ವೈತಗಳಂತೆ ಲಿಂಗದ
ಕೆಳಗೇ ತರಡು.
೮ ಎಲ್ಲ ದ್ರವಗಳೂ ಉಪದ್ರವವಲ್ಲ-ಆರ್ದವ,
ಮಾರ್ದವ, ಸುಖದ್ರವ
ಯೋನಿದ್ರವ !
೯ ಪ್ರತಿಯೊಂದಕ್ಕೆ ಒಂದು ಕ್ಷಣ, ಜ್ಞಾನೋದಯದ ಕ್ಷಣ
ವೀರ್ಯಸ್ಖಲನದ
ಮರುಕ್ಷಣ.
೧೦ ತುಟಿಯೇನು, ಕಟಿಯೇನು,
ಎಲ್ಲವನು ಮುತ್ತಿಡುವುದು
ನೀರೊಳಗಿನ ಮೀನು.
೧೧ ತಾಳೆಮರದಲ್ಲೊಂದು ಕಾಗೆ
ಆಚೆ ನೋಡುವುದು, ಈಚೆ ನೋಡುವುದು
ಹಾಗಾದರೆ ಹಾಗೆ, ಹೀಗಾದರೆ ಹೀಗೆ.
೧೨ ಒಂದು ಕಡೆ ಯೋಗ, ಇನ್ನೊಂದು ಕಡೆ ಭೋಗ-
ದೇವರು ಉದಾರಿ-ಕುಂಡೆಗೂ ಕಲ್ಪಿಸಿದ
ವಿವಿಧ ಉಪಯೋಗ.
೧೩ ಎಷ್ಟೊಂದು ಬೇಗ ಸಾಗುವವು ದಿನಗಳು
ಎನ್ನುತ್ತ ಕೂಡುವೆವು
ಚಿಟ್ಟೆಯಲಿ ನಾವುಗಳು.
೧೪ ಕೇವಲವಲ್ಲ ಕವಣೆಯ ಕಲ್ಲು,
ಸೆಟೆದ ಲಿಂಗ ಹಾಗೂ
ಬಗ್ಗಿಸಿದ ಬಿಲ್ಲು.
೧೫ ಬಿಟ್ಟೇನು ಸಂಗವನು, ಬಿಟ್ಟು ನಡೆದೇನು
ರಂಗವನು-ಬಿಟ್ಟುಬಿಡಲೆಂತು
ಎತ್ತ ನಡೆದರೂ ಹೊತ್ತ ಲಿಂಗವನು ?
೧೬ ಹೊಕ್ಕುಳಲಿ ಹೂವಿಲ್ಲ, ಯೋನಿಯಲುಂಟು
ಎಂದೆ ಪ್ರತಿದಿನವು ಸೇರಿಸುವೆವು
ಅದಕ್ಕೆ ದಂಟು.
೧೭ ಬೆಳಗಾದುದಕ್ಕೆ ಹಳಿಯಲೇ ಕೋಳಿಯ ?
ಸಂಜೆಯಾದುದಕ್ಕೆ ಹೊಗಳಲೇ
ಮಲ್ಲಿಗೆಯ ?
೧೮ ಎಲ್ಲೆ ಮರೆತರೂ ಮರೆಯಬೇಡ
ಸೂಳೆಮನೆ ಮುಂದೆ
ಕಾಲಿನ ಜೋಡ.
೧೯ ಕಾಮವೆಂದರೆ ಉಳ್ಳಾಗಡ್ಡಿ-
ಸೀರೆ ಬಿಚ್ಚಿದರೆ ಲಂಗ,
ಲಂಗ ಬಿಚ್ಚಿದರೆ ಚಡ್ಡಿ.
೨೦ ಮುಂದೆ ಬಂದರೆ ಮುತ್ತು, ಹಿಂದೆ ಬಂದರೆ ಎತ್ತು,
ಎಡಬಲವ ಉತ್ತು ಹಸನಾಗಿ
ಮೂರೂ ಹೊತ್ತು.
