ಬೊಲೀವಿಯಾ
ಆ ಒಂದು ಹೆಸರಿಗೇ
ಎದು ಕುಳಿತಿದ್ದೆನಲ್ಲ!
ನಿದ್ದೆಗಣ್ಣುಗಳ ಹಿಸುಕಿ-
ಏನದಕ್ಷರವೊ ಪಠ್ಯಪುಸ್ತಕದ ನಡುವೆ
ಯಾವೊಬ್ಬ ಅನಾಮಿಕ ಬರಹಗಾರ
ಕಲ್ಪಿಸಿದ ಉಪಮೆಯೊ
ರೂಪಕವೊ ಸಂಕೇತವೊ ಪ್ರತಿಮೆಯೊ ಪ್ರತೀಕವೊ
ಕಪ್ಪು ಮಸಿಯ ಆ
ಕೆಟ್ಟ ಚಿತ್ರದಲ್ಲೂ ಎದ್ದಿತ್ತು
ಒಂದು ಭೂಖಂಡವೇ
ಕತ್ತಲ ಮೇಲೆ ಕತ್ತಲನ್ನು ಹೊತ್ತು.
ಪ್ರತಿಮೆಯಲ್ಲ ಪ್ರತೀಕವಲ್ಲ
ಬೊಲೀವಿಯಾ
ಸೈಮನ್ ಬೊಲೀವರ್ ಬದುಕಿದ್ದ ನಾಡು
ಅವನಿಂದಲೇ ಬಂತು ಆ ಹೆಸರು-
ದಟ್ಟ ಕಾಡುಗಳ
ಗುಡ್ಡ ಬೆಟ್ಟಗಳ
ಎಡೆಬಿಡದೆ ಮಳೆಬೀಳುವ ನಾಡು
ಶಾಲೆ ಹುಡುಗರು ನಾವು
ಯಾರೂ ಕಂಡುದಿಲ್ಲ-
ಆದರೂ ಕನಸಿನಲಿ
ಕಲ್ಪಿಸಿದ್ದುಂಟು
ಕುಲಗೋತ್ರ ಗೊತ್ತಿರದ
ಹೆಮ್ಮರಗಳ ಸುತ್ತ
ತೊಡೆಗಾತ್ರ ಬಳ್ಳಿಗಳಂತೆ
ಸುತ್ತಿ ತೊನೆವ ಏರಿಳಿವ
ಹೆಬ್ಬಾವುಗಳ ಕಂಡು ಬೆಚ್ಚಿದುದುಂಟು
ಅಲ್ಲಲ್ಲಿ ಬಂಡೆಗಳ ಮೇಲೆ
ಬಿಸಿಲಿಗೆ ಮೈ ಕಾಯಿಸುವ
ಇಗುವಾನಗಳ ಕೂಡ-
ನದೀ ದಂಡೆಯಲಿ ತಮಗೆ ತಾವೇ
ಬೇಕೆಂದಾಗ ತೆರೆಯುವ
ಅಥವ ಮುಚ್ಚುವ
ನರಭಕ್ಷಕ ಹೂವುಗಳೂ-
ನಡೆಯುವಂತಿಲ್ಲ
ನೆಲದಲ್ಲಿ
ಇಳಿಯುವಂತಿಲ್ಲ.
ನೀರಲ್ಲಿ
ಬಿಳಲನೂ ಹಿಡಿಯುವಂತಿಲ್ಲ
ಬೊಲೀವಿಯಾ !
ದಿಕ್ಕೆಟ್ಟು ಅಲೆಯುತ್ತ,
ಎಷ್ಟೊ ಒಳಬಂದಿರುವೆ.
ನನ್ನ ಆಕ್ರಂದನಕ್ಕೆ
ಧ್ವನಿಯಿರದಂತೆ
ಮಾಡುವುದು ಈ ನಿನ್ನ
ಭೀಕರ ಮೌನ
ಹೇಗೆ ಮುರಿಯಲಿ ಅದನ್ನ !
