ಸ್ವಾಮಿ ಬಾರೊ ನಿಸ್ಸೀಮ ಬಾರೊ ಶಿವ ಕಂದ ಬಾರೊ ಬಾರೊ
ಜಗದ ಕೀರ್ತಿ ಕಾರ್ತೀಕ ಬಾರೊ ಜಗದಂಬೆ ಕುವರ ಬಾರೊ || ೧ ||
ಕೊರಡು ಚಿಗುರಿ ಕವಲಾಗಿ ಜೀವಸೆಲೆ | ಎಲೆ ಹೂವು ಹಣ್ಣು ಬರಲಿ
ಬರಡು ಭೂಮಿ ಹಸಿರಾಗಿ ಉಸಿರಿಸಲಿ | ಕುಸುರುಕಾಳು ತರಲಿ || ೨ ||
ಶವದಿ ಜೀವ ಉಸಿರಾಡಿ ಓಡಿ | ಚೈತನ್ಯ ಚೆಲುವು ನಗಲಿ
ಜಡದ ಒಡಲು ಬಡಿದೆಬ್ಬಿಸಿದೊಲು ತಾ | ಶಕ್ತಿ ಚಿಲುಮೆ ಉಗಲಿ || ೩ ||
ಶೀತ ಭೀತ ಸಾಗರದಿ ಉರಿಯು | ಅರಿವಾಗಿ ಹೊತ್ತಿಕೊಳಲಿ
ಬರಿಯ ಬಾನಿನಲಿ ಸತ್ಯದರ್ಶನದ | ಭವನ ಕಳಶ ನಿಲಲಿ || ೪ ||
ಕೂಸು ಕುನ್ನಿಗಳು ಪ್ರಬಲವಾಗಲಿ | ಬಡವ ವಡಬನಾಗಿ
ಇಹದ ಸುಖಕೆ ಬಾಯ್ಬಿಡುವ ಯುಕ್ತಿ ತಾ | ಚಿರದ ಭಕ್ತಿಯಾಗಿ || ೫ ||
ಸತ್ತ ಸತ್ಯ ಧರ್ಮಗಳು ಹೊಸ ಬೆಳಕ | ದೀಪವಾಗಿ ಬರಲಿ
ಮಿಥ್ಯವಾದ ಮಲಿನತೆಯು ಕೊಳಕು | ಅದಕೆಣ್ಣೆಯಾಗುತಿರಲಿ || ೬ ||
ಬದ್ಧ ಬುದ್ಧಿಯದು ಮುಕ್ತವಾಗಿ | ಸ್ವಾತಂತ್ರ್ಯ ಸಿದ್ಧಿಯಾಗಿ
ಕಿರಿಯ ಹೃದಯಗಳು ವಿಶ್ವದಗಲ | ಬಾಂಧವ್ಯ ಭವ್ಯವಾಗಿ || ೭ ||
ಶಕ್ತಿ ದಂಡ ಸ್ಪರ್ಶನಕೆ ಸೃಷ್ಟಿಯಲಿ | ಆನಂದ ಚೆಂದ ಚಿಮ್ಮಿ
ನಿನ್ನ ಕೃಪೆಯ ಕಡೆಗಣ್ಣದೃಷ್ಟಿ | ಹರಿಸುತ್ತ ಬಾರೊ ಸ್ವಾಮಿ || ೮ ||
*****