ಹಿಂದೂಮುಸಲ್ಮಾನರ ಐಕ್ಯ – ೬

ಹಿಂದೂಮುಸಲ್ಮಾನರ ಐಕ್ಯ – ೬

ನವಾಬ-ಪುತ್ರ ಯಾಕೂಬನನ್ನು ಸಂಹರಿಸಿದ ಮರು ದಿವಸವೇ ಗುಲಾಮ ಅಲಿಯು ಬಂಗಾಲದ ನವಾಬನಾದ ಮಜೀದಖಾನನಿಗೆ ಒಂದು ಪತ್ರ ಬರೆದನು. ಅದರಲ್ಲಿ ಅವನು ಯಾಖೂಬಖಾನನ ನಿಂದ್ಯ ಹಾಗು ತಿರಸ್ಕರಣೀಯ ಕೃತ್ಯವನ್ನೂ, ತಾನು ಅದನ್ನು ಸಹಿಸಲಾರದೆ ಅವನ ಕೊಲೆ ಮಾಡಿದ್ದನ್ನೂ, ಅವನ ಅನುಚರರನ್ನು ತನ್ನ ಅಲೀಬಾಗ ಸಂಸ್ಥಾನದಿಂದ ಹದ್ದು ಪಾರು ಮಾಡಿದ್ದನ್ನೂ ಕೊಂಚವೂಮರೆಮಾಚದಂತೆ ವಿವರಿಸಿದ್ದನು. ಇದೇ ಕಾಲಕ್ಕೆ ಬಂಗಾಲ ಪ್ರಾಂತವನ್ನು ಗೆದ್ದು ಕೊಳ್ಳುವ ಉದ್ದೇಶಕ್ಕಾಗಿ ದಿಲ್ಲಿಯ ಅಕಬರ ಬಾದಶಹನು ಮಾನಸಿಂಹ ಸರದಾರನನ್ನು ದೊಡ್ಡ ದಂಡಿನೊಡನೆ ಆ ಪ್ರಾಂತಕ್ಕೆ ಕಳಿಸಿದ್ದನು. ಈ ಸಂಧಿಯನ್ನು ಸಾಧಿಸಿ, ಅಲೀಬಾಗ ಸಂಸ್ಥಾನ ಹದ್ದಿನಿಂದ ಹೊರಹೊರಡಿಸಲ್ಪಟ್ಟ ಯಾಕೂಬನ ಅನುಚರರು ನವಾಬ ಬಳಿಗೆ ಬಂದು ಅವನಿಗೆ ಇಲ್ಲದೊಂದು ಸುಳ್ಳು ಸುದ್ದಿ ಹುಟ್ಟಿಸಿ ಹೇಳಿ ಸ್ವಪುತ್ರವಧದ ವಾರ್ತೆ ಕೇಳಿ ಮೊದಲೇ ಸಂತಪ್ತನಾಗಿದ್ದ ಅವನನ್ನು ಮತ್ತಷ್ಟು ರೇಗಿಗೆಬ್ಬಿಸಿದರು. ಆ ನೀಚ ಅನುಚರರು ಹೇಳಿದ್ದೇನಂದರೆ, “ಗುಲಾಮ ಅಲಿಯು ನವಾಬನ ವಿರುದ್ಧವಾಗಿ ರಾಜಾ ಮಾನಸಿಂಗನೊಡನೆ ಗುಪ್ತ ಸಂಧಾನ ನಡೆಸಿರುವನು. ನವಾಬಪುತ್ರನಾದ ಯಾಕೂಬನು ಅವನ ಈ ಕಪಟಸೂತ್ರವನ್ನು ಬೈಲಿಗೆ ಎಳೆದನು. ಅದರಿಂದ ಕ್ರುದ್ಧನಾದ ಗುಲಾಮ ಅಲಿಯು ಯಾಕೂಬನನ್ನು ದ್ವೇಷದಿಂದ ಸಂಹರಿಸಿ, ಆ ಕಪಟ ಸಂಗತಿಯನ್ನು ಬಲ್ಲಂಥ ನಮ್ಮನ್ನು ತನ್ನ ಸಂಸ್ಥಾನೀ ಇಲಾಖೆಯಿಂದ ಹದ್ದು ಪಾರು ಮಾಡಿಸಿರುವನು”

ಯಾಕೂಬನ ಆ ಅನುಚರರು ಸುದ್ದಿ ತಿಳಿಸಿದ ಮರು ದಿವಸ ಗುಲಾಮ ಆಲಿಯ ಹಸ್ತಲಿಖಿತ ಪತ್ರ ನವಾಬನ ಕೈಸೇರಿತು; ಆದರೆ ಆ ಪತ್ರವನ್ನೋದಿ ತಿಳಕೊಳ್ಳುವದಕ್ಕಿಂತ ಮೊದಲೇ ಅಲ್ಲಿ ನಡೆದ ಎಲ್ಲ ಸಂಗತಿಗಳು ಮೇಲೆ ವಿವರಿಸಿದಂತ ಅನುಚರರ ಮುಖಾಂತರ ನವಾಬನಿಗೆ ತಿಳಿದದ್ದರಿಂದ ಮೊದಲೇ ಅವಿಶ್ವಾಸಿಯೂ ಕುಟಿಲನೂ ಆದ ಅವನು ಸರಳ ಹೃದಯದ ಗುಲಾಮ ಆಲಿಯ ಆ ಪತ್ರದ ಸಂಗತಿಯನ್ನು ನಿಜವೆಂದು ತಿಳಿಯದೆ, ಅದಕ್ಕೆ ಮಹತ್ವ ಕೊಡಲಿಲ್ಲ. ನವಾಬನು ಬಹು ದೊಡ್ಡ ಸೈನ್ಯವನ್ನು ಅಲೀಬಾಗೆ ಸಂಸ್ಥಾನಕ್ಕೆ ದಾಳಿ ಮಾಡುವದಕ್ಕೆಂದು ರವಾನಿಸಿ, ಗುಲಾಮ ಆಲಿಯನ್ನೂ ತನ್ನ ಮಗನ ವಧಕ್ಕೆ ಕಾರಣಳಾದ ಮಾಯೆಯನ್ನೂ ಹಿಡಿತರಬೇಕೆಂದೂ ಅವನ ವಾಡೆಯನ್ನೂ ಆ ನೂತನ ಚಂಡಿಮಂಟಪವನ್ನೂ ಸುಟ್ಟು ಸೂರೆ ಗೊಳ್ಳಬೇಕೆಂದೂ ಆ ದಂಡಿನ ಮುಖ್ಯಸ್ಥನಿಗೆ ಕಟ್ಟಪ್ಪಣೆ ಮಾಡಿದನು.