ಇಂಟಿ ಪೆದ್ರೊ
ಕ್ಯಾಕರಿಸಿ ಉಗುಳಿ ಇಂಟಿ ಪೆದ್ರೊ
ಸರಿಪಡಿಸಿಕೊಂಡ ಗಂಟಲನ್ನ
ಪೆದ್ರೊ-ಇಂಟಿ ಪೆದ್ರೊ.
ದಿನ ಸೆಪ್ಟೆಂಬರ್ ೨೨
ಜಾಗ ಇಲ್ಟೊ ಸೆಕೊ
ಒಂದು ಅತಿಪುಟ್ಟ ಭಾಷಣವ
ಮಾಡಿದ ಪೆದ್ರೊ-
ಕ್ರಾಂತಿಯ ಕುರಿತಾಗಿ
ಚೆಯ ಕುರಿತಾಗಿ
ತಿಳಿಸುವುದಾಗಿತ್ತು ಅವನ ಉದ್ದೇಶ.
ಪದ್ರೊ ಹೇಳಿದ್ದೇನು ?
ಚೆ ನಮ್ಮ ನಾಯಕ
ಚೆ ಎಂದರೆ ಗೆಳೆಯ
ಇಂಟಿ ಪೆದ್ರೊ ನಾನು
ಅವನ ಹಿಂಬಾಲಕ
ಭಯೋತ್ಪಾದಕರು ನಾವಲ್ಲ
ಅವರು ಸರಕಾರಿ ನೌಕರರು
ಸುಂಕದ ಕಟ್ಟೆ ಮಾಲಿಕರು
ಪೇಟೆಯಲ್ಲಿ ಕೂತವರು
ಕೆಲಸದ ಗುತ್ತಿಗೆ ಹಿಡಿದವರು
ನಾವು ಮಾತ್ರ ನಿಮ್ಮವರೇ-
ಈ ಉಡುಗೆಯ ನೋಡಿ
ಬೆಚ್ಚುವುದು ಬೇಡ
ನಮ್ಮ ಗಡ್ಡದ ಬಗ್ಗೆಯೂ
ಸಂದೇಹ ಬೇಡ
ಯಾವಾತ ಬಹು ದೊಡ್ಡ
ಸಿಗಾರುಗಳ ಸೇದುವಾ
ಆ ಫಿಡೆಲ್ ಕಾಸ್ಟ್ರೊ ಕೂಡ
ಹೀಗೇ ಇರುವಾತ
ಅಂಥವನ ಗೆಳೆಯ ಚೆ
ಗವೇರಾ
ಬಂಡಾಯಗಾರ
ಕ್ರಾಂತಿಗಳ ಮಾಡುವುದು
ನಮ್ಮ ಕೆಲಸ –
ನಿಮಗಾಗಿ ಕ್ರಾಂತಿ
ದಬ್ಬಾಳಿಕೆಯ ನೊಗವನ್ನು
ಕಿತ್ತೆಸೆಯಲೆಂದು ಕ್ರಾಂತಿ
ಮನುಷ್ಯ ಗೌರವ ನಿಮಗೆ
ಸಿಗಲೆಂದು ಕ್ರಾಂತಿ
ಎಂದು ? ಆ ದಿನ ಎಂದು ?
ನೀವು ಬಯಸಿದರೆ ಅದು
ಇಂದು…
ಎದುರಿಗಿದ್ದವರು ಒಟ್ಟು ೧೫ ಮಂದಿ
ಕಡೆದ ಕಲ್ಲಿನ ಹಾಗೆ ಕೂತಿದ್ದರು.
ಅವರ ತಳವಿರದ ಕಣ್ಣುಗಳು
ಇಳಿ ಮಧ್ಯಾಹ್ನದ ಹೊತ್ತಿಗೇ
ಕಂತಿದ್ದವು.