೨೧ ಮದಿರೆ, ಮದಿರಾಕ್ಷಿ, ಖೋರಾಸಾನದ ದ್ರಾಕ್ಷಿ-
ಈ ಮೂರರೆದುರಿಲ್ಲ
ಯಾವುದೆ ಮನಸ್ಸಾಕ್ಷಿ.
೨೨ ಯಾರಾದರೂ ಒಂದೆ !
ಮಂಡಿಯೂರಲೆಬೇಕು ಇಷ್ಟದೈವದ ಮುಂದೆ ಹಾಗೂ
ಇಷ್ಟವಾದವಳ ಹಿಂದೆ.
೨೩ ಮೊಲೆಗೆ ತೊಟ್ಟು, ಯೋನಿಗೆ ಬೊಟ್ಟು,
ಎಲ್ಲಾ ಬಿಟ್ಟು ಲಿಂಗಕ್ಕೆ
ಮುಂದಲೆಯಲ್ಲಿ ಕಟ್ಟು.
೨೪ ಮುಟ್ಟಿದರೆ ಮುನಿಲಿಂಗ !
ತಟ್ಟಿದರೆ ಎದ್ದು ಕುಣಿಲಿಂಗ !
ಬಲು ಕಷ್ಟ ಇದರ ಸಂಗ !
೨೫ ಸ್ತ್ರೀಲಿಂಗ, ಪುಲ್ಲಿಂಗ ಲಿಂಗ ಲಿಂಗವೇ-
ಇಂಗು ತಿಂದರು, ಕಳ್ಳು ಕುಡಿದರು
ಮಂಗ ಮಂಗವೇ.
೨೬ ಪಾಪ ಹಂಡೆಯಲಿ, ಪುಣ್ಯ ಕುಡಿಕೆಯಲಿ,
ಕತ್ತಲೆ ಕೋಣೆಯಲಿ,
ಬೆಳಕು ಕಿಂಡಿಯಲಿ.
೨೭ ದಂಡೆಗಷ್ಟೇ ಗೊತ್ತು ನೀರ ತಳಮಳ-
ರೆಪ್ಪೆಗಷ್ಟೇ
ಕಣ್ಣ ಕಳವಳ.
ಸುಲೇಮಾನನ ಮಾದರಿ ಹಾಡುಗಳು
ಗಾಳಿಯಲಿ ಹಾರಿ
ನಿನ್ನ ತಲೆಗೂದಲು
ಕಣ್ಣುಗಳ ಮೇಲೆಯೂ
ಕೆಲವು ಮುಂಗುರುಳು
ಹೇಳುವುದಕೆ, ಕೇಳುವುದಕೆ
ಏನಿದೆ ಆ
ಗಾಳಿಗೆ ನಿನ್ನ ಮೇಲುದವೂ ಸರಿದ ಮೇಲೆ
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು
ನಕ್ಕಾಗ ಕೆನ್ನೆಯಲಿ
ಸಿಕ್ಕಾಗ ಹೊಕ್ಕುಳಲಿ
ಸಿಕ್ಕಿಬಿದ್ದಾಗ ತೊಡೆಯ
ಇಕ್ಕುಳಲಿ ನಿನ್ನ !
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು.
ಕಣ್ಣು ಕಡಲಂತೆ ರೆಪ್ಪೆ ದಡದಂತೆ
ರಾತ್ರಿಯೆಲ್ಲಾ
ಭೂಖಂಡಗಳ ಸುತ್ತಿ ಬಂದೆ !
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು.
ಕಣ್ಣಲ್ಲೊ ಸಣ್ಣ ಕೊರಳಲ್ಲೊ
ಕಿವಿಯಲ್ಲೊ ಕಿವಿಯ ಹೊರಳಲ್ಲೊ
ಹೊಟ್ಟೆಯಲೊ ಕಿಬ್ಬೊಟ್ಟೆಯಲೊ
ಸೊಂಟದಲೊ ಕೆಳಗೊ
ಎಂದು ಹುಡುಕುವುದರಲ್ಲೆ
ರಾತ್ರಿ ಸರಿಯಿತು.