ಮಜೀದಖಾನನು ದೊಡ್ಡ ಮನಸ್ಸಿನವನಿದ್ದಿಲ್ಲ. ತನ್ನ ಕೈ ಕೆಳಗಿನವರ ಪ್ರತಿಯೊಂದು ಸಣ್ಣ ಪುಟ್ಟ ತಪ್ಪುಗಳಿಗೂ ಅವನು ಸೇಡು ತೀರಿಸಿಕೊಳ್ಳದೆ ಬಿಡುತ್ತಿದ್ದಿಲ್ಲ. ಇಂಥ ಕಾಲ ಕೂಟ ಹೃದಯದ ನವಾಬನು ತನ್ನ ಮಗನ ಕೊಲೆಯ ಸೇಡು ತೀರಿಸಿಕೊಳ್ಳದೆ ಬಿಡುವನೆ? ಮೇಲಾಗಿ ಅವನು ಚಾಡಿ ಖೋರರ ಮಾತಿಗೆ ಮರುಳಾಗುವಂಥ ಹಗುರ ಕಿವಿಯವನೂ ಆಗಿದ್ದನು. ಅಂದ ಮೇಲೆ ಕೇಳುವದೇನು? ಚೇಳು ಕಚ್ಚಿದಮಂಗನಿಗೆ ಸೆರೆಕುಡಿಸಿದಂತೆಯೇ ಸರಿ! ನವಾಬನ ಈ ಎಲ್ಲ ಹುಟ್ಟು ಗುಣಗಳು ಗುಲಾಮ ಆಲಿಗೆ ಚೆನ್ನಾಗಿ ಗೊತ್ತಿದ್ದವು. ಅದರಿಂದ ಅವನು ಯಾಕೂಬನ ಕೊಲೆಗೈದ ಉತ್ತರ ಕ್ಷಣದಿಂದಲೇ ನವಾಬನಿಂದ ಉದ್ಭವಿಸಬಹುದಾದ ಸಂಕಟಕ್ಕೆ ಯಾವ ಬಗೆಯಾಗಿ ಎದುರಾಗಬೇಕೆಂಬದನ್ನು ಚಿಂತಿಸಹತ್ತಿದ್ದನು. ಈ ಪ್ರಸಂಗದಲ್ಲಿ ತಮ್ಮ ಪೂರ್ವಜರಿಂದ ಸಂಪಾದಿಸಲ್ಪಟ್ಟ ಈ ಜಹಗೀರನ್ನೂ, ಅದರ ಸ್ಮೃತಿಯನ್ನು ತಂದುಕೊಡುವ ಈ ಪುಣ್ಯಮಯ ವಾಡೆಯನ್ನೂ, ಅದರಂತೆ ತಮ್ಮ ಪ್ರೇಮಲ ಪ್ರಜಾಸಮೂಹವನ್ನೂ ತನ್ನಿಂದ ರಕ್ಷಿಸುದಾಗುವದೋ ಇಲ್ಲವೋ ಎಂಬವಿಷಯಕ್ಕೆ ಅವನು ಬಹುಕಾಲದ ವರೆಗೆ ಆಲೋಚಿಸಿದನು; ಆದರೆ ಅವನಿಗೆ ಯಾವ ವಿಚಾರವೂ ಬಗೆ ಹರಿಯಲೊಲ್ಲದು; ಯಾಕಂದರೆ ಅವನ ಸಂಸ್ಥಾನದ ದಂಡಿನ ಕಾಲಾಳು, ಸವಾರರು, ತೋಫು ಮುಂತಾದವುಗಳ ಪ್ರಮಾಣವು ನವಾಬನ ದಂಡಿನ ಪ್ರಮಾಣದ ಮಾನದಿಂದ ಹನುಮಂತ ಮುಂದೆ ಹಾರ ರುಬ್ಬಿಯಂತೆ ಅತ್ಯಲ್ಪವೇ ಸರಿ! ಎಂಬದು ಅವನಿಗೆ ಗೊತ್ತಿತ್ತು. ಇನ್ನು ಈ ನಿಕರದ ಸಮಯದಲ್ಲಿ ಸಹಾಯಕ್ಕಾಗಿ ಕರೆದರೆ ತನ್ನ ಸಂಸ್ಥಾನದೊಳಗಿನ ಹಿಂದೂ-ಮುಸಲ್ಮಾನರಾದ ಎಲ್ಲ ಆಬಾಲ ವೃದ್ಧರು ಯಾವ ನೆವವನ್ನೂ ಹೇಳದೆ ಆತ್ಮಸಂತೋಷದಿಂದ ಬಂದು ತನ್ನ ದಂಡಿನಲ್ಲಿ ಸೇರಬಹುದು; ಆದರೆ ರಣವಿದ್ಯೆಯನ್ನು ಏನೂ ಅರಿಯದವರೂ ಅಸ್ತ್ರವಿಹೀನರೂ ಆದ ಈ ತನ್ನ ಪ್ರೇಮಲ ಪ್ರಜಾಗಣವನ್ನು ಕಟಕನಿಗೆ ಕುರಿಯನ್ನು ದಾನಕೊಟ್ಟಂತೆ, ನವಾಬನ ಯುದ್ಧ ವಿಶಾರದ ಸೈನ್ಯದ ಎದುರಿಗೆ ನಿಲ್ಲಹಚ್ಚುವದು ಆ ಪ್ರಜಾವತ್ಸಲ, ಲೋಕಮಾನ್ಯ ಹಾಗು ಹಿಂದೂ-ಮುಸಲ್ಮಾನರನ್ನು ಅಂತರಂಗದ ಸಮಭಾವದಿಂದ ಪಾಲಿಸುವ ಪ್ರಭುವಿನ ಮನಸ್ಸಿಗೆ ಸರಿದೂರೀತೇ? ಎಷ್ಟೋ ಪರಿಯಿಂದ ವಿಚಾರಿಸಿದರೂ ಅವನಿಗೆ ಆ ನಿಕರದ ಸಮಯದಲ್ಲಿ – ಯೋಗ್ಯ ಮಾರ್ಗವು ತೋಚದಾಯಿತು. ಕಟ್ಟ ಕಡೆಗೆ ಅವನು ನಿರ್ಧರಿಸಿದ್ದೇನಂದರೆ, ತನ್ನ ಪ್ರಬುದ್ಧ ಮಗನೊಡನೆ ತನ್ನ ಪರಿವಾರವನ್ನು ಮಾನಸಿಂಹರಾಜನ ಆಶ್ರಯಕ್ಕೆ ಕಳಿಸಿ ಕೊಡಬೇಕು; ಮತ್ತು ತಾನು ಫಕೀರನಾಗಿ ಮಾಯೆಯನ್ನು ಸಂಗಡ ಕರೆದು ಕೊಂಡು ದೇಶಾಂತರದಲ್ಲಿಯ ತೀರ್ಥಕ್ಷೇತ್ರಗಳಿಗೆ ಹೊರಟು ಹೋಗಬೇಕು.