ಸ್ಥಳ ಊರ ಶಾಲಾವಠಾರ
ಹಳೆ ಹಂಚಿನ ಮಾಡು
ಜೇಡಿಮಣ್ಣಿನ ಗೋಡೆ
ಕಿಡಿಗೇಡಿ ಚಿತ್ರಗಳು ಮಸಿಯಲ್ಲಿ
ಅದ ಮಾಯಿಸಲು ನಡೆಸಿದ
ನಿಷ್ಫಲ ಯತ್ನಗಳು ಅಲ್ಲಲ್ಲಿ,
ಸಭೆಗೆ ಬಂದವರಲ್ಲಿ ೫ ಜನ
ಅದೇ ಶಾಲೆಯ ಹುಡುಗರು.
ಪೆದ್ರೊ-ಇಂಟಿ ಪೆದ್ರೊ
ಕೇಳಿಕೊಂಡ ತನಗೆ ತಾನೇ-
ತಾ ಹೇಳಿದ್ದು ಸರಿಯೆ ?
ಚೇ ಹೇಳಿದ್ದು ಇದುವೆ ?
ಬೇರೆ ರೀತಿಯಲಿ
ಹೇಳಬಹುದಿತ್ತೆ ?
ಹೇಳುವುದಕ್ಕೆಂದು ಬಾಯ ತೆರೆದಾಗ
ಗಂಟಲಾರಿತ್ತು.
ಹೊರಡದು ಮಾತು.
ಸನ್ನೆ ಮಾಡಿದ ಪೆದ್ರೊ.
ಆ ಕೂಡಲೆ ಯಾರೊ
ನೀರು ತಂದರು.
ಅರ್ಧವ ಕುಡಿದು ಪೆದ್ರೊ
ಇನ್ನರ್ಧದಲಿ ಮುಖ ತೊಳೆದ.
ಹಾ ! ಎಷ್ಟು ಹಿತವಾಗಿದೆ-ಎಂದ.
ತಲಿದೂಗಿದರು ಜನ.
ಆದರೆ ಇನ್ನೊಬ್ಬ ಎಲ್ಲಿ
ಹದಿನಾರನೆ ವ್ಯಕ್ತಿ ?
ಊರ ದಾರಿಯಲ್ಲಿ ಅವ
ಸರಸರನೆ ಹೂರಟಿದ್ದ
ಪೋಲೀಸರಿಗೆ ಹೇಳಲು.
ತಾನಿಯಾ
ಬೆಟ್ಟದಲಿ ಹುಟ್ಟಿ ರಿಯೋ ಗ್ರಾಂಡ್
ಬಯಲಲ್ಲಿ ಹರಿಯುವುದು
ಕಡಲ ಸೇರುವುದು
ಕಡಿದಾದ ಕಡೆ ಮೊರೆವ
ಹರವಾದ ಕಡೆ ಮೆರೆವ
ತಿರುವುಗಳಲ್ಲಿ ಮಡುಗಟ್ಟುವ
ಅದಕ್ಕೂ ಹಲವು ವಿಕಾರಗಳು
ಮನುಷ್ಯರ ಮನಸ್ಸಿನಂತಯೇ
ಅದರಾಚೆಗಿದ್ದಾನೆ ಚೆ
ಗವೇರ ಬಂಡಾಯಗಾರ
ಅವನ ಸೇರಲೆಂದು
ಹೊರಟಿದ್ದರಂದು
ಒಂಬತ್ತು ಮಂದಿ ಗೆರಿಲ್ಲಾ ಯೋಧರು
ಅವನ ಸ್ನೇಹಿತರು ಹಿಂಬಾಲಕರು
ಎಲ್ಲಿ ನದಿ ಹರಡಿ ತೆಳುವಾಗಿತ್ತೊ
ಅಲ್ಲಿ ದಾಟುವುದಿಂದು
ನೀರಿಗಿಳಿದರು
ಒಬ್ಬರ ಹಿಂದೊಬ್ಬರು.
ಆರು ಗಂಟೆಯ ಸಮಯ
ಬೊಲೀವಿಯಾದಲ್ಲಿ
ಕತ್ತಲಾಗುವುದು ಬೇಗ
ನೆನಪಿರಲಿ
ಒಮ್ಮಲೇ ಮುಸುಕೆಳೆದ
ಕಂಬಳಿಯ ಹಾಗೆ ಮುಚ್ಚುವುದು
ಮೇಲೆ ನಕ್ಷತ್ರಗಳೂ ಇಲ್ಲ
ಮುಗಿಲ ಅಂಚಿನಲಿ ಮಾತ್ರ
ಬೆಳಕು ಇನ್ನೂ ಸ್ವಲ್ಪ
ಉಳಿದ ಹಾಗಿತ್ತು.