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು.
ಖಾಲಿಯಿದೆ ಹಾಸಿಗೆ
ಖಾಲಿಯಿದೆ ಮನಸ್ಸು
ನೀ ತೊಟ್ಟ ಅತ್ತರೂ
ಇನ್ನೆಷ್ಟು ದಿನಕ್ಕೆ ?
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು.
ನದೀ ದಂಡೆಯಲಿ
ಹಜ್ಜೆ ಗುರುತುಗಳ ಕಂಡೆ
ಆ ಹಿಮ್ಮಡಿಯ ಒಜ್ಜೆ
ನಿನ್ನದೇ ಎಂದುಕೂಂಡೆ
ಅನುಸರಿಸಿ ಹೋದಾಗ
ಇನ್ನೊಬ್ಬಳಿದ್ದಳು.
ಮೊದಲ ನೋಟಕ್ಕೆ
ನಿನ್ನಂತೆಯೇ ಕಂಡಳು.
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು.
ನೋಡಿದರೆ ಕೇದಿಗೆ
ಮೂಸಿದರೆ ಸಂಪಿಗೆ
ಮುಟ್ಟಿದರೆ ಮಲ್ಲಿಗೆ
ಮೆಲ್ಲಗೆ ಮೆಲ್ಲಗೆ !
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು
ಜೇನಿನ ಕಣ್ಣವಳೆ
ಗುಲಾಬಿ ಉಗುರವಳೆ
ಗೋಧಿ ಮೈಯವಳೆ
ರಾಗಿ ಕೂದಲಿನವಳೆ
ಒಂದು ಹೊಲವನ್ನೆ ಕೊಳ್ಳುವೆ !
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು
ಪ್ರತಿಯೊಬ್ಬ ಚೆಲುವೆಯೂ
ನಿನ್ನಂತೆ ತೋರಿದರೆ
ಅವಗುಂಠನದ ಹಿಂದೆ
ನಕ್ಕಂತೆ ಅನಿಸಿದರೆ
ನನ್ನ ತಪ್ಪಲ್ಲ, ನಿನ್ನ ತಪ್ಪಲ್ಲ.
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು
ಹೆರಳು ಹಾಕಿದರೆ ನೀ
ಬಿಚ್ಚಿದರೆ ಹೇಗೆಂದು
ಬಿಚ್ಚಿದರೆ ನೀ
ಮುಚ್ಚಿದರೆ ಹೇಗೆಂದು
ನಡೆದಾಗ ನೀ
ಕೂತರೆ ಹೇಗೆಂದು
ಕೂತಾಗ ನೀ
ಮಲಗಿದರೆ ಹೇಗೆಂದು
ಮುಂದೆ ಹಾಕಿದೆ ನಿನ್ನ
ಪ್ರತಿಯೊಂದು ಬಾರಿಯೂ.
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು.
ದೇವರು ದೊಡ್ಡವ
ಕಣ್ಣುಗಳ ಕೊಟ್ಟ
ರಾತ್ರಿಗಿರಲೆಂದು
ಬೆರಳುಗಳ ಕೊಟ್ಟ !
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು
ಬೀಗಿದಾಗಲೂ ನಾ
ಬಾಗಿದಾಗಲೂ
ಒರಗಿದಾಗಲೂ ನಾ
ಸೊರಗಿದಾಗಲೂ
ಬೆರೆತಾಗಲೂ ನಾ
ಮರೆತಾಗಲೂ
ಸಹಿಸಿದವಳೇ ನನ್ನ
ವಹಿಸಿದವಳೇ
ನಿನಗೆಂದೆ ಹಾಡಿದೆ-
ಹಾಡುಗಳ ಹಾಡಿದು
ಸುಲೇಮಾನ ಹಾಡಿದುದು.