ತನ್ನ ಈ ನಿರ್ಧರದಂತೆ ಗುಲಾಮ ಆಲಿಯು ಮರುದಿನವೇ ವ್ಯವಸ್ಥೆ ಮಾಡಹತ್ತಿದನು. ಈ ಸಂಗತಿ ಮಾಯೆಗೆ ತಿಳಿಯಲು, ಅವಳು ಕೆಲ ಕಾಲದ ವರೆಗೆ ನೀರವ ಮುಖದಿಂದ ಆಲೋಚಿಸಿದಳು. ನಂತರ ಅವಳು ಲಗುಬಗೆಯಿಂದ ಗುಲಾಮ ಆಲಿಯ ಬಳಿಗೆ ಬಂದು:-ಜಹಗೀರದಾರರೇ, ಇದೆಂಥ ಸ್ತುತ್ಯ ಉದ್ಯೋಗ ಕೈಕೊಂಡಿರಲ್ಲ! ಥೂ, ನಿಮ್ಮ ಗಳಿಕೆಗೆ ಬೆಂಕಿ ಹಚ್ಚಲಿ !! ಕಟ್ಟ ಕಡೆಗೆ ನಿಮ್ಮ ಮನಸ್ಸಿಗೆ ಇದೇ ಈ ಓಡಿ ಹೋಗುವ ಮಾರ್ಗವೇ ಸರಿ ದೋರಿತೆ? ಆ ಕ್ಷೇತ್ರತೀರ್ಥಗಳು ಪೂಜ್ಯಪಾದರಾದ ನಿಮ್ಮ ಅಜ್ಜ-ಮುತ್ತಜ್ಜಂದಿರ ಪವಿತ್ರ ವಾಸಸ್ಥಳಗಳಾಗಿದ್ದ ಈ ವಾಡೆ, ಈ ಜಹಗೀರುಗಳಿಗಿಂತ ಹೆಚ್ಚು ಪವಿತ್ರವಲ್ಲೆಂಬದು ನಿಮಗೆ ಹೇಗೆ ವಿಸ್ಮರಣವಾಯಿತು? ಈ ಪವಿತ್ರ ಪುಣ್ಯಪ್ರದ ಕ್ಷೇತ್ರ-ತಿರ್ಥಗಳನ್ನು ನಿರಾಯಾಸವಾಗಿ ಶತ್ರುಗಳ ಸ್ವಾಧೀನ ಪಡಿಸಿ, ಅವಂಥ ಬೇರೆ ತೀರ್ಥಕ್ಷೇತ್ರಗಳನ್ನು ನೀವು ಹುಡುಕ ಹತ್ತುವಿರಿ? ಜಹಗೀರದಾರರೇ, ನಮ್ಮ ಈ ಮಹಾಮಾಯೆಯ ಮಂದಿರವನ್ನು ನಮ್ಮಗಳ ಜೀವನ ಸರ್ವಸ್ವದ ಮಹಾತೀರ್ಥವನ್ನು ಶತ್ರುಗಳ ಅಪಘಾತದಿಂದ ಭಂಗವಾಗುವದಕ್ಕಾಗಿಟ್ಟು ಬಿಟ್ಟು ಜೀವವುಳಿಸಿ ಪಾರಾಗಿ ಹೋಗಬೇಕೆಂದಿರುವ ನಿಮ್ಮ ಬಾಳಿಗೆ ಬೆಂಕಿ ಹಚ್ಚಲಿ! ಆಗದು, ಜಹಗೀರದಾರರೇ, ನನ್ನಿಂದ ಅದೆಂದೂ ಆಗದು, ಮಹಾಮಾಯೆಯ ಮಂಟಪದಲ್ಲಿಯೇ ನಾನು ನನ್ನ ದೇಹ ಪತನಗೊಳಿಸೇನು, ನನ್ನ ರಕ್ತದಿಂದ ಮಹಾಮಾಯೆಯ ಈ ಮಂದಿರವನ್ನು ಸಾರಿಸೇನು; ಆದರೆ ಚಂದಿಮಂಟಪವನ್ನು ಮಾತ್ರ ನಾನು ಪ್ರಾಣವಿರುವವರೆಗೂ ಬಿಟ್ಟು ಹೊರಹೊರಡಲಿಕ್ಕಿಲ್ಲ!