ಎಲ್ಲರಿಗಿಂತಲೂ ಮುಂದೆ
ಇದ್ದವ ಜೋವಾಖಿನ್
ಪಂಗಡದ ನೇತಾರ ಅವನೆ.
ಎಲ್ಲರಿಗಿಂತ ಹಿಂದೆ
ಇದ್ದವಳು ತಾನಿಯಾ
ತಾನಿಯಾ ! ಆಹ ! ಅವಳ ಕುರಿತಾಗಿ ಏನೂ
ಹೇಳಿಲ್ಲ ಈಗಿನ್ನು
ಹೇಳುವುದಕ್ಕೆ ಏನಿದೆ
ಹೇಳುವುದಾದರೆ ಇಷ್ಟೆ:
ಮೊದಲು ಬಲಿಯಾದವಳು ಅವಳೆ
ಸರಕಾರಿ ಹೊಡೆತಕ್ಕೆ.
ಬಿಳಿ ಕುಪ್ಪಸ ತೊಟ್ಟಿದ್ದಳು ತಾನಿಯಾ
ಕೆಂಪು ಕಾಲಂಗಿಯನೂ ಉಟ್ಟಿದ್ದಳು-
ಮುಸ್ಸಂಜೆ ಬೆಳಕು
ಅವಳ ಮೇಲೆ ತುಸು
ಹೆಚ್ಚು ಹೊತ್ತೆ ನಿಂತಿರಬೇಕು.
ರಿಯೋ ಗ್ರಾಂದಿನಲಿ ಕೂಚ್ಚಿಹೋಗುತ್ತ
ಏನೆಂದುಕೊಂಡಿರಬಹುದು ತಾನಿಯಾ ?
ಚೆ! ನಿನಗೆ ವಿದಾಯ !
ಬೊಲೀವಿಯಾ ! ನಿನಗೂ ವಿದಾಯ!
ಎಂದುಕೊಂಡಿರಬಹುದೆ ?
ಆಹಾ ! ಇಷ್ಟು ತಣ್ಣಗಿರಬೇಕೆಂದರೆ
ಈ ನೀರು
ಎಷ್ಟು ಹಿಮಗಡ್ಡೆಗಳ ಹಾದುಬಂದಿರಬೇಕು !
ಎಲ್ಲಿ ಹೋಯಿತು ಹಗಲು
ಎಲ್ಲಿ ಹೋಯಿತು ಸಂಜೆ
ಇಷ್ಟು ಬೇಗನೆ ಇಲ್ಲಿ
ಕತ್ತಲಾಗುವುದೆಂದೆ ?
ಈಗ ಇನ್ನೇನು ಹೇಳಿದರು ಅವು
ಉಳಿದವರ ವಿಚಾರಗಳೆ ವಿನಾ
ಅಳಿದವರದಲ್ಲ-
ತಾನಿಯಾಳ ಮನವ ಹೊಗುವವರು ಮೊದಲು
ಬೊಲೀವಿಯಾದ ಅರಣ್ಯಗಳಲ್ಲಿ
ಅಲೆಯಬೇಕು-
ಆಕೆ ಅಲೆದಂತೆಯೇ
ರಿಯೋ ಗ್ರಾಂದಿನಲಿ
ಕೊಚ್ಚಿ ಹೋಗಬೇಕು-
ಆಕೆ ಹೋದಂತೆಯೇ
ಕನಸು ಕಾಣುವ ಚೆ
ಚೆಯ ಕಾಡುವುದು ಆಗಾಗ
ಗೊರಲುಬ್ಬಸ ರೋಗ
ಈ ದಿನ ತುಸು ಜ್ವರವೂ
ಸೇರಿದೆ ಬೇರೆ
ಆದ್ದರಿಂದಲೆ ಕನಸು-
ಕನಸಿನಲಿ ಬಂದವರು
ಅವನಂತೆ ಇಬ್ಬರು
ಒಬ್ಬ ಚೆ ಗವೇರ
ಇನ್ನೊಬ್ಬನೂ ಚೆ ಗವೇರ
ಒಬ್ಬ ಅನ್ನುತ್ತಾನೆ ಇನ್ನೊಬ್ಬನಿಗೆ :
“ಎತ್ತ ಕಡೆಯಿಂದ ಬಂದೆ ನೀನು
ಎತ್ತ ಕಡೆ ಹೋಗುವಿ ?