ಸುಲೇಮಾನನ ವಿರುದ್ಧ ಸುಲೇಮಾನ
ಕೊಚ್ಚಿ ಹರಿದ ರಕ್ತ
ಶತಮಾನಗಳಿಗೆ ಸಾಕು
ಆದರೂ ಜೆರುಸಲೇಮಿಗೆ
ಇನ್ನೂ ಇನ್ನೂ ಬೇಕು
ಹಾಸಿಗೆಯ ಸ್ಖಲನ
ಭೂಪಟಗಳ ಬಿಡಿಸಿ
ಹರಿದಲ್ಲಿ ಸರಿದಲ್ಲಿ
ರಾಷ್ಟ್ರಗಳ ರಚಿಸಿ
ಜೀವಕಣಗಳೆದ್ದು
ಅಂಡಾಶಯ ಶೋಧನೆ
ಹುಟ್ಟಿದೊಡನೆ ಹೋರಾಡುವ
ಬೀಜಾಸುರ ಸಾಧನೆ
ಕನಸಿನಲ್ಲಿ ಬಂದಾಕೆಯ
ಗುರುತಾಗದ ಚಹರೆಯ
ಊರಿನಲ್ಲೊ ಬಾರಿನಲ್ಲೊ
ಭೇಟಿಯಾದ ಸಂಶಯ
ತಾಯಾಗಲಿ ತವರಾಗಲಿ
ಈ ನಿನ್ನೆ ಯೋನಿಯೆ
ಖಂಡಾಂತರ ಡಯಾಸ್ಫೋರ
ಅವರಿಗೂ ದಾನಿಯೆ
ಅತಿವಿಲಾಸಿ ಹೈಲೆ ಸೆಲಾಸಿ
ರತ್ನಖಚಿತ ಸಿಂಹಾಸನ
ಅಷ್ಟೇನೂ ಖಚಿವಲ್ಲದ
ಸಿಂಹಗಳ ಬೆನ್ನಿನ
ರಣಗುಟ್ಟುವ ಬಿಸಿಲಿನಲ್ಲಿ
ಇಡಿಯ ಉಪಖಂಡವೇ
ನಿದ್ದೆತೂಗಿ ಬೀಳುವುದು
ಅವುಗಳೇನು ಕಂಡವೇ
ಮಗ್ಗುಲಲ್ಲೆ ಮಗ್ಗುಲಾದ
ಪೂರ್ಣ ಕುಚಕುಂಭ
ಎಲ್ಲರಿಗೂ ಕಾಣುವಂತೆ
ನೆಟ್ಟ ನೇಣುಗಂಭ
ವರ್ಷ ಬಂತು ವರ್ಷ ಹೋಗಿ
ಭೂತ ವರ್ತಮಾನ
ಇಂದು ಸರಿದು ನಾಳೆ ಬರಿದು
ಜೊಂಪು ಕೂಡ ಧ್ಯಾನ
ಎಲ್ಲಿ ಬಿತ್ತಿ ಎಲ್ಲಿ ಬೆಳೆದ
ಐದಡಿಯ ದೇಹ
ಇತಿಹಾಸಕೆ ತವಕುವ
ಬೀಜಾಂಕುರ ದಾಹ
ಹೋರಾಡಿದ ಸುಲೇಮಾನ
ಸುಲೇಮಾನನ ವಿರುದ್ಧವೇ
ಪ್ರತಿಯೊಂದು ಪ್ರತಿರೂಪ
ತನ್ನೊಳಗಿನ ಯುದ್ಧವೇ
ಗೆಲ್ಲಲಾರದೆ ಸೋಲಲಾರದೆ
ಸುಸ್ತಾಗುವ ಯುಗವೇ
ತನ್ನ ನೆತ್ತರ ತಾನೆ ನೆಕ್ಕಿ
ನೋವು ಕೊಳ್ಳುವ ಸೊಗವೇ
ತೆರೆಮರೆಯಲಿ ಹೊಂಚುತ್ತ
ಹೈಲೆ ಮರಿಯಮ್ ಮುಗಿಸ್ತು
ಅಸ್ತು ದೇವತೆ ಅನ್ನುತಿತ್ತು
ಅಸ್ತು ! ಅಸ್ತು ! ಅಸ್ತು !