“ತಂಗಿ ಮಹಾಮಾಯೆಯು ಈ ನಿನ್ನ ಮಂದಿರದಲ್ಲಷ್ಟೇ ವಾಸಿಸುವ ಇಂದು ನಿನ್ನ ಭಾವನೆಯಾಗಿದೆಯೇನು? ಈ ವಿಶ್ವವಲಯದ ತುಂಬೆಲ್ಲ ಮಹಾ ಮಾಯೆಯು ವ್ಯಾಪಿಸಿರುತ್ತಾಳೆ. ಎಲ್ಲಿ ಹೋಗುವಿಯೋ, ಎಲ್ಲಿ ನೋಡುವಿಯೋ, ಎಲ್ಲಿ ಆಕೆಯ ನಾಮಸ್ಮರಣೆ ಮಾಡುವಿಯೋ ಅಲ್ಲಿ ಆ ಮಹಾಮಾಯೆಯು ಕಾಣಿಸಿಕೊಳ್ಳುತ್ತಾಳೆ; ಮತ್ತು ನೀನು ಯಾವ ಸ್ಥಳದಲ್ಲಿ ಆ ಮಹಾ ಮಾಯೆಯ ಸೇವೆ ಮಾಡುವೆಯೋ ಅದೇ ನಿನಗೆ ಪವಿತ್ರ ತೀರ್ಥವಾಗುವದು. ಹೀಗಿರುತ್ತಿರಲಿಕ್ಕೆ ನಾವು ನಮ್ಮಗಳ ರಕ್ತದಿಂದ ಈ ಪವಿತ್ರತೀರ್ಥವನ್ನು ಅಪ ವಿತ್ರಗೊಳಿಸಬಹುದೆ? ತಂಗೀ, ಮಾಡುವದೇನು? ನಾವು ಇಲ್ಲಿ ವಾಸಿಸಿರಬಾರದೆಂದೇ ದೇವರ ಇಚ್ಛೆಯಿದ್ದಂತೆ ಕಾಣುತ್ತದೆ. ದೇವರು ನಮ್ಮನ್ನು ಈ ಸ್ಥಾನದಿಂದ ಬಿಡಿಸಿದರೂ ಅಡ್ಡಿಯಿಲ್ಲ; ನಾವು ಮಾತ್ರ ಅವನನ್ನು ನಮ್ಮ ಹೃದಯದಿಂದ ಬಿಡುವಂತಿರುವದಿಲ್ಲ. ಆದ್ದರಿಂದ ತಂಗಿ, ನಾವು ಬೇಕಂತ ಆ ದುಷ್ಟ ನವಾಬನ ಸಿಟ್ಟಿಗೀಡಾಗಬಾರದು; ಬೇರೆ ಸುರಕ್ಷಿತ ಸ್ಥಳಕ್ಕೆ ಹೋಗಿ ಆ ದಯಾಘನ ಜಗನ್ನಾಯಕನನ್ನು ಆರಾಧಿಸೋಣ, ನಡೆ.”