ಈ ಕಾಡು, ಈ ಬೆಟ್ಟ,
ಈ ದೇಶ, ಈ ನದೀ ವಲಯ
ಗೆಳೆಯ-
ಈ ನಿನ್ನ ಗೆರಿಲ್ಲಾ ವೇಷ
ಯಾವುದೂ ನಿಜವಲ್ಲ
ಹಗಲುಗನಸು.
ಮರೆತು ಬಿಡು ಕ್ಯೂಬ
ಮರೆತುಬಿಡು ಕಾಸ್ಟ್ರೊ
ಅದು ಬೇರೆ ಕಾಲ
ಬೇರೆಯ ಸತ್ಯ!
ಅದಕ್ಕೆ ಇನ್ನೊಬ್ಬಾತ-
ಈ ಕಾಡು, ಈ ಬೆಟ್ಟ,
ಈ ದೇಶ, ಈ ನದೀ ವಲಯ
ಹಾಗೂ ನಿನ್ನ ಈ
ಗೆರಿಲ್ಲಾ ವೇಷ
ಯಾವುದೂ ನಿಜವಲ್ಲ
ಎನ್ನುವುದಕ್ಕೆ ನೀನು ಯಾರು
ನೀನೂ ಇದೆಲ್ಲದರ
ಭಾಗವೇ
ಆಗಿರುವ ಮೇಲೆ!
ನರಳುತ್ತಾನೆ ಚೆ-
ಆಚೀಚೆ ಚೆಲ್ಲಿರುವ
ಔಷಧಿಯ ಕುಪ್ಪಿ, ಬಂದೂಕ
ಬೋರಲಾಗಿಟ್ಟ ದಿನಚರಿಯ ಪುಸ್ತಕ
ಅದರ ಒಳಹೊರಗೆ
ಕವಿತೆಯ ಚೂರುಗಳು ಆನೇಕ.
ಕುರಿಗಳಿವೆ ! ಕುರಿಗಳಿವೆ!
ಕುರಿಗಳಿವೆ ! ಕುರಿಗಳಿವೆ !
ತೊಪ್ಪದಲ್ಲಿ ಕುರಿಗಳಿವೆ
ಒಂದನೊಂದು ಮುಟ್ಟಿಕೊಂಡ
ಮೋಡದಂಥ ಮರಿಗಳಿವೆ !
ಮನೆಗಳಿವೆ ! ಮನೆಗಳಿವೆ !
ಕೇರಿಯುದ್ದ ಮನೆಗಳಿವೆ !
ಕಿಡಿಗಳೆದ್ದು ಒಲೆಯ ಸುತ್ತ
ಸಿಡಿದು ಹಾಳಾಗುತ್ತಿವೆ !
ಆರುತಿವೆ ! ಆರುತಿವೆ !
ಬೀದಿ ದೀಪ ಆರುತಿವೆ.
ತಡವಾಗಿ ಬಂದವರು
ಗುರುತುಗಳ ಕೇಳುತಿವೆ !
ಹೊಂಚುತಿವೆ ! ಹಂಚುತಿವೆ !
ಮರೆಯಲ್ಲಿ ಹೊಂಚುತಿವೆ.
ಕೆಂಡದಂಥ ಕಣ್ಣುಗಳು
ಈ ಕಡೆಗೇ ಮಿಂಚುತಿವೆ !
*****