ಬಿಲ್ಕಿಸ್
ತಡೆಯಲಾರೆ ನಗೆಯ ಹಿಡಿಯಲಾರೆ ಬಗೆಯ
ಈ ವಿಲಕ್ಷಣವ
ನಗದೆ ಮಾಡುವುದೇನು ಆ ಮುಖಾಮುಖಿಯ
ಅಸಂಗತ ಕ್ಷಣವ !
ಭ್ರಮೆಯೆ ಎಲ್ಲವೂ ಭ್ರಮೆಯೆ ಧ್ವನಿಗಳೂ
ಒಳಗೊಂಡ ಭೀತಿ
ಸೆಳೆದು ಶ್ರುತಿಮಾಡಿ ಕಟ್ಟಿದಂಥ ಕ್ಷಣ
ಕಂಪಿಸಿದ ರೀತಿ
ಸಕಲ ಕಿಟಿಕಿಗಳ ಮುಚ್ಚಿ ಮಲಗಿದರೂ
ಪ್ರತಿಯೊಂದು ರಾತ್ರಿ
ಕುಣಿದು ಬರುವಂತೆ ಅನಿಸುವುದು ದೇವಳದ
ಪ್ರತಿಯೊಬ್ಬ ಪಾತ್ರಿ
ಆಮೇಲೆ ಅಸ್ಮೋದಿ : ಇವು ಇರುವುದೇ
ಹೀಗೆ ಪ್ರತಿನಿತ್ಯ
ಸರಕಾರಿ ವರದಿ; ತೋರಿಸುವೆ ನಾನೇ
ನಿಜವಾದ ಸತ್ಯ.
ಎಬ್ಬಿಸುವೆ ಮೊದಲು ಶೂನಮೈಟ್ ಕನ್ಯೆಯ
ಅವಳ ನಿದ್ದೆಯಿಂದ
ನೆತ್ತರಿನ್ನೂ ಜಿನುಗುವುದು ಮೈಯಲ್ಲಿ; ಮರಣ
ಕಲ್ಲೇಟಿನಿಂದ.
ಕರೆಯದಿದ್ದರು ಬರುವ ರುಂಡವಿಹಿತನೆ
ಅದೋನಿಯಾ-
ಪಶುವಲ್ಲ, ಬಲಿಪಶುವೆಂದು ಕೈಗಳೇ
ಕೋರಿ ನ್ಯಾಯ
ಆಮೇಲೆ ಅತಿಕ್ಷೀಣ ಸ್ವರ. ಯಾರು ಕರೆಯುತ್ತಾರೆ
ಅಭಿಷಿಕ್ ! ಅಭಿಷಿಕ್ ! ಎಂದು
ಅಸ್ತಮಾನಗೊಳುವ ದಾವುದರ ತಾರೆ
ಅರಬೆಸ್ಕ್ ನಿಂದು !
ಗಾರುಡಿಗ ಸುಲೇಮಾನ್ ಎಲ್ಲ ಬೂತಗಳನ್ನೂ
ಕಾಲಿನಿಂದ ಒದ್ದು
ರುಜುವ ಬಯಸುವನು ಚಾರಿತ್ರ್ಯಕ್ಕೆ ತಾನೂ
ನನ್ನ ಕನಸಿನೂಳಗೆ ಬಿದ್ದು-
ಈ ನನ್ನ ಗಾದೆಗಳ, ಹಾಡುಗಳ, ತೀರ್ಪುಗಳ
ಈ ಶಿಲ್ಪಗಳ
ಕೊಂಡಾಡದೇ ಹೇಳು ಬಿಲ್ಕಿಸ್ ! ಚರಿತ್ರೆ
ಘನೋದ್ದೇಶಗಳ ?