ಗುಲಾಮ ಆಲಿಯ ಈ ನಿರಾಶೆಯ, ಹೇಡಿತನದ ಉದ್ಗಾರಗಳನ್ನು ಕೇಳಿ ಮಾಯೆಯು ಸ್ಫೂರ್ತಿಯಿಂದ ನುಡಿದಳೇನಂದರೆ: “ಜಹಗೀರದಾರ ರೇ, ಕಾಲತ್ರಯದಲ್ಲಿಯ ನನ್ನಿಂದ ಈ ಸ್ಥಾನವನ್ನು ಬಿಟ್ಟು ಹೊರಡುವದಾಗಲಿಕ್ಕಿಲ್ಲ. ನಮ್ಮನ್ನು ಈ ಸ್ಥಾನದಿಂದ ಹೊರಡಿಸಬೇಕೆಂದೂ ದೇವರ ಇಚ್ಛೆಯಿರುವದಿಲ್ಲ. ಆ ಪ್ರೇರಣೆ ನಿಮಗೆ ದೇವರಿಂದ ಆಗಿರದೆ, ಸೈತಾನನಿಂದಾದಂತೆ ತೋರುತ್ತದೆ; ನಿಮ್ಮ ಅಂತರಂಗದಲ್ಲಿ ನಿಜವಾಗಿ ದೇವರು ವಾಸ್ತವ ಮಾಡಿದ್ದರೆ, ನೀವು ಆ ಸೈತಾನನ ಪ್ರೇರಣೆಗೆ ಎಂದಾದರೂ ಕಿವಿಗೊಡುತ್ತಿದ್ದರೆ ? ನಮ್ಮ ಮಹಾಮಾಯೆಯು ಜಗದ್ಯಾಪಿನಿಯಾಗಿರುವದರಿಂದ, ಹೋದಲ್ಲಿಬಂದಲ್ಲಿ ಇವಳು ಇದ್ದೇ ಇರುತ್ತಾಳೆಂಬದು ಸತ್ಯವು: ಆದರೆ ಈ ಮಹಾ ಮಾಯೆಯು ನನಗೆ ಪ್ರಥಮತಃ ಇದೇ ಈ ಚಂಡಿಮಂಟಪದಲ್ಲಿ ಸಾಕ್ಷಾತ್ಕಾರವಿತ್ತಿರುವಳು. ನಾನು ಈ ಮಂದಿರದಲ್ಲಿ ಅವಳನ್ನು ಆರಾಧಿಸಹತ್ತಿ ಇವಳ ಸೇವೆಯಿಂದ ಧನ್ಯಳಾಗಿರುವನು. ಆದ್ದರಿಂದ ಈ ಮಂದಿರವೇ ನನ್ನ ಜೀವನದ ಮೊದಲನೇ ಮಹಾತೀರ್ಥವಾಗಿರುತ್ತದೆ; ಮತ್ತು ಮಹಾ ಮಾಯೆಯು ಸ್ವತಃ ನನ್ನನ್ನು ಬೇರೆ ಕಡೆಗೆ ಎಳೆದೊಯ್ಯುವ ವರೆಗೆ ನಾನು ಈ ಮಹಾಸ್ಥಾನದಿಂದ ಸರ್ವಥಾ ಹೊರಹೊರಡಲಾರನು; ಆದರೆ ಪ್ರಸ್ತುತದಲ್ಲಿ ದೇವಿಯು ನನಗೆ ಇಲ್ಲಿಂದ ಹೊರಟು ಹೋಗಲು ಯಾವ ಬಗೆಯಿಂದಲೂ ಆಜ್ಞಾಪಿಸಿರುವದಿಲ್ಲ. ಅಂದ ಬಳಿಕ ಈಗ ಇಲ್ಲಿ ಈ ಮಹಾದೇವಿಯನ್ನು ಶತ್ರುಗಳ ಪದಾಘಾತಕ್ಕೀಡು ಮಾಡಿ, ನಾನು ಬೇರೆ ಕಡೆಗೆ ಹೋಗುವದು ಜಹಗೀರದಾರರೇ, ನನ್ನಂಥ ದೀನ ಅಬಲೆಗೆ ಕೂಡ ಶಕ್ಯವಾಗಿರುವದಿಲ್ಲ. ಜಹಗೀರದಾರರೇ, ನೀವು ತೇಜಸ್ವಿಗಳಾದ ವೀರರು; ಎಷ್ಟೋ ಕಾಳಗಗಳನ್ನು ಮಾಡಿದವರು. ಹೀಗಿದ್ದು, ಇಂದು ನೀವಿಂಥ ಹೇಡಿ ವಿಚಾರಗಳಿಗೇಕೆ ಮರುಳಾಗಿರುತ್ತೀರಿ? ಎರಡನೆಯವರ ಸಲುವಾಗಿ ಎಷ್ಟೋ ಯುದ್ಧಗಳನ್ನು ಮಾಡಿದ ನೀವು, ಸ್ವಂತದ ಪೂಜ್ಯ-ಪಿತೃಭೂಮಿಯ ಸಂರಕ್ಷಣೆಗಾಗಿ ಒಂದು ಸಾರೆಯಾದರೂ ಕಾಳಗ ಮಾಡಬೇಕನ್ನುವ ಬುದ್ಧಿಯು ನಿಮ್ಮಲ್ಲಿ ಏಕೆ ಹುಟ್ಟಲಿಲ್ಲದು?”

“ತಂಗೀ, ನಾನು ಕಾಳಗಕ್ಕೆ ಹೆದರುವನೆ? ಆದರೆ ಮಾಡಲೇನು? ನನ್ನ ದಂಡು ಅತ್ಯಲ್ಪವಾಗಿದ್ದುದರಿಂದ, ನವಾಬನ ಅಗಣಿತ ಸೈನ್ಯದ ಎದುರಿಗೆ ನನ್ನ ಪಾಡೇನು? ಇನ್ನು ಶತ್ರುಗಳಿಗೆ ಬೆನ್ನು ತೋರಿಸದೆ ನಾನು ಸಾಯುವವರೆಗೆ ಕಾದಿ ಸತ್ತರೂ ಸಾಯಬಹುದು; ಆದರೆ ತಂಗೀ, ನಿನ್ನ ಗತಿಯೇನು? ನಿನ್ನನ್ನು ಸಂರಕ್ಷಿಸುವದನ್ನು – ನನ್ನ ಇಮಾನವನ್ನು ಕಾಯುವದನ್ನು ಬಿಟ್ಟು ಕೊಟ್ಟು, ವೃಥಾ ಕಾದಿ ಸಾಯುವದರಿಂದ ಪ್ರಯೋಜನವೇನು? ಇನ್ನು ನೀನೂ ನಾನೂ ಕೂಡಿಯೇ ಸಮರಾಂಗಣದಲ್ಲಿ ವೈರಿಗಳಿಗೆದುರಾಗಿ ದೇಹಗಳನ್ನು ತ್ಯಜಿಸಿದರೂ ಈ ನಮ್ಮ ತೀರ್ಥಗಳು ಕಡೆಗೆ ವೈರಿಗಳಿಂದ ಭ್ರಷ್ಟ ವಾಗದೆ ಹೇಗುಳಿದಾವು?”

“ಜಹಗೀರದಾರರೇ, ನನ್ನನ್ನು ಸಂರಕ್ಷಿಸುವದಕ್ಕಾಗಿ-ಇಮಾನವನ್ನು ಕಾಯುವದಕ್ಕಾಗಿ ನೀವಿಂಥ ಹೇಡಿ ಮಾರ್ಗವನ್ನು ಹಿಡಿಯುವದು ನನಗೆ ಸರ್ವಥಾ ಯೋಗ್ಯವೆನಿಸುವದಿಲ್ಲ. ಯಾವ ಜಗದ್ಧಾತ್ರಿಯಾದ ಮಹಾಮಾಯೆಯು ಪ್ರಚಂಡರಾದ ಅಗಣಿತ ದೈತ್ಯರನ್ನು ಸಂಹರಿಸಿರುವಳೋ, ಆ ಮಹಾ ಮಾಯೆಯ ಭಕ್ತಳಾದ ನಾನಾದರೂ ಆಕೆಯ ಪ್ರೇರಣೆಯ ಮೇರೆಗೆ ಖಡ್ಗ ಧಾರಣೆಯಾಗಿ ರಣಾಂಗಣದಲ್ಲಿಯ ಶತ್ರುಗಳ ರುಂಡಗಳನ್ನು ಮುಂಡದಿಂದ ಬೇರೆ ಮಾಡಬಲ್ಲೆನು. ಜಹಗೀರದಾರರೇ, ನನಗೋಸ್ಕರ ನೀವು ನಿಮ್ಮ ಪವಿತ್ರಕ್ಷಾತ್ರವೃತ್ತಿಯನ್ನು ಬಿಟ್ಟು ಕೊಡಬೇಡಿರಿ. ನಡೆಯಿರಿ ಬೇಗ; ನಾವು ಶತ್ರುಗಳಿಗೆದುರಾಗಿ ಅವರೆಲ್ಲರನ್ನು ತುಂಡು ತುಂಡಾಗಿ ಮಾಡಿ, ನಮ್ಮ ಈ ಮಹಾತೀರ್ಥ ಕ್ಷೇತ್ರಗಳನ್ನು ಸಂರಕ್ಷಿಸಿಕೊಳ್ಳೋಣ!”

ಮಾಯೆಯ ಈ ವೀರರಿಗುಚಿತವಾದ ವಾಣಿಯನ್ನು ಕೇಳಿ ಚಿಂತಯಿಂದ ಅವಸಾನಗೆಟ್ಟ ಗುಲಾಮ ಆಲಿಯ ಹೃದಯವು ತುಸ ಉತ್ತೇಜಿತವಾಯಿತು. ಇದುವರೆಗೆ ಮಾಯಾ-ಸ್ನೇಹದಿಂದ ಅಶ್ರುಸಿಕ್ವನಾದ ಅವನ ಎರಡೂ ಕಣ್ಣುಗಳು ಸ್ವಾಭಾವಿಕವಾದ ವೀರಗೌರವ ತೇಜದಿಂದ ಮಿನುಗಹತ್ತಿದವು. ಆಗ ಅವನು ತನ್ನ ವೀರಗಂಭೀರ ದೃಷ್ಟಿಯಿಂದ ಮಾಯೆಯ ಕಡೆಗೆ ನೋಡುತ್ತಿರಲು,