ಆರ್ತ ಸುಲೇಮಾನ್ ! ಯೆಹೋವನ ಕೇಳು
ಅಕ್ಷರದ ರಹಸ್ಯ
ಪುರಾವೆಗಳ ಕೊಡಬೇಕೆ ಬಿಡಬೇಕೆ
ಚರಿತ್ರೆಗೆ ಮನುಷ್ಯ ?
ಯಾತ್ರೆಗಳ ಹಾಗೂ ದಂಡಯಾತ್ರೆಗಳ ಕೈಗೊಂಡ
ನಿನಗೂ ಗೊತ್ತು
ಹೋಗುತ್ತ ಕಟ್ಟಿದವರೇ ಬರುತ್ತಾ
ಮುರಿದ ಸೇತು
ಹಾಗೂ, ಯಾವ ರೇಗಿಸ್ತಾನದೊಳಗೆ
ಒಂದು ಮಹಾಸೇನೆ
ದಿಕ್ಕೆಟ್ಟು ತಿರುಗುವುದು ಹೇಳಹೆಸರಿಲ್ಲದೆ
ಸಾವ ಬಯಸಿ ತಾನೆ !
ಕಿಲುಬು ಬಣ್ಣದ ಚೇಳು ಸೂರ್ಯಪ್ರಕಾಶಕ್ಕೆ
ಫಳ ಘಳ ಹೊಳೆದು
ಆಮೇಲೆ ನದಿ ಖಾರಿದ್ ಕೂಡ
ಆಗಾಗ್ಗೆ ಬರಿದು
ಕುರುಡನೊಬ್ಬನೆ ಕಡಲ ತೀರದಲಿ ಕುಳಿತು
ಬರೆಯುವ ವಿಚಿತ್ರ
ಉಳಿದವರು ನೋಡಲಿ ಅರ್ಥವಾಗದೆ ಭರತ
ಅಳಿಸುವಂಥ ಚಿತ್ರ
ತನ್ನ ಸ್ವರ್ಣ ಕಿರೀಟ ಹುಡುಕಿ ಹೂಪೋ
ಹೊರಟ ಸಮಯ
ಹಕ್ಕಿಗಳ ರಾಜನೇ ಹೇಳು ನನಗೂ
ಅಂತಿಮ ವಿದಾಯ.
ಹಳೇ ಕವಿತೆ
ಚೆಲುವೆಯರ ಗಂಡಸರ
ಎಷ್ಟೊಂದು ಬಾರಿ
ಮಲಗಿಸಲಿಲ್ಲ ನಾನು ಉಸುಕಲ್ಲಿ
ಕೊರಳ ಸರಗಳ ಕೊಯ್ದು
ಒಡದ ತುಟಿಯಷ್ಟೇ
ಸೂಕ್ಷ್ಮ ಘಾಯದಲ್ಲಿ
ಕಾಡುಮೃಗಗಳಿಗೆ ಅವರ
ಪುಷ್ಪ ಹಸ್ತಗಳ
ಹಾಗೂ ತೋಳುಗಳ
ಹರಿದು ತಿನ್ನುವುದಕ್ಕೆ
ಬಿಟ್ಟು
ಹಾಗೂ ಒದ್ದೆ ಬಯಲಲ್ಲಿ
ಮಿಡಿತಗಳ ಸೇನೆ
ಎರಗಿದ ಹಾಗೆ
ಮಳೆಗರೆದ ಬಾಣಗಳ ಕೆಳಗೆ
ಉಕ್ಕಿನ ಕವಚಗಳು ಮಿಂಚಲಿಲ್ಲವೇ
ಘಾಳಿ ಜಾಲಾಡಿಸುವ ಕೊಳದಲ್ಲಿ
ಕಪ್ಪೆ ಕಣ್ಣುಗಳ ಹಾಗೆ !