ಮಾಯೆಯು :- “ಜಹಗೀರದಾರರೇ, ನಿಮ್ಮ ದಂಡು ಅತ್ಯಲ್ಪವಿರುವ ದೇನೋ ನಿಜವು; ಆದರೆ ನಿಮ್ಮ ಜಹಗೀರಿನಲ್ಲಿ ಲಕ್ಷಾವಧಿ ಗಂಡಸರು ವಾಸಿಸುತ್ತಿರುವರಷ್ಟೆ? ಎಷ್ಟೋ ಪ್ರಸಂಗಗಳಲ್ಲಿ ನೀವು ಅವರ ಕಷ್ಟಗಳನ್ನು ಅವರ ಗುಲಾಮರಂತೆ ನಡೆದು ನಿವಾರಣ ಮಾಡಿರುತ್ತೀರಿ. ಆದ್ದರಿಂದ ಈ ನಿಕರದ ಪ್ರಸಂಗದಲ್ಲಿ ಅವರು ನಿಮ್ಮ ಗುಲಾಮರಾಗಿ-ದಂಡಾಳುಗಳಾಗಿ ನಿಮ್ಮನ್ನು ಈ ಸಂಕಟದಿಂದ ಮುಕ್ತರಾಗಮಾಡಲಿಕ್ಕಿಲ್ಲೆನು?’ ಅವಶ್ಯವಾಗಿ ಮಾಡುವರು. ನೀವು ಕರೆದರೆ ಅಥವಾ ನಾನು ಕರೆದರೆ, ಈಗಿಂದೀಗಲೆ ಲಕ್ಷಗಟ್ಟಲೆ ಜನರು ಓಡುತ್ತ ಬಂದು ನಿಮ್ಮ ಸಂಕಟನಿವಾರಣಕ್ಕೆ ಸಹಾಯಕರಾಗುವರು. ನಖಾಬನ ದಂಡು ಇರುವದಾದರೆ ಎಷ್ಟು? ಎಷ್ಟೆಂದರೂ ಅವನ ದಂಡಿನವರು ಸಂಬಳದ ಆಳುಗಳು! ಅವರು ಜೀವದ ಹಂಗುದೊರದು ಕಾದುವ ನಮ್ಮ ನಿಸ್ಪೃಹ ಸೇವಕರ ಮುಂದೆ ಎಷ್ಟು ಹೊತ್ತು ನಿಂತಾರು? ನಮ್ಮವರ ಹೊಡೆತದಿಂದ ತುಸ ಹೊತ್ತಿನಲ್ಲಿಯೇ ಆ ದಂಡು ದಾರಿಸಿಕತ್ತ ಪಲಾಯನ ಮಾಡಬಹುದು. ಆದ್ದರಿಂದ ಜಹಗೀರದಾರರೇ, ಮುಂದಿನ ಯಾವ ಸಂಕಟಕ್ಕೂ ಹೆದರದೆ, ಮನಸ್ಸಿನಲ್ಲಿ ಇಲ್ಲದ ಕುಕಲ್ಪನೆಯನ್ನು ತರದೆ, ನಿಮ್ಮ ಈ ರಾಮರಾಜ್ಯವನ್ನು ರಕ್ಷಿಸುವದಕ್ಕಾಗಿ ನೀವು ನಿಮ್ಮ ಪ್ರೇಮಲ ಪ್ರಜೆಗಳನ್ನು ಕೂಗಿರಿ. ಬರಿಯ ಒಬ್ಬ ನವಾಬನೇ ಏಕೆ, ಸ್ವತಃ ಚಕ್ರವರ್ತಿ ಬಾದಶಹ ನಿಮಗಿದಿರಾದರೂ, ನೀವು ನಿಮ್ಮ ಈ ಜೀವಕ್ಕೆ ಜೀವಕೊಡುವ ಪ್ರಜೆಗಳ ಸಹಾಯದಿಂದ ಅವನನ್ನು ನಿಶ್ಚಯವಾಗಿಯೂ ಸೋಲಿಸುವಿರಿ.”

ಮಾಯೆಯ ಈ ಸುಸಾಧ್ಯವಾದ ಆಲೋಚನೆಯನ್ನು ಕೇಳಿ ಗುಲಾಮ ಅಲಿಯು ಒಂದು ದೀರ್ಘವಾದ ಉಸಿರುಗರೆದನು. ನಂತರ ಅವನು ಸಾವಕಾಶವಾಗಿ ನುಡಿದದ್ದೇನಂದರೆ: “ತಂಗಿ ನೀನನ್ನುವ ಮಾತು ನನಗೆ ಸಮ್ಮತವಾಗಿದೆ. ನಾವು ಕರೆದರೆ ಈಗಲೆ ಲಕ್ಷಾವಧಿ ಜನರು ಬಂದು ನಮ್ಮನ್ನು ಸೇರಬಹುದು; ಆದರೆ ಬರಿಯ ಸಂಖ್ಯೆಯಿಂದ ದಂಡು ಹೆಚ್ಚಾದ ಮಾತ್ರದಿಂದ ಜಯವು ಎಂದಿಗೂ ಪ್ರಾಪ್ತವಾಗಲರಿಯದು, ದಂಡಾಳುಗಳಿಗೆ ಯುದ್ಧದ ಶಿಕ್ಷಣ ದೊರೆತಿರಬೇಕು; ಶಸ್ತ್ರಾಸ್ತ್ರಗಳೂ ತೋಪುಗಳೂ ಬೇಕು; ಆದರೆ ಅವೆಲ್ಲ ಸಾಧನಗಳು ಈ ಅಯತ ಸಮಯದಲ್ಲಿ ನಮಗೆ ಹೇಗೆ ಪ್ರಾಪ್ತವಾಗ ಬೇಕು? ನಮ್ಮ ಪ್ರಜೆಗಳು ನಮ್ಮ ಸಹಾಯಕ್ಕೆ ಬಂದರೂ ಈ ಅಶಿಕ್ಷಿತ ಜನರು ನವಾಬನ ಯುದ್ಧ ವಿಶಾರದ ಜನರಿಂದ ಊರವ್ವನ ಜಾತ್ರೆಯೊಳಗಿನ ಕೋಣನಂತೆ ಗತಿಹೊಂದಬೇಕಾಗುವದು. ನಮ್ಮ ಈ ತೀರ್ಥ ಕ್ಷೇತ್ರಗಳು ನಮಗೆ ಅತ್ಯಂತ ಪ್ರಿಯವಾಗಿರುತ್ತವೆಂಬದರಲ್ಲಿ ಸಂಶಯವಿಲ್ಲ: ಆದರೆ ಅವುಗಳನ್ನು ರಕ್ಷಿಸುವ ಹವ್ಯಾಸಕ್ಕಾಗಿ ಈ ನಮ್ಮ ಲಕ್ಷಾವಧಿ ನಿರಪರಾಧಿ ಪ್ರಜೆಗಳನ್ನು ಬಲಿಕೊಡುವದು ಎಲ್ಲಿಯ ನ್ಯಾಯ? ಹಾಗು ನಾನು ಪ್ರಜಾಪಾಲಕನಿದ್ದರೂ ಅವರನ್ನು ಬಲಿ ಕೊಡಲಿಕ್ಕೆ ನನಗೆಲ್ಲಿ ಅಧಿಕಾರವಿರುತ್ತದೆ?”

“ಜಹಗೀರದಾರರೇ, ಈ ಅಧಿಕಾರ ನಿಮಗಿರದಿದ್ದರೂ, ನಿಮಗಾಗಿ ತಮ್ಮ ಪ್ರಾಣಗಳನ್ನು ಬಲಿಕೊಡುವ ಅಧಿಕಾರ ನಿಮ್ಮ ಪ್ರಜೆಗಳಿದ್ದಲ್ಲಿ ಇದೆ: ಯಾಕಂದರೆ, ನಿಮ್ಮ ಜಹಗೀರಿನ ಆಶ್ರಯದಲ್ಲಿ ಅವರು ವಂಶಪರಂಪರವಾಗಿ ಸುಖದಿಂದಿರುತ್ತಾರೆ; ಹಾಗು ಮುಂದಾದರೂ ಸುಖದಿಂದ ಕಾಲಕಳೆಯಬಹುದಾಗಿದೆ. ನವಾಬ, ಬಾದಶಹ ಮುಂತಾದವರು ಇವರ ಪರಂಪರೆಯ ಪಾಲಕರಾಗಿದ್ದರೂ, ಅವರು ನಿಜವಾಗಿ ಇವರ ಪಾಲನಕರ್ತರಲ್ಲ; ನೀವೇ ಇವರ ರಾಜರು. ರಾಜನಿದ್ದುದರಿಂದಲೇ ಪ್ರಜೆಗಳು ಸುಖದಿಂದ ಇರುತ್ತಾರೆ. ಆದ್ದರಿಂದ ತಮ್ಮ ಪ್ರಾಣವನ್ನು ಸಹ ಕೊಟ್ಟು ರಾಜನನ್ನು ರಕ್ಷಿಸುವ ಧರ್ಮ ಪ್ರಜೆಗಳದಾಗಿರುತ್ತದೆ, ಜಹಗೀರದಾರರೇ. ನೀವು ಗುಲಾಮ ಆಲಿಯೆಂದೊಬ್ಬ ವ್ಯಕ್ತಿಯಿದ್ದು, ನಿಮ್ಮ ರಕ್ಷಣದ ಸಲುವಾಗಿ ನೀವು ಈ ಪ್ರಜೆಗಳನ್ನು ಕರೆಯುತ್ತಿರುವಿರೆಂದು ತಿಳಿಯಬೇಡಿರಿ. ನಿಮ್ಮ ರಾಜಶಾಸನ ಧರ್ಮವನ್ನು ಕಾಯುವದಕ್ಕಾಗಿಯೇ ಅಂದರೆ, ಸ್ವಂತದ ಹಿತಸಾಧನೆಗಾಗಿಯೇ ಇವರು ಪ್ರಸ್ತುತ ರಣರಂಗಕ್ಕೆ ಆಹುತಿಯಾಗುವರು; ನಿಮಗೆಂದು ಖಂಡಿತವಾಗಿ ಆಗುವದಿಲ್ಲ. ನೀವು ನಿಮ್ಮೊಬ್ಬರ ಇಮಾನ ಕಾಯುವದಕ್ಕಾಗಿ ಈ ದುರ್ಧರ ಪ್ರಸಂಗವನ್ನು ತಂದುಕೊಂಡಿರಲು, ನಿಮ್ಮ ಪ್ರಜೆಗಳು ತಮ್ಮ ಇಮಾನ ಕಾಯ್ದು ಕೊಳ್ಳುವದಕ್ಕಾಗಿ ನಿಮ್ಮದಂಡಿನಲ್ಲಿ ಸೇರಿ, ನಿಮಗೆ ಈ ಪ್ರಸಂಗದಲ್ಲಿ ಸಹಾಯವಾಗಲಿ.

ಕೆಲಹೊತ್ತಿನವರೆಗೆ ಗುಲಾಮ ಆಲಿಯಿಂದ ದಾರಿಗೆ ಎದುರುತ್ತರ ಕೊಡುವದಾಗಲಿಲ್ಲ. ನಂತರ ಅವನು:-ತಂಗೀ, ಎಂಥ ಜಾಣಳು ನೀನು? ನಿನ್ನ ಸಮಯೋಚಿತ ಸಲಹೆಯಿಂದ ನನ್ನಲ್ಲಿಯ ಭ್ರಾಂತಯಡಗಿಹೋಯಿತು. ಯಾವ ದಿವಸ ನಿನ್ನ ಅಜ್ಜನು ಮರಣೋನ್ಮುಖನಾಗಿ ನಿನ್ನನ್ನು ರಕ್ಷಿಸುವ ವಿಷಯವಾಗಿ ನನಗೆ ಅಪ್ಪಣೆ ಮಾಡಿದ್ದನೋ, ಅಂದೇ ನನ್ನ ಬಾಯಿಂದ “ಈ ಮಾಯೆಯು ನನ್ನಂಥ ಎಷ್ಟೋ ಗುಲಾಮರನ್ನು ರಕ್ಷಿಸಬಲ್ಲಳೆ”ಂದು ಆಕಸ್ಮಿಕವಾಗಿ ಹೊರಟಿದ್ದ ವಾಕ್ಯವು ಇಂದು ದಿಟವಾಯಿತು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಾಮಿ ಬಾರೊ
Next post ಬೆಂಗಳೂರು ’೭೨

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…