ಆಮೇಲೆ ನಾನು ಅದೇ ವೇಷದಲ್ಲಿ
ಕದಗಳ ತಟ್ಟಿರುವೆ
ಹಾಗೂ ಕಂಡಿದ್ದೇನೆ
ತೆರೆದ ಕಣ್ಣುಗಳಲ್ಲಿ
ಇಡೀ ಲೋಕದ ಕತ್ತಲ
ಒಂದು ವಿಸ್ಮೃತಿ ಚಿತ್ರ
ಇಲ್ಲಿ ವರೆಗೂ ನಾವು ಒಟ್ಟಿಗೇ
ಈಗಲೂ ನೆಟ್ಟಗೇ
ರಸ್ತೆಗಳು ನಾಲ್ಕೂ
ಬಂದು ಸೇರುವ ಈ
ಇಸ್ಫಹಾನಿನಲ್ಲಿ
ಕುರುಡನೂ ಲಾಯದಲಿ
ಕತ್ತೆಯನು ಕಟ್ಟಲಿ-
ಅದು ಕುದುರೆಯ ಹಾಗೇ ಇರಲಿ
ಹಕ್ಕಿಗಳು ಬರಲಿ
ತಾಳೆ ಮರಗಳಲಿ
ಆದರೂ ಒಬ್ಬಾಕೆ ಮಾತ್ರವೆ ಇಲ್ಲ
ದೇವರೆ ಬಲ್ಲ
ಬಹಳ ಬಾನಾಡಿ
ಕಲ್ಲುಹೂಗಳು ಬಿರಿದು
ಮಲ್ಲಿಗೆ ದಂಡೆಯನು
ನಾಚಿಸುವ ಯಾವ
ದೇಶದಲಿ ತಿರುಗಾಡಿ
ಬಂದು ಹೇಳುವುದೊ
ಗುಟ್ಟೊಂದ ತಡವಾಗಿ
ಇಂದು ಬಂದಾಳೆ ನಾಳೆ
ಬಂದಾಳೆ ಎಂದು
ಬಿಸಿಲು ಮುಚ್ಚಿನ ಮೇಲೆ
ತುದಿಗಾಲಲ್ಲಿ ನಿಂದು
ಕಂಡದ್ದು ಮೋಡವೇ, ಘೋಡವೇ-ಇಲ್ಲ
ಗಾಳಿಯ ಪವಾಡವೇ
ಇರಲಿರಲಿ ! ಕತೆಗಾರ
ಯಾಕೆ ಸಂಚಿನಲಿ
ಕುಳಿತಂತೆ ಕುಳಿತಿರುವೆ
ಗಡ್ಡವನು ನೀವುತ್ತ
ಸಂಜೆಗತ್ತಲು ನಮ್ಮ
ಸುತ್ತಲೂ ಬೆಳೆಯುತ್ತ
ಮೊಂಬತ್ತಿ ! ಮೊಂಬತ್ತಿ-
ಯೆಂದವನ ಬೆಂಬತ್ತಿ
ಅವನಾದರೊ ಪಾಪ
ರಾತ್ರಿಯೇ ಕತ್ತೆಯ ಮೇಲೆ ಹತ್ತಿ
ಅಲ್ಲವೇ ! ಮತ್ತೇನಿದು ಸುಗಂಧ !
ಗಾಳಿಯಲಿ ಬಂದು
ಅವಳ ಮೊದಲೇ ಅವಳ
ನಗೆಯ ಸದ್ದು…
ಬಂದಳು ಯಾಕೆ, ಹೋದಳು ಯಾಕೆ
ಕತೆಗೆ ಕಾರಣ ಬೇಕೆ, ಕಾರ್ಯವಿರಲೇಬೇಕೆ
ಒಂದು ಸಾವಿರ ಇರುಳು
ಅಷ್ಟೆ ಸಂಖ್ಯೆಯ ಹಗಲು
ಹರಡಲಿಲ್ಲವೆ ಶೆಹರ್ಜಾದೆ-ನಿನ್ನ
ಪಲ್ಲಂಗದಲಿ ಮತ್ತು
ಲಂಗದಲಿ
ಇತ್ತ ಸುಲೇಮಾನ ಜರುಸಲೇಮನು ಬಿಟ್ಟು
ಮಾರೆಬ್ಬಿನ ಕಡೆಗಾಗಿ
ಒಂದು ದಿನ ಹೊರಟ
ತನ್ನ ಜೀತದ ಎಲ್ಲ ಜಿನ್ನುಗಳ ಕರೆದು
ಒಂದು ಸುಂದರ ನಗರ
ಕಟ್ಟುವಂತೆಂದ
ಮಂತ್ರದಂಡದಲಿ ತಾನೇ
ಗದ್ದವ ನೆಟ್ಟು ನಿಂದ.
ಬೆರಳು ನಗರದ ಕಡೆಗೆ
ದೃಷ್ಟಿಯೂ ಆ ಕಡೆಗೆ
ವರ್ಷಗಳ ಲಾಗಾಯ್ತು
ಒಮ್ಮೆಯೂ ಚಲಿಸದೆ
ಈ ಮರುಭೂಮಿಯ ಮಧ್ಯೆ
ನಿಂತ ವಿಚಿತ್ರವನೊಂದು
ಕೀಟ ನೋಡಿತು
ಮೊದಲು ಭಯದಿಂದ
ಆಮೇಲೆ ನಯದಿಂದ
ಕಟ್ಟಿಗೆಯಲ್ಲಿ ಕೂತಿತು.
ಅಮಾನುಷ ಶಕ್ತಿಗಳ
ಕೆಲಸವೂ ಮುಗಿದಿತ್ತು
ಅತಿಶಯದ ಸುಂದರಿಗೆ
ಅತಿಶಯದ ನಗರಿ-
ಕುಪ್ಪಳಿಸಿ ಬಂದು
ಜಿನ್ನುಗಳು ನೋಡಿದರೆ
ದಂಡ ಕುಸಿಯಿತು-ಹಿಡಿದಿದ್ದ
ಮುಂಡವೂ ಕುಸಿಯಿತು
ಒಂದು ಹಿಡಿ ಅಂಗಾರ
ನೆಲವನ್ನು ಸೇರಿತು.
ಮುಗಿಯಿತೇ ನೋಡೋಣ-
ಪಟ್ಟಣಕೆ ಓಡೋಣ
(ಮುನ್ನೂರು ವರ್ಷ ಸಾಗಿ
ಆ ಪಟ್ಟಣವೂ ಈಗ
ನಿರ್ಜನವಾಗಿ)
ನೋಡಬಹುದೇ ಅಗೆದು
ನೋಡಿದರೆ ಸ್ಫಟಿಕ ಶಿಲಾ
ಸಂದೂಕದೊಳಗೆ
ಮುಚ್ಚಲು ಮರೆತ ಕಾಲುಗಳು
ಒಂದನ್ನೊಂದು ಹೊಂದದೆ
ಇಣುಕುವವು ಹೊರಗೆ
ಬರೆದಿರುವ ಸಾಲುಗಳ
ತೋರಿಸುವ ಹಾಗೆ-
“ಇರಿಸಿರುವೆನಿವಳ ಮೋಹಿತ ಹೃದಯವನು
ಗುಲಾಬಿ ಹೂಗಳ ನಡುವೆ
ತೂಗಿರುವೆನಿವಳ ಮುಂದಲೆಯ ಕೂದಲನು
ಬಾಲ್ಸಮ್ ವೃಕ್ಷದ ಕೊನೆಗೆ
ಯಾವಾತನಿವಳ ಪ್ರೀತಿಸಿದನೋ ಆತ
ಆ ಕೂದಲನು ಎದೆಗೊತ್ತಿ
ಅದರ ಪರಿಮಳದಿಂದ ಉನ್ಮತ್ತ
ಆಹಾ ! ದುಃಖತಪ್ತ!”
*****